‘ನೋಡದ ನನ್ನ ಅಮ್ಮನನ್ನು ನಾನು ಹೀಗೆ ದಕ್ಕಿಸಿಕೊಳ್ಳುತ್ತಿದ್ದೇನೆ’: ಕಾದಂಬರಿಕಾರ್ತಿ ತ್ರಿವೇಣಿ ಪುತ್ರಿ ಮೀರಾ ಶಂಕರ್

ಹಿರಿಯ ಕಾದಂಬರಿಕಾರ್ತಿ ತ್ರಿವೇಣಿಯವರು ತೀರಿ 57 ವರ್ಷಗಳಾದರೂ ಅವರ ಕಾದಂಬರಿಗಳ ಹರಿವು ಹಾಗೇ ಇದೆ. ಇದೀಗ ಅವರ ಎಲ್ಲಾ ಕಾದಂಬರಿಗಳನ್ನು ಮೈಸೂರಿನ ಭಾರತಿ ಪ್ರಕಾಶನವು ಮರುಮುದ್ರಿಸಿದ್ದು, ರಾಜ್ಯದ ಎಲ್ಲಾ ಪುಸ್ತಕ ಮಳಿಗೆಗಳಲ್ಲೂ ಲಭ್ಯ.

'ನೋಡದ ನನ್ನ ಅಮ್ಮನನ್ನು ನಾನು ಹೀಗೆ ದಕ್ಕಿಸಿಕೊಳ್ಳುತ್ತಿದ್ದೇನೆ': ಕಾದಂಬರಿಕಾರ್ತಿ ತ್ರಿವೇಣಿ ಪುತ್ರಿ ಮೀರಾ ಶಂಕರ್
ಕಾದಂಬರಿಕಾರ್ತಿ ತ್ರಿವೇಣಿ
Follow us
ಶ್ರೀದೇವಿ ಕಳಸದ
| Updated By: ರಾಜೇಶ್ ದುಗ್ಗುಮನೆ

Updated on:Jan 02, 2021 | 8:58 PM

‘ನಾನಂತೂ ನನ್ನ ಅಮ್ಮನನ್ನು ನೋಡಲಿಲ್ಲ. ಅಮ್ಮನೂ ನನ್ನನ್ನು ನೋಡಿದರೋ ಇಲ್ಲವೋ ಗೊತ್ತೇ ಆಗಲಿಲ್ಲ. ನಾನು ಹುಟ್ಟಿದ ಹತ್ತನೇ ದಿನಕ್ಕೆ ಅವರು ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ತೀರಿಹೋದರು. ಅಪ್ಪ, ಅಜ್ಜಿಯ ಆರೈಕೆಯಲ್ಲಿ ಬೆಳೆದ ನಾನು ಅಮ್ಮನನ್ನು ಅವರ ಒಡನಾಡಿಗಳ ಮೂಲಕವೇ ಒಳಗಿಳಿಸಿಕೊಳ್ಳುತ್ತಾ ಹೋದೆ. ಅವರ ಕಾದಂಬರಿಗಳನ್ನು ಓದುತ್ತಾ ಅವರ ಒಳಜಗತ್ತಿನ ಪರಿಚಯವಾಗುತ್ತಾ ಹೋಯಿತು, ಬಹುಶಃ ನನ್ನಮ್ಮನನ್ನು ನಾನು ಈ ರೀತಿಯಲ್ಲಿ ದಕ್ಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೇನೋ.’

ಕೇರಳ ಪ್ರವಾಸದ ಮಧ್ಯೆ ಅಷ್ಟಷ್ಟೇ ಮಾತಿಗೆ ಸಿಕ್ಕರು ಮೈಸೂರಿನ ಅನುಸೂಯಾ ಶಂಕರ ಅವರ ಮಗಳು ಮೀರಾ ಶಂಕರ. ‘ಅಪಸ್ವರ’, ‘ತಾವರೆಯ ಕೊಳ’, ‘ಶರಪಂಜರ’, ‘ಬೆಕ್ಕಿನ ಕಣ್ಣು’, ‘ಬೆಳ್ಳಿಮೋಡ‘, ‘ಹೃದಯಗೀತೆ‘, ‘ಅವಳ ಮನೆ‘, ‘ಹಣ್ಣೆಲೆ ಚಿಗುರಿದಾಗ‘, ’ಮುಕ್ತಿ’, ’ಕಾಶಿಯಾತ್ರೆ’ ಇಷ್ಟು ಸಾಕೆನ್ನಿಸುತ್ತದೆ ಮೀರಾ ಶಂಕರ ಅವರ ಅಮ್ಮ ಯಾರೆಂದು ನೀವು ತಿಳಿದುಕೊಳ್ಳಲು.

ನೆಲದ ಮೇಲೆ ಎಡಭಾಗದಲ್ಲಿ ಕುಳಿತ ಪುಟ್ಟ ತ್ರಿವೇಣಿ

ತ್ರಿವೇಣಿ; ಕನ್ನಡ ಕಾದಂಬರಿಲೋಕದಲ್ಲಿ ಮಹತ್ವದ ಹೆಸರು. 34 ವರ್ಷದೊಳಗೆ 24 ಕಾದಂಬರಿಗಳನ್ನು, 3 ಕಥಾಸಂಕಲನಗಳನ್ನು ಪಟಪಟನೆ ಬರೆದು ಹಸುಗೂಸು ಮೀರಾ ಮತ್ತು ಪತಿಯ ಕೈಬಿಟ್ಟು ಅವಸರದಿಂದ ಎದ್ದು ಹೊರಟುಹೋದವರು. ಅವರ ಆರೋಗ್ಯ ಸಮಸ್ಯೆಯೇ ಅವರೊಳಗಿನ ಬರೆವಣಿಗೆ ಶಕ್ತಿಯನ್ನು ಅಷ್ಟೊಂದು ವೇಗದಲ್ಲಿ ಪ್ರವಹಿಸುವಂತೆ ಮಾಡಿತೋ ಏನೋ. ಅವರು ತೀರಿ 57 ವರ್ಷಗಳಾದರೂ ಅವರ ಕಾದಂಬರಿಗಳ ಪ್ರಕಟಣೆ ಹರಿಯುವ ನೀರಿನಂತೆಯೇ. ಇದೀಗ ಇವರ ಎಲ್ಲಾ ಕಾದಂಬರಿಗಳನ್ನು ಮೈಸೂರಿನ ಭಾರತಿ ಪ್ರಕಾಶನವು ಮರುಮುದ್ರಿಸಿದ್ದು, ರಾಜ್ಯದ ಎಲ್ಲಾ ಪುಸ್ತಕ ಮಳಿಗೆಗಳಲ್ಲೂ ಲಭ್ಯ.

ತ್ರಿವೇಣಿಯವರ ಮಗಳು ಮೀರಾ ಶಂಕರ

ಮೀರಾ ಅಮೆರಿಕದಲ್ಲಿದ್ದವರು. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ‘ನನ್ನನ್ನು ಈ ಪ್ರಪಂಚಕ್ಕೆ ಕೊಟ್ಟ ಅಮ್ಮನಿಗೆ ನಾನೇನಾದರೂ ಕೊಡಬೇಕಲ್ಲವೆ? ಕರ್ನಾಟಕದಲ್ಲಿ ಅವರ ಹೆಸರು ಉಳಿಯುವಂತೆ ಏನಾದರೂ ಮಾಡಬೇಕೆಂದು ತೀರ್ಮಾನಿಸಿ ಮೈಸೂರಿನ ಚಾಮರಾಜಪುರಂನಲ್ಲಿ ಮ್ಯೂಸಿಯಂ ಸ್ಥಾಪಿಸಬೇಕೆಂದು ಮೂರು ವರ್ಷಗಳಿಂದ ತಯಾರಿ ನಡೆಸಿದ್ದೇನೆ. ಅಮ್ಮನ ಸೀರೆಯಿಂದ ಹಿಡಿದು ಹಸ್ತಪ್ರತಿಯತನಕ ಎಲ್ಲಾ ವಸ್ತುಗಳನ್ನೂ ಜೋಪಾನ ಮಾಡಿಟ್ಟುಕೊಂಡಿದ್ದೇನೆ. ಆ ಕಾಲದಲ್ಲೇ ನಿಮ್ಹಾನ್ಸ್​ ಗೆ ಹೋಗಿ ಇಡೀ ದಿನ ಮಾನಸಿಕ ಅಸ್ವಸ್ಥರೊಂದಿಗೆ, ಮನೋವೈದ್ಯರೊಂದಿಗೆ ಸಮಯ ಕಳೆದು ವಸ್ತುವಿಷಯ ಅರ್ಥ ಮಾಡಿಕೊಂಡು ಕಾದಂಬರಿಗಳನ್ನು ಬರೆಯುತ್ತ ಹೋದವರು. ಆಗಿನ ಕಾಲಕ್ಕೆ ಇದು ದಿಟ್ಟ ವಿಷಯವಲ್ಲವೆ? ಅವರ ಕಾದಂಬರಿಗಳನ್ನು ಓದುತ್ತಾ ನನ್ನ ಮನಸ್ಸನ್ನು ಜೋಡಿಸಿಕೊಳ್ಳುತ್ತಾ ಹೋದಾಗ ನಾನೂ ಹಾಗೇ ಯೋಚಿಸುತ್ತೇನಲ್ಲ, ಅವರಿಗಿದ್ದ ಅನೇಕ ವಿಚಾರಗಳೂ ನನ್ನೊಳಗೂ ಇವೆಯಲ್ಲ ಅನ್ನಿಸುತ್ತದೆ.’ ಮೀರಾ ತನ್ನ ತಾಯಿಯನ್ನು ನೆನೆಯುವುದು, ಹುಡುಕಿಕೊಳ್ಳುವುದು ಹೀಗೆ.

ಇಂದಿನ ಪೀಳಿಗೆಗೆ ಅವರ ಕಾದಂಬರಿಗಳು ತಲುಪಬೇಕು ಎನ್ನುವ ಉದ್ದೇಶದಿಂದ ಆಡಿಯೋ ಮತ್ತು ಈ-ಬುಕ್​ ಅವತರಣಿಕೆಗಳ ತಯಾರಿ ಕೆಲಸದಲ್ಲಿಯೂ ಮೀರಾ ತೊಡಗಿಕೊಂಡಿದ್ದಾರೆ. ಅಲ್ಲದೆ ಲೇಖಕಿ, ಅನುವಾದಕಿ ಜಯಾ ಮೂರ್ತಿ ‘ಶರಪಂಜರ‘ವನ್ನು ಇಟಲಿ ಭಾಷೆಗೆ ಅನುವಾದಿಸುತ್ತಿದ್ದಾರೆ. ಈ 24 ಕಾದಂಬರಿಗಳ ಮರುಮುದ್ರಣ ಮಾಡಿದ ಪ್ರಕಾಶಕ ಬಿ. ಎನ್​. ಶ್ರೀನಿವಾಸ, ‘ನನ್ನ ತಂದೆ ಬಿ. ನರಸಿಂಹರಾವ್ 1954ರಲ್ಲಿ ಭಾರತಿ ಪ್ರಕಾಶನವನ್ನು ಹವ್ಯಾಸಕ್ಕಾಗಿ ಶುರು ಮಾಡಿದರು. ಮೊದಲು ಪ್ರಕಟಿಸಿದ್ದೇ ತ್ರಿವೇಣಿಯವರ ಕೆಲ ಕಾದಂಬರಿಗಳನ್ನು. ನಂತರ ತರಾಸು, ಕಾರಂತ ಮುಂತಾದವರ ಕೃತಿಗಳನ್ನು. ನಾನು 1978ರಿಂದ ಪೂರ್ಣಪ್ರಮಾಣದಲ್ಲಿ ಪ್ರಕಾಶನವನ್ನು ವೃತ್ತಿಯಾಗಿ ಸ್ವೀಕರಿಸಿ ಮುನ್ನಡೆಸಿಕೊಂಡು ಬಂದಿದ್ದೇನೆ. ತ್ರಿವೇಣಿಯವರ ಕಾದಂಬರಿಗಳ ವಸ್ತುವಿಷಯಗಳು ಇಂದಿಗೂ ಪ್ರಸ್ತುತವಾಗಿರುವುದರಿಂದ ಮರುಮುದ್ರಣಕ್ಕೆ ಪರಿಗಣಿಸಿದೆ’ ಎನ್ನುತ್ತಾರೆ.

ಕಾದಂಬರಿಕಾರ್ತಿ ಬಿ. ಯು. ಗೀತಾ

ಈ ಪೈಕಿ ಕೆಲ ಕಾದಂಬರಿಗಳು ಈ ಕಾಲಮಾನಕ್ಕೆ ಪ್ರಸ್ತುತವೇ? ಯಾವ ಓದುಗ ವರ್ಗವನ್ನು ಇವು ಸೆಳೆಯಬಹುದು ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಕಾದಂಬರಿಕಾರ್ತಿ ಬಿ. ಯು. ಗೀತಾ ಇದಕ್ಕೆ ಹೀಗೆ ಪ್ರತಿಕ್ರಿಯಿಸುತ್ತಾರೆ. ‘ನಮ್ಮಓದು, ವಲಯ ವಿಸ್ತಾರವಾಗುತ್ತಿದ್ದಂತೆ ಕೆಲ ಕಾದಂಬರಿಗಳ ವಸ್ತು ಪ್ರಸ್ತುತವೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಸಮಾಜವೆಂದರೆ, ನಾನು ನೋಡುವಷ್ಟೇ ಸಮಾಜ ಅಲ್ಲವಲ್ಲ? ಹಾಗಾಗಿ ತ್ರಿವೇಣಿ ಕಾದಂಬರಿಗಳು ಎಂದಿಗೂ ಪ್ರಸ್ತುತ. ಹೈಸ್ಕೂಲಿನಲ್ಲಿದ್ದಾಗ ನನ್ನಮ್ಮ ಓದುತ್ತಿದ್ದ ಇವರ ಕಾದಂಬರಿಗಳನ್ನು ನಾನು ಕದ್ದು ಓದಿದ್ದಿದೆ. ಸಂಸಾರದ ಗೋಳಿನ ಕಥಾನಕಗಳು ಈಗಲೇ ನನ್ನ ಮಗಳ ಕಣ್ಣಿಗೆ ಬೀಳುವುದು ಬೇಡ ಎಂದು ಅಪ್ಪನಿಂದ ಬೈಗುಳ ತಿಂದಿದ್ದೂ ಇದೆ. ಆದರೆ ನಲವತ್ತು-ಐವತ್ತರ ದಶಕದಲ್ಲೇ ತ್ರಿವೇಣಿ ಪ್ರಗತಿಪರ ಕಥಾವಸ್ತುವುಳ್ಳ ಕಾದಂಬರಿ ಬರೆಯುವುದೆಂದರೆ ಸಹಜ ಮಾತಲ್ಲ. ಈ ವಿಷಯವಾಗಿ ನನ್ನ ಅತ್ತೆ ಹೇಳಿದ್ದು ನನ್ನ ನೆನಪಿಗೆ ಬರುತ್ತಿದೆ. ನನ್ನ ಅತ್ತೆ ಮತ್ತು ತ್ರಿವೇಣಿಯವರ ತಾಯಿ ಮೈಸೂರಿನಲ್ಲಿ ಒಂದೇ ವಠಾರದಲ್ಲಿ ವಾಸಿಸುತ್ತಿದ್ದರು. ತ್ರಿವೇಣಿ ಮದುವೆಗೆ ಮೊದಲೇ ಬರೆಯಲು ಶುರು ಮಾಡಿದ್ದರೂ ಪ್ರಕಟಣೆಯ ವಿಷಯವಾಗಿ ಅವರ ತಾಯಿಗೆ ಒಂದೆಳೆ ಅಳುಕು ಇದ್ದೇ ಇತ್ತು. ಮಗಳು ಬರೆದ ಕಾದಂಬರಿಗಳನ್ನು ಓದಿದ ಗಂಡು ಮತ್ತವರ ಮನೆಯವರು, ಈ ಹುಡುಗಿ ಬಹಳ ಮುಂದುವರೆದವಳಿರಬೇಕು ಎಂದು ನಿರಾಕರಿಸಿದರೆ?’  ಆದರೆ, ತ್ರಿವೇಣಿ ಅನುಭವದಾಚೆಗೂ ಕಥಾವಸ್ತುವನ್ನು ಆವಾಹಿಸಿಕೊಂಡು ಬರೆಯುವ ಚಕ್ಯತೆಯನ್ನು ಹದಿಹರೆಯದಲ್ಲೇ ಹೊಂದಿದ್ದರು ಎನ್ನುವುದೂ ಇಲ್ಲಿ ಗಮನಾರ್ಹ.

ನಂತರ ಪತಿ ಪ್ರೊ. ಶಂಕರ  ಅವರ ಪ್ರೋತ್ಸಾಹದೊಂದಿಗೆ ತ್ರಿವೇಣಿ ಹೆಚ್ಚು ಬರೆದರು ಕಾದಂಬರಿಗಳು ಪ್ರಕಟವಾದವು. ಶಂಕರ ಅವುಗಳನ್ನು ಇಂಗ್ಲಿಷಿಗೂ ಅನುವಾದಿಸಿದರು. ಮುಖ್ಯವಾಗಿ, ‘ಹೃದಯಗೀತೆ‘, ‘ಬೆಳ್ಳಿಮೋಡ‘, ‘ಶರಪಂಜರ‘ ಕಾದಂಬರಿಗಳು ವಸ್ತು ಮತ್ತು ನಿರೂಪಣೆಯ ಸರಳ ಶೈಲಿಯಿಂದಾಗಿ ಕನ್ನಡ ಬಲ್ಲ ಯಾವ ವಯೋಮಾನದವರನ್ನೂ ಅವು ತಲುಪುತ್ತವೆ.

ಪತ್ರಕರ್ತೆ ಡಾ. ಆರ್. ಪೂರ್ಣಿಮಾ

ಪತ್ರಕರ್ತೆ, ಪ್ರಕಾಶಕಿ ಡಾ. ಆರ್ ಪೂರ್ಣಿಮಾ ಅವರಿಗೆ ತ್ರಿವೇಣಿ ಕಾದಂಬರಿಗಳು ಪ್ರಭಾವಿಸಿದ ಬಗೆ ವಿಶೇಷವಾಗಿದೆ. ‘ಈ ತನಕ ನಮ್ಮ ಕಾದಂಬರಿಕಾರರು ಅವರವರಿಗೆ ಒದಗಿರುವ ವಸ್ತು ವಿಷಯಗಳನ್ನು ಕೇಂದ್ರೀಕರಿಸಿ ಬರೆಯುತ್ತ ಬಂದಿದ್ದಾರೆ. ಹಾಗೆಯೇ ತ್ರಿವೇಣಿಯವರೂ. ಸಂಸಾರ ಎನ್ನುವುದು ಈವತ್ತಿಗೂ ಸಂಕೀರ್ಣವಾಗಿಯೇ ಇದೆ. ಇದರೊಳಗಿನ ಮನೋವ್ಯಾಪಾರಗಳನ್ನು ಬಲು ಸೂಕ್ಷ್ಮವಾಗಿ ತಮ್ಮ ಕಾದಂಬರಿಗಳಲ್ಲಿ ಅವರು ಕಟ್ಟಿಕೊಟ್ಟಿದ್ದಾರೆ. ತ್ರಿವೇಣಿಯವರು ನಿಮ್ಹಾನ್ಸ್ ನಲ್ಲಿ ಮನಶ್ಶಾಸ್ತ್ರಜ್ಞರಾಗಿದ್ದ ಪ್ರೊ. ವಾಸುದೇವ ರಾವ್ ಅವರೊಂದಿಗೆ ಚರ್ಚಿಸಿ ತಮ್ಮ ಕಾದಂಬರಿಗಳಿಗೆ ವಸ್ತು-ವಿಷಯಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆ ವಾಸುದೇವ ಅವರೇ ನಿಮ್ಹಾನ್ಸ್ ನಿಂದ ನಿವೃತ್ತರಾದ ನಂತರ ನಮಗೆ ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ಪದವಿ ಅಂತಿಮ ತರಗತಿಗೆ ಮನಶಾಸ್ತ್ರ ಬೋಧಿಸಿದರು. ತರಗತಿಯಲ್ಲಿ ಅವರು ವಿವರಿಸಿ ಹೇಳುತ್ತಿದ್ದರೆ, ಅಷ್ಟು ಹೊತ್ತಿಗೆ ಬಂದಿದ್ದ ತ್ರಿವೇಣಿ ಕಾದಂಬರಿಗಳನ್ನು ಓದಿ ಮುಗಿಸಿದ್ದ ವಿದ್ಯಾರ್ಥಿನಿಯರಾದ ನಾವೆಲ್ಲ ಕೇಳಿ ಬೆರಗಾಗುತ್ತಿದ್ದೆವು. ಒಟ್ಟಿನಲ್ಲಿ ತ್ರಿವೇಣಿ ನಮ್ಮ ಹದಿಹರೆಯದ ಓದು ಮತ್ತು ಬೆಳವಣಿಗೆಯ ಭಾಗವೇ ಆಗಿದ್ದರು. ಸ್ನಾತಕೋತ್ತರ ಪದವಿಯನ್ನು ಮನಶಾಸ್ತ್ರದಲ್ಲೇ ಮಾಡಬೇಕೆಂಬ ಕಿಚ್ಚನ್ನೂ ನನಗೂ ಮತ್ತು ನನ್ನ ಗೆಳತಿಯರಿಗೂ  ಅವರು ಹಚ್ಚಿದ್ದರು ಎಂದರೆ ಯೋಚಿಸಿ’ ಹೀಗೆ ಕಾಲೇಜು ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಅವರು.

ನಿರ್ದೆಶಕ ಟಿ. ಎನ್​. ಸೀತಾರಾಮ್

ತ್ರಿವೇಣಿಯವರ ಕಾದಂಬರಿಗಳನ್ನು ಪುಟ್ಟಣ್ಣ ಕಣಗಾಲರ ಸಿನೆಮಾಗಳನ್ನು ಬಹುವಾಗಿ ಮೆಚ್ಚುವ ನಿರ್ದೇಶಕ ಟಿ. ಎನ್.​ ಸೀತಾರಾಮ್, ‘ಮನುಷ್ಯ ಸಂಬಂಧಗಳು, ಭಾವನೆಗಳು ಎಲ್ಲಾ ಕಾಲಕ್ಕೂ ಒಂದೇ. ಅಂತೆಯೇ ಕಣ್ಣೀರಿಗೆ, ನಗುವಿಗೆ ಕಾರಣವಾಗುವ ಸಂಗತಿಗಳೂ ಕೂಡ. ಕಥೆಗಳು ಬದಲಾಗಿರಬಹುದು ಹೊರತು ಕಥನ ಹೆಚ್ಚು ಬದಲಾಗದು. ಬದಲಾವಣೆಯಾಗುವುದು ಕಥನದ ಉಪಕರಣಗಳು. ಈ ಹೊತ್ತಿನಲ್ಲಿ ಇಷ್ಟು ಸಮಾನತೆಗೆ ನಾವು ತೆರೆದುಕೊಂಡ ಮೇಲೂ ಐವತ್ತು ವರ್ಷಗಳ ಹಿಂದೆ ಬರೆದಿದ್ದು ಈವತ್ತೂ ಓದಬೇಕು ನೋಡಬೇಕು ಮತ್ತು ಬೆಳ್ಳಿಮೋಡದಂಥ ಸಿನೆಮಾ ಮಾಡಬೇಕು ಅಂತ ನನಗೆ ಈಗಲೂ ಅನ್ನಿಸುತ್ತದೆ’ ಎನ್ನುತ್ತಾರೆ.

ಈ ಎಲ್ಲ ಸಂಗತಿಗಳ ನಡುವೆ ತೇಲಿಬರುವುದು ‘ವಸಂತಗಾನ’. ಈ ಕಾದಂಬರಿಯಲ್ಲಿ ತ್ರಿವೇಣಿ ಮಾಡಿಕೊಂಡ ‘ಅರಿಕೆ’ ನಮ್ಮನ್ನು ಒಂದು ಕ್ಷಣ ಹಿಡಿದು ನಿಲ್ಲಿಸುವಂತಿದೆ.

ವಸಂತಗಾನ ಸಿಹಿ ತಿಂಡಿಯಂತೆ; ಅತಿಯಾಗಿ ಸವಿದರೆ ಅಜೀರ್ಣ, ಅನಾಹುತ. ವಸಂತಋತು ವರ್ಷಕ್ಕೊಮ್ಮೆ ಕಾಣಿಸಿಕೊಳ್ಳುತ್ತದೆ ನಿಜ. ಆದರೆ ವಸಂತಗಾನ ಪ್ರತಿ ವರ್ಷದ ವ್ಯವಹಾರವಾದರೆ ಅದು ಬುದ್ಧಿವಂತಿಕೆಯ ಲಕ್ಷಣವಲ್ಲ. ಈ ಗಾನವನ್ನು ಹಿತವಾಗಿ, ಮಿತವಾಗಿ ಅನುಭವಿಸಿದ ದಂಪತಿಗಳ ಕಥೆ ಇದು. ನನ್ನೀ ವಸಂತಗಾನ ಓದುಗರ ಪಾಲಿಗೆ ಹೇಮಂತಗಾನವಾಗದಿದ್ದರೆ ನನ್ನ ಪುಣ್ಯ.

Published On - 7:35 pm, Sat, 2 January 21

Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ