Mother’s Day: ಗಂಡ ಅಥವಾ ಮಕ್ಕಳ ಬಾಯಿಂದ ಈ ಮಾತು ಬಂದರೆ ಅವಳ ಜನುಮ ಸಾರ್ಥಕ!

Mother's Day 2022: ‘ಹೂವು, ಉಡುಗೊರೆ ಇತ್ಯಾದಿ ಕೊಡಲು ನನಗೆ ಅಮ್ಮ ಇಲ್ಲವಲ್ಲ. ಕಣ್ಣಿನಲ್ಲಿ ತುಂಬಿದ ನೀರು ಅವಳಿಗೆ ಕಾಣದಂತೆ ಬೇರೆಡೆ ತಿರುಗಿದೆ...’ ತಾಯಂದಿರ ದಿನದ ಪ್ರಯುಕ್ತ ಲೇಖಕಿ ಸಹನಾ ಪ್ರಸಾದ್ ವಿಶೇಷ ಬರಹ.

Mother's Day: ಗಂಡ ಅಥವಾ ಮಕ್ಕಳ ಬಾಯಿಂದ ಈ ಮಾತು ಬಂದರೆ ಅವಳ ಜನುಮ ಸಾರ್ಥಕ!
ಪ್ರಾತಿನಿಧಿಕ ಚಿತ್ರ (Credits: UNICEF/Mukherjee AFP-Services)
Follow us
TV9 Web
| Updated By: shivaprasad.hs

Updated on: May 08, 2022 | 11:38 AM

“ಅಯ್ಯೋ, ರೋಸ್ ಕೊಳ್ಳಲು ಸಮಯ ಆಗಲೇ ಇಲ್ಲ. ರಾತ್ರಿ 10.30 ಆಗುತ್ತಾ ಬಂತು. ನಾನು ಅಮ್ಮನಿಗೆ ರೋಸ್ ಗೊಂಚಲು ತೊಗೋಬೇಕಿತ್ತು” ಚಡಪಡಿಸಿದಳು ರಮ್ಯಾ. “ಇರ್ಲಿ ಬಿಡೆ, ರೋಸ್ ಕೊಟ್ಟರೆ ಮಾತ್ರ ಅಮ್ಮನ ಮೇಲೆ ಪ್ರೀತಿ ಅಂತಾನಾ . ಒಂದು ಅಪ್ಪುಗೆ ಕೊಡು ಸಾಕು. ಖುಷಿಯಾಗುತ್ತಾರೆ” ಎಂದೆ ನಾನು . “ಹಾಗಲ್ಲ ಕಣೆ. ನಮ್ಮಮ್ಮನ ಫ್ರೆಂಡ್ಸ್ ಗ್ರೂಪಿನಲ್ಲಿ ಸ್ಪರ್ಧೆ ಇದೆಯಂತೆ. ಮಕ್ಕಳು ಕೊಟ್ಟ ಹೂ ಗುಚ್ಛದೊಂದಿಗೆ ಪಟ ಕಳುಹಿಸಬೇಕಂತೆ. ಪ್ರೈಜ್ ಉಂಟಂತೆ” ಎಂದು ನುಡಿಯುತ್ತಲೇ ತನ್ನ ಅಮ್ಮನಿಗೆ ಫೋನ್ ಹಚ್ಚಿದಳು. “ಮಗಳ ಪ್ರಲಾಪ ಕೇಳಿ ಆಕೆ ನಕ್ಕು ಬಿಟ್ಟರು” ಇರಲಿ ಪುಟ್ಟಿ. ನಿನ್ನ ಕೆಲಸದ ಒತ್ತಡ ನನಗೆ ಗೊತ್ತು. ನಾನಾಗಲೇ ವಾಕಿಂಗ್ ಮುಗಿಸಿ ಬರುವಾಗ ಎಲ್ಲಾ ಹೂವುಗಳೂ ಇರುವ ಗುಚ್ಛ ಕೊಂಡು ತಂದಿರುವೆ. ಯಾರು ಚೆಕ್ ಮಾಡ್ತಾರೆ, ಮಕ್ಕಳು ಕೊಟ್ಟಿದ್ದಾ ಅಥವಾ ನಾವೇ ಕೊಂಡಿದ್ದಾ ಅಂತ” ಕರೆ ಕಟ್ ಮಾಡಿದ ರಮ್ಯಾ ಖುಷಿಯಾಗಿದ್ದಳು.” ಅದಕ್ಕೆ ಅಮ್ಮ ಅನ್ನುವುದು” ಎಂದವಳ ಮಾತಿಗೆ ಸುಮ್ಮನೆ ತಲೆ ಆಡಿಸಿದೆ. ಹೂವು, ಉಡುಗೊರೆ ಇತ್ಯಾದಿ ಕೊಡಲು ನನಗೆ ಅಮ್ಮ ಇಲ್ಲವಲ್ಲ. ಕಣ್ಣಿನಲ್ಲಿ ತುಂಬಿದ ನೀರು ಅವಳಿಗೆ ಕಾಣದಂತೆ ಬೇರೆಡೆ ತಿರುಗಿದೆ.

ಅಮ್ಮನ ಸಾವು ಬಹಳವಾಗಿ ಕಾಡುವುದು ಇಂದಿನ ದಿನ. ಅವಳ ನರಳಿಕೆಗೆ ಮುಕ್ತಿ ಸಿಕ್ಕಿತು ಎಂಬ ಭಾವ ಬೆಳೆಸಿಕೊಂಡು ನಾನು ಮನಸ್ಸಿಗೆ ನೆಮ್ಮದಿ ತಂದುಕೊಂಡಿದ್ದೆ. ಆದರೂ ಎಲ್ಲೆಡೆ ತಾಯಿಯ ದಿನಾಚರಣೆ, ಅವಳ ಬಗ್ಗೆ ಲೇಖನಗಳು, ಅವಳ ಜತೆಗೆ ತೆಗೆಸಿಕೊಂಡ ಪಟಗಳು ನೋಡುತ್ತಾ ಮನಸ್ಸಿಗೆ ಬಹಳ ಹಿಂಸೆಯಾಗುತ್ತಿತ್ತು. ನನಗಾದರೂ ಬಹಳ ವರುಷದವರೆಗೂ ತಾಯಿಯ ನೆರಳಿತ್ತು. ಆದರೆ ಎಷ್ಟೋ ಜನರಿಗೆ ತಾಯಿಯ ಪ್ರೀತಿ ಸಿಕ್ಕೇ ಇರುವುದಿಲ್ಲ. ಸಿಕ್ಕಿದರೂ ಸಹ ಕಡಿಮೆ ಸಮಯದಲ್ಲಿ ಸಿಕ್ಕಿರುತ್ತದೆ. ಅವರಿಗೆ ಈ ದಿನ ಬಂದರೆ ಏನು ಅನಿಸಬಹುದು?

“ಈಗ ಅಭ್ಯಾಸ ಆಗಿದೆ. ಮುಂಚೆ ಎಲ್ಲಾ ಈ ದಿನ ಬಂದರೆ ಸಾಕು, ಎಲ್ಲಾದರೂ ಓಡಿ ಹೋಗೋಣ ಅನಿಸುತ್ತಾ ಇತ್ತು. ನನ್ನ ಸ್ನೇಹಿತರ ತಾಯಂದಿರು 90 ದಾಟಿದರೂ ಇನ್ನೂ ಗಟ್ಟಿಮುಟ್ಟಾಗಿ ಇರುವುದು ನೋಡಿದಾಗ ಮನಸ್ಸಿನಲ್ಲಿ ತುಂಬಾ ಬೇಸರವಾಗುತ್ತಿತ್ತು. ಆದರೆ ನಾವು ಪಡೆದುಬಂದದ್ದು ಎಂದು ಸುಮ್ಮನಾಗುತ್ತಿದ್ದೆ” ೩8ರ ಹರೆಯದಲ್ಲಿ ಇರುವ ಶ್ರುತಿಯ ಕೊರಗು. ” ತಾಯಿಯನ್ನು ಕಂಡೇ ಇಲ್ಲ. ಅವಳ ವಾತ್ಸಲ್ಯ , ಪ್ರೀತಿ ಅರಿತಿಲ್ಲ. ಆದರೆ ಅದನ್ನು ತುಂಬಿಕೊಟ್ಟಿದ್ದು ಅಪ್ಪ. ಆದಷ್ಟು ಅವಳ ಕೊರತೆ ತೋರದಂತೆ ಬೆಳೆಸಿದರು. ಅವರಿಗೆ ನೋವು ಮಾಡುವುದಕ್ಕೆ ಇಷ್ಟ ಇಲ್ಲದೆ, ತಾಯಿಯ ಚಿತ್ರವನ್ನೇ ಬದುಕಿನಿಂದ ಅಳಿಸಿಬಿಟ್ಟಿರುವೆ” ೪೦ ದಶಕಗಳನ್ನು ಕಂಡಿರುವ ರಮೇಶ್ ಉವಾಚ.

ಇದನ್ನೂ ಓದಿ
Image
Mother’s Day 2022: ನಿನ್ನ ಅಮ್ಮ ಎನ್ನಲೇ, ದೇವರೆನ್ನಲೇ
Image
Mother’s Day 2022: ಅವಳ ಪ್ರೀತಿಯ ನೆರಳಿನಲ್ಲಿ ನಾನು ಮುದ್ದು ಕಂದ
Image
Mother’s Day 2022: ತಾಳ್ಮೆ ಮತ್ತು ಸಂಯಮದ ಕೈಗನ್ನಡಿ ನನ್ನಮ್ಮ
Image
Mothers Day: ಇಬ್ಬರು ಮಕ್ಕಳೊಂದಿಗೆ ಉದ್ಯೋಗ ಸಂಭಾಳಿಸುವ ಶಿಕ್ಷಕಿಯೊಬ್ಬರ ಬದುಕಿನ ಪುಟಗಳಿವು

” ನನ್ನಮ್ಮ ತ್ಯಾಗದ ಪ್ರತೀಕ. ತಂದೆಯ ಮರಣದ ನಂತರ ನಮ್ಮನ್ನೆಲ್ಲ ಸಾಕಿ ಸಲುಹಿದ್ದು ಅವಳೇ. ಆದರೆ ನನ್ನ ಹಾಗೂ ತಮ್ಮನ ಮದುವೆಯಾದ ಮೇಲೆ ಅಮ್ಮನಿಗೆ ಅಭದ್ರತೆ ಕಾಡುತ್ತಿದೆ. ಅವಳಿಗೆ ಇಷ್ಟವಾಗಿ ನಡೆದುಕೊಂಡರೂ, ಮಗ, ಸೊಸೆ ಎಲ್ಲರ ಮೇಲೂ ಅಸಹನೆ ತೋರುತ್ತಾಳೆ. ನಾನು ಮಾಡಿದ ತ್ಯಾಗಕ್ಕೆ ಪ್ರತಿಫಲ ಸಿಗಲೇ ಇಲ್ಲ ಎಂದು ಹಾರಾಡುತ್ತಾಳೆ” ೩೨ ವಸಂತಗಳನ್ನು ಕಂಡಿರುವ ಹೇಮಂತ್ ಮನದ ಅಳಲು ಹಂಚಿಕೊಂಡರು.

” ಸದಾ ಮಕ್ಕಳು, ಅವರ ಊಟ ತಿಂಡಿ, ಹೊಂವರ್ಕ್, ಅನಾರೋಗ್ಯ ಇವುಗಳದೇ ಚಿಂತೆ. ನನ್ನ ಬಗ್ಗೆ ಕಾಳಜಿ ಇಲ್ಲವೇ ಇಲ್ಲ. ಗಂಡನ ಕಡೆಗೂ ತನ್ನ ಕರ್ತವ್ಯ ಇದೆ ಅಂತ ತಿಳಿದುಕೊಳ್ಳುವುದೇ ಇಲ್ಲ” ಗಂಡನ ಸಿಟ್ಟು. ” ತಾಯಿಯಾದ ಮೇಲೂ ಅಲಂಕಾರ ನೋಡು. ಆ ಹುಬ್ಬು ತೀಡಿಸಿಕೊಳ್ಳುವುದು, ತೋಳಿಲ್ಲದ ರವಿಕೆ, ಲಿಪ್ಸ್ಟಿಕ್ , ಮಹಿಳಾ ಸಂಘ , ಬೇಕಾ ಇವಳಿಗೆ” ನೆರೆಹೊರೆಯವರ ಬಾಯಿಗೆ ಚಾಲನೆ. ” ಮೂರು ಹೊತ್ತೂ ಮನೆ, ಮಕ್ಕಳ ಯೋಚನೆ ಆದರೆ ಕೆಲಸಕ್ಕೆ ಯಾಕೆ ಸೇರಿದಿರಿ?” ಬಾಸ್ ಗುಟುರು. ” ನಿನ್ನ ಕೆಲಸ, ಪ್ರೊಮೋಷನ್ ಮುಖ್ಯವೋ, ಮಕ್ಕಳ ಉದ್ದಾರವೋ?” ಹಿರಿಯರ ಕೊಂಕು.

“ಮಗನಿಗೆ ಮದುವೆ ಆಗುವವರೆಗೆ ತಾಯಿ, ಅದಾದ ಮೇಲೆ ಮಗ, ಸೊಸೆ ಇಬ್ಬರಿಗೂ ಅವಳು ಅತ್ತೆ!” “ಸದಾ ಹೆಣ್ಣು ಮಕ್ಕಳು, ಅಳಿಯಂದಿರು, ಹೆಣ್ಣು ಮಕ್ಕಳ ಮಕ್ಕಳು, ಸಂಸಾರ , ಇದೆ ಜಪ ಅವಳಿಗೆ. ನಾವ್ಯಾರೂ ಕಣ್ಣಿಗೆ ಕಾಣಿಸುವುದೇ ಇಲ್ಲ. ನಮ್ಮ ಮಕ್ಕಳು ಸಹ ಅವಳಿಗೆ ಎರಡನೆಯ ದರ್ಜೆಯವರೇ” ಎಂದು ಸೊಸೆಯಂದಿರ ಗೋಳು.

“ಯಾವಾಗಲೂ ಕೆಲಸ ಹಚ್ಚಿಕೂಂಡು ಮಾಡುತ್ತೀಯಲ್ಲ, ಸುಮ್ಮನೆ ಆರಾಮವಾಗಿ ಇರು ಅಮ್ಮ” ಗಂಡ ಅಥವಾ ಮಕ್ಕಳ ಬಾಯಿಂದ ಈ ಮಾತು ಬಂದರೆ ಅವಳ ಜನುಮ ಸಾರ್ಥಕ!

ಬರಹ: ಸಹನಾ ಪ್ರಸಾದ್

ತಾಯಂದಿರ ದಿನದ ವಿಶೇಷದ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ