ಅನ್ನದಾತನೊಂದಿಗೆ ನಾವು: ಉಳುಮೆಯ ನೆಲದಿಂದ ಕಟ್ಟುವ ನಾಡಿನವರೆಗೂ…
‘ರೈತಾಪಿ ಜೀವನವು ಭಾರತದಂತಹ ದೇಶದಲ್ಲಿ ಸ್ವತಃ ಒಂದು ಮೌನ ಪ್ರತಿಭಟನೆ. ಬೇಸಾಯದ ಬದುಕಿಗಿಂತ ಮೊದಲು ಅಂದರೆ ಸುಮಾರು ಹತ್ತು ಸಾವಿರ ವರ್ಷಗಳಿಗೂ ಮುನ್ನ ಇದ್ದ ಅಲೆಮಾರಿ ಬದುಕನ್ನು ನೆನಪಿಸುವ, ಪ್ರಸ್ತುತ ರೈತ ಪ್ರತಿಭಟನೆಗಳನ್ನು ಹತ್ತಿಕ್ಕುವ, ಇಂತಹವನ್ನು ಒಳಗಿನಿಂದಲೂ ಒಡೆಯಲು ಯತ್ನಿಸುವ ಸಮಾಜೋ-ರಾಜಕಾರಣದ ಆಗುಹೋಗುಗಳಿಗೆ ಪ್ರತಿಕ್ರಿಯಿಸುವುದನ್ನು ರೈತರ ಬದುಕೇ ಪಾಠವಾಗಿ ಕಲಾವಿದರುಗಳಿಗೆ ಒದಗಿ ಬಂದಿದೆ. ಎಡಬಲಗಳ ರಾಜಕೀಯ ನಿಲುವುಗಳಾಚೆಗೆ ಚಿತ್ರಕಲೆ ರೈತಜೀವನದಲ್ಲಿ ಹೊಸ ಬಗೆಗಳಿಂದ ಪ್ರೇರಣೆ ಪಡೆದುಕೊಳ್ಳುತ್ತಿದೆ.' - ಎಚ್. ಎ. ಅನಿಲ್ಕುಮಾರ್
ಅನ್ನ (ಆಹಾರ) ಮಾತ್ರವಲ್ಲ ಅದನ್ನು ಬೆಳೆಯುವ ರೈತನೂ ಪರಬ್ರಹ್ಮ ಎಂದ ದೇಶ ನಮ್ಮದು. ರೈತರ ಬದುಕು ಸಂಕಷ್ಟದಲ್ಲಿದೆ ಎನ್ನುವುದು ನಮ್ಮ ದೇಶದ ಮಟ್ಟಿಗೆ ಹಳೆಯ ಮಾತು. ಇದೀಗ ‘ದೆಹಲಿ ಚಲೋ’ ಚಳವಳಿಯ ನಂತರ ಇದೇ ಮಾತು ವಿಶ್ವಮಟ್ಟದಲ್ಲಿಯೂ ದೊಡ್ಡ ಸುದ್ದಿಯಾಯಿತು. ಇದನ್ನೇ ನೆಪವಾಗಿಸಿಕೊಂಡು ಸೃಜನಶೀಲ ಕಲೆಗಳಲ್ಲಿ ಅನ್ನದಾತನ ಬದುಕು ಹೇಗೆ ಬಿಂಬಿತವಾಗಿದೆ ಎಂಬುದನ್ನು ಶೋಧಿಸುವ ಪ್ರಯತ್ನವನ್ನು ಗಂಭೀರ ಓದುಗರು, ಲೇಖಕರು ಇಲ್ಲಿ ಮಾಡಿದ್ದಾರೆ. ಬೇಸಾಯ ಮತ್ತು ರೈತರನ್ನು ಕನ್ನಡ ಪರಂಪರೆ ಕಂಡ ಬಗೆಯ ಬಗ್ಗೆ ಲೇಖನ ಸರಣಿಯನ್ನು ಟಿವಿ9 ಕನ್ನಡ ಡಿಜಿಟಲ್ ಆರಂಭಿಸಿದ್ದು ಇಂದು ಕಲಾ ಇತಿಹಾಸ ಪ್ರಾಧ್ಯಾಪಕ, ಲೇಖಕ ಎಚ್.ಎ. ಅನಿಲ್ಕುಮಾರ್ ಅವರ ಲೇಖನ ಎರಡು ಭಾಗಗಳಲ್ಲಿ ನಿಮ್ಮ ಓದಿಗೆ. ನಿಮ್ಮ ಪ್ರತಿಕ್ರಿಯೆಗಳೂ ನಮಗೆ ಅಮೂಲ್ಯ. ಇ-ಮೇಲ್ tv9kannadadigital@gmail.com
ಭಾಗ – 1
ಭಾರತದಲ್ಲಿ ರೈಲು ಪಯಣದ ಸ್ವಾದಗಳಲ್ಲಿ ಒಂದೆಂದರೆ ಬಹುವಾಗಿ ಕಣ್ಣಿಗೆ ಬೀಳುವ ಹೊಲ, ಗದ್ದೆ ತೋಟ, ಹುಲ್ಲುಗಾವಲು, ಬಣಿವೆ, ಕಣ, ಕೆರೆ ಕುಂಟೆಗಳು. ಅದರಲ್ಲೂ ಹೊಲಗಳ ಕುರಿತು ಒಮ್ಮೆ ಯಾರೋ ರೈಲಿನಲ್ಲೇ ಕೇಳಿದ್ದ ಪ್ರಶ್ನೆ, ಸಾಧಾರಣದಲ್ಲಿ ಸಾಧಾರಣವಾದುದು, ‘ರೈಲು ನಿಂತ ಮೇಲೆ ಮರೆಯದೆ ನೆನಪಿಸಿ. ನಿಮ್ಮೆಲ್ಲರ ಕಾಲೆಳೆಯುವ ಪ್ರಶ್ನೆಯೊಂದನ್ನು ಕೇಳುವುದಿದೆ’ ಎಂದಿದ್ದರು, ‘ಕೇಳಲು ಮರೆತಲ್ಲಿ ಅಥವಾ ತಡಮಾಡಿದಷ್ಟೂ ಉತ್ತರಿಸುವುದು ಕಷ್ಟವಾಗಲಿದೆ’ ಎಂದಿದ್ದರು. ಅಂತೆಯೇ ತಡವೋ, ಮರೆತೋ ಈ ಪ್ರಶ್ನೆಯನ್ನು ಅವರಿಗೆ ಮುಂದೊಮ್ಮೆ ನೆನಪಿಸಿದಾಗ ಅವರು ಕೇಳಿದ ಪ್ರಶ್ನೆ ಇದಾಗಿತ್ತು, ‘ಭಾರತದಲ್ಲಿ ರೈಲು ಪ್ರಯಾಣ ಮಾಡುವಾಗ, ಅಕ್ಕಪಕ್ಕ ಕಾಣುವ ಹೊಲಗದ್ದೆಗಳಲ್ಲಿ ಉತ್ತಲಾದ ಸಾಲುಗಳು ರೈಲು ಹಳಿಗೆ ಸಮಾನಾಂತರವಾಗಿರುತ್ತವೋ ಅಥವಾ ಲಂಬವಾಗಿರುತ್ತವೋ ಎಂದು ಗಮನಿಸಿದ್ದೀರಾ?’
ಸಹಜವಾಗಿ ಬಂದ ಪುಂಖಾನುಪುಂಖವಾದ ಉತ್ತರಗಳು ರೈತಾಪಿ ಜೀವನವನ್ನು ಕುರಿತಾದ ನಮ್ಮಗಳ ನಡುವೆ ಇರುವ ಮಿಥ್ಗಳು, ಐತಿಹ್ಯಗಳನ್ನು ಹೊರಹಾಕಲು ಒಂದು ವೇದಿಕೆಯೇ ಆಗಿಬಿಟ್ಟಿತು. ‘ರೈಲ್ವೆ ಹಳಿಗಳ ಸುತ್ತಲಿನ ಹೊಲಗದ್ದೆಗಳನ್ನು ಹೇಗೆ ಉತ್ತಬೇಕು ಎಂಬ ರೈಲ್ವೆ ನಿಯಮಗಳಿರಬಹುದೇ? ಆಯಾ ರೈತರ ಇಷ್ಟದಂತೆ ಉತ್ತುತ್ತಾರಲ್ಲವೆ? ದೇವ್ರಾಣೆ ವಾಸ್ತು ಪ್ರಕಾರವಂತೂ ಉಳುಮೆಯ ದಿಕ್ಕನ್ನು ನಿರ್ಧರಿಸಿರಲಿಕ್ಕಿಲ್ಲ. ರೈಲು ಹಳಿಗಳನ್ನು ನೆಡಲು ನೆಟ್ಟ ಬೃಹದಾಕಾರದ ಮರಗಳೊಂದಿಗೆ ನೆಲ ಕಳೆದುಕೊಂಡ ರೈತರ ಸಂಖ್ಯೆ ಅಪಾರ’ ಎಂದೆಲ್ಲ ಚರ್ವಿತಚರ್ವಣ ಉತ್ತರಗಳು ಬರತೊಡಗಿದವು. ನನಗೆ ನೆನಪಿರುವಂತೆ ಬೆಂಗಳೂರಿನ ಸುತ್ತಮುತ್ತಲಿನ ನಮ್ಮ ನೆಂಟರ ಹೊಲಗದ್ದೆಗಳನ್ನು ರೈಲ್ವೆಗಾಗಿ, ಭೂಅಭಿವೃದ್ಧಿಗಾಗಿ (ಬಿ.ಡಿ.ಎ ಇತ್ಯಾದಿ) ಸರ್ಕಾರವು 1950, 60ರ ದಶಕಗಳಲ್ಲಿ ಸ್ವಾಧೀನಪಡಿಸಿಕೊಂಡಾಗ ಒಂದು ವಿಕ್ಷಿಪ್ತ ಬೆಳವಣಿಗೆಯಾಗಿತ್ತು. ರೈತರಿಗೆ ಪರ್ಯಾಯ ನೆಲ ಅಥವಾ ಹಣದ ನೆರವು ನೀಡಿದಾಗ ಸರ್ಕಾರವು ಅವರುಗಳಿಗೆ ಮತ್ತೊಂದು ವಿಶೇಷ ಅವಕಾಶವನ್ನೂ ನೀಡಿತ್ತು. ಸ್ವತಃ ರೈತರೇ, ತಮ್ಮದೇ ಆಗಿದ್ದ, ಈಗ ಪರಬಾರೆಯಾಗಿರುವ ನೆಲದಲ್ಲಿ ಸೈಟುಗಳನ್ನು ಸರ್ಕಾರದಿಂದ ಕೊಳ್ಳಲು ಅವಕಾಶವನ್ನು ಆದ್ಯತೆಯ ಮೇರೆಗೆ ಪಡೆದಿದ್ದರು ಎಂಬ ನೆನಪು.
‘ಸ್ವಂತ ನೆಲವನ್ನು ಕೊಳ್ಳುವುದೇ ಅಪಶಕುನ’, ಎಂಬ ಸ್ವಾಭಿಮಾನವನ್ನು ಮಾರ್ಪಡಿಸಿಕೊಳ್ಳಲಾದ ಹೊಸದಾದ ನಂಬಿಕೆಯ ಹಿನ್ನೆಲೆಯಲ್ಲಿ ಬಹುಪಾಲು ರೈತರು ಸೈಟುಗಳನ್ನು ಕೊಳ್ಳಲು ನಿರಾಕರಿಸಿದರು. ‘ನಮ್ಮ ಜಾಮೀನು ಮಾರಿ ಅದರಲ್ಲೇ, ನಾವೇ ಸೈಟುಗಳನ್ನು ಕೊಳ್ಳುವುದು ಎಷ್ಟು ಮೂರ್ಖತನ’ ಎಂದು ಉದ್ಗರಿಸಿದವರೇ ಹೆಚ್ಚು. ರೈತಾಪಿತನದಿಂದ ನಿವೃತ್ತಿ ಪಡೆದ ಅನೇಕ ಹಿರಿಯ ರೈತರುಗಳು ನಿಟ್ಟುಸಿರಿನ ಕಡ್ಡಾಯ ರಾಗದಲ್ಲಿ ಇಂತಹ ಘಟನೆಗಳನ್ನು ಕೇಳುವುದು ಒಂದು ಸಣ್ಣ ಹಿನ್ನೆನಪಿನ ಮುದ ನೀಡುತ್ತವೆ. ಸ್ವತಂತ್ರ ಭಾರತದಲ್ಲಿ ರೈತಾಪಿ ಜೀವನಕ್ಕೆ ಮಾಡಲ್ಪಟ್ಟ ನೀತಿನಿಯಮಗಳು ಎಂತಹವೆಂದರೆ, ನಗರದವರು ಹೆಚ್ಚು, ಹಳ್ಳಿಗರು ‘ಅಯ್ಯೋ ಪಾಪ’ ಕೆಟಗರಿಯವರು. ಇವರನ್ನು ಅವರು ಅಭಿವೃದ್ಧಿಪಡಿಸಬೇಕು ಎಂಬ ವಸಾಹತು ಮನೋಭಾವ ಆಡಳಿತಶಾಹಿಗಳ ಆಂತರ್ಯದಲ್ಲಿ ನೆಲೆನಿಲ್ಲಲು ಆರಂಭಗೊಂಡದ್ದು ಇಂದಿಗೂ ಅಂತ್ಯವಾಗಿಲ್ಲ. ಅಧ್ಯಯನವೊಂದರ ಪ್ರಕಾರ ನಗರದ ಅಂಚುಗಳಲ್ಲಿರುವ ಸ್ಲಮ್ ಕೊಳೆಗೇರಿಗಳ ಬಡವರು, ಗ್ರಾಮೀಣ ನೆಲದೊಡೆಯರುಗಳಿಗಿಂತಲೂ ಹೆಚ್ಚು ಶ್ರೀಮಂತರೂ, ನೆಮ್ಮದಿಯುಳ್ಳವರೂ ಹಾಗೂ ಅತ್ಯಂತ ಇತ್ತೀಚಿನ ತಾಂತ್ರಿಕ ಸಲಕರಣೆಗಳನ್ನು ಹೊಂದಿರುವವರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ರೈತಾಪಿ ಜೀವನಚಿತ್ರಣದ ನೈಜತೆಯನ್ನು ಭಾರತೀಯ ಚಿತ್ರಕಲೆಯಲ್ಲಿ ಕಾಣುವುದು ಅಪರೂಪ. ಇಲ್ಲವೇ ಇಲ್ಲ ಎಂಬರ್ಥವಲ್ಲ ಇದು. ‘ನೈಜತೆ’ ಎಂಬ ಶೈಲಿಯ ಮೂಲಕ ರೈತರನ್ನು ಚಿತ್ರಕಲೆ ಚಿತ್ರಿಸಿಲ್ಲ ಎಂಬುದೂ ಅಷ್ಟೇ ಸತ್ಯ. ಅತಿ ಬೃಹತ್ತಾದ, ಭಾರತದ ಅಸಂಘಟಿತ ಉದ್ಯೋಗ ಎಂದರೆ ಅದು ರೈತರ ಜೀವನವೇ. ಶ್ರೀಸಾಮಾನ್ಯನ ಬದುಕಿನಂತೆ ಇದು. ಚಿತ್ರಕಲೆಯು ವಿಶೇಷವಾದುದನ್ನು ಮಾತ್ರ ಚಿತ್ರಿಸುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ, ರೈತರ ಬದುಕ ಅತ್ಯಂತ ಸಹಜ ಗ್ರಾಮೀಣ ವೃತ್ತಿ ಎಂಬ ಮತ್ತೊಂದು ಹಿನ್ನೆಲೆಯಲ್ಲಿ; ಚಿತ್ರಕಲೆ ಬಹುವಾಗಿ ನಗರೀಕೃತ ಬೆಳವಣಿಗೆ ಎಂಬ ಮೂರನೇ ಹಿನ್ನೆಲೆಯಲ್ಲಿ ಇದನ್ನು ಗ್ರಹಿಸಬೇಕಿದೆ. ಹಳ್ಳಿಯಲ್ಲಿ ಪ್ರಧಾನ ಉದ್ಯೋಗ ಉಳುಮೆಯದ್ದು. ಕುಲುಮೆ, ಬಡಗಿ, ಚಮ್ಮಾರ, ಬಿದಿರಿನ ಕೆಲಸದವರೆಲ್ಲರೂ ಈ ಉಳುಮೆಗೆ ನೆರವಾಗುವ ಉದ್ಯೋಗಗಳನ್ನು ಹೊಂದಿರುವವರು. ಇದು ಒಂದು ಸಹಜ ಸರಳ ಕಲ್ಪನೆ ಉಳುಮೆಯ ತಾಣಗಳ ಬಗ್ಗೆ.
ಇಂತಹ ರೈತಾಪಿ ಜೀವನದ ಬಗ್ಗೆ ಕನ್ನಡದ ಚಿತ್ರಕಲೆ ಹಾಗೂ ಕಲಾವಿದರುಗಳು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂದರೆ ಮೊದಲಿಗೆ ನೆನಪಾಗುವುದು ಶಾಂತಿನಿಕೇತನದಲ್ಲಿ 1950ರ ದಶಕದಲ್ಲಿ ನಂದಲಾಲ್ ಬೋಸ್ ಬಳಿ ವಿದ್ಯಾಭ್ಯಾಸ ಮಾಡಿದ ರಾಯಚೂರಿನ ರೈತಾಪಿ ಕಲಾವಿದ ಶಂಕರೇಗೌಡ ಬೆಟ್ಟದೂರ ಅವರು. ವಿಶೇಷವೆಂದರೆ, ಕಲಾಭ್ಯಾಸದ ನಂತರ ಊರಿಗೆ ಹಿಂದಿರುಗಿದ ನಂತರ ಅವರು ಚಿತ್ರಕಲೆ, ರೈತಬದುಕು ಹಾಗೂ ರೈತಚಳುವಳಿ ಈ ಮೂರರಲ್ಲೂ ತಮ್ಮನ್ನು ತೊಡಗಿಸಿಕೊಂಡದ್ದು. ಜೊತೆಗೆ ಮಗಳನ್ನು ಅನವರತ ಕಾಡುತ್ತಿದ್ದ ತಲೆಯ ನೋವನ್ನು ನಿವಾರಿಸುವ ಸಲುವಾಗಿ ಸ್ವತಃ ಕಲಿತ ಹೋಮಿಯೋಪತಿ ವೈದ್ಯವೃತ್ತಿಯನ್ನೂ ಸಹ ಕೊನೆಯವರೆಗೂ ಅಭ್ಯಸಿಸುತ್ತಿದರು.
ಕರ್ನಾಟಕದ ಕಲೆ ನಿಸರ್ಗಚಿತ್ರಗಳಿಗೆ ಪ್ರಸಿದ್ದ, ಬೇಸಾಯದ ಚಿತ್ರಣಕ್ಕಲ್ಲ. ನಿಸರ್ಗ ಚಿತ್ರಕಲಾವಿದರ ದಂಡೂ ಸಹ ದೊಡ್ಡದಿದೆ: ರುಮಾಲು ಕೆ. ವೆಂಕಟಪ್ಪ (ಊಟಿ, ಕೊಡೈಕನಾಲ್ ಚಿತ್ರಣ), ಎನ್. ಹನುಮಯ್ಯ (ಮೈಸೂರು ಜೀವನ), ಶಂಕರಗೌಡ ಬೆಟ್ಟದೂರ (ಬೆಟ್ಟದೂರು, ರಾಯಚೂರು, ಶಾಂತಿನಿಕೇತನ), ರುಮಾಲೆ ಚೆನ್ನಬಸಪ್ಪ (ಬೆಂಗಳೂರು, ಕಾವೇರಿ ನದಿ ದಂಡೆಯ ಹಲವು ತಾಣಗಳು), ಜೆ.ಎಸ್. ಖಂಡೇರಾವ್ (ಉತ್ತರ ಕರ್ನಾಟಕ) ಮುಂತಾದವರು ರಚಿಸಿರುವ ನಿಸರ್ಗ ಚಿತ್ರ ಎಂಬ ದೊಡ್ಡ ಕೊಡೆಯ ಅಡಿಯಲ್ಲಿ ಗ್ರಾಮೀಣ, ಬೇಸಾಯದ, ರೈತಾಪಿ ಕುಲದ ‘ದೃಶ್ಯಕಲ್ಪನೆ’ ವಿಶಿಷ್ಟವಾಗಿದೆ. ಬೆಟ್ಟದೂರ, ಹನುಮಯ್ಯ ಎಂಬ ಒಂದಿಬ್ಬರು ಕಲಾವಿದರನ್ನು ಹೊರತುಪಡಿಸಿದರೆ ಉಳಿದವರು ಬೇಸಾಯವನ್ನು ‘ಹೊರಗಿನವರಾಗಿ’, ಪಟ್ಟಣದಿಂದ ಬಂದವರಾಗ, ಗ್ರಾಮೀಣತೆಯ ರೊಮ್ಯಾಂಟಿಕ್ ಕಲ್ಪನೆಗೆ ಮಾರುಹೋದವರಂತೆ ತಮ್ಮ ಚಿತ್ರಗಳಲ್ಲಿ ತೋಡಿಕೊಂಡಿದ್ದಾರೆ. ಇವರಲ್ಲಿ ಬಹುಮಂದಿ ಗ್ರಾಮೀಣ ಹಿನ್ನೆಲೆಯಿಂದ ಬಂದಿದ್ದರೂ ಸಹ ಈ ಮಾತು ನಿಜ. ರುಮಾಲೆಯವರಂತೂ ಕಾವೇರಿ ನದಿ ಎಲ್ಲೆಲ್ಲಿ, ಯಾವ್ಯಾವ ಊರುಗಳಲ್ಲಿ ಹರಿದಿವೆಯೋ ಆ ಪ್ರಮುಖ ಪರಿಸರಗಳನ್ನು ತಮ್ಮ ನಿಸರ್ಗ ಚಿತ್ರಗಳ ಮೂಲಕ ಸೆರೆ ಹಿಡಿವ ಕೆಲಸವನ್ನು ಕರ್ನಾಟಕ ಸರ್ಕಾರವು ವಹಿಸಿತ್ತು.
1980ರ ದಶಕದ ಅಂತ್ಯದಲ್ಲಿ ಎಂ.ಜಿ.ರಸ್ತೆಯ ಪ್ಲಾಝಾದ ಕಾಂಪ್ಲೆಕ್ಸಿನಲ್ಲಿ ಸಿನೆಮಾ ನೋಡಲು ಸಾಲಿನಲ್ಲಿ ನಿಂತಿದ್ದಾಗ ಅಂತಹ ಒಂದು ರುಮಾಲೆಯವರ ಕೃತಿಯನ್ನು ಒಡೆದ ಗಾಜಿನ ಕೂರಿಸಿ ಅಥವಾ ಅಂತಹ ಚೌಕಟ್ಟಿನ ಗಾಜನ್ನು ಒಡೆದು, ಆ ಪ್ಲಾಝಾದ ಗೋಡೆಯ ಮೇಲೆ ಹಾಕಿದ್ದರು. ಮತ್ತೊಂದು ದಿನ ಮತ್ತೊಂದು ಸಿನೆಮಾಕ್ಕೆ ಹೋದಾಗ, ಆ ಅರೆಪ್ರಜ್ಞಾವಸ್ಥೆಯ ಕೃತಿಯನ್ನು ಪೂರ್ಣವಾಗಿ ತೆರವುಗೊಳಿಸಲಾಗಿತ್ತು! ಬ್ರಿಟಿಷರು ಭಾರತದಲ್ಲಿ 1850ರ ದಶಕದಲ್ಲಿ ಮದ್ರಾಸು, ಮುಂಬಯಿ ಹಾಗೂ ಕೊಲ್ಕತ್ತದಲ್ಲಿ ಆರಂಭಿಸಿದ ಕಲಾಶಾಲೆಗಳು ಭಾರತೀಯರನ್ನು ಕಲಾವಿದರನ್ನಾಗಿಸುವ ಆಸೆ ಹೊಂದಿರಲಿಲ್ಲ. ಬದಲಿಗೆ, ಕ್ಯಾಮರಾ ಮಾಡುವ ಕೆಲಸವನ್ನು ಭಾರತೀಯ ಕಲಾವಿದ್ಯಾರ್ಥಿಗಳು ಮಾಡಬೇಕಿತ್ತು. ಪಾಳುಬಿದ್ದ ಗುಡಿ, ಗೋಪುರ, ಗ್ರಾಮೀಣ ಪರಿಸರ, ಯುರೋಪಿಯನ್ ಅಲ್ಲದ, ಪಾಶ್ಚಾತ್ಯವಲ್ಲದ್ದು ಏನೇ ನವನವೀನವಾಗಿ ಅನ್ಯವಾಗಿ ಕಂಡರೂ ಅವುಗಳನ್ನೆಲ್ಲ ತಮ್ಮ ಪ್ರವಾಸೋದ್ಯಮದ ಅಂಗವಾಗಿ ಸ್ವಾಹಾ ಮಾಡುತ್ತಿತ್ತು. ಭಾರತದ ರೈತಾಪಿ ಜೀವನ, ಶೈಲಿ, ವಿಸ್ತರಣೆ, ಸಾಕುಪ್ರಾಣಿಗಳ ದೃಶ್ಯಕಥನಗಳನ್ನು ಮರದಚ್ಚಿನ, ಎಚಿಂಗ್ಗಳ ಮೂಲಕ ನಮಗೆ ದಾಖಲೆಯನ್ನಾಗಿಸಿ ಉಳಿಸಿರುವುದು ವಸಾಹತಿನ ಕೊಡುಗೆ ಎಂದರೆ ವಸಾಹತೋತ್ತರರು ಗಾಬರಿಗೊಳ್ಳುತ್ತಾರೆ. ಆದರೂ ಇದು ನಿಜ. ಏಕೆಂದರೆ ವಸಾಹತಿನ ಮುಂಚಿನ ಭಾರತದ ರೈತರ ಬದುಕು ಹೆಚ್ಚು ವಾಚ್ಯವೂ, ಬಾಯಿಮಾತಿಯ ಐತಿಹ್ಯವೂ ಆಗಿತ್ತು.
ಭಾರತದಲ್ಲಿ ಮೊದಲಿಗೆ ಬೇಸಾಯದ ಜಗತ್ತಿನ ರೇಖಾಚಿತ್ರಗಳನ್ನು, ಪ್ರಿಂಟ್ ಮೇಕಿಂಗ್ (ಲಿಥೋಗ್ರಾಫ್, ಎಚಿಂಗ್, ಇಂಗ್ರೇವಿಂಗ್) ಮುಂತಾದ ಮಾಧ್ಯಮದಲ್ಲಿ ಮೂಡಿಸಿದ ಪ್ರತಿಭೆ ಬ್ರಿಟಿಷ್ ವಸಾಹತು ಕಾಲಕ್ಕೆ, ಮನೋಭಾವಕ್ಕೆ ಸಲ್ಲುತ್ತದೆ. ಇಂಗ್ಲೆಂಡಿನಿಂದ ಬಂದ ಅನೇಕ ಕಲಾವಿದರುಗಳು (ಸ್ಟಬ್ಸ್ ಎಂಬಾತ ಕೇವಲ ಪ್ರಾಣಿಗಳ ಚಿತ್ರಗಳಿಗೆ ಮಾತ್ರ ಪ್ರಸಿದ್ಧ, ನಮ್ಮ ಮೈಸೂರಿನ ಎಫ್.ಎಂ. ಸೂಫಿ ಎಂಬ ಕಲಾವಿದರಂತೆ. ಡೇನಿಯಲ್ ಸಹೋದರರು ಮತ್ತು ಫ್ರೇಸರ್ ವಂಶದ ಕಲಾವಿದರು ಭಾರತೀಯ ಪಾಳುಬಿದ್ದ ಗ್ರಾಮೀಣತೆ, ಬಿಸಿಲ ದೇಶದ ನಾಟಕೀಯ ಬೆಳಕು-ನೆರಳು, ರೈತಾಪಿ ಬದುಕಿನ ಉಡುಗೆ ತೊಡುಗೆಗಳನ್ನು ಮಗ್ನರಾಗಿ, ಗಮನವಿರಿಸಿ, ಬೂದುಗಾಜಿನಲ್ಲಿ ನೋಡುವಂತೆ ವಿವರಿಸುವ ಚಿತ್ರವನ್ನಾಗಿಸಿದ್ದಾರೆ. ಭಾರತೀಯ ರೈತರನ್ನು ಹೀಗೆ ಹತ್ತಿರದಿಂದ ಗಮನಿಸುವ ಉದ್ದೇಶದ ಹಿಂದೆ ವರ್ಣೀಯ ಜನಾಂಗವನ್ನು ಬಿಳಿಯರು ನೋಡುವ ಗುಲಾಮ-ದೃಷ್ಟಿ ಕೆಲಸ ಮಾಡುತ್ತಿರುತ್ತದೆ ಎಂಬುದು ಇಂದು ಕಲಾವಿಮರ್ಶೆಯ ಬಿಸಿಬಿಸಿ ಸುದ್ಧಿ. ‘ನೋಡುತ್ತಿರುವವನು ಒಡೆಯ ನೋಡಲ್ಪಡುತ್ತಿರುವವ ದಾಸ’ ಎಂಬ ನಂಬಿಕೆ ಈ ಬ್ರಿಟಿಷ್ ಪ್ರಣೀತ ಭಾರತೀಯ ಗ್ರಾಮೀಣ ದೃಶ್ಯೀಕರಣದ ಹಿಂದಿದೆ ಎಂದು ವಸಾಹತೋತ್ತರ ವಿಮರ್ಶಕರು ನಂಬುತ್ತಾರೆ.
ಬ್ರಿಟಿಷರು (ಮತ್ತು ಡಚ್, ಪೋರ್ಚುಗಲ್, ಫ್ರೆಂಚ್ ವಸಾಹತುಶಾಹಿ) ಹೀಗೆ ಭಾರತದ ಗ್ರಾಮೀಣತೆಯನ್ನು ದೃಶ್ಯವನ್ನಾಗಿ ಮೂಡಿಸಲು ಇದ್ದ ಮೊದಲ ತೊಡಕೆಂದರೆ ಬೆಳಕಿನದ್ದು. ಯುರೋಪಿನ ಮೋಡ ಕವಿದ ಕಲಾವಿದರು ಭಾರತದ ಬಿಸಿಲನ್ನು ಹಿಡಿದಿರಿಸುವಾಗ, ಭಾರತಕ್ಕೆ ಬರದೇ ಅಂತಹ ಚಿತ್ರಗಳನ್ನು ನೋಡಿದ ಜಗತ್ತಿನ ಇತರೆ ಜನರು ಭಾರತವನ್ನು ದೃಷ್ಟೀಕರಿಸಿಕೊಂಡ ವಿಕ್ಷಿಪ್ತ ಕ್ರಮವನ್ನು ‘ಎಕ್ಲೆಕ್ಟಿಕ್ ಕಲೆ’ ಎನ್ನುತ್ತೇವೆ. ಕರ್ನಾಟಕದ/ಭಾರತದ ಗ್ರಾಮೀಣ ರೈತಾಪಿ ಜೀವನದ ರೇಖಾಚಿತ್ರಗಳನ್ನು ಯೂರೋಪಿನ ಕಲಾವಿದರಿಂದ ರಚಿಸಿ, ಲಂಡನ್ನಿಗೆ ಅವುಗಳನ್ನು ಕಳಿಸಿ, ಆ ಚಿತ್ರಗಳನ್ನು ಇಂಗ್ರೇವಿಂಗ್ಗಳನ್ನಾಗಿ, ಅದನ್ನು ಅಲ್ಲಿಯೇ ಜರ್ಮನಿಯಲ್ಲಿ ಮುದ್ರಿಸಿ, ಅದನ್ನು ಪೋರ್ಟ್ಫೋಲಿಯೋ ಪುಸ್ತಕವನ್ನಾಗಿಸಿ, ಮರಳಿ ಅವುಗಳನ್ನು ಭಾರತಕ್ಕೆ ಹಿಂದಿರುಗಿಸಿ, ಭಾರತಕೆ ಬರುತ್ತಿದ್ದ ಯುರೋಪು ಜನರಿಗೆ ಅವುಗಳನ್ನು ಸ್ಮರಣಿಕೆಗಳನ್ನಾಗಿ ಮಾರುತ್ತಿದ್ದರು! ವಸಾಹತುಗಳಿಗೆ ಭಾರತದ ರೈತಾಪಿ ಜೀವನದ ನೀತಿರೀತಿಗಳ ಬಗ್ಗೆ ಇದ್ದ ಆಸಕ್ತಿಗೆ ಹೆಚ್ಚು ಹೆಚ್ಚು ಮಸಾಲೆ ಹಚ್ಚಿದವರು ಯುರೋಪಿಯನ್ನರು. ಮಾರ್ಕೊ ಪೋಲೊ ಅಂತಹ ಪಾಶ್ಚಾತ್ಯ ಪ್ರವಾಸಿ, ಭಾರತ ಮುಂತಾದ ಪೌರ್ವಾತ್ಯ ದೇಶಗಳ ಸಂಚಾರ ಮಾಡಿ, ಇಟಲಿಯಲ್ಲಿನ, ಇಂದಿಗೂ ಭಾರತಕ್ಕೆ ಭೇಟಿ ನೀಡಿರದಿದ್ದ ಕಲಾವಿದನಿಗೆ, ಛಾಯಾಚಿತ್ರಗಳಿಲ್ಲದ ಕಾಲದಲ್ಲಿ ಮೌಖಿಕವಾಗಿ ವರ್ಣಿಸಿ, ಅವರಿಂದ ಬರೆಸಿದ ಚಿತ್ರದಲ್ಲಿ ಭಾರತೀಯ ರೈತರು ಹೇಗೆ ಕಂಡಿದ್ದಾರು! ಇಸ್ಕಾನ್ ಪುಸ್ತಕಗಳಲ್ಲಿ ಇಟಲಿಯ ಮಧ್ಯಯುಗೀನ ಮಹಾನ್ ಕಲಾವಿದರುಗಳ ಶೈಲಿಯಲ್ಲಿ ನಮ್ಮ ಬಾಲಕೃಷ್ಣ, ಬಲರಾಮರು ಕಂಡಂತಿರುತ್ತದೆ. ಆದರೆ ಛಾಯಾಚಿತ್ರಣ ಇಲ್ಲದಿದ್ದ ಕಾಲದಲ್ಲಿ ಇದೆ ಆಧಾರವಾಗಿತ್ತು. ಚಿತ್ರಣದಲ್ಲಿನ ಭಾರತದ ಗ್ರಾಮೀಣ, ರೈತ ಜೀವನವು ಅಸಲು ಬದುಕಿಗೆ ಮೆತ್ತನೆಯ ಮೋಡವನ್ನು ಹೊದ್ದಿಸಿಬಿಡುತ್ತದೆ.
1930-40ರ ದಶಕದಲ್ಲಿ ಬಂಗಾಳ ಪ್ರಾಂತ್ಯದಲ್ಲಿ ನಡೆದ ಬಹುದೊಡ್ಡ ರೈತ ಚಳವಳಿ ಎಂದರೆ ಅದು ‘ತೇಬಾಗ್’ ಚಳುವಳಿ. ಆ ಚಳವಳಿಯ ಭಾಗವಾಗಿ, ಸಾಧ್ಯಂತವಾಗಿ ಅದರಲ್ಲಿ ಭಾಗವಹಿಸಿದ ಒಬ್ಬ ಕಲಾವಿದ, ನಂತರ ಕಾಲದಲ್ಲಿ ಭಾರತದ ಬಹುಮುಖ್ಯ ಪ್ರಿಂಟ್ಮೇಕರ್ ಮತ್ತು ಶಿಲ್ಪಿ ಎಂದು ಖ್ಯಾತಿ ಗಳಿಸಿದ ಸೋಮನಾಥ್ ಹೋರ್ ಅವರು. ಅವರು ಆ ಚಳವಳಿಯಲ್ಲಿ ರೈತರೊಂದಿಗೆ ಇದ್ದು, ಅವರನ್ನು ರಾತ್ರಿ ಹಗಲು ಚಿತ್ರಗಳನ್ನಾಗಿಸಿದ ದಾಖಲೆಯ ಪುಸ್ತಕವೇ ‘ತೇಬಾಗ ದಿನಚರಿ’. ಪ್ರಪಂಚ ಯುದ್ಧಗಳು ನಡೆವಾಗ, ಅವುಗಳ ಕುರಿತು ಅನೇಕ ಎಚಿಂಗ್ಗಳನ್ನು ಮೂಡಿಸಿದ ಕ್ಯಾತೆ ಕೋವಿಜ್ ಎಂಬ ಕಲಾವಿದೆಯ ಕಾಲಕ್ಕೇ, 1930-40ರ ದಶಕದಲ್ಲಿ ಹೋರ್ ತೇಬಾಗ್ ಚಳವಳಿಯಲ್ಲಿ ಭಾಗವಹಿಸುತ್ತಿದ್ದರು, ದೃಶ್ಯ-ದಾಖಲೆ ನಿರ್ಮಿಸುತ್ತಿದ್ದರು. ಭಾರತದಲ್ಲಿ ಗುರುತರವಾಗಿ ಆಗಿಹೋಗಿರುವ ರೈತಾಪಿ ಚಳವಳಿಗಳಲ್ಲಿ ಪ್ರಮುಖವೆಂದರೆ, ಚಿಪ್ಕೋ ಚಳವಳಿ, ರೈತರ ದಂಗೆಗಳು, ‘ಉಳುವವನೇ ನೆಲದೊಡೆಯ’ ಎಂಬ ಆಡಳಿತದ ಗ್ರಹಿಕೆಗಳು ಇತ್ಯಾದಿ. ಸೋಮನಾಥರ ಚಿತ್ರಗಳು ಈ ಹಿನ್ನೆಲೆಯಲ್ಲಿ ರೈತಾಪಿ ಜನಜೀವನ ಕುರಿತಾದ ಎಡಪಂಥೀಯ ಚಿತ್ರಗಳು. ಆದರೆ ಕ್ಯಾತೆ ಕೋಲ್ವಿಟ್ಜ್ ಚಿತ್ರಗಳೊಂದಿಗೆ ಇವುಗಳನ್ನು ಅದಲುಬದಲು ಮಾಡಿಬಿಡಬಹುದು. ಅವು ಹಾಲೋಕಾಸ್ಟಿನ ಚಿತ್ರಗಳು ಇವು ರೈತರ ಬವಣೆಯ ನಿರ್ಭಾವುಕ ದೃಷ್ಟಿ. ಸೋಮನಾಥ್ ಹೋರ್ ಏಕೆ ಹೀಗೆ ಚಿತ್ರಿಸುತ್ತಾರೆಂದರೆ ಅವು ಒಳಗಿನವರ ದೃಷ್ಟಿಕೋನ, ದೇವನೂರರ ‘ಒಡಲಾಳ’ದಲ್ಲಿ ಹೇಗೆ ಬಡತನದ ಒಂದು ಘಟನೆಯನ್ನು ದುಃಖದುಮ್ಮಾನದ ಕ್ಲೀಷೆಯ ಆಚೆಯಿಂದ ಒಂದು ಉತ್ಸಾಹದಂತೆ ಆಚರಿಸಲಾಗುತ್ತದೋ ಅಂತಹ ದೃಶ್ಯಗಳು ತೇಬಾಗ್ ಚಿತ್ರಗಳು. ನೋವು, ಚಳಿ, ಅನಿಶ್ಚಿತತೆಯಲ್ಲಿಯೇ ಒಂದು ಸಂಭ್ರಮದಂತೆ ಚಳವಳಿಯನ್ನು ಆಚರಿಸಿದ ದೃಶ್ಯಗಳು ಸೋಮನಾಥರದ್ದು.
ಇಂತಹದ್ದೇ ರೈತಚಳವಳಿಯ ಭಾಗವಾಗಿದ್ದ ಶಂಕರಗೌಡರ ಒಂದು ಚಿತ್ರವಿದೆ: ಸಂಜೆ ಸೂರ್ಯ ಮುಳುಗುವ ಹೊತ್ತಿನಲ್ಲಿ ಪಕ್ಷಿಗಳು ಮರಳಿ ಗೂಡು ಸೇರುತ್ತಿರುವುದು, ಎರಡು ಎತ್ತಿನ ಬಂಡಿಗಳು ಚಿತ್ರದ ಚೌಕಟ್ಟಿನಿಂದ ಒಳಕ್ಕೆ ಹೋಗುತ್ತಿರುವ ಸ್ನಿಗ್ಧತೆ, ಹಳ್ಳಿಯ ಬಸ್ ನಿಲ್ದಾಣದ ಟೀ ಸ್ಟಾಲ್, ನದಿಯಲ್ಲಿ ಅರ್ಧ ಮುಳುಗಿ ದಾಟುತ್ತಿರುವ ಬಂಡಿಗಳು, ಕುರಿಹಿಂಡನ್ನು ಮೇಯಿಸುತ್ತಿರುವ ಕುರುಬ, ಧಾನ್ಯ ಹಸನು ಮಾಡುತ್ತಿರುವ ಮಹಿಳೆ, ಹುಣಿಸೇಮರ, ಮೇಯುತ್ತಿರುವ ಮೇಕೆಗಳ ಸಮೀಪ ದೃಶ್ಯ ಇತ್ಯಾದಿ. ಈ ಚಿತ್ರಗಳಲ್ಲಿ ಮೊದಲಿಗೆ ಆಕರ್ಷಿಸುವುದು ಇವುಗಳಲ್ಲಿನ ಅನಾಕರ್ಷಕ ಗುಣ. ಗೌಡರ ಚಿತ್ರಗಳಲ್ಲಿನ ಪ್ರಾಣಿಪಕ್ಷಿಗಳಿಗೆ ಹೊರಗಿನ, ಮೂರನೇ ಕಣ್ಣಿನ, ಪ್ರವಾಸಿನೋಟವು ತಮ್ಮನ್ನು ಆವರಿಸುತ್ತಿರುವ ಬಗ್ಗೆ ಆಸಡ್ಡೆಯ ಮೌನ. ದುರಂತವೆಂದರೆ ಇಂದು ಆ ಚಿತ್ರಗಳ ಲಭ್ಯತೆ ಮತ್ತು ಅಸ್ತಿತ್ವವೂ ಸಹ ಬಹುವಾಗಿ ಇಲ್ಲದಂತಾಗಿದೆ.
ಪ್ರವಾಸೋದ್ಯಮವೂ ಒಂದು ಪ್ರಾಮುಖ್ಯ ವೃತ್ತಿಯಾಗುವ ಮುನ್ನದ ಚಿತ್ರಗಳು ಇವೆಲ್ಲವೂ. ಪೋಸ್ಟ್-ಇಂಪ್ರೆಷನಿಸ್ಟ್ ಕಲಾವಿದ ವ್ಯಾನ್ ಗೋ ತನ್ನ ಚಿತ್ರಗಳಲ್ಲಿ ಸ್ವತಃ ತಾನೇ ಹಳದಿ ಗೋಧಿಯ ಹೊಲದೊಳಗೆ ನಿಂತು ಹೊಲವನ್ನು ತನ್ನ ದೃಶ್ಯಧ್ಯಾನದ ವಸ್ತುವನ್ನಾಗಿಸುತ್ತಾನೆ. ಆತನಿಗೆ ಹೊಲವೂ ಒಂದೇ, ಗಣಿಯೂ ಒಂದೇ. ರೈತರ ಹೊಲ ಆತನಿಗೆ ಉದರಕ್ಕೆ ಆಹಾರ ಒದಗಿಸುವ ಬದಲು ಮಾನಸಿಕ ಅಸ್ವಸ್ಥತೆಗೆ ಔಷಧವಾಗಿ ಒದಗಿಬಂದಿತ್ತು. ಆತನ ಚಿತ್ರಣ ಶೈಲಿಯ ಕುಂಚದ ಬೀಸುಗಳೂ ಸಹ ಗದ್ದೆಯಲ್ಲಿ ಪೈರು ನೆಡುವಂತೆ! ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ ಭೂಸಾಗುವಳಿ ಅಥವಾ ಬೇಸಾಯ ಆರಂಭಗೊಂಡಾಗ ಕಾಡು ನಾಡಾಗುವ ಹತ್ತು ಸಾವಿರ ವರ್ಷಗಳ ಯೋಜನೆ ಆರಂಭಗೊಂಡಿತು. ಅಷ್ಟರಲ್ಲೇ ಚಿತ್ರಕಲೆಯ ಉಗಮವಾಗಿ ಇಪ್ಪತ್ತು ಸಾವಿರ ವರ್ಷವಾಗಿತ್ತು! ದೃಶ್ಯಕಲೆಯು ಬೇಸಾಯಕಲೆಯ ದೊಡ್ಡಣ್ಣ. ಆದರೆ ಹಳ್ಳಿಗಳು ಮತ್ತು ಅವುಗಳ ಮೂಲ ವೃತ್ತಿಯಾದ ಬೇಸಾಯವು ನಾಶವಾಗುತ್ತ, ಕೈಗಾರಿಕಾ ಯುಗವು ಆರಂಭವಾಗುವ ಹೊತ್ತಿಗಷ್ಟೇ ಚಿತ್ರಕಲೆಯಲ್ಲಿ ‘ನಿಸರ್ಗಚಿತ್ರಣ’ ಎಂಬ ಪ್ರತ್ಯೇಕ ಚಿತ್ರಣಕ್ರಮವು ಹುಟ್ಟಿಕೊಂಡಿದ್ದು. ನಿಜದಲ್ಲಿ ಕಾಣೆಯಾಗುತ್ತಿರುವ ಕಾಡು, ಬೇಸಾಯದ ವೃತ್ತಿ ಹಾಗೂ ಗ್ರಾಮೀಣ ಕಲ್ಪನೆಯು ನಿಸರ್ಗ ಚಿತ್ರಗಳ ಮೂಲಕ, ಸಂಕೇತವಾಗಿ ಕಲಾತ್ಮಕವಾಗಿ ಪುನರ್ ಲಭ್ಯವಾಯಿತು. ಈ ಅರ್ಥದಲ್ಲಿ ಗ್ರಾಮೀಣ ಸಮಾಜವು ಕಳೆದುಕೊಂಡ ನೈಜತೆಯನ್ನು ಕಲಾವಿದರು ಹಿಂನೆನಪನ್ನಾಗಿ ಪುನರ್ ಸಂಪಾದಿಸಿಕೊಟ್ಟಿದ್ದಾರೆ.
(ಮುಂದುವರೆಯಲಿದೆ…)
ಅನ್ನದಾತನೊಂದಿಗೆ ನಾವು: ಬಂದರೋ ಅಲ್ಲಮಪ್ರಭು, ಒಕ್ಕಲಿಗ ಮುದ್ದಣ್ಣ, ಇಳಿಹಾಳ ಬೊಮ್ಮಯ್ಯ, ಚೆನ್ನಬಸವಣ್ಣ…
Published On - 1:24 pm, Tue, 12 January 21