ಓದು ಮಗು ಓದು: ಇಷ್ಟೊಂದು ದೇವರುಗಳಿಗೆಲ್ಲ ಅಷ್ಟೊಂದು ವಾಹನಗಳನ್ನು ಕೊಡಿಸಿದವರು ಯಾರೋ?
ಬೆಂಗಳೂರಿನ ಪದ್ಮಶೇಷಾದ್ರಿ ಬಾಲಭವನದಲ್ಲಿ 3ನೇ ತರಗತಿ ಓದುತ್ತಿರುವ ನಿಶಾಂತ ಪ್ರದೀಪ ನಾರಾಯಣ ಇಷ್ಟಪಡುವ ಪುಸ್ತಕಗಳು ಯಾವುವು, ಅವುಗಳ ಬಗ್ಗೆ ಅವನು ಬರೆದಿದ್ದು ಏನು?
ಈಗಂತೂ ಮಕ್ಕಳ ಇಸ್ಕೂಲ್ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು. ಇ-ಮೇಲ್ tv9kannadadigital@gmail.com
ಬೆಂಗಳೂರಿನ ನಿಶಾಂತ ಪ್ರದೀಪ ನಾರಾಯಣ ಇಷ್ಟಪಟ್ಟು ಓದುವ ಪುಸ್ತಕಗಳ ಬಗ್ಗೆ ಇಲ್ಲಿ ಓದಿ.
ಪು: Devis-The Mother Goddesses ಲೇ: Devdutt Pattanaik ಪ್ರ: Om books international ಇದು ನಮ್ಮ ಹಿಂದೂ ಧರ್ಮದಲ್ಲಿ ಪೂಜಿಸಲ್ಪಡುವ ದೇವಿಯರ ಕಥೆಗಳು. ಈ ಪುಸ್ತಕದಲ್ಲಿ 5 ಕಥೆಗಳಿವೆ. ಮೊದಲ ಕಥೆ ದುರ್ಗೆಯ ಉಗಮ ಮತ್ತು ಆಕೆ ಮಹಿಷಾಸುರನನ್ನು ಅಂತ್ಯ ಮಾಡಿದ ಕಥೆ. ನನಗಿದು ಬಹಳ ಇಷ್ಟ. ಇನ್ನು ಎರಡನೇ ಕಥೆ ಕಾಳಿ, ಮೂರನೆಯದು ಲಕ್ಷ್ಮೀದೇವಿಯ ಜನನ ಮತ್ತು ಮತ್ತು ಆಕೆ ಮಹಾವಿಷ್ಣುವನ್ನು ಮದುವೆಯಾದ ಬಗ್ಗೆ. ನಾಲ್ಕನೇ ಕಥೆ ಲಕ್ಷ್ಮೀ ಮತ್ತು ಆಕೆಯು ನೀಡುವ ಅದೃಷ್ಟದ ಬಗ್ಗೆ. ಕೊನೇ ಕಥೆ ವಿದ್ಯಾದೇವಿ ಸರಸ್ವತಿಯ ಬಗ್ಗೆ. ಒಟ್ಟಾರೆ 5 ಕಥೆಗಳು ತುಂಬಾ ಸರಳವಾಗಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಇವೆ. ನಮ್ಮ ಧರ್ಮ, ದೇವತೆಗಳ ಬಗ್ಗೆ ಮಕ್ಕಳಿಗೆ ಉತ್ತಮವಾಗಿ ತಿಳಿಸುವ ಸುಂದರ ಪುಸ್ತಕವಿದು.
ಪು: 151 Episodes of lord Hanuman ಪ್ರ: Manoj publications ದೇವಾಲಯಗಳಿಗೆ ನನ್ನನ್ನು ಕರೆದುಕೊಂಡು ಹೋದಾಗ ನಾನಂತೂ ಅಮ್ಮನಿಗೆ ತುಂಬಾ ಪ್ರಶ್ನೆಗಳನ್ನು ಕೇಳುತ್ತೇನೆ. ಅದಕ್ಕಾಗಿ ನನ್ನ ಅಮ್ಮ ಆಯಾ ದೇವರುಗಳ ಬಗ್ಗೆ ನನಗೆ ಅರ್ಥವಾಗುವಂತೆ ಮೊದಲೇ ಹೇಳಿಬಿಟ್ಟಿರುತ್ತಾರೆ. ಹಾಗೇ ನನ್ನ ಇಷ್ಟದೈವ ಆಂಜನೇಯನ ಬಗ್ಗೆ ಪ್ರತಿಯೊಂದು ಕಥೆಯನ್ನು ಈ ಪುಸ್ತಕದಲ್ಲಿ ತುಂಬಾ ಸುಂದರವಾಗಿ ವಿವರಿಸಿದ್ದಾರೆ. ಅಲ್ಲದೆ, ಚಿತ್ರಗಳ ಮೂಲಕ ಮಕ್ಕಳಿಗೆ ಪುಸ್ತಕದ ಬಗ್ಗೆ ಇನ್ನೂ ಹೆಚ್ಚಿನ ಪ್ರೀತಿ ಮೂಡೋ ಹಾಗೆ ಮಾಡಿದ್ದಾರೆ. ಹನುಮನ ಜನನದ ಜೊತೆಗೆ ಇಡೀ ರಾಮಾಯಣದ ಬಗ್ಗೆ ಸುಮಾರು 151 ಉಪಕಥೆಗಳೂ ಇವೆ.
ಪು: 151 episodes of Lord Krishna ಪ್ರ: Manoj publications ನಾನು ಚಿಕ್ಕವನಿದ್ದಾಗಿನಿಂದಲೂ ನನ್ನ ಅಮ್ಮ ಪ್ರತೀ ವರ್ಷ ನನಗೆ ಕೃಷ್ಣನ ವೇಶ ಹಾಕುತ್ತಿದ್ದರು. ಆಗಿನಿಂದಲೂ ನನಗೆ ಕೃಷ್ಣನ ಬಗ್ಗೆ ಕುತೂಹಲ ಹುಟ್ಟಿಕೊಂಡಿತು. ನಾನು ಅಮ್ಮನಿಗೆ ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರವಾಗಿ ಅವರು ನನಗೆ ಪುಸ್ತಕಗಳನ್ನು ತಂದು ಕೊಡಲಾರಂಭಿಸಿದರು. ಈ ಪುಸ್ತಕದಲ್ಲಿ ಪುಟ್ಟ ಕೃಷ್ಣನ ಬಾಲ್ಯದಿಂದ ಹಿಡಿದು ಅವನು ನಿರ್ವಾಣನಾಗುವ ತನಕ ಕಥೆಗಳಿವೆ. ಇಲ್ಲಿರುವ 151 ಪುಟ್ಟ ಪುಟ್ಟ ಕಥೆಗಳನ್ನು ಓದುವಾಗ ಭಾರೀ ಖುಷಿಪಟ್ಟಿದ್ದೇನೆ. ಮತ್ತೆ ನಮ್ಮ ಧರ್ಮ ಮತ್ತು ದೇವರ ಬಗ್ಗೆ ಮಕ್ಕಳು ಚಿಕ್ಕಂದಿನಿಂದಲೇ ತಿಳಿದುಕೊಳ್ಳಬೇಕು ಎಂದು ಅಮ್ಮ ಹೇಳುತ್ತಿರುತ್ತಾರೆ.
ಪು: Vahana ಲೇ: Devadutt Pattanaik ಪ್ರ: Roopa Publications ಇಷ್ಟೊಂದು ದೇವರುಗಳಿದ್ದಾರಾ? ಮತ್ತವರಿಗೂ ವಾಹನಗಳಿವೆಯಾ ಅಂತ ನನಗೆ ಗೊತ್ತೇ ಇರಲಿಲ್ಲ. ಈ ಪುಸ್ತಕದಲ್ಲಿ ಓದುತ್ತಾ ಹೋದಂತೆ ಅಬ್ಬಾ ಎಷ್ಟೊಂದು ಮಾಹಿತಿ ಇದೆ ಇದರಲ್ಲಿ ಈ ವಿಷಯವಾಗಿ ಅನ್ನಿಸುತ್ತಾ ಹೋಯಿತು. ಈ ಪುಸ್ತಕದಲ್ಲಿ ಸ್ಟಿಕರ್ಸ್ ಕೂಡ ಇವೆ. ಚಿತ್ರಗಳಿಗೆ ಬಣ್ಣ ಕೂಡ ಹಾಕಬಹುದು.
ಪು: Little kids first big book of space ಲೇ: Catherine D. Hughes ಪ್ರ: National Geographic ಹಾಗೆ ನೋಡಿದರೆ ಈ ಪುಸ್ತಕವನ್ನು ಎರಡನೇ ಕ್ಲಾಸಿಗೆ ಬಂದಾಗ ನನ್ನ ಅಮ್ಮ ಕೊಡಿಸಿದರು. ಸ್ವಲ್ಪ ದೊಡ್ಡವರಾದ ಮೇಲೆ ಓದುವಂಥ ಪುಸ್ತಕ ಇದು. ನನಗೆ ಆಕಾಶದ ಬಗ್ಗೆ ಬಹಳ ಕುತೂಹಲ ಇದ್ದುದರಿಂದ ಅಮ್ಮ ನನಗೆ ಈ ಪುಸ್ತಕ ಕೊಡಿಸಿದರು. ಸೂರ್ಯ, ಭೂಮಿ, ಚಂದ್ರ, ಆಕಾಶಕಾಯಗಳು, ಗ್ರಹಗಳು, ಶ್ವೇತ, ಕುಬ್ಜ, ಕಪ್ಪುರಂದ್ರ, ಧೂಮಕೇತು, ಸೌರಮಂಡಲ ಹೀಗೆ ಸುಮಾರು ವಿಷಯಗಳ ಬಗ್ಗೆ ಇದರಲ್ಲಿ ಬಹಳ ಚೆನ್ನಾಗಿ ವಿವರಿಸಿದ್ದಾರೆ. ಚಿತ್ರಗಳಂತೂ ಒಂದಕ್ಕಿಂತ ಒಂದು ಅದ್ಭುತ.
Published On - 4:11 pm, Tue, 12 January 21