New Year Resolution | ಸಾಫ್ಟ್ವೇರ್ ಎಂಜಿನಿಯರ್ಗಳ ಆರ್ಥಿಕ ಸ್ವಾವಲಂಬನೆ, ಉತ್ತಮ ಆರೋಗ್ಯದ ಕನಸು
ವೈಯಕ್ತಿಕವಾಗಿ ನಾನು ಹೀಗೆ ಬದಲಾಗುತ್ತೇನೆ, ಸಮಾಜ ಹೀಗಾಗಬೇಕೆಂಬ ಆಸೆ ನನಗಿದೆ, ಸಮಾಜದ ಬದಲಾವಣೆಗೆ ನಾನು ಹೀಗೆ ಸಹಕರಿಸುತ್ತೇನೆ ಎಂದು ಬೆಂಗಳೂರಿನ ಇಬ್ಬರು ಯುವ ಸಾಫ್ಟ್ವೇರ್ ಎಂಜಿನಿಯರ್ಗಳು ಹೊಸ ವರ್ಷದ ಕನಸುಗಳನ್ನು ಟಿವಿ9 ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದಾರೆ.
ಹೊಸ ವರ್ಷದಲ್ಲಿ ಒಂದಿಷ್ಟು ಹೊಸತನಗಳನ್ನು ಮೈಗೂಡಿಸಿಕೊಳ್ಳುವ ಕನಸು ಕಟ್ಟಿಕೊಳ್ಳುವುದು ಸಾಮಾನ್ಯ ಸಂಗತಿ. ವೈಯಕ್ತಿಕವಾಗಿ ನಾನು ಹೀಗೆ ಬದಲಾಗುತ್ತೇನೆ, ಸಮಾಜ ಹೀಗಾಗಬೇಕೆಂಬ ಆಸೆ ನನಗಿದೆ, ಸಮಾಜದ ಬದಲಾವಣೆಗೆ ನಾನು ಹೀಗೆ ಸಹಕರಿಸುತ್ತೇನೆ ಎಂದು ಬೆಂಗಳೂರಿನ ಇಬ್ಬರು ಯುವ ಸಾಫ್ಟ್ವೇರ್ ಎಂಜಿನಿಯರ್ಗಳು ಹೊಸ ವರ್ಷದ ಕನಸುಗಳನ್ನು ಟಿವಿ9 ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದಾರೆ.
ಮನೆಮೇಲೆ ಸೊಪ್ಪು-ತರಕಾರಿ ಬೆಳೆಯುವ ಆಸೆಯಿದೆ
ಆರ್ಥಿಕ ಸಂಕಷ್ಟದ ಈ ಸಮಯದಲ್ಲಿ ನಾನು ಆರ್ಥಿಕವಾಗಿ ಮತ್ತಷ್ಟು ಸ್ವಾವಲಂಬಿಯಾಗಲು ಬಯಸುತ್ತೇನೆ. ಅತ್ಯಾವಶ್ಯಕವಾದ ವೆಚ್ಚಗಳನ್ನು ಮಾತ್ರ ಭರಿಸುತ್ತಾ ಅನಾವಶ್ಯಕವಾದದ್ದೂ ಈ ತಕ್ಷಣಕ್ಕೆ ಬೇಡವಾದ ವೆಚ್ಚಗಳನ್ನೂ ಮುಂದೂಡಲು ತೀರ್ಮಾನಿಸಿದ್ದೇನೆ. ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಒತ್ತು ಕೊಡಲು ತೀರ್ಮಾನಿಸಿದ್ದೇನೆ. ಗೊಂದಲದ ಹಾಗೂ ಅನಿಶ್ಚಿತತೆಯ ಈ ಸಮಯದಲ್ಲಿ ಮಾನಸಿಕವಾಗಿ ಹಿತ ಕಾಪಾಡಿಕೊಳ್ಳುವುದು ಅಷ್ಟೇ ಅವಶ್ಯಕವಾಗಿದೆ.
ದೇಶದಲ್ಲಿ ಹಾಗೂ ರಾಜ್ಯದಲ್ಲಿ ಸ್ವಚ್ಛತೆಯ ಬಗ್ಗೆ ಜನಸಾಮಾನ್ಯರು ಹೆಚ್ಚು ಗಮನ ಹರಿಸಲಿ ಎಂದು ಆಶಿಸುತ್ತೇನೆ. ರೋಗರುಜಿನಗಳ ಬಗ್ಗೆ ಅಷ್ಟೇ ಅಲ್ಲದೆ ಮಾಲಿನ್ಯ, ಕಸ ಮುಂತಾದವುಗಳ ಬಗ್ಗೆ ಜನರು ಸರಿಯಾದ ದೃಷ್ಟಿಕೋನ ಹೊಂದಲಿ ಎನ್ನುವುದು ನನ್ನ ಅಭಿಲಾಷೆ.
ನಮ್ಮೂರು ಕಸಮುಕ್ತ ಬೆಂಗಳೂರು ಆಗಬೇಕು. ಕಸ ವಿಂಗಡಣೆ ಇದಕ್ಕೆ ಅತ್ಯಂತ ಸುಲಭದ ಮಾರ್ಗೋಪಾಯ. ನಾನು ಈ ವರ್ಷ ಕಟ್ಟುನಿಟ್ಟಾಗಿ ರೂಢಿಸಿಕೊಳ್ಳುತ್ತೇನೆ. ನನ್ನ ಮನೆಯ ಛಾವಣಿಯಲ್ಲಿ ತರಕಾರಿ, ಸೊಪ್ಪು ಬೆಳೆಸಿ ಮನೆಯ ದಿನನಿತ್ಯದ ಉಪಯೋಗಕ್ಕೆ ಬಳಸಿಕೊಳ್ಳಬೇಕೆಂದು ನಿಶ್ಚಯಿಸಿದ್ದೇನೆ.
– ಕಿಶೋರ್ ನಾರಾಯಣ್, ಎಂಜಿನಿಯರ್, ಕೇರ್ ಡಾಟ್ ಕಾಮ್, ಬೆಂಗಳೂರು
ಬೇಗ ಏಳ್ತೀನಿ, ಯೋಗ ಮಾಡ್ತೀನಿ
ಉತ್ತಮ ಆರೋಗ್ಯಕ್ಕಿಂತ ಮಿಗಿಲು ಯಾವುದೂ ಇಲ್ಲ ಎಂಬುದು ಮತ್ತೆಮತ್ತೆ ಅನುಭವಕ್ಕೆ ಬಂದಿದೆ. ಆಯುರ್ವೇದದಲ್ಲಿ ಹೇಳಿರುವ ಅನೇಕ ಉತ್ತಮ ಸಂಗತಿಗಳನ್ನು ನಿಯಮಿತವಾಗಿ ಜೀವನದಲ್ಲಿ ಅಳವಡಿಸಲು ಯೋಚಿಸಿದ್ದೇನೆ. ಬೇಗ ಏಳುವುದು, ನಿತ್ಯ ಯೋಗ- ಪ್ರಾಣಾಯಾಮ ಹಾಗೂ ‘ಹಿತಭುಕ್ ಮಿತಭುಕ್’ ಪಾಲಿಸಲು ಪ್ರಯತ್ನ ಮಾಡುವೆ. 2020ರಲ್ಲಿ ಸಾಹಿತ್ಯ ಪ್ರಪಂಚದ ಪರಿಚಯವಾಗಿದೆ.
ಭಾರತೀಯ ಜೀವನ ಶೈಲಿಯಿಂದ ನಾವು ದೂರವಾದ್ದರಿಂದಲೇ ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಪಾಶ್ಚಾತ್ಯವೆಲ್ಲವೂ ಆಧುನಿಕ ಹಾಗೂ ವೈಜ್ಞಾನಿಕ ಎಂಬ ಭ್ರಮೆ ಮೂಡಿದೆ. ಇದರ ಕುರಿತಾಗಿ ಸಮಾಜದಲ್ಲಿ ಜಾಗೃತಿಯಾಗಲಿ ಎಂಬ ನಿರೀಕ್ಷೆ ಇದೆ.
ಸಮಾಜದಲ್ಲಿ ಭಾರತೀಯ ಚಿಂತನೆ ಮೈಗೂಡಬೇಕೆಂಬ ನನ್ನ ಆಶಯದ ಸಾಕಾರಕ್ಕಾಗಿ ನಾನು ಹೋದೆಡೆಯೆಲ್ಲಾ ಭಾರತೀಯ ಚಿಂತನೆ, ದೃಷ್ಟಿಕೋನ ಹಾಗೂ ಅದರ ಮಹತ್ವದ ಬಗ್ಗೆ ಜನರಿಗೆ ತಿಳಿಸಲು ಪ್ರಯತ್ನ ಮಾಡುವೆ. ನಮ್ಮ ಸಂಸ್ಕೃತಿಯೆಡೆಗೆ ಕೊಂಡೊಯ್ಯಬಲ್ಲ ಸಾಹಿತ್ಯ ಕೃತಿಗಳನ್ನು ಜನರಿಗೆ ಪರಿಚಯ ಮಾಡಿಸಿಕೊಡುವ ಪ್ರಯತ್ನ ಮಾಡುವೆ.
ಪ್ರಮೋದ್, ಸಾಫ್ಟ್ವೇರ್ ಎಂಜಿನಿಯರ್, ಅವ್ನೆಟ್ ಇಂಡಿಯಾ ಲಿಮಿಟೆಡ್
Published On - 3:17 pm, Thu, 31 December 20