2024ರ ಸೋಲು ಬದಿಗಿಟ್ಟು 2025ಕ್ಕೆ ಹೊಸ ಹುಮ್ಮಸ್ಸು ತೋರಿದ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ನಟಿಸಿದ 3 ಸಿನಿಮಾಗಳು ಬಿಡುಗಡೆ ಆಗಿದ್ದವು. ಇನ್ನೂ ಎರಡು ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಅವರಿಗೆ ಗೆಲುವು ಸಿಕ್ಕಿರಲಿಲ್ಲ. ಸತತ ಸೋಲು ಕಂಡಿರುವ ಅವರು ಈಗ ಹೊಸ ಹುಮ್ಮಸ್ಸಿನೊಂದಿಗೆ ಬಂದಿದ್ದಾರೆ. ಅಕ್ಷಯ್ ಕುಮಾರ್ ನಟಿಸಿರುವ ‘ಸ್ಕೈ ಫೋರ್ಸ್’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ.
ಬಾಲಿವುಡ್ನಲ್ಲಿ ಅಕ್ಷಯ್ ಕುಮಾರ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದಾರೆ. ಆದರೆ ಅದಕ್ಕೆ ತಕ್ಕಂತೆ ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ ಆಗುತ್ತಿಲ್ಲ. 2024ರಲ್ಲಿ ಅವರಿಗೆ ಗೆಲುವು ಸಿಗಲೇ ಇಲ್ಲ. ಹಾಗಾಗಿ ಕಳೆದ ವರ್ಷ ತಮಗೆ ಸವಾಲಾಗಿತ್ತು ಎಂದು ಅಕ್ಷಯ್ ಕುಮಾರ್ ಅವರು ಹೇಳಿದ್ದಾರೆ. ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲೇಬೇಕು ಎಂದು ಅವರು ಒಪ್ಪಿಕೊಂಡಿದ್ದಾರೆ. 2025ರಲ್ಲಿ ಗುಣಮಟ್ಟದ ಸಿನಿಮಾಗಳನ್ನು ನೀಡಲು ಅವರು ಸಜ್ಜಾಗಿದ್ದಾರೆ. ಅದರ ಮೊದಲ ಹಂತ ಎಂಬಂತೆ ‘ಸ್ಕೈ ಫೋರ್ಸ್’ ಸಿನಿಮಾ ಬರುತ್ತಿದೆ. ಅದರ ಬಗ್ಗೆ ಅವರು ಮಾತನಾಡಿದ್ದಾರೆ.
1965ರ ಇಂಡೋ-ಪಾಕ್ ಯುದ್ಧದ ವೇಳೆ ನಡೆದ ಭಾರತದ ಮೊದಲ ಏರ್ ಸ್ಕ್ರೈಕ್ ಕುರಿತು ‘ಸ್ಕೈ ಫೋರ್ಸ್’ ಸಿನಿಮಾ ಮೂಡಿಬಂದಿದೆ. ಇದರಲ್ಲಿ ಭಾರಿ ಆ್ಯಕ್ಷನ್ ದೃಶ್ಯಗಳು ಇವೆ. 2025ರಲ್ಲಿ ಅಕ್ಷಯ್ ಕುಮಾರ್ ಅವರು ‘ಸ್ಕೈ ಫೋರ್ಸ್’ ಸಿನಿಮಾದ ಮೂಲಕ ಖಾತೆ ತೆರೆಯುತ್ತಿದ್ದಾರೆ. ಬಹಳ ಹೆಮ್ಮೆಯಿಂದ ಅಕ್ಷಯ್ ಕುಮಾರ್ ಅವರು ಈ ಸಿನಿಮಾವನ್ನು ಮಾಡಿದ್ದಾರೆ. ಜನವರಿ 24ರಂದು ಗಣರಾಜ್ಯೋತ್ಸವದ ಪ್ರಯುಕ್ತ ಈ ಸಿನಿಮಾ ಬಿಡುಗಡೆ ಆಗಲಿದೆ.
‘ಸ್ಕೈ ಫೋರ್ಸ್’ ಸಿನಿಮಾ ಟ್ರೇಲರ್:
‘ನಾನು ನಟನಾಗಿ ಬೆಳೆಯುತ್ತಿದ್ದೇನೆ. ಪ್ರತಿ ಅನುಭವದಿಂದಲೂ ಕಲಿಯುತ್ತಿದ್ದೇನೆ. 2024ರಲ್ಲಿ ಸವಾಲುಗಳು ಇದ್ದವು. ಆದರೆ ಉತ್ತಮವಾದ ಸಿನಿಮಾಗಳ ಮೂಲಕ ಇನ್ನೂ ಗಟ್ಟಿಯಾಗಿ ಕಮ್ಬ್ಯಾಕ್ ಮಾಡುವ ನಿರ್ಧಾರ ನನ್ನದು. ನನಗೆ ತುಂಬಾ ಪ್ಯಾಷನ್ನಿಂದ ಮಾಡಿದ ಸಿನಿಮಾ ಸ್ಕೈ ಫೋರ್ಸ್. ನಮ್ಮ ದೇಶದ ವಾಯುಪಡೆಯ ಧೈರ್ಯ ಮತ್ತು ತ್ಯಾಗಕ್ಕೆ ಈ ಸಿನಿಮಾವನ್ನು ಅರ್ಪಿಸುತ್ತೇವೆ’ ಎಂದು ಅಕ್ಷಯ್ ಕುಮಾರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಭೂಲ್ ಭುಲಯ್ಯ 4’ ಚಿತ್ರದಲ್ಲಿ ಅಕ್ಷಯ್ ಕುಮಾರ್; ಕಥೆ ಓಕೆ ಆದ್ರೆ ಸ್ಟಾರ್ ನಟನ ಎಂಟ್ರಿ
ವಾಯುಪಡೆಯ ಸಮವರ್ಥವನ್ನು ಧರಿಸಿ ನಟಿಸಿದ್ದು ಅಕ್ಷಯ್ ಕುಮಾರ್ ಅವರ ಪಾಲಿಗೆ ಭಾವುಕ ಅನುಭವ ಆಗಿತ್ತು. ‘ಇಂಥ ರಿಯಲ್ ಹೀರೋಗಳ ಪಾತ್ರವನ್ನು ತೆರೆಮೇಲೆ ಮಾಡುವುದು ಮಹತ್ವದ ಅವಕಾಶ’ ಎಂದು ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ. ಸಂದೀಪ್ ಕೆವ್ಲಾನಿ ಮತ್ತು ಅಭಿಷೇಕ್ ಕಪೂರ್ ಅವರು ಜಂಟಿಯಾಗಿ ‘ಸ್ಕೈ ಫೋರ್ಸ್’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸಾರಾ ಅಲಿ ಖಾನ್, ನಿಮ್ರತ್ ಕೌರ್, ವೀರ್ ಪಹರಿಯಾ ಅವರು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.
‘ಸ್ಕೈ ಫೋರ್ಸ್’ ಸಿನಿಮಾಗೆ ‘ಮೆಡಾಕ್ ಫಿಲ್ಮ್ಸ್’ ಮೂಲಕ ದಿನೇಶ್ ವಿಜನ್ ಅವರು ಸಹ-ನಿರ್ಮಾಪಕರಾಗಿದ್ದಾರೆ. ಸೌತ್ ಸಿನಿಮಾ ಮಾತ್ರವಲ್ಲದೇ ಬಾಲಿವುಡ್ ಚಿತ್ರಗಳು ಕೂಡ ಉತ್ತಮವಾಗಿ ಕಲೆಕ್ಷನ್ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ. ‘ಸ್ತ್ರೀ 2’, ‘ಮುಂಜ್ಯ’ ಮುಂತಾದ ಸಿನಿಮಾಗಳ ಮೂಲಕ ದಿನೇಶ್ ವಿಜನ್ ಅವರು ಕಳೆದ ವರ್ಷ ಗೆಲುವು ಕಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.