ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ, ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಮತ್ತು ಸಾರ್ವಜನಿಕ ಸೇವಾ ಕ್ಷೇತ್ರಗಳ ದೃಷ್ಟಿಯಲ್ಲಿ ಯೋಚಿಸಿ. ಗಂಟಲಿನ ಪಡಕಗಳತನಕ ಬಂದುಕುಳಿತ ನೋವುಗಳಿಗೆ ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು, ವಾಸ್ತವ ಸಂಗತಿಗಳಿಗೆ ಪರಿಹಾರ ಸಿಗುವುದು. ಈ ಹಿನ್ನೆಲೆಯಲ್ಲಿ ರೂಪಿಸಿರುವ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ಸರಣಿಯಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ ಮತ್ತು ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡವರ ಬದುಕು ಬವಣೆ ಮತ್ತು ಅಂತರಂಗದ ತುಣುಕುಗಳು ಇಲ್ಲಿರುತ್ತವೆ.
ತುಣುಕುಗಳು ಎಂದು ಹೇಳಲು ಕಾರಣವಿದೆ; ನಮಗಾದ ಅನ್ಯಾಯ, ನೋವು ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿನ್ನೂ ಇಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡಿರುವ ಯಾರ ಆಂತರ್ಯಕ್ಕೂ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶ ಕೂಡ ಇಲ್ಲಿದೆ. ಇ ಮೇಲ್ : tv9kannadadigital@gmail.com
*
ಬೆಂಗಳೂರಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ, ಲೇಖಕಿ ಡಾ. ಶಾಂತಲಾ ಅನಿಲ್ ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಬವಣೆಯನ್ನಿಲ್ಲಿ ಹಂಚಿಕೊಂಡಿದ್ದಾರೆ.
*
ಮಾರ್ಚ್ 25, 2020
“ಕೋವಿಡ್ ಪ್ರಯುಕ್ತ lockdown ಆಗಿದೆ. ಆಸ್ಪತ್ರೆ ಹೆಂಗೆ ನಡೆಯುತ್ತೋ ಗೊತ್ತಿಲ್ಲ . ಹೀಗಾಗಿ ಇನ್ನು ಮುಂದೆ ನಿಮ್ಮ ಸಂಬಳವನ್ನು ಶೇ 50 ಕಡಿತ ಮಾಡಲು ನಿರ್ಧರಿಸಿದ್ದೇವೆ.”
‘ಓಕೆ ಅರ್ಥ ಆಗತ್ತೆ. ಎಲ್ಲರಿಗೂ ಕಷ್ಟ ಅಲ್ವಾ? ಪರವಾಗಿಲ್ಲ. ಅಡ್ಜಸ್ಟ್ ಮಾಡ್ಕೊತೀನಿ” ಹೊರ ರೋಗಿಗಳನ್ನು ನೋಡುವುದು, ಹೆರಿಗೆ ಮಾಡಿಸುವುದು, ಮಧ್ಯರಾತ್ರಿಯಲ್ಲಿ ಹೋಗಿ ಸಿಜೇರಿಯನ್ ಮಾಡೋದು, ವಿಭಾಗದ ಮುಖ್ಯಸ್ಥೆಯಾಗಿ ಅದರ ನಿರ್ವಹಣೆ. ಪೂರ್ತಿ ಸಂಬಳವೋ, ಅರ್ಧವೋ, ಇವೆಲ್ಲಕ್ಕೂ ಯಾವ ರಿಯಾಯಿತಿಯೂ ಇಲ್ಲದೆ ಯಥಾಪ್ರಕಾರ ನಡೆಸಿಕೊಂಡು ಹೋಗಲೇಬೇಕು. ಇನ್ನೂ ಜವಾಬ್ದಾರಿ ಹೆಚ್ಚೇ. ಸೋಂಕಿನ ಮಧ್ಯ ಕೆಲಸ ಮಾಡುವಾಗ ಕೇವಲ ನನ್ನ ಸುರಕ್ಷತೆ ಅಲ್ಲ, ನನ್ನ ಟೀಂನಲ್ಲಿ ಎಲ್ಲರೂ ಸುರಕ್ಷಿತವಾದ ಉಡುಪುಗಳನ್ನು ಹಾಕಿಕೊಳ್ಳುತ್ತಿದ್ದಾರೆಯೇ? ಕಿರಿಯ ವೈದ್ಯರು, ಲೇಬರ್ ಕೋಣೆಯ ದಾದಿಯರು ರೋಗಿಗಳೊಂದಿಗೆ ವ್ಯವಹಾರಿಸುವಾಗ ಜಾಗರೂಕತೆಯಿಂದ ಇರುತ್ತಾರೆಯೇ ಎಂಬ ಚಿಂತೆ. Social distance, hand sanitization, mask ಎಂಬ ಹೊಸ ಪದಗಳು, ಆಚಾರಗಳು ಶುರುವಾದವು. ಇವೆಲ್ಲವೂ ನನ್ನ ತಂಡ ಸರಿಯಾಗಿ ಪಾಲಿಸುವಂತೆ ಮೇಲುಸ್ತುವಾರಿಯ ಹೊಣೆ.
ಏಪ್ರಿಲ್ ಮೊದಲನೆಯ ವಾರ
ಮತ್ತೆ ಮ್ಯಾನೇಜ್ಮೆಂಟ್ ಕರೆ.
“ಶೇ 50 ಕಡಿತ ಮಾಡಿದರೂ, ನಿಮಗೆ ಇಂತಿಷ್ಟು ಅಂತ ನಿಗದಿತ ಸಂಬಳ ಇನ್ನು ಮುಂದೆ ಕೊಡಲಾಗುವುದಿಲ್ಲ. ನೀವು ಎಷ್ಟು ರೋಗಿಗಳನ್ನು ನೋಡುತ್ತೀರೋ, ಎಷ್ಟು ಕೇಸಸ್ ನಿರ್ವಹಿಸುತ್ತೀರೋ ಅದರ ಪ್ರಕಾರ ಸಂಭಾವನೆ ಕೊಡಲಾಗುತ್ತದೆ. Fee for service ಅಷ್ಟೇ. ಬೇರೆ ಆಸ್ಪತ್ರೆಗಳಲ್ಲೂ ಹೀಗೇ ಮಾಡಿದ್ದಾರೆ.” ಮಾಡುವ ಕೆಲಸಕ್ಕೆ ಮಾತ್ರ ಸಂಬಳ. ಸೋಂಕಿನ ಮಧ್ಯೆ ಕೆಲಸ ಮಾಡುವುದಕ್ಕೆ ಸಂಬಳದಲ್ಲಿ ಬಡ್ತಿ ಇರಲಿ, ಕಡಿತ ತಂದರು. ಸಮುದ್ರದ ಮಧ್ಯದಲ್ಲಿ, “ನಿಮಗೆ ನಮ್ಮ ಹಡಗಿನ ಹೊಸ ನಿರ್ಬಂಧಗಳು ಒಪ್ಪಿಗೆಯಾಗದಿದ್ದಲ್ಲಿ, ಬೇಕಿದ್ದರೆ ಇಲ್ಲಿಯೇ ಧುಮುಕಿ ದಡ ಸೇರಿಕೊಳ್ಳಬಹುದು” ಎಂದರೆ ಬೇರೇನು ಆಯ್ಕೆ ಇರುತ್ತದೆ?
“ಸರಿ” ಹಾಗನ್ನದೆ ವಿಧಿಯಿತ್ತೇ? ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಎಲ್ಲಿಯ Job Security? ಈ ಪರಿಸ್ಥಿತಿಯಲ್ಲಿ Health Security ಯೂ ಇಲ್ಲ! ಸತತವಾಗಿ ಕೋವಿಡ್ ಕೇಸ್ಗಳು ಹೆಚ್ಚಾಗುತ್ತಿದ್ದವು. ಹೀಗಾಗಿ ವೈದ್ಯಕೀಯ ಕೆಲಸವನ್ನು ನಿರ್ವಹಿಸುವಲ್ಲಿಯೂ ಹಿಂದೆಂದೂ ಊಹಿಸದ ಬದಲಾವಣೆಗಳಾಗುತ್ತಾ ಹೋದವು.
“ನೀವೆಲ್ಲ ನಮಗೋಸ್ಕರ ಮನೆಯಲ್ಲಿರಿ. ನಾನು ನಿಮಗೋಸ್ಕರ ಕೆಲಸಕ್ಕೆ ಬರುತ್ತೇನೆ’’ ಎಂದು ಮುಗುಳು ನಗುತ್ತಾ ವಿಡಿಯೋ ಏನೋ ಮಾಡಿ ಜಾಲತಾಣಗಳಲ್ಲಿ ಹಚ್ಚಿಕೊಂಡಿದಾಯ್ತು. ಆದರೆ ‘ಕೆಲಸಕ್ಕೆ ಬರುತ್ತೇನೆ’ ಕ್ರಿಯೆಯಲ್ಲಿಯೇ ಅನೇಕ ಕ್ರಮಗಳನ್ನು ರೂಡಿಸಿಕೊಳ್ಳಬೇಕಿತ್ತು. ಕಾರಿನ ಗಾಜಿನ ಮೇಲೆ “On Covid Duty’’ ಎಂಬ ಸ್ಟಿಕ್ಕರ್ ಲಗತ್ತಿಸಿಕೊಂಡು ಪ್ರತಿದಿನ ಜನ-ನಿಬಿಡ ರಸ್ತೆಗಳಲ್ಲಿ, ನಾಕಾಬಂದಿ/ಪೊಲೀಸ್ ಹಾಗೂ ಟ್ರಾಫಿಕ್ ವಾರ್ಡನ್ಗಳನ್ನು ದಾಟಿಕೊಂಡು ಕಾರು ಓಡಿಸುವಾಗ, ವಿಚಿತ್ರ ಉದ್ವಿಗ್ನ. ಮೊದಲೆಲ್ಲಾ ಗಿಜ-ಗಿಜ ಎನ್ನುತ್ತಿದ್ದ ರಸ್ತೆಗಳು ಭಯದಿಂದ ಮಲಗಿಬಿಟ್ಟಿದ್ದವೇನೋ ಎಂದನಿಸುತಿತ್ತು.
ಆಸ್ಪತ್ರೆಯ ಬಾಗಿಲಲ್ಲೇ ಟೆಂಪರೇಚರ್ ತಪಾಸಣೆ ಮಾಡುವ ಸಿಬ್ಬಂದಿಯನ್ನು ವಂದಿಸಿ ಒಳಗೆ ಹೋದರೆ Social distance ಎಂದು ದೂರ ದೂರ ನಿಲ್ಲುವ ಜನಗಳು. ಫೀವರ್ ಕ್ಲಿನಿಕ್ ಎಂಬೊಂದು ಹೊಸ ಕೋಣೆ ತಯಾರಾಗಿತ್ತು. ಮಾಮೂಲಿನ ಸಮವಸ್ತ್ರಗಳ ಮೇಲೆ ನೀಲಿ ಏಪ್ರನ್, ತಲೆಗೆ ಟೋಪಿ, ಮುಖಕ್ಕೆ ಮಾಸ್ಕ್, ಕೈಗಳಿಗೆ ಗ್ಲೋವ್ಸ್ ಹಾಕಿಕೊಂಡು ಓಡಾಡುವ ದಾದಿಯರು, ಅವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿತ್ತು. ಕೆಲವರನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆ ವರ್ಗಾಯಿಸಿದ್ದರೆ, ಅನೇಕರು ರಾಜೀನಾಮೆ ಕೊಟ್ಟು ತಮ್ಮ ಊರುಗಳಿಗೆ ಹೊರಟುಹೋಗಿದ್ದರು. ಇನ್ನು, “ಅರೆ ಆ.. ಸಿಸ್ಟರ್ ಯಾಕೆ ನಿನ್ನೆಯಿಂದ ಕಾಣುತ್ತಿಲ್ಲ?” ಎಂದು ಕೇಳಿದರೆ, “ನಿನ್ನೆ ಅವರಿಗೆ ಪಾಸಿಟಿವ್ ಬಂತು” ಎಂಬ ಉತ್ತರ! ಹಿಂದೆಯೇ ನಾನವರೊಂದಿಗೆ ಯಾವಾಗ, ಎಲ್ಲಿ, ಎಷ್ಟು ಹೊತ್ತು ವ್ಯವಹರಿಸಿದ್ದೆ? ಸೂಕ್ತ ಸುರಕ್ಷಿತ ಕ್ರಮಗಳನ್ನು ತೆಗೆದುಕೊಂಡಿದ್ದೆನೆ? ಎಂಬ ಚಿಂತೆ ಸತತವಾಗಿ ಕಾಡಲು ಶುರು. ಹೀಗೇ, ಪ್ರತಿ ನಿಮಿಷವೂ ಸೋಂಕಿನ ಇರುವನ್ನು ಜ್ಞಾಪಿಸುವ ಅನೇಕ ಸಂಕೇತಗಳು. ವೈದ್ಯಕೀಯ ಕರ್ತವ್ಯ ನಿರ್ವಹಣೆಯ ವೈಖರಿಯೇ ಕ್ರಮೇಣ ಬದಲಾಗುತ್ತಿತ್ತು. ವೈಯಕ್ತಿಕ ಅಭ್ಯಾಸಗಳನ್ನೂ ಬದಲಾಯಿಸಿಕೊಳ್ಳುವುದು ಅನಿವಾರ್ಯವಾಯಿತು.
ಕಳೆದ ವರ್ಷದ Hospital day ಸಮಾರಂಭದಲ್ಲಿ “Style Talaiva’’ ಅಂತ ನನಗೆ ಬಿರುದಿಟ್ಟು ಪ್ರೈಝ್ ಕೊಟ್ಟಿದ್ದರು. ಕಾರಣ ಪ್ರತಿ ದಿನವೂ ಬೇಜಾರಿಲ್ಲದೆ, ಉತ್ಸಾಹದಿಂದ ತರಹಾವರಿ ಬಟ್ಟೆಗಳು, ಅದಕ್ಕೊಪ್ಪುವಂತೆ ಸರ, ಉಂಗುರ, ವಾಚ್ ಧರಿಸಿ, ಪರ್ಸ್ ಮತ್ತು ಚಪ್ಪಲಿ ಮ್ಯಾಚ್ ಮಾಡಿಕೊಂಡು ಆಸ್ಪತ್ರೆಗೆ ಹೋಗುತ್ತಿದ್ದವಳು ನಾನು. ಕೋವಿಡ್ ಅಲೆ ಆರಂಭವಾಗುತ್ತಲೇ ಎಲ್ಲವೂ Naphthalene balls ಸಂಗಡ ಕಪಾಟು ಸೇರಿ ಸೆಟಗೊಂಡು ಕುಳಿತವು.
ದಿನನಿತ್ಯ ಚಿಟ್ಟು ಹಿಡಿಸುವ ನೀಲಿ ಅಥವಾ ಹಸಿರು ಬಣ್ಣದ scrubs. ಬಿಗಿಯಾಗಿ ಹಿಂದಕ್ಕೆಳೆದು ಕಟ್ಟಿಕೊಂಡ ಪುಟ್ಟ ಜುಟ್ಟು. ಮೂಗು, ಬಾಯಿ, ಗದ್ದಗಳನ್ನು ಗಟ್ಟಿಯಾಗಿ ಮುಚ್ಚುವಂತಹ ಮಾಸ್ಕ್. ಉಂಗುರ, ವಾಚ್ಗಳ ಕಾಲವೂ ಮುಗಿದಿತ್ತು. ಕೇವಲ ಮೊಬೈಲ್, ಒಂದು Pen, Sanitizer ಮತ್ತು ಕಾರಿನ key – ಇವಿಷ್ಟನ್ನೇ ಆಸ್ಪತ್ರೆಯೊಳಗೆ ತೆಗೆದುಕೊಂಡು ಹೋಗುತ್ತಿದೆ, ಸಂಬಳ ಕಮ್ಮಿ, ಪ್ರಕ್ಷುಬ್ಧ ವಾತಾವರಣದಲ್ಲಿ ಹೋರಾಟ, ವ್ಯಕ್ತಿತ್ವವನ್ನೇ ಕಳೆದು ಹಾಕಿದ ಉಡುಪುಗಳು; “ವೈದ್ಯ ಸನ್ಯಾಸ”, “Medical Asceticism” ಎಂಬ ಗುಣವಾಚಕ ಸದಾ ಮನಸಿನಲ್ಲಿ ಹಾಯ್ದು ಹೋಗುತ್ತಿತ್ತು.
ಆಸ್ಪತ್ರೆಯಲ್ಲಿ ಕೆಲಸ ಶುರು ಮಾಡಿಕೊಳ್ಳುವ ಮುನ್ನ Scrubs ಮೇಲೆ ಮತ್ತೊಂದು ಮೈಮುಚ್ಚ Apron, ಕೈಗಳಿಗೆ ಗ್ಲೋವ್ಸ್, ತಲೆಗೆ ಟೋಪಿ ಹಾಕಿಕೊಂಡು, ಸಮವಸ್ತ್ರದಲ್ಲಿ ವ್ಯಕ್ತಿತ್ವವನ್ನು ಕಳೆದುಕೊಂಡರೆ, ಇನ್ನು ಕೆಲಸ ಮುಗಿದ ಮೇಲೆಯೇ ಅವುಗಳನ್ನು ತೆಗೆಯುವುದು. ಮನೆಯೊಳಗೆ ಹೋಗುವುದಕ್ಕೂ ಒಂದು ಶಿಷ್ಟಾಚಾರ. ಹೊರಗಡೆಯೇ ಸೋಪು ನೀರಿನಲ್ಲಿ ಕೈ-ಕಾಲು ತೊಳೆಯುತ್ತಿದ್ದೆ (ಸುತ್ತ ಮುತ್ತ ಯಾರಾದರೂ ನೋಡುತ್ತಿದ್ದಾರೆಯೇ? ಎಂದೊಮ್ಮೆ ಕಣ್ಣಾಡಿಸುತ್ತಿದ್ದೆ. ಡಾಕ್ಟರ್ ಆಸ್ಪತ್ರೆಯಿಂದ ಸೋಂಕು ತಂದು ನಮ್ಮೆಲ್ಲರಿಗೂ ಹಬ್ಬಿಸುತ್ತಾರೆ ಎಂದು ನೆರೆಹೊರೆಯವರು ಗಲಾಟೆ ಮಾಡುವರೇನೋ ಎಂಬ ಭಯ!), ಯಾರನ್ನೂ ಮುಟ್ಟಿಸಿಕೊಳ್ಳದೆ ಸರಸರಾಂತ ಸ್ನಾನದ ಕೋಣೆ ಹೊಕ್ಕು, ಒಳಉಡುಪುಗಳೂ ಸೇರಿದಂತೆ ಧರಿಸಿರುವ Scrubs ಅನ್ನು ಬಿಸಿನೀರಿನಲ್ಲಿ ಒಗೆದು, ತಲೆಸ್ನಾನ ಮಾಡಿಕೊಂಡು ಊಟಕ್ಕೆ ಕೂರುವ ಹೊತ್ತಿಗೆ ಹಸಿವೆಯೂ ಹಾರಿಹೋಗಿರುತ್ತಿತ್ತು. ದಿನವೂ ಎರಡು ಬಾರಿ ಸ್ನಾನವಲ್ಲದೆ, ರಾತ್ರಿ ಏನಾದರೂ ಕೇಸ್ ಬಂದು ಆಸ್ಪತ್ರೆಗೆ ಹೋಗಿ ಬಂದೆನೆಂದರೆ, ಮಧ್ಯರಾತ್ರಿ ಮತ್ತೊಮ್ಮೆ Scrubs ಒಗೆದು, ತಲೆ ಸ್ನಾನ ಮಾಡಬೇಕಿತ್ತು!
“ಡಾಕ್ಟ್ರೆ, ನಿಮ್ಮನ್ನು ನೋಡಿದರೆ ಅರ್ಧ ಕಾಯಿಲೆ ವಾಸಿಯದಂತೆ” ಎನ್ನುವವರು ನಮ್ಮನ್ನು ಈಗ ಗುರುತೇ ಹಿಡಿಯದಂತಹ ಪೋಷಾಕನ್ನು ಧರಿಸುವ ಅನಿವಾರ್ಯ. “ನಿಮ್ಮ ಮುಗುಳ್ನಗೆ ನಮ್ಮಲ್ಲಿ ವಿಶ್ವಾಸ ಮೂಡಿಸತ್ತೆ. ನೀವ್ ಒಂದ್ಸತಿ ಮುಟ್ಟಿ ನೋಡಿ ಡಾಕ್ಟ್ರೆ, ನನಗೆ ಎಷ್ಟೋ ಸಮಾಧಾನ” ಎಂದು ಅನ್ನುತ್ತಿದ್ದ ಕಾಲವೆಲ್ಲ ಹೋಯ್ತು. ಸದ್ಯ! ನಮ್ಮ ಮಾಸ್ಕಿನ ಹಿಂದಿರುವುದು ವಿಷಾದದ ನಗೆ ಎನ್ನುವುದು ಅವರಿಗೆ ತಿಳಿಯದು. ಸಾಮಾಜಿಕ ಅಂತರವೆಂದು ನಾನು ಅವರನ್ನು ಹೆಚ್ಚು ಹೊತ್ತು ಮುಟ್ಟಿ ಪರೀಕ್ಷಿಸಲೂಬಾರದು. ನನ್ನ ಜೀವನದಲ್ಲಿಯೇ ಪರೀಕ್ಷಾ ಕೊಠಡಿಯ ಬಾಗಿಲು ತೆರೆದುಕೊಂಡು ರೋಗಿಗಳನ್ನು ಸಂದರ್ಶಿಸಿದವಳಲ್ಲ. ಈಗ ಅದರ ಅನಿವಾರ್ಯತೆ. ಕಾರ್ಯ ವಿಧಾನಗಳಲ್ಲಿ ಬದಲಾವಣೆಗಳನ್ನು ರೂಢಿಸಿಕೊಳ್ಳುವಷ್ಟರಲ್ಲಿ ಕೊರೋನಾ ಹೆಚ್ಚುತ್ತಾ ಹೋಯಿತು.
ಪುಸ್ತಕಗಳಲ್ಲಿ ಓದಿರದ ಹೊಸ ಕಾಯಿಲೆ, ಪ್ರಸೂತಿ-ಸ್ತ್ರೀ ರೋಗ ತಜ್ಞೆಯಾದ್ದರಿಂದ Covid ರೋಗಿಗಳ ಚಿಕಿತ್ಸೆಯಲ್ಲಿ ನೇರವಾಗಿ ತೊಡಗಿಸಿಕೊಳ್ಳದಿದ್ದರೂ ಹೆರಿಗೆಗೆ ಬರುವವರು, ಹೊರರೋಗಿಗಳಾಗಿ ಬರುವವರಿಗೆ ಸೋಂಕು ಇದ್ದಿರಬಹುದು. ತಮಗೆ ಜ್ವರವಿದೆ ಎಂದು ಮುಚ್ಚಿಟ್ಟವರು, ಬೇರೆ ಊರಿಗೆ ಹೋಗಿ-ಬಂದಿದ್ದೇವೆ ಎಂದು ಹೇಳದಿದ್ದವರು ಅಥವಾ ನಿಜವಾಗಲೂ ತಮಗೆ ಸೋಂಕಿರುವುದು ತಿಳಿಯದಿದ್ದವರು… ಇವರೆಲ್ಲರನ್ನೂ ತಪಾಸಣೆ ಮಾಡುವಾಗ ಅರೆಕ್ಷಣ ಎಚ್ಚರ ತಪ್ಪಿದರೂ ನನಗೆ ಸೋಂಕು ತಗಲುವುದು ಖಚಿತ ಎಂಬ ಅರಿವು, ಭಯ ಸದಾ.
ಮೊದಲೆಲ್ಲಾ ಆಪರೇಷನ್ ಥಿಯೇಟರ್ಗೆ ಹೋಗಿ ಕೇಸ್ ನಿರ್ವಹಿಸಬೇಕೆಂದರೆ ಏನೋ ಹುಮ್ಮಸ್ಸು, ಸವಾಲು ಎದುರಿಸಿ ಜಯಭೇರಿ ಬಾರಿಸಬೇಕೆಂಬ ಛಲವಿರುತ್ತಿತ್ತು. ಆದರೆ ಕೊರೋನಾ ವಾತಾವರಣದಲ್ಲಿ ಆ PPE (Personal Protective Equipment) ದಿರಿಸನ್ನು ತೊಟ್ಟು ಶಸ್ತ್ರಚಿಕಿತ್ಸೆ ಮಾಡುವುದು ಒಂದು ದೊಡ್ಡ ಹಿಂಸೆ! 30-40 ನಿಮಿಷಗಳ ಒಂದು cesarean ಮಾಡುವುದೂ ಹರಸಾಹಸವೆಂಬಂತೆ ಭಾಸವಾಗುತ್ತಿತ್ತು. ಮಾಸ್ಕ್-ವೈಸರ್ಗಳಿಂದ ಕನ್ನಡಕ ಮಂಜಾಗುತ್ತಿತ್ತು, PPE ಒಳಗೆ ಬೆವರಿನ ಸ್ನಾನವಾಗಿರುತ್ತಿತ್ತು. ಕ್ರಮೇಣ ಅದಕ್ಕೂ ಒಗ್ಗಿಕೊಂಡಾಯಿತು. ಮೊದಲನೆಯ ಅಲೆಯಲ್ಲಿ ಎಲ್ಲ ಶಸ್ತ್ರಚಿಕಿತ್ಸೆಗಳಿಗೂ ಈ ಅವತಾರ ಮಾಡಿಕೊಂಡು ಹಿಂಸೆ ಪಟ್ಟಿದ್ದೇವೆ. ಈಗ ಎಲ್ಲರಿಗೂ RAT ಹಾಗೂ Rt-PCR ಟೆಸ್ಟ್ ಮಾಡಿಸುವುದರಿಂದ, ಮಹಿಳೆಗೆ ಸೋಂಕಿಲ್ಲದಿದ್ದರೆ ಧರಿಸುವ ದಿರಿಸಿನಲ್ಲಿ ಸ್ವಲ್ಪ ಮಟ್ಟಿನ ರಿಯಾಯಿತಿ ಇದೆ.
Lockdown ಪ್ರಯುಕ್ತ ತವರಿಗೆ ಹೋಗಿ ಹೆರಿಗೆ ಮಾಡಿಸಿಕೊಳ್ಳಬೇಕು ಎಂದಂದುಕೊಂಡಿದ್ದ ಹೆಣ್ಣುಮಕ್ಕಳು ಬೆಂಗಳೂರಿನಲ್ಲಿಯೇ ಉಳಿದುಕೊಂಡದ್ದರಿಂದ April/May ತಿಂಗಳುಗಳಲ್ಲಿ ಕೇಸ್ಗಳು ಜಾಸ್ತಿಯಾದವು. ಮನೆಗೆ ಬರುತ್ತಿದ್ದ ಅಡುಗೆಯವರು ಮತ್ತು ಸಹಾಯಕಿಯೂ ಲಾಕ್ಡೌನ್ನಿಂದ ರಜೆ. ತಿಂಡಿ, ಅಡುಗೆ, ಪಾತ್ರೆ-ನೆಲಗಳನ್ನು ಸ್ವಚ್ಛಗೊಳಿಸಿ (ಮನೆಯವರೆಲ್ಲರೂ ಸಹಾಯ ಮಾಡುತ್ತಿದ್ದರು) ನಂತರ Scrubs ಹಾಕಿಕೊಂಡು ಆಸ್ಪತ್ರೆಗೆ ಹೋಗುವುದು. ಅಲ್ಲಿ ಪ್ರಕ್ಷುಬ್ದ ವಾತಾವರಣ, ಒತ್ತಡ. ಒಂದು ಲೋಟ ಕಾಫಿ ಗುಟುಕರಿಸಲೂ Canteen ಗೆ ಹೋಗಲು ಭಯ. (ಸಾರ್ವಜನಿಕ ಜಾಗಗಳಲ್ಲಿ ಮಾಸ್ಕ್ ತೆಗೆದ ತಿಂದು-ಕುಡಿಯುವುದು ಸೋಂಕನ್ನು ಆಹ್ವಾನಿಸಿದಂತೆ) ಎಷ್ಟೇ ಜಾಗರೂಕರಾಗಿದ್ದರೂ ಮನೆಗೆ ಬಂದು ತಲೆ ಸ್ನಾನ/ಬಟ್ಟೆ ಒಗೆದುಕೊಂಡು ಎಲ್ಲಾ ನಿಯಮಗಳನ್ನು ಪಾಲಿಸಿದರೂ, ಮನಸಿನ ಎಲ್ಲೋ ಒಂದು ಮೂಲೆಯಲ್ಲಿ ಪಾಪಪ್ರಜ್ಞೆ ಕಾಡುತ್ತಲೇ ಇರುತ್ತದೆ. ನನಗೆ ಸೋಂಕಾದರೂ ಓಕೆ, ಆದರೆ ನನ್ನಿಂದ ಮನೆಯಲ್ಲಿಯೇ ಸೋಂಕನ್ನು ಹರಡಿಬಿಟ್ಟರೆ? ಎಂಬ ಭಯ.
ಮನೆಯಲ್ಲಿ ಹೊಸ ತರಹದ ಮಡಿವಂತಿಕೆ ರೂಢಿ ಮಾಡಿಕೊಂಡೆವು. ಹೊತ್ತಿಲ್ಲದ ಹೊತ್ತಿನಲ್ಲಿ ಹೋಗಿಬರುವವಳು ನಾನಾದರೆ, ನನ್ನ ಗಂಡ ವೈದ್ಯಕೀಯ ಕಾಲೇಜಿನ ಮೆಡಿಸಿನ್ ವಿಭಾಗದ ಮುಖ್ಯಸ್ಥರಾಗಿ ಕೊರೋನಾ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕಿತ್ತು. Social Distance, ಮಾಸ್ಕ್ ಹಾಕಿರುವುದಿಲ್ಲ ಎಂಬ ಕಾರಣದಿಂದ ಒಟ್ಟಿಗೆ ಕೂತು ಊಟ ಮಾಡುವುದನ್ನು ಬಿಟ್ಟುಬಿಟ್ಟೆವು . ಮಾರ್ಚ್ 27 ರಿಂದ ಇದುವರೆವಿಗೂ-ಸತತ 14 ತಿಂಗಳುಗಳಿಂದ-ಮನೆಯಲ್ಲಿರುವ ನಾಲ್ಕು ಜನರೂ ಪ್ರತ್ಯೇಕ ಕೋಣೆಗಳಲ್ಲಿ ಮಲಗಿಕೊಳ್ಳುವುದನ್ನು ರೂಢಿಸಿಕೊಂಡಿದ್ದೇವೆ. ಒಬ್ಬರನ್ನೊಬ್ಬರು ಅಪ್ಪುವುದಿರಲಿ ಮುಟ್ಟಿಸಿಕೊಳ್ಳುತ್ತಲೂ ಇಲ್ಲ (Vaccine ಆದ ಮೇಲೂ.)
ನನ್ನ ಗಂಡ ಆಸ್ಪತ್ರೆಯ ಕೆಲಸದನಂತರ, ದೈಹಿಕವಾಗಿ ಮನೆಯಲ್ಲಿಯೇ ಇದ್ದರೂ, ಸತತವಾಗಿ ಆಸ್ಪತ್ರೆಯ ಕೆಲಸವೇ. ರಾತ್ರಿ 12-1ರವರೆಗೂ ನಿಮಿಷಕ್ಕೆ ಮೂರು-ನಾಲ್ಕು ಕರೆಗಳನ್ನು ಸ್ವೀಕರಿಸುವುದು. ಮನೆಯಲ್ಲಿನ ವ್ಯವಹಾರಗಳು ಇನ್ನಿತರೇ ಸದಸ್ಯರ ಬಗ್ಗೆ ಯೋಚಿಸುವುದಿರಲಿ, ಒಂದೆರಡು ನಿಮಿಷ ಲೋಕಾರೂಢಿ ಮಾತನ್ನೂ ಆಡಲಾಗುತ್ತಿರಲಿಲ್ಲ. ನಾಲ್ಕು ತಿಂಗಳಿನಲ್ಲಿ ಅವರ ತೂಕ ಎಂಟು ಕಿಲೋ ಕಡಿಮೆಯಾಗಿ, ಇನ್ಯಾವ ಕಾಯಿಲೆ ಬಂದಿರಬಹುದು ಎಂಬ ಆತಂಕ ಶುರುವಾಗಿತ್ತು. ವಯಸ್ಸಾದ ಅಪ್ಪ-ಅಮ್ಮನೊಂದಿಗೆ ಕೂತು ಮಾತಾಡಲೂ, ಊಟಮಾಡಲೂ ಅಂಜಿಕೆ. ಹೀಗೆ ನಾವಿಬ್ಬರೂ ಎಲ್ಲರಿಂದ ದೂರವಿದ್ದು, ನಮ್ಮ ಸುತ್ತಲೂ Touch-Me-Not ದ್ವೀಪ ನಿರ್ಮಾಣ ಮಾಡಿಕೊಳ್ಳುವುದು ಅನಿವಾರ್ಯವಾಯಿತು. ನಮ್ಮಗಳ ಮಾನಸಿಕ ಸ್ಥಿತಿಯೇ ಖಿನ್ನತೆಯೆಡೆ ವಾಲುತ್ತಿರುವಾಗ, ವಿಭಾಗದ ಮುಖ್ಯಸ್ಥರಾಗಿ ಮತ್ತೆಲ್ಲರಲ್ಲಿ ಆತ್ಮಸ್ಥೈರ್ಯ ತುಂಬಿಸಬೇಕಾದ ಸಂದಿಗ್ಧ! ಕೊರೋನಾ ನಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಅಟ್ಟಾಡಿಸುತ್ತಿತ್ತು!
ಲಾಕ್ಡೌನ್ನಿಂದಾಗಿ ವಲಸೆ ಕಾರ್ಮಿಕರ ಸಮಸ್ಯೆ ಶುರುವಾಯಿತು. ನಮ್ಮ ಕಾಲೊನಿಯ ಆಚೆಬದಿಯ ಸಣ್ಣ ಗುಡಿಸಿಲುಗಳಲ್ಲಿ ವಾಸಿಸುತ್ತಿದ್ದ ಉತ್ತರ ಕರ್ನಾಟಕದವರು ಬೆಳಿಗ್ಗೆ ಆರಕ್ಕೆ ಸರ-ಸಾರಾಂತ ಬಟ್ಟೆಗಂಟುಗಳು -ಬಕೀಟು- ಅಲ್ಯೂಮಿನಿಯಂ ಪಾತ್ರೆಗಳನ್ನು ಕಟ್ಟಿಕೊಂಡು ಓಡುತ್ತಿದ್ದಾಗ, “ಏಯ್ ಎಲ್ಲಿಗೆ?” ಎಂದಿದ್ದೆ. “ಊರಿಗ್ ಹೊಂಟ್ವಿ . ಲೇಟಾದ್ರ ಲಾರಿ ಹೋಗ್ ಬಿಡ್ತಾವ್ರಿ!” ಎಂದಾಗ ಮನೆ-ಸೂರು-ಊಟ-ಬಟ್ಟೆ ಎಂದು ನಾನು ಹೀಗೆ ಹಾಯಾಗಿರುವುದಕ್ಕೆ ಹಕ್ಕಿದೆಯೆ ನನಗೆ ಎಂದು ನಾಚಿಕೆಯಾಯಿತು. ದುಬೈನಲ್ಲಿದ್ದಾಗ ಮನೆಗಳನ್ನು ಕಳೆದುಕೊಂಡ ದೇಶ ಬಿಟ್ಟು ಓಡಿ ಬಂದಿದ್ದ ಸಿರಿಯನ್ನರನ್ನು ನೋಡಿದ್ದೆ. ಉಟ್ಟ ಬಟ್ಟೆಯಲ್ಲಿಯೇ, ರಾತ್ರಿ -ಹಗಲೆನ್ನದೆ ತಮ್ಮ ಮನೆ-ಊರು-ದೇಶದಿಂದ ಓಡಿ ಬಂದಿದ್ದರು. ಆದರೆ ಇಲ್ಲಿನ ವಲಸೆ ಕಾರ್ಮಿಕರು ತಮ್ಮ ಜೀವನ ಕಟ್ಟಿಕೊಳ್ಳಲು ಮನೆಗಳನ್ನು ಬಿಟ್ಟು ಬಂದವರನ್ನು, ಕೊರೋನಾ ವಾಪಸ್ಸು ಓಡಿಸುತ್ತಿತ್ತು! ಸಂಕಟ ಹೆಚ್ಚಾಯಿತು. ಏನಾದರೂ ಮಾಡಲೇಬೇಕು ಎಂದುಕೊಂಡು ವಲಸಿಗರಿಗಾಗಿ ಚಂದಾ ಎತ್ತಲು ಶುರುಮಾಡಿಕೊಂಡೆ, ಜಾಲತಾಣಗಳಲ್ಲಿ ಕೋರಿಕೆ ಸಲ್ಲಿಸಿದೆ. ಸಹಾಯ ಹಸ್ತಗಳು ಕೈಗೂಡಿಸಿದರು. ವಾರದಲ್ಲಿ ನಾಲಕ್ಕು ಲಕ್ಷ ಹುಟ್ಟಿತು! ಬೇಕಾದ ವಸ್ತುಗಳನ್ನು ಖರೀದಿಸಿ ಮೂರು ದಿನಗಳು ತುಮಕೂರು ರಸ್ತೆಯಲ್ಲಿರುವ BIEC (Bangalore International Exhibition Center) ಗೆ ಹೋಗಿ ಅಲ್ಲಿ ಹಗಲಿರುಳೆನ್ನದೆ ಹರಿದು ಬರುತ್ತಿದ್ದ ವಲಸಿಗರಿಗೆ ಅದೆಲ್ಲವನ್ನೂ ವಿತರಿಸಿದ್ದಾಯಿತು.
ಆದರೆ ಮತ್ತೆ ಆಸ್ಪತ್ರೆಗೆ ಮರಳಿದರೆ ಏನೋ ಬೇಜಾರು, ಅಪೂರ್ಣತೆ. ಸಾಕಷ್ಟು ಮಾಡುತ್ತಿಲ್ಲ, ಮಾಡಲಾಗುತ್ತಿಲ್ಲ ಎಂಬ ಅಸಹಾಯಕತೆ. ಕೋವಿಡ್ ರೋಗಿಗಳನ್ನು ನೇರವಾಗಿ ಪರೀಕ್ಷಿಸಿ ಚಿಕಿತ್ಸೆ ಕೊಡಲು ನನ್ನ ಪರಿಣತಿ (ನಾನು ಪ್ರಸೂತಿ ಸ್ತ್ರೀರೋಗ ತಜ್ಞೆ) ಮತ್ತು ವಯಸ್ಸು ನಿಬಂಧನೆಗಳಾಗಿದ್ದವು.
29 ಜೂನ್ 2020, ಸೋಮವಾರ
ಹದಿನೆಂಟು ಹೊರ ರೋಗಿಗಳನ್ನು ನೋಡಿ ಆಗಿತ್ತು. ಇನ್ನೂ ನಾಲ್ಕಾರು ಜನ ಇದ್ದರು. ಫೋನ್ ಕರೆ . ‘‘ಡಾ. ಶಾಂತಲಾ. ಇಂದಿನಿಂದ ನಮ್ಮ ಆಸ್ಪತ್ರೆ ಸಂಪೂರ್ಣ ಕೋವಿಡ್ ಆಸ್ಪತ್ರೆ. ಕೋವಿಡ್ ಚಿಕಿತ್ಸೆಗೆ ಮೀಸಲು. ನಿಮ್ಮ ವಿಭಾಗದವರಿಗೆಲ್ಲರಿಗೂ ತಿಳಿಸಿಬಿಡಿ”
‘‘ಹೂಂ” ಆಯ್ದು ತಿನ್ನುತ್ತಿದ್ದ ಕೋಳಿ ಕಾಲು ಮುರಿದರು ಎಂಬ ಉಕ್ತಿ ಮನಸಿನಲ್ಲಿ ಹಾಯ್ದು ಹೋಯಿತು. ಕಾರಣ ಆಸ್ಪತ್ರೆ ಕೋವಿಡ್ ರೋಗಿಗಳಿಗೇ ಮೀಸಲು ಎಂದು ಜನರಿಗೆ ಸುಳಿವು ಸಿಕ್ಕುತ್ತಿದ್ದಂತೆ, ಹೊರರೋಗಿಗಳು ಹಟಾತ್ ಕಡಿಮೆ ಆಗಿಬಿಟ್ಟರು. ಇದು ನಿರೀಕ್ಷಿತವೇ. ಬಿಳಿ ಸೆರಗು, ಮುಟ್ಟಿನಲಿ ಏರುಪೇರು, ಬಂಜೆತನ ಇನ್ನಿತರೆ ತೊಂದರೆಗಳಿರುವ ಹೆಣ್ಣುಮಕ್ಕಳು ಕೋವಿಡ್ಗೆ ಹೆದರಿ ಆಸ್ಪತ್ರೆಯ ಮೆಟ್ಟಿಲುಗಳನ್ನೇರಲಿಲ್ಲ. ಅಂದರೆ ಕೇವಲ ಗರ್ಭಿಣೆಯರು ಮಾತ್ರ ತಪಾಸಾಣೆಗೆ ಆಸ್ಪತ್ರೆಗೆ ಬರುತ್ತಿದ್ದರು. ಇಲ್ಲವೇ ಬೇರೆ ಕಡೆಗೆ (ಕೋವಿಡ್ ಎಂದು ಘೋಷಿಸಿಕೊಳ್ಳದ ಆಸ್ಪತ್ರೆ) ಹೊರಟು ಹೋದರು. ಮತ್ತಿನ್ನಿತರರು Lockdown ಮುಗಿದ ನಂತರ ಹೆರಿಗೆಗೆ ತಮ್ಮ ತವರಿಗೆ ಹೊರಟುಹೋದರು. ನಮ್ಮ ವಿಭಾಗದ ರೋಗಿಗಳು ಗಣನೀಯವಾಗಿ ಕಡಿಮೆಯಾದರು.
ಹೀಗೆ ತಿಂಗಳುಗಳು ಕಳೆದು, ಇನ್ನೇನು ಚೇತರಿಸಿಕೊಳ್ಳುತ್ತಿದ್ದೇವೆ ಎನ್ನುವಷ್ಟರಲ್ಲಿ ಎರಡನೆಯ ಅಲೆ. ಈ ಬಾರಿ ಸರಕಾರವೇ ಅಧಿಕೃತವಾಗಿ ಪ್ರಕಟಣೆ ಹೊರಡಿಸಿತು. ತುರ್ತು ಚಿಕಿತ್ಸೆಗಾಗಿ ಅಲ್ಲದೆ ಸಾಮಾನ್ಯ ತೊಂದರೆ ಇರುವ ರೋಗಿಗಳನ್ನು ದಾಖಲು ಮಾಡಿಕೊಳ್ಳುವಂತಿಲ್ಲ ಎಂದು. ಎಲ್ಲಾ ಹಾಸಿಗೆಗಳೂ ಕೋವಿಡ್ ರೋಗಿಗಳಿಗೇ ಮೀಸಲಾಗಿರಬೇಕು ಎಂದು.
ಕೋವಿಡ್ ಕಾಲಿಟ್ಟು ಬೇರೆಲ್ಲಾ ರೋಗ-ರುಜಿನಗಳಿಗೆ ಮತ್ತೆ ಖೋಕ್ ಕೊಟ್ಟಿತು. ಹೆರಿಗೆಗೆ ಮಾತ್ರ ರಿಯಾಯಿತಿ. ಅಷ್ಟೇ. Online Consultation ಶುರುಮಾಡಿಕೊಂಡು, ಮುಂದುವರೆಸುತ್ತಾ, ನನ್ನ Practiceನಲ್ಲಿ ಮತ್ತೊಂದು ನ್ಯೂನತೆ ರೂಢಿಸಿಕೊಂಡಿದ್ದೇನೆ. ಕೊರೋನಾ ಎರಡು, ಮೂರು, ನಾಲ್ಕು ಅಲೆಗಳಲ್ಲಿ ಹೆದರಿಸುತ್ತಾ ಹೋಗುತ್ತದೇನೋ. ತಳಿ ರೂಪಾಂತರಿಗಳು ಹುಟ್ಟಿಕೊಳ್ಳುತ್ತವೇ ಇರುತ್ತವೆನೋ. ಆದರೆ ನನ್ನ ಅನೇಕ ರೋಗಿಗಳಿಗೆ, ಗರ್ಭಿಣಿಯರಿಗೆ ನನ್ನ ಸಲಹೆ-ಚಿಕಿತ್ಸೆಗಳ ಅಗತ್ಯವಿದೆ. ಅವರನ್ನು ನಾನು ಕೈ ಬಿಡಲಾರೆ. ಇದಕ್ಕೆ ಪೂರಕವಾಗಿ ನಾನೂ ವೈದ್ಯಕೀಯ Practice ಗಳಲ್ಲಿ ರೂಪಾಂತರ ಮಾಡಿಕೊಳ್ಳುವುದು ಅನಿವಾರ್ಯವೇ ಆಗಿಬಿಟ್ಟಿದೆ.
ಅನಿವಾರ್ಯತೆಗಳ ಸಾಗರದಲ್ಲಿ ಈಜು ಕಲಿತು ಹೋರಾಡುವುದೇ ಕೊರೋನಾ ಕಲಿಸಿದ ಪಾಠ.
ಇದನ್ನೂ ಓದಿ : Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ಮಸಣದಲ್ಲಿ ಗಂಡ ಹೆಣ ಬೇಯಿಸುತ್ತಿದ್ದರೆ ಹೆಂಡತಿ ಒಲೆಮೇಲೆ ಕಣ್ಣೀರು ಕುದಿಸಬೇಕೆ?
Published On - 4:15 pm, Thu, 27 May 21