New Year Resolution | ಇವರಿಬ್ಬರಿಗೂ ಹೊಸ ವರ್ಷದಲ್ಲಿ ಕಲಿಯುವ, ಕಲಿಸುವ, ಬದಲಿಸುವ ಕನಸು
2021ಕ್ಕೆ ಕಾಲಿಟ್ಟ ಮೊದಲ ದಿನ ಒಂದಿಡೀ ವರ್ಷದ ತಮ್ಮ ಪ್ಲಾನ್ ಹಂಚಿಕೊಂಡರು ಗೃಹಿಣಿ ಅರ್ಚನಾ ಹೆಗಡೆ ಮತ್ತು ಆಪ್ತ ಸಮಾಲೋಚಕಿ ಭವ್ಯಾ ವಿಶ್ವನಾಥ್.
2021ಕ್ಕೆ ಕಾಲಿಟ್ಟ ಮೊದಲ ದಿನ ಒಂದಿಡೀ ವರ್ಷದ ತಮ್ಮ ಪ್ಲಾನ್ ಹಂಚಿಕೊಂಡರು ಗೃಹಿಣಿ ಅರ್ಚನಾ ಹೆಗಡೆ ಮತ್ತು ಆಪ್ತ ಸಮಾಲೋಚಕಿ ಭವ್ಯಾ ವಿಶ್ವನಾಥ್. ವೈಯಕ್ತಿಕವಾಗಿ ನೀವು ಹೇಗೆ ಬದಲಾಗಬೇಕು ಎಂದು ಸಂಕಲ್ಪ ಮಾಡಿದ್ದೀರಿ? ಸಮಾಜದಲ್ಲಿ ಏನೆಲ್ಲಾ ಅಂಶಗಳು ಬದಲಾಗಬೇಕೆಂಬ ನಿರೀಕ್ಷೆಯಿದೆ? ಅದಕ್ಕಾಗಿ ನಾನು ಏನು ಮಾಡಬೇಕು ಎಂದುಕೊಂಡಿದ್ದೇನೆ ಎಂಬ ಪ್ರಶ್ನೆಗಳಿಗೆ ಈ ಇವರಿಬ್ಬರೂ ಕೊಟ್ಟ ಉತ್ತರಗಳಿವು..
ಮತ್ತೆ ಕಲಿಕೆ ಆರಂಭಿಸುವೆ
ನಾನು ಕಳೆದ ವರ್ಷ ಸಂಗೀತ ಮತ್ತು ಚಿತ್ರಕಲೆ ಕಲಿಯಲು ಶುರು ಮಾಡಿದ್ದೆ. ಆದರೆ ಕೊರೊನಾ ಸೋಂಕು ಹರಡಿದ ನಂತರ ಲಾಕ್ಡೌನ್ ಹೇರಿದ್ದರಿಂದ ಅದು ನಿಂತು ಹೋಯಿತು. ಈ ವರ್ಷ ಕಲಿಕೆಯನ್ನು ಮತ್ತೆ ಆರಂಭಿಸಬೇಕು.
ಟಿವಿ ನೋಡಲು ಒಂದು ಸಮಯ ನಿಗದಿ ಮಾಡಿಕೊಳ್ಳಬೇಕು. ಮಗನನ್ನು ಚೆನ್ನಾಗಿ ಓದಿಸಬೇಕು, ಅವನ ಕಲಿಕೆಯನ್ನು ಉತ್ತಮ ಪಡಿಸಬೇಕು. ಹಣ ಖರ್ಚು ಮಾಡುವ ಮೊದಲು ಎರಡು ಸಲ ಯೋಚನೆ ಮಾಡ್ತೀನಿ. ಅವಶ್ಯಕತೆ ಇಲ್ಲದ ವಸ್ತುಗಳನ್ನು ಖರೀದಿಸಲೇಬಾರದು ಎಂದುಕೊಂಡಿದ್ದೇನೆ.
ದೇಸಿ ಮತ್ತು ಸಣ್ಣ ಗುಡಿ ಕೈಗಾರಿಕೆಗಳ ವಸ್ತುಗಳನ್ನೇ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಸ್ವದೇಶಿ ಚಿಂತನೆಗೆ ನನ್ನಿಂದಾದಷ್ಟು ಪ್ರೋತ್ಸಾಹ ನೀಡುತ್ತೇನೆ. ಈ ವರ್ಷದಿಂದ ಸ್ವಂತ ಉದ್ಯೋಗ ಏನಾದರೂ ಶುರುಮಾಡ್ತೀನಿ.
ಅರ್ಚನಾ ಹೆಗಡೆ, ಗೃಹಿಣಿ, ಕುಮಟಾ
ಮಾನಸಿಕ ದೃಢತೆಗೆ ಯತ್ನ
ಹೊರಗಿನ ಪ್ರಪಂಚದಲ್ಲಿ ಏನು ಬದಲಾವಣೆ ಕಾಣಿಸಬೇಕು ಎಂದುಕೊಳ್ಳುತ್ತೇನೋ, ಅಂಥ ಬದಲಾವಣೆಯನ್ನು ಮೊದಲು ನನ್ನಲ್ಲಿ ರೂಢಿಸಿಕೊಳ್ಳಬೇಕೆಂಬುದು ನನ್ನ ಭಾವನೆ. ಸಂಕಷ್ಟಗಳ ನಿರ್ವಹಣೆ, ಮಾನಸಿಕ ಒತ್ತಡಗಳನ್ನು ನಿಭಾಯಿಸುವುದು, ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಕೌಶಲಗಳನ್ನು ಸುಧಾರಿಸಿಕೊಳ್ಳುತ್ತೇನೆ. ನನ್ನ ಬಗ್ಗೆ ನಾನು ಇನ್ನೂ ಹೆಚ್ಚು ಅರ್ಥ ಮಾಡಿಕೊಳ್ಳಬೇಕಿದೆ. ಬದುಕಿನ ಹೊಸ ಸವಾಲುಗಳನ್ನು ಎದುರಿಸಲು ಇದು ಅತ್ಯಗತ್ಯ.
ಶಾಲೆಗಳಿಂದಲೇ ವಿದ್ಯಾರ್ಥಿಗಳಲ್ಲಿ ಜೀವನ ಕೌಶಲಗಳನ್ನು ಕಲಿಸಲು ಶುರು ಮಾಡಬೇಕು. ಮಾನಸಿಕ ಆರೋಗ್ಯ ಕುರಿತ ಜಾಗೃತಿಯೂ ಶಾಲಾ ಹಂತದಲ್ಲಿಯೇ ಶುರುವಾಗಬೇಕು. ಉದ್ಯೋಗಸ್ಥ ಮಹಿಳೆಯರು, ಪುರುಷರು, ಗೃಹಿಣಿಯರಿಗೂ ಈ ಕೌಶಲ ಸಿಗಬೇಕು.
ಭಾವನಾತ್ಮಕವಾಗಿ ನಾವು ಸದೃಢರಾಗಿದ್ದರೆ ಎಂಥದ್ದೇ ಸಂಕಷ್ಟವನ್ನು ನಾವು ಎದುರಿಸಬಹುದು. ಸಮಾಜವನ್ನು ಮಾನಸಿಕವಾಗಿ ಸನ್ನದ್ಧಗೊಳಿಸಲು ಸರ್ಕಾರ ಹೆಚ್ಚು ಗಮನಕೊಡಬೇಕು. ನನ್ನ ಈ ಆಶಯಗಳನ್ನು ವಿವಿಧ ವಯೋಮಾನದವರಿಗೆ ತಲುಪಿಸಲು, ಅವರನ್ನು ಮಾನಸಿಕವಾಗಿ ಸದೃಢರಾಗಿಸಲು ನಾನು ಖಂಡಿತ ಪ್ರಯತ್ನಿಸುತ್ತೇನೆ. ಖಿನ್ನತೆ ಅಥವಾ ಮಾನಸಿಕ ಒತ್ತಡಗಳಿಂದ ಬಳಲುತ್ತಿರುವರು ಧೈರ್ಯವಾಗಿ ಮಾತನಾಡಿ, ಆಪ್ತ ಸಮಾಲೋಚಕರ ಸಹಾಯ ಪಡೆದುಕೊಳ್ಳಬೇಕು ಎಂದು ವಿನಂತಿಸುತ್ತೇನೆ.
ಭವ್ಯಾ ವಿಶ್ವನಾಥ್, ಆಪ್ತ ಸಮಾಲೋಚಕಿ, ಬೆಂಗಳೂರು
New Year Resolution | ನಾನು ಮತ್ತು ನನ್ನ ರಾಜ್ಯ ಹೀಗಾಗಬೇಕು; ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
Published On - 10:06 pm, Fri, 1 January 21