ಲಕ್ಷ್ಮೀನಾರಾಯಣ ಭಟ್ಟ ಭಾವನಮನ: ಅವರ ಊರ್ವಶಿಯನ್ನು ರಂಗದ ಮೇಲೆ ತರುವುದೇ ನಾನು ಸಲ್ಲಿಸುವ ಶ್ರದ್ಧಾಂಜಲಿ

| Updated By: Lakshmi Hegde

Updated on: Mar 06, 2021 | 6:54 PM

‘ಸಭಿಕರ ಮನಸ್ಸಿನಲ್ಲಿ ಪ್ರೀಮೋಷನ್​ ಎನ್ನುವ ಭಾವ ಇದೆಯಲ್ಲ ಇಂದ್ರ ಎಂದರೇ ಹೀಗೆ, ಊರ್ವಶಿ ಎಂದರೆ ಒಬ್ಬ ಗಣಿಕಾ ಸ್ತ್ರೀ. ಇಂಥ ಪರಿಕಲ್ಪನೆಯನ್ನು ಲಕ್ಷ್ಮೀನಾರಾಯಣ ಭಟ್ಟರ ‘ಊರ್ವಶಿ‘ ಯಲ್ಲಿ ಪೂರ್ತಿಯಾಗಿ ಮುರಿಯಲಾಗಿದೆ. ಪಾತ್ರಗಳ ಮನಸಿನಾಳಕ್ಕೆ ಇಳಿದು ನೋಡಿದಾಗ ಅಲ್ಲಿ ಜೀವಪರ ಅಂಶಗಳೇ ಕಾಣಸಿಗುತ್ತವೆ‘ ಶ್ವೇತಾ ಶ್ರೀನಿವಾಸ್

ಲಕ್ಷ್ಮೀನಾರಾಯಣ ಭಟ್ಟ ಭಾವನಮನ: ಅವರ ಊರ್ವಶಿಯನ್ನು ರಂಗದ ಮೇಲೆ ತರುವುದೇ ನಾನು ಸಲ್ಲಿಸುವ ಶ್ರದ್ಧಾಂಜಲಿ
ಶ್ವೇತಾ ಶ್ರೀನಿವಾಸ್
Follow us on

ಹೀಗೇ ಒಂದು ದಿನ ಸುಚಿತ್ರಾದ ಅಂಗಳದಲ್ಲಿ ನಾನು ಮತ್ತು ರಂಗಸ್ನೇಹಿತ ಅಭಿರುಚಿ ಚಂದ್ರು ಮಾತನಾಡುತ್ತಾ ನಿಂತಿದ್ದೆವು. ಆಗ ಅವರು, ಲಕ್ಷ್ಮೀನಾರಾಯಣ ಭಟ್ಟರ ‘ಊರ್ವಶಿ’ಯನ್ನು ನಾವ್ಯಾಕೆ ರಂಗದ ಮೇಲೆ ಕರೆತರುವ ಪ್ರಯತ್ನ ಮಾಡಬಾರದು? ಈತನಕ ಇಂಥ ಪ್ರಯತ್ನವನ್ನು ಯಾರೂ ಮಾಡಿಲ್ಲ ಎಂದು ಹೇಳುತ್ತ, ಈ ಗೀತರೂಪಕದ ಎರಡು ಪ್ಯಾರಾಗಳನ್ನು ಹೇಳಿದರು. ಕೇಳುತ್ತಿದ್ದ ಹಾಗೆ ಊರ್ವಶಿ, ಇಂದ್ರ, ಪುರೂರವ ಈ ಪಾತ್ರಗಳನ್ನು ಈ ತನಕ ಯಾರೂ ಈ ಗ್ರಹಿಕೆಯಲ್ಲಿ ಕಟ್ಟಿಕೊಟ್ಟಿದ್ದೇ ಇಲ್ಲವಲ್ಲ ಎನ್ನಿಸಿತು.
-ಶ್ವೇತಾ ಶ್ರೀನಿವಾಸ್, ರಂಗಭೂಮಿ, ಸಿನೆಮಾ ಕಲಾವಿದೆ.

ಕೊರೋನಾಗಿಂತ ಮೊದಲು ನೇರವಾಗಿ ಭಟ್ಟರ ಮನೆಗೆ ಹೋದ ಶ್ವೇತಾ ಹಣಕೊಟ್ಟು ಅವರ ಪುಸ್ತಕ ಕೊಂಡುಕೊಂಡು, ಸಹಿ ಹಾಕಿಸಿಕೊಂಡು ಫೋಟೋ ಕೂಡ ತೆಗೆಸಿಕೊಂಡರು. ಮನೆಗೆ ಬಂದವರೇ ಓದಲು ಶುರುಮಾಡಿದರು.  ಒಂದೇ ಉಸುರಿಗದು ಮುಗಿದಾಗ ಏನನ್ನಿಸಿತು ಎನ್ನುವುದನ್ನು ಅವರಿಲ್ಲಿ ಹೇಳಿದ್ದಾರೆ.

ಎನ್​. ಎಸ್. ಲಕ್ಷ್ಮೀನಾರಾಯಣ ಭಟ್ಟರೊಂದಿಗೆ ರಂಗ ಕಲಾವಿದೆ ಶ್ವೇತಾ ಶ್ರೀನಿವಾಸ್

ಶಾಪಕ್ಕೆ ಒಳಗಾದ ಊರ್ವಶಿಯನ್ನು ಇಂದ್ರ ಸಮಾಧಾನಿಸುವ ಪ್ರಸಂಗ;

ಅಂಜಬೇಡ ಊರ್ವಶಿ ಶಾಪವೆರಗಿತೆಂದು
ಈ ವಿಶಾಪ ನೀಡುತಿರುವೆ ನಿನ್ನ ಒಳಿತಿಗೆಂದು

ಹೋಗು ನೇರ ಸದಾ ನೀನು
ಕನಸುತಿದ್ದ ಇಳೆಗೆ

ಕ್ಷಣಕ್ಷಣವೂ ತುಡಿಯುತಿದ್ದ
ಸ್ನೇಹಸುರಭಿಯೆಡೆಗೆ
ಹೋಗಿ ಸೇರು ಸುರಪುಷ್ಪವೇ
ಪೌರುಷದ ಮುಡಿಗೆ
ಸ್ವರ್ಗಕೆ ನೆರವೀಯುತಿರುವ
ಔದಾರ್ಯದ ಗುಡಿಗೆ

ಕಾಯುತಿರುವ ಪ್ರೇಮಿಯಾ
ತೋಳಿನಲ್ಲಿ ಬೀಳು
ನಲ್ಲನೆದೆಯ ಕಂಪಿಸುವಾ
ಮೊಲ್ಲೆಯಾಗಿ ಏಳು
ಕಾಳಾಗಿ ಹೋಳಾಗಿ
ಮುಚ್ಚಿ ಬಿಚ್ಚಿ ಆಡು
ಕಣಿವೆ ಶಿಖರಗಳಿಗೆ ಅವನ
ಸೆಳೆದು ಜೇನ ನೋಡು

ಮೃತಿಸುತ್ತಿದ ಬದುಕಿನಿಂದ
ಪ್ರೇಮದಮೃತ ಕಡೆದು
ಸ್ವರ್ಗದಲ್ಲಿ ಇರದ ಮಧುವ
ಮನುಜನೊಡನೆ ಕುಡಿದು
ನಿನ್ನ ಮಣ್ಣಿನಂಶವನ್ನು
ಬುವಿ ಮಡಿಲಿಗೆ ಸುರಿದು
ಬಯಸಿದಂದು ಬಾ ಇಲ್ಲಿಗೆ
ನನ್ನ ಶಾಪ ಮುಗಿದು.

ಊರ್ವಶಿಯ ಪುಟಗಳಿಂದ

ನಾವು ಇಂದ್ರನನ್ನು ಲೋಲುಪ, ಭೋಗಿ ಎಂಬಂತೆಯೇ ನೋಡಿದ್ದೇವೆ. ಆದರೆ ಇಲ್ಲಿ ಅವನನ್ನು ಅದೆಷ್ಟು ಸಹೃದಯ, ಪ್ರಬುದ್ಧನನ್ನಾಗಿಸಿದ್ದಾರೆ ಎನ್ನಿಸೋದಕ್ಕೆ ಶುರುವಾಯಿತು. ರಂಭೆ, ತಿಲೋತ್ತಮೆಗಿಂತ ಊರ್ವಶಿಯೆಡೆ ಇಂದ್ರನ ಮನಸ್ಸು ತೀವ್ರವಾಗಿ ಹೊರಳಿದೆ. ಅವಳ ತುಡಿತ, ಆಲೋಚನೆಗಳು ಮಣ್ಣಿನೆಡೆಗೆ ಸೆಳೆದಿವೆ. ಆಕೆ ವಿದ್ಯಾವಂತ ಸ್ತ್ರೀ. ಇಡೀ ಜೀವನವನ್ನು ಗಣಿಕೆ ಪಾತ್ರ ಮಾಡುತ್ತ ಸ್ವರ್ಗದಲ್ಲೇ ಕಳೆಯಬೇಕೇ? ನಾನು ಭೂಮಿಯಲ್ಲಿಯೇ ಜೀವಿಸಬೇಕು ಎಂದು ಪುರೂರವನನ್ನು ಇಷ್ಟಪಡುತ್ತಾಳೆ.

ರಂಗಭೂಮಿ ಕಲಾವಿದೆಯಾಗಿ ನನಗೆ ಈ ಥರದ ಊರ್ವಶಿ, ಇಂದ್ರನ ಪಾತ್ರವನ್ನು ವಿಭಿನ್ನ ಸ್ಥರದಲ್ಲಿ ತೆಗೆದುಕೊಂಡು ಹೋಗಬೇಕು ಅನ್ನಿಸಿತು. ಸಭಿಕರ ಮನಸ್ಸಿನಲ್ಲಿ ಪ್ರೀಮೋಷನ್​ ಎನ್ನುವ ಭಾವ ಇದೆಯಲ್ಲ ಇಂದ್ರ ಎಂದರೇ ಹೀಗೆ, ಊರ್ವಶಿ ಒಬ್ಬ ಗಣಿಕಾ ಸ್ತ್ರೀ. ಇಂಥ ಪರಿಕಲ್ಪನೆಯನ್ನು ಇಲ್ಲಿ ಪೂರ್ತಿಯಾಗಿ ಮುರಿಯಲಾಗಿದೆ. ಪಾತ್ರಗಳ ಮನಸಿನಾಳಕ್ಕೆ ಇಳಿದು ನೋಡಿದಾಗ ಅಲ್ಲಿ ಜೀವಪರ ಅಂಶಗಳೇ ಕಾಣುತ್ತವೆ. ಸುರ-ಅಸುರರ ನಡುವಿನ ಪ್ರೇಮವನ್ನು ಹೇಗೆ ಅರ್ಥ ಮಾಡಿಕೊಳ್ಳಬಹುದು, ಹಂತಹಂತವಾಗಿ ಅದರ ಸಾಗುವಿಕೆ ನಮ್ಮೊಳಗೆ ವಿಚಾರಪ್ರಚೋದನೆಗಳಿಗೆ ಹೇಗೆ ಇಂಬು ಕೊಡುತ್ತದೆ ಎನ್ನುವುದೂ ನಮ್ಮ ಅನುಭವಕ್ಕೆ ದಕ್ಕುತ್ತಾ ಹೋಗುತ್ತದೆ.

ಯಥಾವತ್ತಾದ ಸಾಮಾನ್ಯ ಗ್ರಹಿಕೆಯನ್ನು ಮೀರಿ ಧ್ವನಿಸುವ ಕೃತಿಗಳನ್ನು ಹೇಗೆ ರಂಗದ ಮೇಲೆ ತರುವುದು ಎಂದು ಸದಾ ಯೋಚಿಸುತ್ತಲೇ ಇರುತ್ತೇನೆ. ಯಾವುದೇ ಕೃತಿ ಓದಿದ ಮೇಲೆ ಅದನ್ನು ರಂಗದಲ್ಲಿ ತರುವುದು ಹೇಗೆ ಎಂದು ಯೋಚಿಸುವ ಪ್ರಕ್ರಿಯೆಯಲ್ಲಿ ಆ ಪಾತ್ರಗಳ ಆಯಾಮ, ಆಳ ನನ್ನದೇ ಆದ ಗ್ರಹಿಕೆಯಲ್ಲಿ ಇಳಿಯುತ್ತಾ ಹೋಗುತ್ತದೆ. ಈ ನಿಟ್ಟಿನಲ್ಲಿ ನೃತ್ಯರೂಪಕ ಮಾಡಲು ಇದು ಒಳ್ಳೆಯ ಕೃತಿ. ಅವರ ಅಂದಿನ ಭೇಟಿಯನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಈ ನಾಟಕವನ್ನು ನಾವು ಪ್ರಯೋಗಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಒಪ್ಪಿಗೆ ಪಡೆದುಕೊಳ್ಳುವಾಗ ಅವರಿಗೆ ಬಹಳ ಖುಷಿಯಾಯಿತು. ಜೊತೆಗೆ ಅವರ ಮಗಳೂ ಇದ್ದರು. ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದೆಂದರೆ ಅವರ ಈ ನಾಟಕವನ್ನು ತೆರೆಗೆ ತರುವುದು.

ಇದನ್ನೂ ಓದಿ : ಲಕ್ಷ್ಮೀನಾರಾಯಣ ಭಟ್ಟ​ ಭಾವನಮನ: ಜಾತಿ ನೋಡಿ ಪಾಠ ಮಾಡುವವರು ಎಂದಾದರೂ ಮೇಷ್ಟ್ರಾಗಲು ಸಾಧ್ಯ ಇದೆಯಾ? 

Published On - 5:46 pm, Sat, 6 March 21