Literature: ನೆರೆನಾಡ ನುಡಿಯೊಳಗಾಡಿ; ‘ಪುತ್ರಯಜ್ಞ’ ಅವನ ಮನಸ್ಸು ಇಸ್ಪೀಟೆಲೆಗಳಿಗಿಂತ ಸಜೀವ ವಸ್ತುವಿನ ಮೇಲಿರುತ್ತಿತ್ತು
Rabindranath Tagore : ವಿನೋದಾಗೆ ಕೆಡುಕೆನಿಸುತ್ತಿತ್ತು. ಹೃದಯವನ್ನು ಗೆಲ್ಲುವ ಸೂಜಿಗಲ್ಲಿನಂತಹ ಶಕ್ತಿಯನ್ನು ಇನ್ನೊಬ್ಬ ಪುರುಷನ ಮೇಲೆ ಪ್ರಯೋಗಿಸಹೊರಟದ್ದು ಅನುಚಿತವಾದೀತು. ಆದರೆ ಅಸ್ವಾಭಾವಿಕವಂತೂ ಅಲ್ಲವೇ ಅಲ್ಲ!

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಹಗಲು ರಾತ್ರಿ ದಿನವೂ ಇದೇ ತಟವಟ, ಪಿಟಿಪಿಟಿ ಕೇಳಿಕೇಳಿ ಅವಳಿಗೆ ತಲೆಚಿಟ್ಟು ಹಿಡಿದಾಗ ಕುಸುಮಳ ಮನೆಗೆ ತಾಶ್ (ಇಸ್ಪೀಟು) ಆಡಲು ಹೋಗುತ್ತಿದ್ದಳು. ಆ ಸಮಯವಷ್ಟೇ ಅವಳ ಮನರಂಜನೆಯ ಕ್ಷಣಗಳನೆನ್ನಬಹುದು. ಆಗ ಮಾತ್ರ ಘೋರ ನರಕದ ಭೀಷಣ ನೆರಳು ಬೀಳದೇ ಇದ್ದುದರಿಂದ ಆ ಹೊತ್ತಿನ ಚೇಷ್ಟೆ ನಗು ಮತ್ತು ಹರಟೆಗೆ ಯಾವ ಅಡ್ಡಿಯೂ ಇದ್ದಿಲ್ಲ. ಕುಸುಮಳಿಗೆ ಯಾವತ್ತು ಆಟದ ಗೆಳತಿ ಸಿಗುತ್ತಿದ್ದಿಲ್ಲವೋ ಅವತ್ತು ಆಕೆ ತನ್ನ ಪ್ರಾಯದ ಮೈದುನ ನಗೇಂದ್ರನನ್ನು ಹಿಡಿದು ಕೂರಿಸಿಕೊಳ್ಳುತ್ತಿದ್ದಳು. ನಗೆಂದ್ರ ಮತ್ತು ವಿನೋದಾರ ಸಂಕೋಚವನ್ನು ಆಕೆ ನಗೆಚಾಟಿಕೆಯಲ್ಲಿ ಹಾರಿಸಿಬಿಡುತ್ತಿದ್ದಳು. ಈ ಲೋಕದಲ್ಲಿ ಏನೋ ಮಾಡಲು ಹೋಗಿ ಇನ್ನೆನೋ ಆಗಿ ಬಿಡುತ್ತಿರುತ್ತದೆ. ಕೆಲವೊಮ್ಮೆ ಆಟವೂ ಸಂದಿಗ್ಧ ಪರಿಸ್ಥಿತಿಯನ್ನುಂಟುಮಾಡುತ್ತದೆ. ಚಿಕ್ಕವಯಸ್ಸಿನಲ್ಲಿ ಇಂಥ ಗಂಭೀರ ವಿಷಯಗಳನ್ನು ಯಾರೂ ನಂಬುವುದಿಲ್ಲ.
ಕಥೆ : ಪುತ್ರಯಜ್ಞ | ಮೂಲ : ರವೀಂದ್ರನಾಥ ಟ್ಯಾಗೋರ | ಕನ್ನಡಕ್ಕೆ : ರೇಣುಕಾ ನಿಡಗುಂದಿ
(ಭಾಗ 2)
ಈ ವಿಷಯ ನಗೇಂದ್ರನ ಸಂಕೋಚದಲ್ಲಿ ಯಾವ ವ್ಯತ್ಯಾಸವನ್ನುಂಟುಮಾಡಲಿಲ್ಲ. ತಾಶ್ ಆಡುವುದೆಂದರೆ ಸಾಕು ಅವನು ಎಲ್ಲಕ್ಕಿಂತ ತುಸು ಹೆಚ್ಚೇ ಖುಶಿಯಾಗಿರುತ್ತಿದ್ದನು. ಈ ಕಾರಣದಿಂದ ವಿನೋದಾ ಮತ್ತು ನಗೇಂದ್ರನ ಭೇಟಿ ಆಗಾಗ ಆಗುತ್ತಿತ್ತು.
ನಗೇಂದ್ರ ಇಸ್ಪೀಟು ಆಡಲು ಕೂತರೆ ಅವನ ಮನಸ್ಸು ಮತ್ತು ನೋಟವೆಲ್ಲ ಇಸ್ಪೀಟೆಲೆಗಳ ಮೇಲೆ ಇರುವುದಕ್ಕಿಂತ ಹೆಚ್ಚಾಗಿ ಸಜೀವ ವಸ್ತುವಿನ ಮೇಲೆ ಕೇಂದ್ರಿತವಾಗಿರುತ್ತಿತ್ತು. ಆದ್ದರಿಂದ ಅವನು ಯಾವಾಗಲೂ ಸೋಲುತ್ತಿದ್ದ. ಈ ಸೋಲಿನ ನಿಜವಾದ ಕಾರಣ ಕುಸುಮಳಿಂದಾಗಲಿ ವಿನೋದಾಳಿಂದಾಗಲಿ ಗುಟ್ಟಾಗಿರಲಿಲ್ಲ. ಮೊದಲೇ ಹೇಳಿದ್ದೇನೆ – ಕರ್ಮಫಲದ ಬಗ್ಗೆ ಈ ಚಿಕ್ಕ ವಯಸ್ಸಿನವರು ಯಾವತ್ತೂ ಗಂಭೀರವಾಗಿರೋದಿಲ್ಲ, ಅದವರ ಕೆಲಸವಲ್ಲ ಅಂತ. ಕುಸುಮ ಯೋಚಿಸುತ್ತಿದ್ದಳು, ತಾನು ಕಲ್ಪಿಸಿಕೊಂಡಂತೆ ನಿಜಕ್ಕೂ ಇದು ನಡೆದರೆ ಎಷ್ಟು ಚೆಂದ. ಪೂರಾ ಹದಿನಾರಾಣೆಗೂ ಇದು ನಿಜವಾಗಿಬಿಡಲಿ. ಪ್ರೇಮದ ಹೊಸ ಚಿಗುರು, ಮುಗುಳುಗಳಿಗೆ ಗುಟ್ಟಾಗಿ ನೀರು ಹನಿಸಿ ಪೋಷಿಸುವುದೆಂದರೆ ತರುಣಿಯರಿಗಂತೂ ಒಂದು ಅತ್ಯಾಕರ್ಷಕವಾದ ಕೌತುಕದ ಸಂಗತಿ.
ವಿನೋದಾಗೆ ಕೆಡುಕೆನಿಸುತ್ತಿತ್ತು. ಹೃದಯವನ್ನು ಗೆಲ್ಲುವ ಸೂಜಿಗಲ್ಲಿನಂತಹ ಶಕ್ತಿಯನ್ನು ಇನ್ನೊಬ್ಬ ಪುರುಷನ ಮೇಲೆ ಪ್ರಯೋಗಿಸಹೊರಟದ್ದು ಅನುಚಿತವಾದೀತು. ಆದರೆ ಅಸ್ವಾಭಾವಿಕವಂತೂ ಅಲ್ಲವೇ ಅಲ್ಲ!
ಹೀಗೇ ತಾಶ್ ಆಟದ ಸೋಲು ಗೆಲವು, ಛಕ್ಕಾ, ಪಂಜಾಗಳ ಚಕ್ಕರಿನಲ್ಲಿ ಯಾವುದೋ ಒಂದು ಗಳಿಗೆಯಲ್ಲಿ ಇಬ್ಬರು ಆಟಗಾರರ ಹೃದಯಗಳು ಬೆಸಗೊಳ್ಳುವುದು ಆ ಅಂತರ್ಯಾಮಿಗೂ ಗೊತ್ತಾದಂತೆ ಇನ್ನೊಬ್ಬ ಆಟಗಾರಳಿಗೂ ಗೊತ್ತಾಗಿಹೋಗಿ ಆಕೆಗೆ ಬಹಳ ಸಮಾಧಾನವೆನಿಸಿತು.
ಒಂದು ದಿನ ಅಪರಾಹ್ನದಲ್ಲಿ ವಿನೋದಾ, ಕುಸುಮ್ ಮತ್ತು ನಗೇಂದ್ರ ತಾಶ್ ಆಡುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಕುಸುಮಳ ಅನಾರೋಗ್ಯದಿಂದ ಅಳುತ್ತಿದ್ದ ಮಗುವಿನ ದನಿ ಕೇಳಿ ಆಕೆ ಅಲ್ಲಿಂದ ಎದ್ದುಹೋದಳು. ನಗೇಂದ್ರ ವಿನೋದಾಳೊಂದಿಗೆ ಮಾತಿಗೆ ತೊಡಗಿದ. ತಾನೇನು ಮಾತಾಡುತ್ತಿದ್ದೇನೆಂದೇ ಅವನಿಗೆ ಅರಿವಿರಲಿಲ್ಲ. ಹೃದಯವೆಲ್ಲ ಅಲ್ಲೋಲಕಲ್ಲೋಲವಾಗಿ ದೇಹದ ನರನಾಡಿಗಳಲ್ಲಿ ರಕ್ತ ವೇಗವಾಗಿ ಊರ್ಧ್ವಮುಖಿಯಾಗಿ ಶಿರೋಧಾರೆಯತ್ತ ಹರಿಯತೊಡಗಿತು.
ಏಕಾಏಕಿ ಅವನ ಉದ್ಧಟ ತಾರುಣ್ಯ ಎಲ್ಲ ಕಟ್ಟುಪಾಡುಗಳ ಸಂಕೋಲೆಯನ್ನು ಕಳಚಿಹಾಕಿತು. ಅವನು ವಿನೋದಾಳ ಎರಡೂ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡು ತನ್ನತ್ತ ಸೆಳೆದುಕೊಂಡು ಗಾಢವಾಗಿ ಮುತ್ತಿಟ್ಟನು.
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಗಂಡನ ಬಳಿ ಕಾಮವನ್ನು ಕೇಳಿ ಪಡೆಯುವುದು ಅಸಹ್ಯ ಎನ್ನಿಸುತ್ತಿತ್ತು
ವಿನೋದಾ ನಗೇಂದ್ರನ ಈ ಹರಕತ್ತಿನಿಂದ ಅಪಮಾನಗೊಂಡು, ಕೋಪ, ಕ್ಷೋಭೆ ಮತ್ತು ನಾಚಿಕೆಯಲ್ಲಿ ಒದ್ದೆಮುದ್ದೆಯಾಗಿ ತನ್ನ ಕೈಯನ್ನು ಬಿಡಿಸಿಕೊಳ್ಳಲು ಕೊಸರಾಡುತ್ತಿದ್ದಳು. ಅಷ್ಟರಲ್ಲಿ ಅದೇ ಹೊತ್ತಿಗೆ ಸರಿಯಾಗಿ ಆ ಕೊಠಡಿಗೆ ಬಂದ ಮೂರನೇಯ ವ್ಯಕ್ತಿಗೆ ಈ ದೃಶ್ಯ ಕಂಡಿತು. ನಗೇಂದ್ರ ತಲೆತಗ್ಗಿಸಿಕೊಂಡು ಹೊರ ಹೋಗಲು ದಾರಿ ಹುಡುಕುತ್ತಿದ್ದ.
ಕೆಲಸದವಳು ಗತ್ತಿನಲ್ಲಿ ಹೇಳಿದಳು, “ಸೊಸೆ ಮುದ್ದೇ , ನಿಮ್ಮ ಅತ್ತೆ ಕರೀತಾ ಇದ್ದಾರೆ..”
ವಿನೋದಾ ಕಣ್ಣಿರು ತುಂಬಿದ ಒದ್ದೆಗಣ್ಣಿನಲ್ಲಿ ನಗೇಂದ್ರನತ್ತ ಒಂದು ತೀಕ್ಷ್ಣನೋಟ ಬೀರಿ ಕೆಲಸದವಳೊಂದಿಗೆ ಹೊರಟುಹೋದಳು.
ಕೆಲಸದವಳು ಏನನ್ನು ಕಂಡಿದ್ದಳೋ ಅದರಲ್ಲಿ ಒಂದಿಷ್ಟನ್ನು ಮರೆಮಾಚಿ ಏನನ್ನು ಕಂಡಿದ್ದಿಲ್ಲವೋ ಅದಕ್ಕೆ ಉಪ್ಪುಖಾರ ಬೆರೆಸಿ ಬಣ್ಣಿಸಿದಳು. ಇದರಿಂದಾಗಿ ವೈದ್ಯನಾಥರ ಮನೆಯಲ್ಲಿ ಬಿರುಗಾಳಿಯೇ ಬಂದೆರಗಿತು. ವಿನೋದಾಳ ಸ್ಥಿತಿ ಏನಾಗಿರಬೇಕು ಎಂಬುದನ್ನು ಬಣ್ಣಿಸದೇ ಕಲ್ಪಿಸಿಕೊಳ್ಳಬಹುದು. ಈ ಘಟನೆಯಲ್ಲಿ ತನ್ನ ಪಾಲೆಷ್ಟು, ತಾನೆಷ್ಟು ನಿರಪರಾಧಿ ಎಂಬುದನ್ನು ಅರಿಯುವ ಪ್ರಯತ್ನವನ್ನೂ ಮಾಡದ ಆಕೆ ತಲೆತಗ್ಗಿಸಿಕೊಂಡು ಎಲ್ಲವನ್ನೂ ನುಂಗಿಕೊಂಡಳು.
ವೈದ್ಯನಾಥರು ಇನ್ನು ತಮಗೆ ಪಿಂಡದಾನವನ್ನು ಮಾಡತಕ್ಕ ಪಿಂಡದಾತನ ಜನ್ಮ ಅಸಂಭವವೆಂದು ತಮ್ಮ ಅನುಮಾನವೇ ಸರಿಯೆಂದು ತೀರ್ಮಾನಿಸಿ ವಿನೋದಾಗೆ – “ಕಳಂಕಿನಿ, ನೀ ನನ್ನ ಮನೆಯಿಂದ ತೊಲಗು, ದೂರ ಹೊರಟುಹೋಗು” ಎಂದು ಅಬ್ಬರಿಸಿದರು.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 1 : Literature: ನೆರೆನಾಡ ನುಡಿಯೊಳಗಾಡಿ; ರೇಣುಕಾ ನಿಡಗುಂದಿ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ಕಥೆ ‘ಪುತ್ರಯಜ್ಞ’
ನೆರೆನಾಡ ನುಡಿಯೊಳಗಾಡಿ ಅಂಕಣದ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi