ಕೊಲೆಯತ್ನ ಕೇಸ್: ಹೈಕೋರ್ಟ್ ಮೊರೆ ಹೋದ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್
ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಅವರ ಮೇಲೆ ದಾಖಲಾಗಿರುವ ಕೊಲೆಯತ್ನದ ಪ್ರಕರಣವನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ವಿಕಾಸ್ ಎಂಬುವವರ ಹಲ್ಲೆಯಿಂದ ಶಿಲಾದಿತ್ಯ ಬೋಸ್ ಗಂಭೀರವಾಗಿ ಗಾಯಗೊಂಡಿದ್ದರೂ, ವಿಕಾಸ್‌ಗೆ ಸಣ್ಣ ಗಾಯವಾಗಿದೆ ಎಂದು FIR ನಲ್ಲಿ ಉಲ್ಲೇಖಿಸಲಾಗಿದೆ. ಹೈಕೋರ್ಟ್ ದೂರುದಾರರಿಗೂ ನೋಟಿಸ್ ಜಾರಿ ಮಾಡಿ, ಮಧ್ಯಂತರ ಆದೇಶ ಹೊರಡಿಸಿದೆ.

ಬೆಂಗಳೂರು, ಏಪ್ರಿಲ್ 25: ಕಾರಿಗೆ ಬೈಕ್ ಟಚ್ ಆಯ್ತು ಅನ್ನೋ ಕ್ಷುಲ್ಲಕ ಕಾರಣಕ್ಕೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ (Wing Commander Shiladitya Bose) ಏಕಾಏಕಿ ಬೈಕ್ ಸವಾರ ವಿಕಾಸ್ ಮೇಲೆ ಹಲ್ಲೆ ಮಾಡಿದ್ದರು. ಈ ಘಟನೆ ಕರ್ನಾಟಕದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಶಿಲಾದಿತ್ಯ ಬೋಸ್ ವಿರುದ್ಧ ಕೊಲೆಯತ್ನ ಕೇಸ್ ದಾಖಲಾಗಿತ್ತು. ಸದ್ಯ ಈ ಕೊಲೆಯತ್ನ ಪ್ರಕರಣ ರದ್ದು ಕೋರಿ ಶಿಲಾದಿತ್ಯ ಬೋಸ್ ಹೈಕೋರ್ಟ್‌ಗೆ (High Cour) ಅರ್ಜಿ ಸಲ್ಲಿಸಿದ್ದು, ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ಹೈಕೋರ್ಟ್ ಪೀಠ ಮಧ್ಯಂತರ ಆದೇಶ ಹೊರಡಿಸಿದೆ. ಜೊತೆಗೆ ದೂರುದಾರ ವಿಕಾಸ್ ಕುಮಾರ್ಗೂ ನೋಟಿಸ್ ಜಾರಿಗೆ ಆದೇಶಿಸಿದೆ.
ಶಿಲಾದಿತ್ಯ ಬೋಸ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದು, ವಿಕಾಸ್ ಹಲ್ಲೆಯಿಂದ ಶಿಲಾದಿತ್ಯ ಬೋಸ್ಗೆ ಗಂಭೀರ ಗಾಯವಾಗಿದೆ. ವಿಕಾಸ್‌ಗೆ ಸಣ್ಣ ಗಾಯವೆಂದು ಎಫ್ಐಆರ್ನಲ್ಲೇ ಉಲ್ಲೇಖವಾಗಿದೆ. ಆದರೂ ಶಿಲಾದಿತ್ಯ ವಿರುದ್ಧ ಕೊಲೆಯತ್ನದ FIR ದಾಖಲಿಸಲಾಗಿದೆ. 12 ಗಂಟೆ ವಿಳಂಬವಾಗಿ ದೂರು ದಾಖಲಿಸಲಾಗಿದೆ ಎಂದು ವಾದ ಮಂಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕನ್ನಡಿಗನ ಮೇಲೆ ವಿಂಗ್ ಕಮಾಂಡರ್ ರೌಡಿ ವರ್ತನೆ: ಅಸಲಿಗೆ ಆಗಿದ್ದೇನು?
ವಾದ ಪ್ರತಿವಾದ ಆಲಿಸಿದ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ಹೈಕೋರ್ಟ್ ಪೀಠ, ಶಿಲಾದಿತ್ಯ ಬೋಸ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು. ಶಿಲಾದಿತ್ಯ ಬೋಸ್ ಪೊಲೀಸರ ವಿಚಾರಣೆಗೆ ಸಹಕರಿಸಬೇಕು. ಸಮನ್ಸ್ ನೀಡುವಾಗ ಕಾನೂನಿನ ಪ್ರಕ್ರಿಯೆ ಪಾಲಿಸಬೇಕು. ಹೈಕೋರ್ಟ್ ಅನುಮತಿ ಇಲ್ಲದೇ ದೋಷಾರೋಪ ಪಟ್ಟಿ ಸಲ್ಲಿಸಬಾರದು ಎಂದು ಆದೇಶ ಹೊರಡಿಸಿದೆ.
ಇದನ್ನೂ ಓದಿ: ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ ಸಾಕ್ಷಿ ಇಲ್ಲಿದೆ
ವಿಂಗ್ ಕಮಾಂಡರ್ ವಿಡಿಯೊವೊಂದು ಸೋಮವಾರ ಕಾಡ್ಗಿಚ್ಚಿನಂತೆ ಹರಡಿತ್ತು. ಹಿಂದೆ ಏನಾಯ್ತು.. ಮುಂದೆ ಏನಾಯ್ತು ಅಂತಾ ಯೋಚಿಸದೆ ಕರ್ನಾಟಕದಲ್ಲಿ ಒಬ್ಬ ಸೇನಾಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ, ರಾಜ್ಯದ ಹೆಸರಿಗೆ ಕಳಂಕ ತರುವ ದುಷ್ಪ್ರಚಾರ ಕೂಡ ರಾಷ್ಟ್ರ ಮಟ್ಟದಲ್ಲಿ ನಡೀತು. ಪೊಲೀಸರು, ಕನ್ನಡಿಗ ವಿಕಾಸ್‌ನ ಬಂಧಿಸಿದ್ದರು. ಆದರೆ ಬಳಿಕ ಹೊರಬಂದ ಸಿಸಿಟಿವಿ ವಿಡಿಯೋ ವಿಂಗ್ ಕಮಾಂಡರ್‌ನ ಸುಳ್ಳಿನ ಕಂತೆಯನ್ನು ಮತ್ತು ಸೇನಾಧಿಕಾರಿ ಅನ್ನೋ ದರ್ಪದಲ್ಲಿ ಈತ ಮೆರೆದಿದ್ದ ಕ್ರೌರ್ಯವನ್ನು ಬಿಚ್ಚಿಟ್ಟಿತ್ತು. ನಾನೇನು ಮಾಡೇ ಇಲ್ಲ ಅಂತಾ ಹೇಳಿದ್ದ ವಿಂಗ್ ಕಮಾಂಡರ್‌ನ ಮುಖವಾಡ ಕಳಚಿ ಬಿದ್ದಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.