Mother’s Day 2022: ನಿನ್ನ ಅಮ್ಮ ಎನ್ನಲೇ, ದೇವರೆನ್ನಲೇ

TV9 Digital Desk

| Edited By: ಅಕ್ಷಯ್​ ಪಲ್ಲಮಜಲು​​

Updated on: May 08, 2022 | 10:00 AM

ಯಾವುದೇ ಮನೆಯಲ್ಲಾದರೂ ಸರಿ ಮಕ್ಕಳು ತಪ್ಪು ಮಾಡಿದಾಗ ಮೊದಲು ತುಳಿತಕ್ಕೊಳಗಾಗುವುದೇ ತಾಯಿ. ಅಲ್ಲದೆ ಎಲ್ಲ ತಪ್ಪುಗಳಿಗೂ ಎಲ್ಲರಿಂದಲೂ ಕೆಟ್ಟ ಮಾತಿಗೆ ಅಣಿಯಾಗುವಳು. ಮಕ್ಕಳು ಒಳ್ಳೆಯ ಹೆಸರು ಗಳಿಸಿದರು, ಕೆಟ್ಟ ಹೆಸರಿನಿಂದ ಗುರುತಿಸಿಕೊಂಡರು ಮೊದಲು ಅದಕ್ಕೆಲ್ಲ ಕಾರಣ ತಾಯಿ ಎಂದು ಎಲ್ಲರ ಬಾಯಿಯಲ್ಲೂ ಕಂಠಪಾಠವಾಗಿ ಹೋಗಿರುವುದು ಸಹಜ.ಮಗು ಹುಟ್ಟುವ ಮುಂಚೆಯೇ ಮಗುವಿನ ಬಗ್ಗೆ ಬೆಟ್ಟದಷ್ಟು ಕನಸುಗಳನ್ನು ಹೊರುವಳು.

Mother’s Day 2022:  ನಿನ್ನ ಅಮ್ಮ ಎನ್ನಲೇ, ದೇವರೆನ್ನಲೇ
ಸಾಂದರ್ಭಿಕ ಚಿತ್ರ

ತ್ಯಾಗಕ್ಕೆ ಇನ್ನೊಂದು ಹೆಸರು ಅಮ್ಮ ಎಂದರೆ ತಪ್ಪಾಗಲಾರದು. ತನ್ನ ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ಮಹಾನ್ ದೇವತೆ. ಕಡು ಬಡತನವಿದ್ದರೂ ಯಾರಿಂದಲೂ ಸಹಾಯ ಯಾಚಿಸದೆ. ಸೂರ್ಯ ಮೂಡುವ ಹೊತ್ತಿಗೆ ಮನೆಯ ಎಲ್ಲ ಕೆಲಸವನ್ನು ಮಾಡಿ ಮುಗಿಸಿ ಇನ್ನೊಂದು ಮನೆಬಾಗಿಲಿಗೆ ಕೆಲಸಕ್ಕೆ ಹೋಗಿ ,ಅಲ್ಲಿ ಕಡು ಬಿಸಿಲ ಬೇಗೆಯಲ್ಲಿ ಬೆಂದು ದುಡಿದು ಸೂರ್ಯ ಮುಳುಗುವ ಹೊತ್ತಿಗೆ ಮತ್ತೆ ಮನೆ ಸೇರುವಳು. ಶಾಲೆ ಮುಗಿಸಿ ಬಂದಾಗ ಮಕ್ಕಳಿಗೆ ತಿನ್ನಲು ತಿಂಡಿ ತಯಾರಿಸಿ ಮನೆಯ ಎಲ್ಲಾ ಕೆಲಸವನ್ನು ಮಾಡುವಳು. ಕಡಿಮೆ ಅಂದರೂ ದಿನದಲ್ಲಿ ಹತ್ತೊಂಬತ್ತು ಗಂಟೆ ತಾನು ವಿರಾಮಿಸದೆ ದುಡಿವಳು. ಆಕೆಯ ಕಷ್ಟದ ಬಗ್ಗೆ ಇದುವರೆಗೆ ಯಾರೂ ವಿಚಾರಿಸಿದವರು ಇಲ್ಲ. ತನ್ನ ಮಕ್ಕಳು ಇನ್ನೊಬ್ಬರ ಎದುರು ಕೀಳುಮಟ್ಟದಲ್ಲಿ ಗುರುತಿಸಬಾರದು ಎಂದು ಯಾವುದೇ ವಿಚಾರದಲ್ಲೂ ಏನನ್ನು ಕಡಿಮೆಮಾಡಿದೆ ಮಕ್ಕಳ ಬೇಕು-ಬೇಡಗಳನ್ನು ಈಡೇರಿಸಿದವಳು.

ಯಾವುದೇ ಮನೆಯಲ್ಲಾದರೂ ಸರಿ ಮಕ್ಕಳು ತಪ್ಪು ಮಾಡಿದಾಗ ಮೊದಲು ತುಳಿತಕ್ಕೊಳಗಾಗುವುದೇ ತಾಯಿ. ಅಲ್ಲದೆ ಎಲ್ಲ ತಪ್ಪುಗಳಿಗೂ ಎಲ್ಲರಿಂದಲೂ ಕೆಟ್ಟ ಮಾತಿಗೆ ಅಣಿಯಾಗುವಳು. ಮಕ್ಕಳು ಒಳ್ಳೆಯ ಹೆಸರು ಗಳಿಸಿದರು, ಕೆಟ್ಟ ಹೆಸರಿನಿಂದ ಗುರುತಿಸಿಕೊಂಡರು ಮೊದಲು ಅದಕ್ಕೆಲ್ಲ ಕಾರಣ ತಾಯಿ ಎಂದು ಎಲ್ಲರ ಬಾಯಿಯಲ್ಲೂ ಕಂಠಪಾಠವಾಗಿ ಹೋಗಿರುವುದು ಸಹಜ.ಮಗು ಹುಟ್ಟುವ ಮುಂಚೆಯೇ ಮಗುವಿನ ಬಗ್ಗೆ ಬೆಟ್ಟದಷ್ಟು ಕನಸುಗಳನ್ನು ಹೊರುವಳು. ಒಂಬತ್ತು ತಿಂಗಳು ಗರ್ಭದಲ್ಲಿ ಜೋಪಾನ ಮಾಡುವಳು. ನನ್ನ ಮಕ್ಕಳು ಎಷ್ಟೇ ತಪ್ಪು ಮಾಡಿದರೂ ಕ್ಷಮಿಸಿ ತಿದ್ದಿತೀಡಿ ಬುದ್ಧಿ ಹೇಳುವಳು. ಮಕ್ಕಳ ಸಂತೋಷದಲ್ಲಿ ತನ್ನ ನೋವನ್ನೆಲ್ಲ ಮರೆಯುವಳು. ಅಮ್ಮ ತ್ಯಾಗಮಯಿ , ಕರುಣಾಮಯಿ ಎಂದರೂ ತಪ್ಪೇನಲ್ಲ.

ಬಡತನದ ದಿನಗಳಲ್ಲಿ ಮಕ್ಕಳು ಉಂಡು ಉಳಿದರೆ ಮಾತ್ರ ತಾನು ಊಟ ಮಾಡುತ್ತಿದ್ದಳು. ಇಲ್ಲದಿದ್ದರೆ ಮಕ್ಕಳ ಹೊಟ್ಟೆ ತುಂಬುವುದನ್ನು ನೋಡಿ ತನಗೆ ಹೊಟ್ಟೆ ತುಂಬಿದಷ್ಟು ಸಂತೋಷ ,ತೃಪ್ತಿ ಪಡುತ್ತಿದ್ದಳು. ಹಬ್ಬಹರಿದಿನಗಳು ಬಂದರೆ ಸಾಕು ಹೊಸಬಟ್ಟೆಗಳನ್ನು ಮಕ್ಕಳಿಗೆ ಕೊಡಿಸಿ ತಾನು ಹಳ್ಳಿಯ ಬಟ್ಟೆಯನ್ನು ಅಥವಾ ಇನ್ಯಾರೋ ಕೊಟ್ಟ ಬಟ್ಟೆಯನ್ನು ತೊಟ್ಟು ಸುಮ್ಮನಿರುತ್ತಿದ್ದಳು.ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಬಂದಾಗ ಯಾರಿಗೂ ತಿಳಿಸದೆ ತಾನೊಬ್ಬಳು ನೋವನ್ನು ನಂಗುತ್ತಿದ್ದಳು. ಹೀಗೆ ಅಮ್ಮನ ಬಗ್ಗೆ ಹೇಳ ಹೊರಟರೆ ಸಮಯ ಸಾಲದು.

ಅಮ್ಮ ನಿನಗಿದೋ ನನ್ನ ಮನಸ್ಪೂರ್ವಕ ಕೃತಜ್ಞತೆಗೆ,

ಏನೆಂದು ಹೊಗಳಲಮ್ಮ ನಿನ್ನ ನಾನು ಪದಗಳೇ ಸಿಗದಷ್ಟು ಪ್ರೀತಿ ಕೊಟ್ಟಿರುವೆ ನೀನು ಅಮ್ಮ ಎಂದು ಪೂಜಿಸಲೇ, ದೇವರೆಂದು ಪೂಜಿಸಲೇ ಏನೆಂದು ಪೂಜಿಸಲಮ್ಮ ನಿನ್ನ ಈ ಮಮತೆಯ

ನಾ ಗೆದ್ದಾಗ ನಕ್ಕಿರುವೆ , ನಾ ಸೋತಾಗ ಅತ್ತಿರುವೆ ನನ್ನ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ನೀ ಆಸರೆಯಾಗಿರುವೆ ಯಾವ ಜನ್ಮದ ಪುಣ್ಯವೋ ನಾ ತಿಳಿಯದಾಗಿರುವೆ ಏಳೇಳು ಜನ್ಮವೆತ್ತಿದರೂ ನಿನ್ನ ಋಣ ತೀರದಮ್ಮ

ಮರುಜನ್ಮ ಸಿಕ್ಕರೆ ಉಸಿರಾಗು ನೀ ನನಗೆ ನಗುನಗುತ ಕಾಲಿಡುವೆ ನಾ ನಿನ್ನ ಮಡಿಲಿಗೆ ದೇವರು ಕೊಟ್ಟ ಪುಣ್ಯ ಪ್ರಸಾದವಮ್ಮ ನೀ ಎನಗೆ ದೇವರೆಂದೆ ಪೂಜಿಸುವೆ ನಿನ್ನ ಕೊನೆಯುಸಿರಿರೋವರೆಗೆ

ದೀಪ್ತಿ ಅಡ್ಡಂತ್ತಡ್ಕ

ಪತ್ರಿಕೋದ್ಯಮ ವಿದ್ಯಾರ್ಥಿನಿ ವಿವೇಕಾನಂದ ಮಹಾವಿದ್ಯಾಲಯ ನೆಹರೂನಗರ ಪುತ್ತೂರು

ಅಮ್ಮಂದಿರ ಬಗ್ಗೆ ಅದ್ಭುತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada