ಓದು ಮಗು ಓದು : ತೆಲುಗು ಇಂಗ್ಲಿಷ್ ಹಿಂದಿ ಮತ್ತೀಗ ಕನ್ನಡ!
ಹೈದರಾಬಾದಿನಲ್ಲಿ ಮೂರನೇ ತರಗತಿ ಓದುತ್ತಿರುವ ಗೌರಿ ದರ್ಶನ್ ಕೊರೋನಾ ರಜೆಯಿಂದಾಗಿ ಬೆಂಗಳೂರಿನ ತಾತನ ಮನೆಯಲ್ಲಿ ಉಳಿದಿದ್ದಾಳೆ. ಇಷ್ಟು ದಿನ ತೆಲುಗು, ಇಂಗ್ಲಿಷ್, ಹಿಂದೀ ಕಲಿತಿದ್ದ ಈಕೆ ಈ ಬಾರಿ ಕನ್ನಡವನ್ನೂ ಕಲಿತು ಕಥೆ ಪುಸ್ತಕ ಓದುವುದನ್ನು ಕಲಿತಿದ್ದಾಳೆ. ಇಷ್ಟೇ ಅಲ್ಲ ಮುದ್ದಾಗಿ ಕನ್ನಡವನ್ನೂ ಬರೆಯುತ್ತಾಳೆ.
ಈಗಂತೂ ಮಕ್ಕಳ ಇಸ್ಕೂಲ್ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು. ಇ-ಮೇಲ್ tv9kannadadigital@gmail.com
ಹೈದರಾಬಾದಿನಿಂದ ಬೆಂಗಳೂರಿಗೆ ಬಂದ ಗೌರಿ ದರ್ಶನ್ ಆಯ್ಕೆಗಳು ಇಲ್ಲಿವೆ.
ಪು: ದಿನಕ್ಕೊಂದು ಕಥೆ ಲೇ: ಅನುಪಮಾ ನಿರಂಜನ ಪ್ರ: ಡಿವಿಕೆ ಮೂರ್ತಿ
ಮೊದಲು ಈ ಸರಣಿಯ ಎರಡು ಕಥೆಪುಸ್ತಕಗಳನ್ನು ‘ಆಲಿಸಿರಿ’ ಆ್ಯಪ್ನಲ್ಲಿ ಕೇಳಿದ್ದೆ. ನಂತರ ನನಗೆ ಎಲ್ಲಾ ಹನ್ನೆರಡೂ ಪುಸ್ತಕಗಳನ್ನು ಆನ್ಲೈನ್ನಲ್ಲಿ ನನ್ನ ತಾತ ತರಿಸಿಕೊಟ್ಟರು. ದಿನಕ್ಕೊಂದರಂತೆ ಒಂದು ವರ್ಷ ಪೂರ್ತಿ ಇದರಲ್ಲಿನ ಕಥೆಗಳನ್ನು ಓದಿದೆ. ತುಂಬಾ ಇಂಟ್ರೆಸ್ಟಿಂಗ್ ಆಗಿರುವ ಕಥೆಗಳು ಇಲ್ಲಿವೆ. ಓದ್ತಾ ಬಹಳ ಮಜಾ ಬಂತು. ಎಲ್ಲಾ ಕಥೆಗಳಿಗೂ ಒಂದೊಂದು ಥರದ ನೀತಿಗಳಿವೆ.
ಪು: ಪಂಚತಂತ್ರ ಲೇ: ವಿಷ್ಣುಶರ್ಮ ಪ್ರ: ವಾಸನ್ಸ್
ಇದರಲ್ಲಿ ಮಕ್ಕಳಿಗೆ ಇಷ್ಟವಾಗುವ ಪ್ರಾಣಿಗಳ ಕಥೆಗಳಿವೆ. ಇದನ್ನು ನನ್ನ ಇನ್ನೊಬ್ಬ ತಾತಾ ಉಡುಗೊರೆಯಾಗಿ ಕೊಟ್ಟಿದ್ದಾರೆ. ಇದರಲ್ಲಿ ಚಿತ್ರಗಳು ಬಣ್ಣಬಣ್ಣದಲ್ಲಿ ದೊಡ್ಡದೊಡ್ಡದಾಗಿವೆ. ಈ ಕಥೆಗಳಲ್ಲಿ ಪ್ರಾಣಿಗಳು ಮನುಷ್ಯರಂತೆ ಮಾತನಾಡುತ್ತವೆ ಹಾಗಾಗಿ ನನಗೆ ಬಹಳ ಇಷ್ಟವಾಯಿತು.
ಪು: ಅಜ್ಜನೊಂದಿಗೆ ಕಳೆದ ದಿನಗಳು ಮೂಲ: ಶಂಕರ್ ಲೇ : ಶಾ. ಬಾಲೂರಾವ್ ಪ್ರ: ನ್ಯಾಷನಲ್ ಬುಕ್ ಟ್ರಸ್ಟ್
ಶಾ. ಬಾಲೂರಾವ್ ಅವರು ಅನುವಾದಿಸಿರುವ ಪುಸ್ತಕ ಇದು. ನನ್ನ ಅಮ್ಮ ಚಿಕ್ಕವರಿದ್ದಾಗ ಓದಿದ್ದು. ನನ್ನ ತಾತಾ ಅದನ್ನು ಜೋಪಾನವಾಗಿಟ್ಟಿದ್ದರಿಂದ ನನಗೆ ಈಗ ಓದಲು ಸಿಕ್ಕಿದೆ. ಈ ವರ್ಷವೆಲ್ಲಾ ನಾನು ಅಜ್ಜಿ ತಾತಾ ಜೊತೆ ಇದ್ದಿದ್ದರಿಂದ ಇದರಲ್ಲಿರುವ ಕಥೆ ನನಗೆ ತುಂಬಾ ರಿಲೇಟ್ ಆಗುತ್ತೆ. ಪುಟ್ಟ ಹುಡುಗ ಅಜ್ಜನ ಜೊತೆ ಏನೇನು ಮಾಡಿದ ಎಂದು ಡಿಟೇಲ್ ಆಗಿ ಇದೆ. ಹಾವು ಕಚ್ಚಿದ್ದು, ಮಳೆ ಬರುವುದು ಎಲ್ಲಾ ವಿವರ ಇದೆ. ನನಗೆ ಬಹಳ ಇಷ್ಟವಾಯ್ತು ಈ ಪುಸ್ತಕ.
ಪು: ಸಮಗ್ರ ಮಕ್ಕಳ ಸಾಹಿತ್ಯ ಲೇ: ಜಿ ಪಿ ರಾಜರತ್ನಂ ಪ್ರ: ಕರ್ನಾಟಕ ಸಾಹಿತ್ಯ ಅಕಾಡೆಮಿ
ತುಂಬಾ ದೊಡ್ಡ ಪುಸ್ತಕ. ಮಕ್ಕಳ ಕವನ ಮತ್ತು ದೊಡ್ಡ ದೊಡ್ಡ ಕಥೆಗಳು ಇವೆ. ಕೃಷ್ಣ ಮುದ್ದೆ ತಿಂದ ಕಥೆ ನನ್ನಿಷ್ಟದ್ದು. ಬಣ್ಣದ ತಗಡಿನ ತುತ್ತೂರಿ, ಕಡ್ಲೆಪುರಿ, ಚುಟುಕುಗಳು ಇವೆ. ಪುಸ್ತಕದ ಕೊನೆಯಲ್ಲಿ ದೇಶದ ಬಾವುಟದ ಬಗ್ಗೆ ಕನ್ನಡ ಇಂಗ್ಲಿಷ್ನಲ್ಲಿ ವಿವರಗಳಿವೆ. ಇವು ನಮ್ಮ ಸಾಮಾನ್ಯ ಜ್ಞಾನಕ್ಕೆ ಸಹಾಯ ಮಾಡುತ್ತವೆ.
ಪು: ಸಮಗ್ರ ಮಕ್ಕಳ ಸಾಹಿತ್ಯ ಲೇ: ಈಶ್ವರ ಕಮ್ಮಾರ ಪ್ರ: ಕರ್ನಾಟಕ ಸಾಹಿತ್ಯ ಅಕಾಡೆಮಿ
ಮತ್ತು
ಪು: ಮಕ್ಕಳ ಸಾಹಿತ್ಯ ಲೇ: ವಿ. ಸೀತಾರಾಮಯ್ಯ ಪ್ರ: ಕರ್ನಾಟಕ ಸಾಹಿತ್ಯ ಅಕಾಡೆಮಿ
ನಮ್ಮ ಅಮ್ಮ ನನ್ನಷ್ಟಿದ್ದಾಗ ಓದಿದ ಪುಸ್ತಕಗಳಿವು. ಇದರಲ್ಲಿ ದೊಡ್ಡ ಮಕ್ಕಳ ವಿಭಾಗ ಮತ್ತು ಚಿಕ್ಕ ಮಕ್ಕಳ ವಿಭಾಗಗಳಿವೆ. ಈ ಕಥೆಗಳನ್ನು ದಿನಾ ರಾತ್ರಿ ಒಂದೊಂದು ಓದಿಯೇ ಮಲಗುತ್ತೇನೆ. ಈ ಪುಸ್ತಕಗಳನ್ನೆಲ್ಲಾ ಓದುತ್ತಿದ್ದಂತೆ ನನಗೆ ಹೊಸ ಹೊಸ ಕನ್ನಡ ಪದಗಳ ಪರಿಚಯ ಆಗುತ್ತಿದೆ. ಅವುಗಳ ಅರ್ಥವನ್ನು ಕೇಳಿ ತಿಳಿದುಕೊಳ್ಳುತ್ತಿದ್ದಂತೆ ಪದಗಳ ಸಂಗ್ರಹವಾಗುತ್ತಿದೆ. ಇನ್ನೂ ಬಹಳಷ್ಟು ಪುಸ್ತಕಗಳಿವೆ ಓದೋದಕ್ಕೆ. ಇವನ್ನೆಲ್ಲಾ ಓದುತ್ತಾ ನನಗೆ ಕನ್ನಡ ಬಹಳ ಇಷ್ಟವಾಗುತ್ತಿದೆ.
ಓದು ಮಗು ಓದು: ಹರಿಶ್ಚಂದ್ರ ಸತ್ಯ ಹೇಳುತ್ತಿದ್ದನಲ್ಲ ಅದಕ್ಕೆ ಈ ಪುಸ್ತಕ ಹತ್ತು ಸಲ ಓದಿದೆ…
Published On - 3:42 pm, Thu, 14 January 21