ಈಗಲೂ ಜನ ಹಳ್ಳಿಗಳಿಗೆ ಕೊರೋನಾ ಬರುವುದಿಲ್ಲವೆಂದೇ ನಂಬಿದ್ದಾರೆ. ದೇವರು ಸಿಟ್ಟಾಗಿದ್ದಕ್ಕೆ ಕೊರೋನಾ ಬಂದಿದೆ ಎಂದು ನಂಬಿದ ವೃದ್ಧರಿದ್ದಾರೆ. ಆಸ್ಪತ್ರೆಗೆ ಹೋದರೆ ಸಾಯಿಸ್ತಾರೆ ಎಂದು ಜ್ವರ ಬಂದರೂ ತೋರಿಸಿಕೊಳ್ಳುತ್ತಿಲ್ಲ. ಹೊರಗೆ ಜನ ಕೋರೋನಾಗಿಂತ ಹೆಚ್ಚಾಗಿ ಆಕ್ಸಿಜನ್ ಸಿಗದೆ ಸಾಯುತ್ತಿದ್ದಾರೆ. ಹೈಕೋರ್ಟ್ ಕೇಂದ್ರಕ್ಕೆ ವಾರ್ನಿಂಗ್ ಕೋಡುತ್ತಿದೆ. ಕೊರೋನಾದ ಎರಡನೇ ಅಲೆ ವೇಗವಾಗಿ ಹರಡುತ್ತ ಅದೆಷ್ಟೋ ಆತ್ಮೀಯರು, ಪರಿಚಿತರು ಮೊನ್ನೆ ಮೊನ್ನೆ ಇದ್ದವರು ಇವತ್ತು ಇಲ್ಲವಾಗಿದ್ದಾರೆ. ಸಾವಿಗೂ ತಮಗೂ ಸಂಬಂಧವೇ ಇಲ್ಲದಂತೆ ದಲ್ಲಾಳಿಗಳು ಕಾಳಸಂತೆಯಲ್ಲಿ ಆಸ್ಪತ್ರೆಯ ಬೆಡ್, ಆಕ್ಸಿಜನ್ ಸಿಲಿಂಡರ್ ದುಪ್ಪಟ್ಟು ತಿಪ್ಪಟ್ಟು ಬೆಲೆಗೆ ಮಾರಿಕೊಳ್ಳಲು ನಿಂತಿದ್ದಾರೆ. ಶವದಹನಕ್ಕೆ ಕಟ್ಟಿಗೆ ಸಿಗುತ್ತಿಲ್ಲ, ಸುಡಲು ಜಾಗವಿರದೇ ‘ಹೌಸ್‍ಫುಲ್’ ಫಲಕ ಹಾಕಬೇಕಾದ ಸ್ಥಿತಿ ಬಂದಿದೆ.
ಕಳೆದ ವರ್ಷದಿಂದ ಕರೋನಾ ಮಹಾಮಾರಿಗೆ ತತ್ತರಿಸಿಹೋಗಿರುವ ದೇಶದ ಜನತೆ, ಹೃದಯವೇ ಇಲ್ಲದ ಸರಕಾರದ ಅರಾಜಕತೆ, ಕ್ರೌರ್ಯಕ್ಕೆ ಬಲಿಯಾಗುವ ಸನ್ನಿವೇಶವೊದಗಿದೆ. ಎರಡನೆ ಅಲೆಯ ಕೊರೋನಾ ಕಾಲಕ್ಕೆ ಅವ್ಯವಸ್ಥೆಯೆಂಬುದು ಬೆತ್ತಲಾಗಿ ನಿಂತಿದೆ. ಹಸಿವಿಗೆ ಅನ್ನ ನೀರಿನಷ್ಟೇ ಅಗತ್ಯವಾಗಿರುವ ವೈದ್ಯಕೀಯ ಸೌಲಭ್ಯಗಳು, ಬದುಕುಳಿಯಲು ಜನ ಉಸಿರಿಗೂ ಪರದಾಡುತ್ತಿರುವ ಕಾಲದಲ್ಲಿ ಆಮ್ಲಜನಕ, ಆಸ್ಪತ್ರೆಯ ವೈದ್ಯಕೀಯ ಸೌಲಭ್ಯಗಳು ಜನಸಾಮಾನ್ಯನಿಗೆ ನಿಲುಕದಂತೆ ಸಾವಿನಲ್ಲೂ ಹಣಮಾಡಿಕೊಳ್ಳುತ್ತಿರುವವರನ್ನು ಕಂಡಾಗ ಮನುಷ್ಯನ ಕ್ಷುದ್ರತೆ ಅಸಹ್ಯ ಹುಟ್ಟಿಸುತ್ತಿದೆ. 1947 ರಲ್ಲಿಯೇ ‘ದಿ ಪ್ಲೇಗ್’ ಬರೆದ ಅಲ್ಬರ್ಟ್ ಕಮೂನ ಓರಾನ್ ನಗರದಲ್ಲಿ ಅಕ್ಷರಶಃ ನಾವೀಗ ವಾಸಿಸುತ್ತಿದ್ದೇವೇನೋ ಅನ್ನುವ ಭಯ ಆವರಿಸಿದೆ.
‘There comes a time in history when the man who dares to say that two and two do make four is punished with death.’
‘ಎರಡು ಎರಡು ಕೂಡಿದರೆ ನಾಲ್ಕು ಎಂದು ಹೇಳಲು ಧೈರ್ಯ ಮಾಡಿದ ವ್ಯಕ್ತಿಗೆ ಮರಣದಂಡನೆ ವಿಧಿಸುವ ಕಾಲವೊಂದು ಇತಿಹಾಸದಲ್ಲಿ ಬರುತ್ತದೆ’ ಎಂದಿದ್ದು ಮತ್ತೆ ಮತ್ತೆ ನೆನಪಾಗುತ್ತದೆ. ಬಹುಶಃ ಅವನು ಇದೇ ಕಾಲಕ್ಕಾಗಿಯೇ ಹೇಳಿರಬೇಕು ಎನಿಸುತ್ತಿದೆ. ಉತ್ತರಪ್ರದೇಶದ ಮುಖ್ಯಮಂತ್ರಿಗಳು ಆಸ್ಪತ್ರೆಯಲ್ಲಿ ಆಮ್ಲಜನಕದ ಸಿಲಿಂಡರುಗಳಿಲ್ಲ ಎಂದು ಟ್ವೀಟ್ ಮಾಡಿದ ಯುವಕನ ಮೇಲೆ ಎಫ್‍ಐಆರ್ ದಾಖಲಿಸಿತು. ಬಾಯಿ ತೆಗೆದರೆ ಜೈಲಿಗಟ್ಟುತ್ತಾರೆ, ಮುಂದೆ ಮರಣದಂಡನೆಯನ್ನೂ ವಿಧಿಸಿದರೆ ಅಚ್ಚರಿಯೇನಿಲ್ಲ.
ವಿಶ್ವದ ಆಧುನಿಕ ನಗರಗಳ ಮಾದರಿಗಳಂತೆ ಗಗನಚುಂಬಿ ವಸತಿ ಸಮುಚ್ಚಯಗಳು, ಆಫೀಸು, ಮಾರುಕಟ್ಟೆ, ಮಾಲ್ ಇತ್ಯಾದಿಗಳ ಕಣ್ಣುಕೊರೈಸುವ ನೋಯ್ಡಾ, ಗ್ರೇಟರ್ ನೊಯ್ಡಾಗಳ ನರನಾಡಿಗಳಂತೆ ಅದರ ಪಕ್ಕೆಲುಬಿಗೆ ಹೊಂದಿಕೊಂಡ ಸಣ್ಣಪುಟ್ಟ ನೂರಾರು ಹಳ್ಳಿಗಳಲ್ಲಿ ಆಸ್ಪತ್ರೆಗಳಿಲ್ಲ. ಅವರೆಲ್ಲ ಇದೇ ನಗರದ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ಲುಗಳಿಗೇ ಬರಬೇಕು. ಸರಕಾರ ಗ್ರಾಮಾಂತರ ಪ್ರದೇಶಗಳಿಗೆ ಸ್ಮಾರ್ಟ್ ಸಿಟಿಗಳನ್ನಾಗಿಸುವ ಕನಸಿನ ತುಪ್ಪವನ್ನು ಮೂಗಿಗೆ ಸವರಿದ್ದೇ ತಡ ಬಹುತೇಕ ಹಳ್ಳಿಯ ಜಮೀನುದಾರರು ಜಮೀನುಗಳನ್ನು ಮಾರಿಕೊಂಡು ದೊಡ್ದಮೊತ್ತದ ಗಂಟನ್ನು ಪಡೆದರು. ಬಂಗಲೆಗಳನ್ನೂ ಹೊಸಹೊಸ ಕಾರು, ಬೈಕುಗಳನ್ನೂ ಇಟ್ಟುಕೊಂಡು ತಾವು ಸುಖವಾಗಿದ್ದೇವೆಂದೇ ಅಂದುಕೊಂಡಿದ್ದರು ನಿನ್ನೆ ಮೊನ್ನೆಯ ತನಕ. ಅವರ ಹಳ್ಳಿಗೊಂದು ಆಸ್ಪತ್ರೆಯಿಲ್ಲ ಎಂದು ಕಣ್ಣು ತೆರೆದಾಗ ಕರೋನಾ ಜಗಮಾರಿಗೆ ನೂರಾರು ಜೀವಗಳು ಬಲಿಯಾಗಿದ್ದವು.
ಲಸಿಕೆ ಆರಂಭವಾದಾಗಿನಿಂದಲೂ ಪರಿಚಿತರು ಸ್ನೇಹಿತರು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾಗ ನಾನು ಹಾಕಿಸಿಕೊಳ್ಳುವುದಿಲ್ಲ ಎಂದೇ ತೀರ್ಮಾನಿಸಿದ್ದೆ. ಈಗಿರುವ ಕಿಡ್ನಿ ಸಮಸ್ಯೆ, ಬೀಪಿಗೆ ಲಸಿಕೆ ಹಾಕಿಸಿಕೊಳ್ಳುವ ಮೊದಲು ನನ್ನ ನೆಫ್ರಾಲಜಿಸ್ಟ್ ಅನ್ನು ವಿಚಾರಿಸಿ ನಂತರ ಲಸಿಕೆ ಹಾಕಿಸಿಕೊಳ್ಳುವುದು ಸೂಕ್ತವೆಂದು ಮುಂದೂಡುತ್ತಲಿದ್ದೆ. ಆದರೆ ಮಾರ್ಚ್ ತಿಂಗಳಲ್ಲಿಯೇ ಕೊರೋನಾದ ಎರಡನೆಯ ಅಲೆಯ ಹುಯಿಲೇಳುತ್ತಿದ್ದಂತೆ ಸಾಂಕ್ರಾಮಿತರ ಸಂಖ್ಯೆ ಸಾವುಗಳ ಸಂಖ್ಯೆ ಭಯ ಹುಟ್ಟಿಸತೊಡಗಿತ್ತು.
‘ಕೊನೆಗೂ ಆಪ್ತರ ಕಾಳಜಿ ಮಾತುಗಳಿಂದಾಗಿ ನಾನು ತೋರಿಸಿಕೊಳ್ಳುವ ಖಾಸಗಿ ಆಸ್ಪತ್ರೆಗೆ ಓಡಿದೆ. ಆಸ್ಪತ್ರೆಯಲ್ಲಿಯೂ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆಯೇ ಜಾಸ್ತಿ ಇದ್ದು ಓಪಿಡಿ ಹೆಚ್ಚುಕಡಿಮೆ ಖಾಲಿಯಿದ್ದವು. ಅಲ್ಲಿನ ರಿಸೆಪ್ಶನಿಸ್ಟ್ ನೀವು ರಿಜಿಸ್ಟ್ರೇಶನ್ ಮಾಡಿಸಿದ್ದೀರಾ? ಇಲ್ಲಿ ರಿಜಿಸ್ಟ್ರೇಶನ್ ಮಾಡಿಸಿಕೊಂಡು ಅಪಾಯಿಂಟ್‍ಮೆಂಟ್ ತಗೊಂಡು ಬಂದವರಿಗೆ ಲಸಿಕೆ ಹಾಕಲಾಗುತ್ತದೆ’ ಎಂಬ ಮಾಹಿತಿಯನ್ನೊದಗಿಸಿದಳು.
ಸರಿ, ಮೊಬೈಲ್ನಲ್ಲಿ ಕೋವಿನ್ covin.gov.in ವೆಬ್‍ಸೈಟಿಗೆ ಹೋದರೆ ಅಲ್ಲಿ ಅಪಾಯಿಂಟ್‍ಮೆಂಟ್ ಇರಲಿಲ್ಲ. ಇದಲ್ಲದೆ ಸುದ್ದಿ ಮಾಧ್ಯಮಗಳಲ್ಲಿ ಲಸಿಕೆ ಇಲ್ಲ. ಲಸಿಕೆ ಅಭಾವ ಮತ್ತು ಅದರಿಂದಾಗಿ ಜನರ ಪರದಾಟ. ಹೊರದೇಶಗಳಿಂದ ರೆಮಿಡಿಸಿವಿರ್ ಬರ್ತಿದೆ, ರಶಿಯಾದ ಸ್ಪುಟ್ನಿಕ್ ಬರ್ತಿದೆ ಇತ್ಯಾದಿ ಸುದ್ದಿಗಳನ್ನು ಕೇಳುವುದೇ ಆಯ್ತು. ಲಸಿಕೆ ಲಭ್ಯವಿದ್ದಾಗ ಬೇಡವೆಂದು ಹಿಂದೇಟು ಹಾಕಿದ್ದೆ. ನನಗೇನೂ ಆಗಲಿಕ್ಕಿಲ್ಲವೆಂಬ ಭಂಡ ಧೈರ್ಯ. ಯಾಕೆಂದರೆ ಕಳೆದ ಜೂನ್‍ನಿಂದ ಆಫೀಸು ಮನೆ ಅಂತ ಹೊರಗಡೆ ಓಡಾಡ್ತಿದೀನಿ. ಈಗಾಗಲೇ ನನಗೆ ಕೋವಿಡ್ ಬಂದೂ ಹೋಗಿರಬಹುದು, ವೈರಸ್ಸಿನೊಂದಿಗೆ ಹೋರಾಡುವ ರೋಗ ನಿರೋಧಕ ವೈರಾಣುಗಳು ಉತ್ಪನ್ನವಾಗಿರಬಹುದು ಎಂಬ ಧಿಮಾಕಿನಿಂದ ಇಂದು ನಾಳೆ ಎಂದು ಮುಂದೂಡುತ್ತಿದ್ದ ನಾನು ಈಗ ಲಸಿಕೆ ಹಾಕಿಸಲೇಬೇಕು ಎಂದು ನಿರ್ಧರಿಸುವ ಹೊತ್ತಿಗೆ ದೇಶದಲ್ಲಿ ಲಸಿಕೆಯೇ ಸಿಗದಂಥ ಪರಿಸ್ಥಿತಿಯುಂಟಾಗಿತ್ತು. ಲಸಿಕೆಗಾಗಿ ಜನ ಗಂಟೆಗಟ್ಟಲೆ ಸರತಿಯಲ್ಲಿ ನಿಂತು ಹಾಕಿಸಿಕೊಂಡು ಬರಬೇಕಾದಂಥ ಸ್ಥಿತಿ. ಲಸಿಕೆಯೂ ಇಲ್ಲ, ಆನ್‍ಲೈನ್ ರಿಜಿಸ್ಟ್ರೇಶನ್ನೂ ಇಲ್ಲ. ಸರಿ ಲಸಿಕೆ ಬರುವ ತನಕ ಕಾಯೋಣವೆಂದು ಸಮಾಧಾನಪಟ್ಟುಕೊಂಡೆ.
ಅದಕ್ಕೂ ಮುನ್ನ ಒಂದು ಘಟನೆ ಹೇಳಬೇಕು; ಖಾಸಗಿ ಆಸ್ಪತ್ರೆಗೆ ಹೋದ ದಿನ ನನ್ನೆಲ್ಲಾ ಟೆಸ್ಟ್ ರಿಪೋರ್ಟುಗಳನ್ನು ಡಾಕ್ಟರರಿಗೆ ತೋರಿಸಿ ಎಲ್ಲ ಸರಿಯಾಗಿದೆಯೇ ಎಂದು ರಿವ್ಯೂ ಮಾಡಿಸಿ ಈಗಾಗಲೇ ತಗೊಳ್ಳುತ್ತಿದ್ದ ಮಾತ್ರೆಗಳೇ ಸಾಕೋ ಇಲ್ಲ ಬೇರೆ ಏನಾದರೂ ತಗೋಬೇಕೋ, ಎಂದು ಅವರು ಬರೆದುಕೊಡುವ ಕ್ರಮವಿದೆ. ಸರಿ, ನಾನು ಲಸಿಕೆ ಹಾಕಿಸಿಕೊಳ್ಳಬಹುದಾ ಎಂದಾಗ ಆ ಡಾಕ್ಟರ್, ಶೋಲೆ ಸಿನೇಮಾದ ಬಸಂತಿಯ ಸ್ಟೈಲಿನಲ್ಲಿ ‘ನೋಡಿ ಸರ್ಕಾರ ಹೇಳ್ತಿದೆ ಲಸಿಕೆ ಹಾಕಿ ಅಂತ ನಾವು ಹಾಕ್ತಿದ್ದೇವೆ. ನೀವು ಸರ್ಕಾರವನ್ನು ಕೇಳಿ ನಮ್ಮನ್ನಲ್ಲ. ನಾನೂ ಹಾಕಿಸಿಕೊಂಡಿದ್ದೇನೆ, ನನ್ನ ತಂದೆ ತಾಯಿಗೂ ಹಾಕಿಸಿದ್ದೇನೆ, ಹೆಂಡತಿಗೂ ಹಾಕಿಸಿದ್ದೇನೆ, ನಾನು ಮಾಡಿದ್ದು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ಸರ್ಕಾರ ಹೇಳಿದೆ, ಮೋದಿಜೀ ಹೇಳ್ತಿದಾರೆ, ಅದನ್ನು ನಾವು ಮಾಡ್ತೀದೀವಿ” ಅಂದ.
ಬರುತ್ತಿದ್ದ ಕೋಪವನ್ನು ನುಂಗಿಕೊಳ್ಳುತ್ತಾ ಒಬ್ಬ ಡಾಕ್ಟರಾಗಿ ನಿಮ್ಮ ರೋಗಿಗಳಿಗೆ ಯಾವ ರೀತಿಯ ಉತ್ತರ ಕೊಡಬೇಕೋ ಆ ರೀತಿ ಕೊಡು ಅಂತ ಮನದೊಳಗೆ ಅಂದುಕೊಂಡು…
ಹಾಗಲ್ಲ ಡಾಕ್ಟರ್ – ಒಬ್ಬ ಡಾಕ್ಟರ್ ಆಗಿ ನೀವು ಈ ರೀತಿ ಉತ್ತರ ಕೊಟ್ತರೆ ಹೇಗೆ? ನನ್ನ ರಿಪೋರ್ಟ್ ನೋಡಿ ಹೇಳಿ ಅಂದರೆ ಮತ್ತೆ ಅದೇ ಹಾಡು ಹಾಡಿದ. ಸರ್ಕಾರ್ ನೇ….
ಕಿರಿಕಿರಿಯೆನಿಸಿ, ನನ್ನ ರಿಪೋರ್ಟ್ ನೋಡಿ ಸಾಕು ಅಂತ ನಾನೇ ಹೇಳಬೇಕಾಯ್ತು. ಪರಿಸ್ಥಿತಿ ಇದ್ದಾಗ ಅಸಮಂಜಸದಲ್ಲಿ ಲಸಿಕೆ ದೊರಕಿಸಿಕೊಳ್ಳುವುದೊಂದು ದೊಡ್ದ ಚಿಂತೆಯೇ ಆಯ್ತು. ಒಂದು ಆಲೋಚನೆಯ ಹುಳ ತಲೆ ಹೊಕ್ಕರೆ ಅದನ್ನು ಪೂರ್ತಿ ಮಾಡುವತನಕ ನಾನೂ ಸುಮ್ಮನಿರದ ಪ್ರಾಣಿ. ಅಲ್ಲಿ ಇಲ್ಲಿ ವಿಚಾರಿಸಿದಾಗ, ನನ್ನ ಕಚೇರಿಯ ಸಹೋದ್ಯೋಗಿಗಳು ಹತ್ತಿರದ ದಾದ್ರಿಯ ಸರಕಾರಿ ಆಸ್ಪತ್ರೆಯಲ್ಲಿ ಆಧಾರ್ ಕಾರ್ಡ ಒಯ್ದರೆ ಸಾಕು ಲಸಿಕೆ ಹಾಕ್ತಾರೆ ಎಂದರು.
ನನ್ನ ನಿತ್ಯದ ಕರ್ಮಭೂಮಿ ಪಶ್ಚಿಮ ಉತ್ತರಪ್ರದೇಶದ ಒಂದು ಹಳ್ಳಿಯೇ. ಡಿಜಿಟಲ್ ಇಂಡಿಯಾ, ಸ್ವಚ್ಚ ಭಾರತ ಅಭಿಯಾನದ ತುತ್ತೂರಿ ಊದುವ ಭವ್ಯ ಭಾರತದ ಈ ಹಳ್ಳಿಗಳಲ್ಲಿ ಇನ್ನೂ ಒಳಚರಂಡಿ ವ್ಯವಸ್ಥೆ ಬಂದಿಲ್ಲ. ಗಟಾರುಗಳಿಲ್ಲ, ಗೋಹತ್ಯೆ ನಿಷೇಧದ ಸುಗ್ರೀವಾಜ್ಞೆ ಹೊರಡಿಸಿದ ಬಳಿಕ ಬೀದಿಯ ತುಂಬಾ ಬಿಡಾಡಿ ದನಗಳ ಹಿಂಡನ್ನೇ ಕಾಣಬಹುದು. ಎಲ್ಲೆಂದರಲ್ಲಿ ಗಲೀಜು. ಕಸ ಎತ್ತುವವರಿಲ್ಲ. ಚುನಾವಣೆ ಬಂತೆಂದರೆ ಹಳ್ಳಿಯ ಮುಗ್ಧರಿಗೆ ಹಣಕೊಟ್ಟು ಓಟು ಹಾಕಿಸಿಕೊಂಡರೆ ಮುಗೀತು. ಇತ್ತ ಯಾರೂ ತಲೆಹಾಕುವುದಿಲ್ಲ. ಅಂಥ ಹಳ್ಳಿಗಳು ನಿಜವಾಗಿಯೂ ಇವೆಯೇ ಎಂಬ ಸಂಶಯವಾದರೆ ಉತ್ತರಪ್ರದೇಶಕ್ಕೊಮ್ಮೆ ಭೇಟಿನೀಡಬೇಕು.
ಇನ್ನು ಸರಕಾರಿ ಆಸ್ಪತ್ರೆಗಳಿಗೆ ಹೋಗದೆ ಅದೆಷ್ಟೋ ಕಾಲವಾಯ್ತು. ಹಿಂದೆ ನನ್ನ ಹಿಮ್ಮಡ ಫ್ರ್ಯಾಕ್ಚರ್ ಆದಾಗ ಸಫ್ದರಜಂಗ್ ಆಸ್ಪತ್ರೆ ಹೋಗಿದ್ದೆ. ಇರುವೆಗಳಂತೆ ಕಿಕ್ಕಿರಿದಿರುವ ಜನಜಂಗುಳಿ ರೋಗಿಗಳ ನರಳಾಟ, ಈ ಜಾತ್ರೆಯಲ್ಲಿ ಕಳೆದೇಹೋಗ್ತಿನೋ ಅನ್ನುವಷ್ಟು ವಿಶಾಲವಾದ ಕಾರಿಡಾರುಗಳನ್ನು ದಾಟುತ್ತ, ಅತ್ತ ಹೋಗಿ ಇತ್ತ ಹೊರಳಿ, ದಿಕ್ಕುತಪ್ಪಿದಂತಾಗುತ್ತ ಕೊನೆಗೂ ನಾನು ತಲುಪಬೇಕಾದ ವಿಭಾಗವನ್ನು ತಲುಪುವ ಹೊತ್ತಿಗೆ ಸಾಕಾಗಿತ್ತು. ನನ್ನ ಪಾಳಿ ಬಂದಾಗ ಡಾಕ್ಟರ್ ನನ್ನ ಫ್ರ್ಯಾಕ್ಚರತ್ತ ಕಣ್ಣೆತ್ತಿ ನೋಡುವುದಿರಲಿ ಒಂದು ಮೀಟರ್ ದೂರದಲ್ಲಿದ್ದಾಗಲೇ ಕತ್ತು ಮೇಲೆತ್ತಿ ನೋಡಿ ಪೇಶಂಟ್ ಬಗ್ಗೆ ಶರಾ ಬರೆಯುವ ಕಾಗದದಲ್ಲಿ ಏನೋ ಗೀಚಿ ಕಳಿಸಿಬಿಟ್ಟಿದ್ದ. ಆಮೇಲೆ ನಾನ್ಯಾವತ್ತೂ ಸರಕಾರಿ ಆಸ್ಪತ್ರೆಗೆ ಹೋಗುವ ಸಂದರ್ಭ ಬರಲಿಲ್ಲ. ಕೇಂದ್ರ ಸರ್ಕಾರದ ನೌಕರರಿಗೆ ಉಪಲಬ್ಧವಿರುವ ವೈದ್ಯಕೀಯ ಸೌಲಭ್ಯದ ಸಿಜಿಎಚ್‍ಎಸ್ ಡಿಸ್ಪೆನ್ಸರಿಗಳು ಚೆನ್ನಾಗಿವೆ. ರೆಫರ್ ಮಾಡುವುದಕ್ಕೆ, ಮೆಡಿಸಿನ್ ತಗೊಳುವುದಕ್ಕೆ ಅಡ್ದಿಯಿಲ್ಲ.
ಹಳ್ಳಿ ಸರಕಾರಿ ಆಸ್ಪತ್ರೆಗಳೆಂದರೆ ಯಾವ ಸೌಕರ್ಯಗಳಿಲ್ಲದ ಜುಗಾಡು ಮಾಡಿಕೊಂಡ ಒಂದು ಕಟ್ಟಡ . ಅದಕ್ಕೊಂದು ಜಂಗು ಹಿಡಿದ ಕಬ್ಬಿಣದ ಗೇಟು. ಒಳಹೋದರೆ ಸಾಲಾಗಿ ತರಗತಿಗಳಂತಹ ಸಣ್ಣ ಸಣ್ಣ ಕೋಣೆಗಳು. ಉದ್ದಕ್ಕಿನ ವರಾಂಡದಲ್ಲಿ ಕಾಲು ಮುರಿದ ಬೆಂಚು, ಹಲ್ಲು ಬಿದ್ದು ಹೋದ ಖಾಲಿಜಾಗದ ಕಬ್ಬಿಣದ ಕುರ್ಚಿಯ ಸೀಟು ಕಿತ್ತುಹೋಗಿ ಕಬ್ಬಿಣದ ಪಟ್ಟಿ ಮಾತ್ರ ಉಳಿದಿತ್ತು. ಅದರಲ್ಲೇ ಮಾಸ್ಕು, ಸೆರಗಿನ ಮುಸುಕು (ಘೂಂಘಟ್) ಹಾಕಿಕೊಂಡು ಕುಳಿತ ಹೆಂಗಸರು, ಅವರನ್ನು ಕರೆತಂದ ಅವರ ಖಾವಂದರುಗಳು ನೊಣ ಹೊಡಿಯುವಂತೆ ಹೆಗಲ ಮೇಲಿನ ಗಮ್ಚಾ ಆಗಾಗ ಜಾಡಿಸುತ್ತ ಕೂತಿದ್ದರು. ಆ ವರಾಂಡದ ಎದುರು ಒಂದು ಮರ. ಬಹುಶಃ ಬೇವಿನ ಮರವೋ ಗಮನಿಸಲಿಲ್ಲ. ಅದರ ನೆರಳಲ್ಲಿ ಮೂರು ಪ್ಲಾಸ್ಟಿಕ್ ಕುರ್ಚಿಗಳಿದ್ದವು. ಕಂಪೌಂಡ ಗೋಡೆಗೆ ನಾಲ್ಕೂ ಕಾಲು ಮುರಿದುಹೋದ ಸ್ಟೀಲಿನ ಕುರ್ಚಿ ತನ್ನದೇನೂ ಕೆಲಸವಿಲ್ಲವೆಂಬಂತೆ ವಿಷಾದದಲ್ಲಿ ಬಿದ್ದಿತ್ತು. ಮೂಲೆಯಲ್ಲಿ ಗೋಡೆಗೆ ಒಂದು ಕುಡಿಯಲು ಯೋಗ್ಯವಿಲ್ಲದ ಶುದ್ಧನೀರಿನ ಆರ್.ಓ. ಇತ್ತು. ಕೆಳಗೊಂದು ಗಲೀಜಾದ ಸಿಂಕು. ಲ್ಯಾಬ್ ಕೋಣೆ ಅಂತ ಬರೆದ ಕೋಣೆಯೆದುರು ಬಂದೂಕುಧಾರಿ ಪೋಲಿಸಪ್ಪ ಕರ್ತವ್ಯಬದ್ಧನಾಗಿ ಕುಳಿತು ತನ್ನ ಮೊಬೈಲಿನಲ್ಲಿ ವಾಟ್ಸಪ್ ನೋಡುತ್ತಿದ್ದ.
ಇಬ್ಬರು ಕಾರ್ಯಕರ್ತೆಯರು ಒಬ್ಬ ಕಾರ್ಯಕರ್ತ ಒಂದು ಕೊಠಡಿಯಲ್ಲಿ ಕುಳಿತು ಔಷಧಗಳ ಡಬ್ಬಿ, ಸೂಜಿಮದ್ದುಗಳ ಬಾಕ್ಸು ಇತ್ಯಾದಿ ಒಂದೆಡೆ ವಿಂಗಡಿಸುತ್ತಿರುವಂತೆ ಕಾಣಿಸಿತು. ಡಾಕ್ಟರ್ ಎಷ್ಟೊತ್ತಿಗೆ ಬರ್ತಾರೆ ಅಂತ ಕೇಳಿದ್ದಕ್ಕೆ ಅವರು ಬಹಳ ದೂರದಿಂದ ಬರಬೇಕು ಅದಕ್ಕೆ ತಡವಾಗ್ತದೆ ಅಂತ ಉತ್ತರಿಸಿದರು. ಸರಿ ಎಂದು ದೂರದಲ್ಲಿದ್ದ ಒಂದು ಕುರ್ಚಿಯಲ್ಲಿ ಹೋಗಿ ಕುಳಿತೆ. ಆಗ ನಮ್ಮ ಧಾರವಾಡದ ಕಾಮನಕಟ್ಟಿಯಲ್ಲಿರುವ ಈರಣ್ಣನ ಗುಡಿ ಎದುರಿದ್ದ ಆಗಿನ ಜನ ಮಂಗ್ಯಾನಮಾಲ ಎಂದು ಕರೆಯುತ್ತಿದ್ದ ಸಣ್ಣ ಸರಕಾರಿ ಆಸ್ಪತ್ರೆ ನೆನಪಾಯಿತು. ಹಳಬರಿಗೆ ಈ ಮಂಗ್ಯಾನಮಾಲು ಗೊತ್ತಿರುತ್ತದೆ. ಹಾಗೇಕೆ ಕರೆಯುತ್ತಿದ್ದರೋ ಗೊತ್ತಿಲ್ಲ. ಈಗಿನವರಿಗೆ ಅದು ಮುನಸಿಪಾಲ್ಟಿ ದವಾಖಾನೆ. ಆಗ ಐದು ಪೈಸೆಯ ಚೀಟಿ ಹೋಮಿಯೋಪತಿ ಔಷಧಿಗೆ, ಹತ್ತುಪೈಸೆ ಅಲೋಪತಿಗೆ ಇತ್ತು. ಬೇಕಾದ ಚೀಟಿ ಪಡೆದು ಬೇರೆ ಬೇರೆ ಕೊಠಡಿಯಲ್ಲಿರುವ ಯಾವುದಾದರೂ ಡಾಕ್ಟರಿಗೆ ತೋರಿಸಿಕೊಂಡು ಅವರು ಬರೆದ ಔಷಧಿಯನ್ನು ಪಡೆಯಲು ಕಂಪೌಂಡರನ ಕಿಟಕಿಯ ಕಿಂಡಿಯಲ್ಲಿ ಇಣುಕುತ್ತ ನಿಲ್ಲಬೇಕಿತ್ತು. ಆತ ಕೆಮ್ಮು ನೆಗಡಿ ಜ್ವರ ಇದ್ದ ಎಲ್ಲರಿಗೂ ಕೆಂಪುಬಣ್ಣದ ನೀರನ್ನೇ ಸಣ್ಣ ಬೀಕರಿನಲ್ಲಿ ಏನೋ ಬೆರೆಸಿ ಅಲ್ಲಾಡಿಸಿ ಸಣ್ಣ ಸೀಸೆಗೆ ತುಂಬಿ ಕೊಡ್ತಿದ್ದ. ಜ್ವರಕ್ಕೆ ಬಿಳಿಗುಳಿಗೆ, ಹೊಟ್ಟೆ ಜಾಡಿಸುತ್ತಿದ್ದವರಿಗೆ ಖಾಕಿಗುಳಿಗೆ, ಅಜೀರ್ಣದವರಿಗೆ ಗುಲಾಬಿ ಬಣ್ಣದ ದ್ರಾವಣ, ಕಂದು ಬಣ್ಣ, ಕೆಂಪು ಬಣ್ಣದ ದೊಡ್ದ ಸೈಜಿನ ಗುಳಿಗೆ ಟಾನಿಕ್ ಗುಳಿಗೆ ಹೀಗೆ ಶ್ಯಾಣ್ಯಾ ನಮ್ಮವ್ವ ಗುರುತಿಸುತ್ತಿದ್ದಳು. ಈ ಆಸ್ಪತ್ರೆ ಬಿಟ್ಟರೆ ಹಳೇ ಬಸ್ಸ್ಟ್ಯಾಂಡಿನಲ್ಲಿದ್ದ ಸರಕಾರಿ ಹೆರಿಗೆ ಆಸ್ಪತ್ರೆ. ತಮ್ಮ ತಂಗಿ ಹುಟ್ಟಿದಾಗ ಹಿರಿಯ ಮಗಳಾದ ನಾನೇ ಅವ್ವನಿಗೆ ಬಿಸಿಬಿಸಿ ಊಟದ ಡಬ್ಬಿ ತಗೊಂಡೋಗಿ ದೂರದಿಂದಲೇ ಪಾಪುವನ್ನು ನೋಡಿ ಬರುತ್ತಿದ್ದೆ. ಎತ್ತಿಕೋತೀನಿ ಅಂದ್ರೆ ಅವ್ವ ಮನೀಗೆ ಹೋಗಿ ಜಳಕ ಮಾಡಬೇಕು, ನೀನು ಹೋಗಿ ಎಲ್ಲಾ ಮೈಲಿಗೆ ಮಾಡ್ತಿ ಎಂದು ಮನೆಗೆ ಕಳಿಸುತ್ತಿದ್ದಳು. ಆಗೆಲ್ಲ ಕೂಸಿ ಬಾಣಂತಿ ಆಸ್ಪೆತ್ರೆಯಿಂದ ಹತ್ತು ದಿನದ ನಂತರವೇ ಮನೆಗೆ ಬರುತ್ತಿದ್ದುದು. ಹತ್ತು ದಿನದ ಮೈಲಿಗೆ, ಮನೆ ಶುದ್ಧ ಮಾಡುವುದು, ಹೊರಸು, ಕಾಯಿಸಿಕೊಳ್ಳುವ ಕುಪ್ಪರಿಗೆ, ಕುಳ್ಳು ಇದ್ದಿಲು ವ್ಯವಸ್ಥೆ ಇತ್ಯಾದಿ ಬಾಣಂತನ ಮಾಡುವವರ ಹೆಗಲಿಗಿರುತ್ತಿತ್ತು.
ಸರಕಾರಿ ಆಸ್ಪತ್ರೆಯೆಂದರೆ ಫಿನಾಯಿಲ್ ಘಾಟು, ಒದರಾಡುತ್ತ ಓಡಾಡುವ ನರ್ಸುಗಳು, ಹೆರಿಗೆ ವಾರ್ಡಿನ ಒಂದು ನಮೂನೆ ಹಸಿಹಸಿ ವಾಸನೆ ಇರುತ್ತಿತ್ತು, ಈಗ ಹೆರಿಗೆ ಆಸ್ಪತ್ರೆ ಎನಿಸುವುದೇ ಇಲ್ಲ. ಹೆರಿಗೆ ಆದವರೂ ಹಳೇಕಾಲದವರಂತೆ ತಲೆಗೆ ಬಿಗಿಯಾಗಿ ಸ್ಕಾರ್ಫ್ ಕಟ್ಟಿಕೊಂಡು, ಸ್ವೆಟರ್ ಹಾಕಿಕೊಂಡು ಮಲಗಿಕೊಂಡಿರದೇ ನೀಟಾಗಿ ತಲೆ ಬಾಚಿಕೊಂಡು ಚೆಂದನೆಯ ಉಡುಪು ತೊಟ್ಟುಕೊಂಡು ಬಂದವರೊಂದಿಗೆ ಕಿಲಕಿಲ ನಗುತ್ತ ಜಾನ್‍ಸನ್ ಬೇಬಿ ಪೌಡರು, ಈಗಷ್ಟೇ ಅರಳಿದ ಗುಲಾಬಿಹೂವಿನಷ್ಟು ಮೆದುವಾದ ದುಪ್ಪಟದಲ್ಲಿ ಹತ್ತಿ ಅಥವಾ ಉಣ್ಣೆಯ ಟೋಪಿ, ಮೈತುಂಬಾ ಸುತ್ತಿದ ಹೊದಿಕೆಯಲ್ಲಿ ಹೂವೇ ಆಗಿಹೋದ ಮಗುವನ್ನು ಎತ್ತಿಕೊಳ್ಳುವುದು ಎಷ್ಟು ಚೆಂದ. ಕೆಲ ವರ್ಷಗಳ ಹಿಂದೆ ನಮ್ಮ ಮಂಗ್ಯಾನಮಾಲ್ ದವಾಖಾನೆಯ ಆವರಣದಲ್ಲಿ ದನಕರುಗಳು ಅಡ್ದಾಡುತ್ತಿದ್ದುದನ್ನು ನೋಡಿದ್ದೆ. ಈಗಲೂ ದವಾಖಾನೆ ಇದೆಯೋ ಇಲ್ಲವೋ ಗೊತ್ತಿಲ್ಲ.
ನನ್ನ ಮನಸ್ಸು ಎಲ್ಲೆಲ್ಲೋ ವಿಹರಿಸುತ್ತಿರುವಾಗಲೇ ಒಂದು ಬೈಕು ಗೇಟ್ ದಾಟಿಕೊಂಡು ಒಳಬಂದಿತು. ಬಹುಶಃ ಅವನೇ ಡಾಕ್ಟರ್ ಇರಬೇಕು ಅಂತ ಊಹಿಸಿದೆ. ಬಂದವನೇ ಆತ ಬೈಕು ನಿಲ್ಲಿಸಿ ಕಾರ್ಯಕರ್ತೆಯರೊಂದಿಗೆ ಏನೇನೋ ಮಾತುಕತೆಯಾಡಿ ತಗಡಿನ ಬಾಗಿಲಿರುವ ಬಾತರೂಮಿಗೆ ಹೋಗಿ ಫ್ರೆಶ್ ಆಗಿ ಕೈತೊಳೆದುಕೊಂಡು ಸ್ಯಾನಿಟೈಜರ್ ಉಜ್ಜಿಕೊಂಡು ಪುನಃ ಒಳಹೋದ. ಯಾವಾಗ ಲಸಿಕೆ ಶುರುವಾಗುತ್ತದೆ ಎಂದು ಕೇಳಿದ್ದಕ್ಕೆ ಸ್ವಲ್ಪ ಸಮಯವಾಗುತ್ತದೆ ಎಂಬ ಉತ್ತರ ಬಂತು. ಆತನೇ ಡಾಕ್ಟರ್ ಎಂಬುದೂ ಅಕ್ಕಪಕ್ಕದವರಿಂದ ಗೊತ್ತಾಯ್ತು.
ಆ ಕಾರ್ಯಕರ್ತೆಯರಿಬ್ಬರೂ ಹೆಗಲಿನ ಬ್ಯಾಗುಗಳಲ್ಲಿ ಮತ್ತು ಕೈಯಲ್ಲಿ ಕ್ಯಾನುಗಳಂಥವುಗಳನ್ನು ಹೊತ್ತುಕೊಂಡು ಹೊರಟುಹೋದ ಬಳಿಕ ಈ ಡಾಕ್ಟರ್ ಲಗುಬಗೆಯಿಂದ ಇನ್ನೊಂದು ಕೋಣೆಯ ಬಾಗಿಲು ತೆರೆದು, ಕಸಪೊರಕೆಯನ್ನು ತಗೊಂಡು ಮೊದಲಿನ ಕೊಠಡಿಗೆ ಹೋದ. ಪುಟ್ಟ ಕೊಠಡಿಯ ತುಂಬ ಹರವಿದ್ದ ಹಿಂದಿನ ದಿನ ಬಳಸಿ ಬಿಸಾಡಿದ ವೈದ್ಯಲೋಕದ ಕಸವನ್ನೆಲ್ಲ ದೊಡ್ದ ದೊಡ್ಡ ಪಾಲಿಥೀನ್ ಚೀಲಗಳಲ್ಲಿ ತುಂಬಿಸಿ ಹೊರಹಾಕುವ ಕಾರ್ಯದಲ್ಲಿ ನಿರತನಾದ. ಅಲ್ಲೇ ಹೊರಗೆ ಪಾಳಿಗೆ ಕುಳಿತವನೊಬ್ಬನನ್ನು ಇಲ್ಲಿ ಬಾ ಅಂತ ಕರೆದು ಕಸದ ವಿಲೇವಾರಿಯನ್ನು ಮಾಡಿಸಿ, ತಾನೇ ಕಸಗುಡಿಸಿ ಒಂದೆಡೆ ಗುಂಪುಹಾಕಿದ. ಈ ಆರೋಗ್ಯ ಕೇಂದ್ರಕ್ಕೆ ಕಸಗುಡಿಸುವ ಮೇಲಿನ ಉಸ್ತುವಾರಿ ನೋಡಿಕೊಳ್ಳುವ ಒಬ್ಬ ಸಹಾಯಕರೂ ಇಲ್ಲವೇ ಎಂದು ಯೋಚಿಸುತ್ತಿದ್ದೆ. ಆದರೆ ಆತ ಯಾವ ಎಗ್ಗೂ ಇಲ್ಲದೇ ಕಸಗುಡಿಸಿ ಸ್ವಚ್ಚಗೊಳಿಸುವುದನ್ನು ಕಂಡ ಒಬ್ಬರು ಏನೋ ಕೇಳಿದರು. ಅದಕ್ಕೆ ಆ ಡಾಕ್ಟರು, ‘ಅಚಾನಕ್ಕಾಗಿ ಯಾರಾದರೂ ಪರಿವೀಕ್ಷಣೆಗೆ ಬಂದರೆ ನಮ್ಮ ಗತಿ ಮುಗೀತು ಅಂತ ಉತ್ತರಿಸಿದನೆ ಹೊರತು ಗೊಣಗಲಿಲ್ಲ, ಯಾರನ್ನೂ ದೂರಲಿಲ್ಲ. ಅಸಮಾಧಾನ ವ್ಯಕ್ತಪಡಿಸಲಿಲ್ಲ. ಅದು ತನ್ನ ಕರ್ತವ್ಯವೆಂಬಂತೆ ಕಸಗುಡಿಸಿದವನೇ ಲಸಿಕೆಯ ಕಾರ್ಯಕ್ರಮವನ್ನು ಆರಂಭಿಸಿದ. ಮೊದಲಿಗೆ ಕಂಪ್ಯೂಟರಿನಲ್ಲಿ ಎಲ್ಲರ ಹೆಸರು ಆಧಾರ್ ನಂಬರಿನಿಂದ ನೋಂದಾಯಿಸಿ ಕೂತಿರಿ ಅಂತ ಕೂರಿಸಿದ. ನಾನು ಆಫೀಸಿಗೆ ಹೋಗಬೇಕು ಅಂತ ವಿನಂತಿಸಿಕೊಂಡಿದ್ದಕ್ಕೆ ಇನ್ನೊಂದು ಕೊಠಡಿಯಲ್ಲಿ ಕೂತಿರಿ ಬಂದೆ ಎಂದು ಕಳಿಸಿ ಒಂದೈದು ನಿಮಿಷದಲ್ಲಿ ಬಂದು ಲಸಿಕೆ ಹಾಕಿ ಹೋದ. ಅಷ್ಟೊತ್ತಿಗೆ ಹತ್ತೂವರೆ ಆಗುತ್ತಿತ್ತು. ನರ್ಸೊಬ್ಬಳು ಅಯ್ಯೋ ತಡವಾಗಿಹೋಯ್ತು ಎನ್ನುತ್ತ ಬಂದು ಗುಡಿಸಿ ಸ್ವಚ್ಚಗೊಳಿಸಿದ ಕೊಠಡಿಯಲ್ಲಿ ಪ್ರತ್ಯಕ್ಷವಾದಳು. ಸರಿ ಸರಿ ಮುಂದಿನ ಲಸಿಕೆ ಹಾಕುವುದನ್ನು ಆರಂಭಿಸು’ ಅಂತ ಹೇಳಿದ ಡಾಕ್ಟರ್ ಮತ್ತೆ ಹೆಸರು ನೋಂದಾಯಿಸುತ್ತಿದ್ದ ಕೊಠಡಿಗೆ ಮರಳಿದ.
ಮತ್ತೆ ನಮ್ಮ ಮನೆ ಹಿಂದಿನ ಗಡ್ಡದ ಸಾಬರು ನೆನಪಾದರು. ಸಣ್ಣಮಕ್ಕಳಿಗೆ ದೃಷ್ಟಿಯಾಯಿತೆಂದು, ದೊಡ್ದವರಿಗೆ ಗಾಳಿ ಸೋಕಿತೆಂದು ನವಿಲುಗರಿಯಿಂದ ಮೂರು ಸಲ ಬೆನ್ನಿಗೆ ಬಾರಿಸಿ ಅಲ್ಲಾಹುವಿನಲ್ಲಿ ಪ್ರಾರ್ಥನೆ ಸಲ್ಲಿಸಿ ಸಕ್ಕರೆ ಊದಿ ಕಳಿಸುತ್ತಿದ್ದರು. ಇಲ್ಲ ಕರಿ ದಾರ ಕಟ್ಟಿಕೊಳ್ಳಲು ಕೊಡುತ್ತಿದ್ದರು. ನಾವೆಲ್ಲ ಸಣ್ಣವರಿರುವಾಗ ಕೊರಳಲ್ಲಿ ಕರಿ ದಾರ , ಮಣಿ ಸರ್ ಇಲ್ಲಾ ಆಯತಾಕಾರದ ಸಣ್ಣ ತಾಯಿತಗಳೋ ಇರ್ತಿದ್ದವು. ಈಗ ಗಡ್ಡೇಸಾಬರೂ ಇಲ್ಲ, ಸಣ್ಣ ಸಣ್ಣಕಾಯಿಲೆ ಕಸಾಲೆಗಳನ್ನು, ಇತರ ತಾಪತ್ರಯಗಳನ್ನು ಛೂ ಮಂತರ್ ಮಾಡಬಲ್ಲ ಹಿರಿಯರು ಯಾರೂ ಇಲ್ಲ.
ಈಗಲೂ ಯೋಚಿಸುತ್ತಿದ್ದೇನೆ. ಈಗಲೂ ಜನ ಹಳ್ಳಿಗಳಿಗೆ ಕೊರೋನಾ ಬರುವುದಿಲ್ಲವೆಂದೇ ನಂಬಿದ್ದಾರೆ. ದೇವರು ಸಿಟ್ಟಾಗಿದ್ದಕ್ಕೆ ಕೊರೋನಾ ಬಂದಿದೆ ಎಂದು ನಂಬಿದ ವೃದ್ಧರಿದ್ದಾರೆ. ಆಸ್ಪತ್ರೆಗೆ ಹೋದರೆ ಸಾಯಿಸ್ತಾರೆ ಎಂದು ಜ್ವರ ಬಂದರೂ ತೋರಿಸಿಕೊಳ್ಳುತ್ತಿಲ್ಲ. ಹೊರಗೆ ಜನ ಕೋರೋನಾಗಿಂತ ಹೆಚ್ಚಾಗಿ ಆಕ್ಸಿಜನ್ ಸಿಗದೆ ಸಾಯುತ್ತಿದ್ದಾರೆ. ಹೈಕೋರ್ಟ್ ಕೇಂದ್ರಕ್ಕೆ ವಾರ್ನಿಂಗ್ ಕೋಡುತ್ತಿದೆ. ಕೊರೋನಾದ ಎರಡನೇ ಅಲೆ ವೇಗವಾಗಿ ಹರಡುತ್ತ ಅದೆಷ್ಟೋ ಆತ್ಮೀಯರು, ಪರಿಚಿತರು ಮೊನ್ನೆ ಮೊನ್ನೆ ಇದ್ದವರು ಇವತ್ತು ಇಲ್ಲವಾಗಿದ್ದಾರೆ. ಸಾವಿಗೂ ತಮಗೂ ಸಂಬಂಧವೇ ಇಲ್ಲದಂತೆ ದಲ್ಲಾಳಿಗಳು ಕಾಳಸಂತೆಯಲ್ಲಿ ಆಸ್ಪತ್ರೆಯ ಬೆಡ್, ಆಕ್ಸಿಜನ್ ಸಿಲಿಂಡರ್ ದುಪ್ಪಟ್ಟು ತಿಪ್ಪಟ್ಟು ಬೆಲೆಗೆ ಮಾರಿಕೊಳ್ಳಲು ನಿಂತಿದ್ದಾರೆ. ಶವದಹನಕ್ಕೆ ಕಟ್ಟಿಗೆ ಸಿಗುತ್ತಿಲ್ಲ, ಸುಡಲು ಜಾಗವಿರದೇ ‘ಹೌಸ್‍ಫುಲ್’ ಫಲಕ ಹಾಕಬೇಕಾದ ಸ್ಥಿತಿ ಬಂದಿದೆ. ರಾಜ್ಯದ ಅದೆಷ್ಟೋ ಯೋಜನೆಗಳಿಗೆ ಪೋಲಾಗುವ ಹಣವನ್ನು ಆರೋಗ್ಯ ಕೇಂದ್ರಗಳ ಸುಧಾರಣೆಗೆ, ಸವಲತ್ತುಗಳಿಗೆ ವಿನಿಯೋಗಿಸಿದ್ದರೆ ಇವತ್ತು ಇಂಥ ಸಂಕಟದ ದುಸ್ಥಿತಿ ಬರುತ್ತಿರಲಿಲ್ಲ. ದೊಡ್ದ ದೊಡ್ದ ಆಸ್ಪತ್ರೆಗಳೂ ಕೈಚೆಲ್ಲಿವೆ. ಕೆಲವು ವ್ಯಾಪಾರಕ್ಕಿಳಿದಿವೆ. ಯಾರೂ ಯಾರೋ ನಿಮಗೆ ಬೆಡ್ ಕೊಡಿಸ್ತೇವೆ, ನಿಮಗೆ ಆಕ್ಸಿಜನ್ ಕೊಡಿಸ್ತೇವೆ, ಲಕ್ಷ ಕೊಡಿ ಮೂರು ಲಕ್ಷ ಕೊಡಿ ಎಂದು ಇಂಥ ಸಮಯದಲ್ಲೂ ದೋಚುತ್ತಿದ್ದಾರೆ. ಹಣಮಾಡುವ ದಂಧೆಗಿಳಿದಿದ್ದಾರೆ. ಮಾನವೀಯತೆಯೇ ಸತ್ತುಹೋದ ಜನರು ಏನನ್ನು ಮಾಡಲೂ ಹೇಸುವುದಿಲ್ಲ ಎಂಬುದು ಕಣ್ಣ ಮುಂದೆಯೇ ಇದೆ.
ಯಾವ ಸೌಲಭ್ಯವೂ ಇರದ ಸಣ್ಣ ಪುಟ್ಟ ಆರೋಗ್ಯ ಕೇಂದ್ರದಲ್ಲಿ ತಾವೇ ಕಸಗುಡಿಸಿಕೊಂಡು ತಮ್ಮ ಜೀವವನ್ನು ಒತ್ತೆಯಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗೆ, ನರ್ಸುಗಳಿಗೆಲ್ಲರಿಗೂ ಸಲಾಂ. ಈ ತಲೆಮಾರು ಹಿಂದೆಂದೂ ಕಾಣದ ಭೀಭತ್ಸತೆ ಕಣ್ಣೆದುರಿಗಿದೆ. ಮನುಷ್ಯ ಮನುಷ್ಯನನ್ನು ನಂಬದ ಕಾಲ. ಮನುಕುಲದ ಅಹಂಕಾರಕ್ಕೆ ಸವಾಲೆಸಿದಿರುವ ಕೋರೋನಾ ಕಾಲ ಬದುಕಿನ ನಶ್ವರತೆಯ ದರ್ಶನದ ಕಾಲವೂ ಹೌದು.
ಇದನ್ನೂ ಓದಿ :Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ನಾವೆಲ್ಲಾ ಕೋವಿಡ್ ‘ವರಿಯರ್ಸ್’ ಅವರೆಲ್ಲಾ ‘ವಾರಿಯರ್ಸ್’
Published On - 6:57 pm, Sun, 23 May 21