ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ, ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಮತ್ತು ಸಾರ್ವಜನಿಕ ಸೇವಾ ಕ್ಷೇತ್ರಗಳ ದೃಷ್ಟಿಯಲ್ಲಿ ಯೋಚಿಸಿ. ಗಂಟಲಿನ ಪಡಕಗಳತನಕ ಬಂದುಕುಳಿತ ನೋವುಗಳಿಗೆ ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು, ವಾಸ್ತವ ಸಂಗತಿಗಳಿಗೆ ಪರಿಹಾರ ಸಿಗುವುದು. ಈ ಹಿನ್ನೆಲೆಯಲ್ಲಿ ರೂಪಿಸಿರುವ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ಸರಣಿಯಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ ಮತ್ತು ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡವರ ಬದುಕು ಬವಣೆ ಮತ್ತು ಅಂತರಂಗದ ತುಣುಕುಗಳು ಇಲ್ಲಿರುತ್ತವೆ.
ತುಣುಕುಗಳು ಎಂದು ಹೇಳಲು ಕಾರಣವಿದೆ; ನಮಗಾದ ಅನ್ಯಾಯ, ನೋವು ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿನ್ನೂ ಇಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡಿರುವ ಯಾರ ಆಂತರ್ಯಕ್ಕೂ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶ ಕೂಡ ಇಲ್ಲಿದೆ. ಇ ಮೇಲ್ : tv9kannadadigital@gmail.com
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಇಸ್ಲಾಂಪೂರದ ಉಮರ್ ಫಾರೂಕ್ ಸ್ಮಶಾನ ಕಾರ್ಮಿಕರ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.
*
‘ಅನಾಥರ ಹೆಣಗಳು, ಆಕ್ಸಿಡೆಂಟ್ನಲ್ಲಿ ನುಜ್ಜುಗುಜ್ಜಾದ ಮೃತದೇಹಗಳು, ವಿಷಪೂರಿತ ಹಾವುಗಳು ಕಚ್ಚಿ ಮೃತಪಟ್ಟವರು, ಕೀವು-ರಕ್ತ ಸೋರಿ ದುರ್ವಾಸನೆ ಬೀರುವ ಹೆಣಗಳು… ಮತ್ತೀಗ ಕೊರೋನಾ ಮೃತದೇಹಗಳು. ಎಲ್ಲವಕ್ಕೂ ನಮ್ಮ ಕೈಯಿಂದಲೇ ಮುಕ್ತಿ ಕೊಡುತ್ತಿದ್ದರೂ ನಮಗ್ಯಾವ ಸುರಕ್ಷತಾ ಉಪಕರಣಗಳನ್ನು ಸರಕಾರ ಈತನಕ ಕೊಟ್ಟಿಲ್ಲ. ಅಂತ್ಯಸಂಸ್ಕಾರವಾದ ಮೇಲೆ ಜನರು ಹಾಕುವ ಅಕ್ಕಿ ಮತ್ತು ಚಿಲ್ಲರೆ ಕಾಸನ್ನೇ ನಂಬಿಕೊಂಡು ಬದುಕುತ್ತಿದ್ದೇವೆ. ಕಿತ್ತು ತಿನ್ನುವ ಬಡತನ ಮತ್ತು ಸುತ್ತಮುತ್ತಲಿನವರಂತೆ ನಾವ್ಯಾಕೆ ಇಲ್ಲ? ಎನ್ನುವ ಅವಮಾನದಿಂದ ನಮ್ಮ ಮಕ್ಕಳು ಶಾಲೆಗೆ ಹೋಗದೆ ನಮ್ಮೊಂದಿಗೆ ಇದೇ ಕೆಲಸದಲ್ಲಿ ತೊಡಗಿಕೊಂಡು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಷ್ಟೆಲ್ಲಾ ನೋವು ಸಂಕಟಗಳ ಮಧ್ಯೆಯೂ ತಲೆಮಾರುಗಳಿಂದ ಈ ಕೆಲಸ ಮಾಡುತ್ತಲೇ ಇದ್ದೇವೆ. ನಮ್ಮ ಮಕ್ಕಳೂ ಇದನ್ನೇ ಮುಂದುವರಿಸಬೇಕಾ?’ ನೋವು ಆಕ್ರೋಶದಿಂದ ಕೇಳುತ್ತಾರೆ ಬೆಂಗಳೂರಿನ ಹರಿಶ್ಚಂದ್ರ ಘಾಟ್ನ ಸ್ಮಶಾನ ಕಾರ್ಮಿಕ ವೆಂಕಟೇಶ್.
*
‘ಯಲಹಂಕದ ಮೇಡಿ ಅಗ್ರಹಾರದ ಸ್ಮಶಾನದಲ್ಲಿ ಕೊರೊನಾ ಸೋಂಕಿತ ಶವವನ್ನು ವಿದ್ಯುತ್ ಚಿತಾಗಾರದೊಳಗೆ ತಳ್ಳುವಾಗ ಆಯತಪ್ಪಿ ನಾನೂ ಅದರೊಳಗೆ ಬಿದ್ದುಬಿಟ್ಟೆ. ಇದರಿಂದಾಗಿ ನನ್ನ ಸೊಂಟ ಮುರಿದುಹೋಗಿ ಆಸ್ಪತ್ರೆಗೆ ಸೇರಿದೆ. ಆಸ್ಪತ್ರೆಯ ಖರ್ಚು ವೆಚ್ಚವನ್ನು ಭರಿಸುವುದಾಗಿ ಮಾತು ಕೊಟ್ಟಿದ್ದ ಬಿಬಿಎಂಪಿಯಿಂದ ಯಾವುದೇ ನೆರವು ಸಿಗಲಿಲ್ಲ. ಕೊನೆಗೆ ಸಾಲ ಮಾಡಿ 2.5 ಲಕ್ಷ ರೂ. ಬಿಲ್ ಕಟ್ಟಬೇಕಾಗಿ ಬಂದಿತು. ಈಗ ನಾನು ಮೊದಲಿನ ಹಾಗೆ ಸದೃಢ ವ್ಯಕ್ತಿಯಾಗಿ ಉಳಿದಿಲ್ಲ. ಭಾರವಾದ ಕೆಲಸ ಮಾಡಲು ನನ್ನಿಂದಾಗಲ್ಲ. ಭವಿಷ್ಯದ ಕುರಿತು ಚಿಂತಿಸಿಯೇ ಸೊರಗುವಂತಾಗಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಸ್ಮಶಾನ ಕಾರ್ಮಿಕ ರುದ್ರ ಆರಾಧ್ಯ.
‘ಬಹುತೇಕ ಸ್ಮಶಾನ ಕಾರ್ಮಿಕರು ಬಾಡಿಗೆಮನೆಯನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಕೊರೋನಾದ ಎರಡನೆಯ ಅಲೆ ಶುರುವಾದಾಗಿನಿಂದ ಅವರು ಮನೆಗಳಿಗೇ ಹೋಗಿಲ್ಲ ಈತನಕ. ಹೆಂಡತಿ-ಮಕ್ಕಳ ಮುಖವನ್ನು ನೋಡದೇ ತಮ್ಮ ಕೆಲಸಗಳಲ್ಲಿ ಮುಳುಗಿದ್ದಾರೆ. ಅಕಸ್ಮಾತ್ ಹೋದರೂ, ಹೆಣ ಸುಡುವವರು ಎಂದು ಗೊತ್ತಾಗುತ್ತಿದ್ದಂತೆ ಆ ಏರಿಯಾದಲ್ಲಿ ಕಾಲಿಡದಂತೆ ಮಾಡಿಬಿಡುತ್ತಾರೆ ಸ್ಥಳೀಯರು. ಅಲ್ಲಿಂದ ಹಾಗೇ ವಾಪಾಸ್ ಅವರು ಮರಳುವುದು ಸ್ಮಶಾನಕ್ಕೆ. ದಿನಪೂರ್ತಿ ಕೊರೋನಾ ಸೋಂಕಿನಿಂದ ಮೃತಪಟ್ಟ ಶವಗಳೊಂದಿಗೆ ಅಂಟಿಕೊಂಡಿರುವ ಅವರುಗಳು ಸ್ವಲ್ಪ ಜಾಗ್ರತೆ ತಪ್ಪಿದರೂ ಕೊರೋನಾ ಗ್ಯಾರಂಟಿ. ಬನಶಂಕರಿ ರುದ್ರಭೂಮಿಯಲ್ಲಿ ಸ್ಮಶಾನ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮುನಿ ಆಂಜನೇಯ ಎಂಬಾತ ಕೊರೋನಾದಿಂದಾಗಿಯೇ ಮೃತಪಟ್ಟ. ದಿನದ 24 ಗಂಟೆಯೂ ಅವರನ್ನು ದುಡಿಸಿಕೊಳ್ಳುವ ಬಿಬಿಎಂಪಿಯಿಂದಲೇ ಅವರಿಗೆ ಬೆಡ್ ಸಿಗಲಿಲ್ಲ’ ಹೀಗೆನ್ನುತ್ತಾರೆ ಸ್ಮಶಾನ ಕಾರ್ಮಿಕ ಪರ ಹೋರಾಟಗಾರ ಸುರೇಶ್.
*
ಮಣ್ಣಿನೊಂದಿಗೆ, ಬೆಂಕಿಯೊಂದಿಗೆ ಅನಿಶ್ಚಿತ ಬದುಕು ದೂಡುತ್ತಿರುವ ನತದೃಷ್ಟರೆಂದರೆ ನಮ್ಮ ದೇಶದ ಸ್ಮಶಾನ ಕಾರ್ಮಿಕರು ಮಾತ್ರ. ಬಡತನ, ಅನಕ್ಷರತೆ, ಮುಗ್ಧತನವನ್ನು ಒಡಲಲ್ಲಿರಿಸಿಕೊಂಡು ನಿಜವಾದ ಕಾಳಜಿಯೊಂದಿಗೆ ಹುಟ್ಟಿನಿಂದ ಸಾವಿನ ತನಕವೂ ಅಭದ್ರತೆಯಲ್ಲಿ ಅನಾಥ ಪ್ರಜ್ಞೆಯಲ್ಲಿ ಬದುಕುತ್ತಿರುವ ಅನಾಮಿಕರೂ ಇವರು. ಒಬ್ಬ ವ್ಯಕ್ತಿ ಮೃತಪಟ್ಟ ನಂತರ ಸ್ಮಶಾನದಲ್ಲಿ ಹೂಳಲು ಗುಂಡಿ ತೆಗೆದು, ಸ್ಮಶಾನ ಸ್ವಚ್ಛಗೊಳಿಸಿ ಶವವನ್ನು ಗುಂಡಿಗೆ ಇಳಿಸಿ ಮಣ್ಣು ಮುಚ್ಚುವುದೇ ಇವರ ದಿನನಿತ್ಯದ ಕಾಯಕ. ಸುಡುವುದಾದರೆ ಕಟ್ಟಿಗೆ ಹೊಂದಿಸಿ ಚಿತೆಗೆ ಹೆಣ ಇಡಬೇಕು. ಅಂತಿಮ ಸಂಸ್ಕಾರದ ವಿಧಿವಿಧಾನಗಳು ಸಂಪ್ರದಾಯಬದ್ಧವಾಗಿ ನಡೆದ ಬಳಿಕ ಸತ್ತವರ ಕುಟುಂಬದವರು ಇವರ ಕೈಗಿಡುವ ಚಿಲ್ಲರೆ ಹಣವೇ ಇವರ ಅನ್ನಕ್ಕೆ.
ತಲೆತಲಾಂತರದಿಂದಲೂ ಒಂದೇ ಸಮುದಾಯಕ್ಕೆ ಜೋತುಬಿದ್ದಿರುವ ಈ ಕಾಯಕ, ಕುಲದ ಬಾಧ್ಯತೆ ಎಂದು ಸಾಂಪ್ರದಾಯಿಕವಾಗಿ ಹೆಣ ಹೂಳುವ ಕೆಲಸ ಮಾಡುತ್ತಿರುವ ಸ್ಮಶಾನ ಕಾರ್ಮಿಕರ ಬದುಕು ಇತ್ತೀಚಿಗೆ ಕೊರೋನಾ ಸೋಂಕು ಬಂದ ನಂತರ ಹೇಳಲಾಗದಷ್ಟು ಹೀನಾತಿ ಹೀನವಾಗಿದೆ. ದುರಾದೃಷ್ಟವೆಂದರೆ ದೊಡ್ಡ ದೊಡ್ಡ ಹುದ್ದೆಗಳಿಗೆ ನಮಗೂ ಮೀಸಲಾತಿ ಬೇಕು, ನಮ್ಮ ಜಾತಿ, ಜನಾಂಗಕ್ಕೂ ಪ್ರಾತಿನಿಧ್ಯ ಬೇಕು ಎಂದು ಹೋರಾಟ ಮಾಡುವವರು ಈ ಹೆಣ ಹೂಳುವ ಕಾಯಕಕ್ಕೆ ಏಕೆ ಮೀಸಲಾತಿ ಕೇಳುವುದಿಲ್ಲ? ಶತಮಾನಗಳಿಂದಲೂ ಈ ಕಾಯಕವನ್ನು ಅದೊಂದೇ ಜಾತಿಯವರು ನಿರ್ವಹಿಸಬೇಕೆ? ಒಂದರ್ಥದಲ್ಲಿ ಸ್ಮಶಾನ ಕಾರ್ಮಿಕರು ಸಾಮಾಜಿಕವಾಗಿ ಅಸ್ಪೃಶ್ಯರಲ್ಲಿಯೇ ಅಸ್ಪೃಶ್ಯರು. ಇವರು ಬದುಕು ಸಾಗಿಸುತ್ತಿರುವುದು ಜಲ್ಲಿಕಲ್ಲಿನ ರಸ್ತೆಯಲ್ಲಿ ಗಾಜಿನ ಹೂಜಿ ಒಡೆಯದ ಹಾಗೇ ಉರುಳಿಸಿಕೊಂಡು ಹೋದಷ್ಟೇ ಕಠಿಣವಾದದ್ದು.
ಕೊರೋನಾದಂತಹ ಈ ಭೀಕರ ಸಂದರ್ಭದಲ್ಲಿಯೂ ಕರ್ನಾಟಕದಾದ್ಯಂತ ಸ್ಮಶಾನ ಕಾರ್ಮಿಕರು ‘ಫ್ರಂಟ್ ಲೈನ್ ವಾರಿಯರ್ಸ್’ ಆಗಿ ದಣಿವರಿಯದೆ ದುಡಿಯುತ್ತಿದ್ದಾರೆ. ಯಾವುದೇ ತೆರನಾದ ಸೇವಾ ಭದ್ರತೆ ಹೊಂದದೆ ಅತ್ಯಂತ ಅಪಾಯಕರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಶವಗಳ ದುರ್ನಾತಕ್ಕೋ, ಅಂತ್ಯಸಂಸ್ಕಾರದ ಕಠಿಣ ವಿಧಾನಗಳನ್ನು ಪೂರೈಸಲಿಕ್ಕೋ ದಿನದ 24 ಗಂಟೆಯೂ ಕುಡಿತದ ಅಮಲಿನಲ್ಲಿಯೇ ಇರಬೇಕಾಗುತ್ತದೆ ಎನ್ನುವುದು ಅನೇಕ ಕಾರ್ಮಿಕರ ಅಭಿಪ್ರಾಯ. ಹೀಗಾದಾಗ ಸದಾ ಅನಾರೋಗ್ಯದ ಭೀತಿ ಅವರನ್ನು ಕಾಡುತ್ತಿರುತ್ತದೆ. ಕುಟುಂಬ ಸಮತೋಲನ ಕಳೆದುಕೊಳ್ಳುತ್ತದೆ. ಮುಂದಿನ ಪೀಳಿಗೆಯೂ ಶಿಕ್ಷಣದಿಂದ ವಂಚನೆಗೊಂಡು ಅದೇ ವೃತ್ತಿಯಲ್ಲೇ ಮುಂದುವರಿಯಬೇಕಾದ ಅನಿವಾರ್ಯತೆ ಉಂಟಾಗುತ್ತದೆ.
ಕೊರೋನಾ ವೈರಸ್ನಿಂದ ಮೃತಪಟ್ಟವರನ್ನು ಕುಟುಂಬಸ್ಥರೇ ದೂರ ಸರಿಸುತ್ತಿರುವ ಈ ಕಾಲದಲ್ಲಿ, ಸ್ಮಶಾನ ಕಾರ್ಮಿಕರು ಅಂಥ ಹೆಣಗಳನ್ನು ಹೆಗಲ ಮೇಲೆ ಹೊತ್ತು ಹೂತು ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಹೆಗಲಿಗೆ ಹೆಗಲು ಕೊಟ್ಟು ಜವಾಬ್ದಾರಿಯುತ ಕೆಲಸ ಮಾಡುತ್ತಿರುವ ಇಂಥ ಯೋಧರನ್ನು ಸರಕಾರವೇ ನಿರ್ಲಕ್ಷಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಕೊರೋನಾದ ಒಂದನೇ ಅಲೆಯಲ್ಲಿಯೂ ಕೋವಿಡ್ ಯೋಧರಾಗಿ ದುಡಿದ ಸ್ಮಶಾನ ಕಾರ್ಮಿಕರಿಗೆ 2020 ರ ಏಪ್ರಿಲ್ ನಿಂದ 2021ರ ಏಪ್ರಿಲ್ ವರೆಗೆ ಒಂದು ವರ್ಷಗಳ ಕಾಲ ಕನಿಷ್ಟ ಸಂಬಳವನ್ನೂ ಕೊಟ್ಟಿಲ್ಲವೆಂದರೆ ಈ ಅನ್ಯಾಯವನ್ನು ಸಹಿಸುವುದು ಹೇಗೆ?
ಸ್ಮಶಾನ ಕಾರ್ಮಿಕರ ಸಮಸ್ಯೆಗಳತ್ತ ಮೊಟ್ಟಮೊದಲಿಗೆ ಗಮನಹರಿಸಿದ ಚಲನಚಿತ್ರ ನಟ ಚೇತನ್ (ಅಹಿಂಸಾ), ಸ್ಮಶಾನಗಳಿಗೆ ತೆರಳಿ ಅವರ ಕುಟುಂಬಗಳಿಗೆ ದಿನನಿತ್ಯದ ದಿನಸಿ ಸಾಮಗ್ರಿಗಳನ್ನು ವಿತರಿಸುವಂತಹ ಮಾನವೀಯ ಕೆಲಸಗಳನ್ನು ಮಾಡುತ್ತಿದ್ದಾರೆ. ‘ಪುಡಿಗಾಸಿನಿಂದ ಅವರ ಹಸಿದ ಹೊಟ್ಟೆ ತುಂಬುತ್ತಿಲ್ಲ. ಹರಿದಬಟ್ಟೆ ಅವರ ಬೆತ್ತಲೆಯನ್ನು ಮುಚ್ಚುತ್ತಿಲ್ಲ. ಅವರ ಸ್ವಾಭಿಮಾನಕ್ಕೆ, ಸ್ಪೂರ್ತಿ-ಚೈತನ್ಯಕ್ಕೆ ಪೂರಕವಾಗಿ ನಾವೇನು ಕಲ್ಪಿಸಿದ್ದೇವೆ? ಅತ್ತ ಮಸಣದಲ್ಲಿ ಗಂಡ ಹೆಣ ಬೇಯಿಸುತ್ತಿದ್ದರೆ ಅವನ ಹೆಂಡತಿ ಮನೆಯಲ್ಲಿ ಕಣ್ಣೀರು ಹಾಕುತ್ತ ಅನ್ನ ಬೇಯಿಸುವಂಥ ಪರಿಸ್ಥಿತಿ ಇದೆ’ ಎಂದು ಬೇಸರಿಸಿಕೊಳ್ಳುವ ಚೇತನ್, ‘ರಾಜ್ಯಾದ್ಯಂತ ಸಾವಿರಾರು ಸ್ಮಶಾನ ಕಾರ್ಮಿಕರು ಕೋವಿಡ್ ಯೋಧರಾಗಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಅವರೆಲ್ಲರಿಗೂ ಸೇವಾಭದ್ರತೆ ಒದಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಲಸಿಕೆ ಹಾಕಿಸಬೇಕು. ಕೊರೋನಾದಿಂದ ಪ್ರಾಣ ಕಳೆದುಕೊಂಡ ಕಾರ್ಮಿಕರ ಕುಟುಂಬಗಳಿಗೆ ನೆರವು ಮತ್ತು ಎಲ್ಲಾ ಕಾರ್ಮಿಕ ಮಕ್ಕಳಿಗೆ ಉಚಿತ ಶಿಕ್ಷಣ ಲಭ್ಯವಾಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ.
ಸ್ಮಶಾನ ಕಾರ್ಮಿಕರದೂ ಒಂದು ಜೀವ. ಪ್ರತಿಯೊಬ್ಬರ ಅಂತ್ಯ ಸಂಸ್ಕಾರವನ್ನು ಘನತೆಯಿಂದ ನೆರವೇರಿಸುವ ಅವರ ಬದುಕೂ ಘನತೆಯಿಂದ ಇರಬೇಡವೆ? ಸ್ಮಶಾನದಲ್ಲಿಯೇ ಹುಟ್ಟಿ, ಸ್ಮಶಾನದಲ್ಲಿಯೇ ಬೆಳೆದು, ಸ್ಮಶಾನದಲ್ಲಿಯೇ ಸಾಯುವ ಸ್ಮಶಾನ ಕಾರ್ಮಿಕರ ಬದುಕನ್ನೊಮ್ಮೆ ಕಲ್ಪಿಸಿಕೊಳ್ಳಿ. ಮಾನವೀಯತೆಯಿಂದ ಯೋಚಿಸಿ. ಅವರ ಬದುಕನ್ನೂ ಸುಗಮಗೊಳಿಸುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯವಲ್ಲವೆ?
ಇದನ್ನೂ ಓದಿ : Corona Warrior : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ : 85ರ ಅಜ್ಜಿಯ ನಗುವೂ ಮತ್ತು ಬೆಡ್ ಒಂದರ ಕಥೆಯೂ
Published On - 7:28 pm, Tue, 25 May 21