ನೀವೀಗ ಬಸ್ಸೋ, ರೈಲೋ, ವಿಮಾನವೋ ಏನೋ ಒಂದು ಏರಿ ಕುಳಿತುಕೊಳ್ಳುತ್ತೀರಿ. ನಿಮ್ಮ ಅಕ್ಕಪಕ್ಕದವರ ಬಗ್ಗೆ ಮನುಷ್ಯ ಸಹಜ ಕುತೂಹಲದ ನೋಟ ಹರಿಸುತ್ತೀರಿ; ನಿಮ್ಮದು ಯಾವ ಊರು, ಏನು ಕೆಲಸ, ಎಲ್ಲಿಗೆ ಹೊರಟಿದ್ದೀರಿ… ಸಾಗಿದ ಮಾತು ಎಲ್ಲಿಂದೆಲ್ಲಿಗೆ ಬಂದು ನಿಲ್ಲುತ್ತದೆ ಅಥವಾ ತುಂಡರಿಸಿಕೊಳ್ಳುತ್ತದೆ ಎನ್ನುವುದು ನಿಮ್ಮ ನಿಮ್ಮ ಗುಣ, ಸ್ವಭಾವ, ಅಭಿರುಚಿ, ಆಸಕ್ತಿ ಮತ್ತು ದೃಷ್ಟಿಕೋನಗಳ ಮೇಲೆ ನಿಲ್ಲುತ್ತದೆ. ಸಿಕ್ಕ ಒಂದು ಸಮಾನ ತಂತು ಸಹಜವಾಗಿ ಸಂಧಿಸಿದರೆ ಪ್ರಯಾಣ ಚೇತೋಹಾರಿ. ಇಲ್ಲವಾದರೆ ಇಳಿದ ಮೇಲೆ ಅವರ್ಯಾರೋ ನಾವ್ಯಾರೋ. ಅದು ಅಷ್ಟಕ್ಕೇ ಮುಗಿದರೆ ಸರಿ. ಆದರೆ ಸಹಪ್ರಯಾಣಿಕರು ಇಳಿದು ಹೋದಮೇಲೆಯೂ ಅವರ ವೈಯಕ್ತಿಕ ಸಂಗತಿ ಅಥವಾ ಅಭಿಲಾಷೆಗಳ ಬಗ್ಗೆ ಅನವಶ್ಯಕವಾಗಿ ನೀವು ‘ಕತ್ತರಿ’ಯಾಡಿಸಿದರೆ? ಇದು ಮಾನವೀಯತೆಯೇ, ಸಂಸ್ಕಾರವೇ?
ಉತ್ತರಾಖಂಡದ ಮಾನ್ಯ ಮುಖ್ಯಮಂತ್ರಿ ತೀರಥ್ ಸಿಂಗ್ ಅವರೇ, ನಮ್ಮ ದೇಶದ ಯುವಜನತೆ Ripped Jean (ಹರಿದ ಜೀನ್ಸ್) ತೊಡುವ ಬಗ್ಗೆ ನೀವು ನಿಮ್ಮ ಅಭಿಪ್ರಾಯ ಹೇಳಿದ್ದೀರಿ. ನಮ್ಮ ಬರಹಗಾರರು ಅನುಭವಿಸಿದ ಗಳಿಗೆಗಳಿಗೆ ಜಾರಿ ವಾಸ್ತವಕ್ಕೆ ಬಂದು ನಿಮಗೆ ಪತ್ರಸ್ಪಂದನ ಮಾಡಿದ್ದಾರೆ.
ಪರಿಕಲ್ಪನೆ : ಶ್ರೀದೇವಿ ಕಳಸದ
ದೆಹಲಿಯಿಂದ ಲೇಖಕಿ, ಕವಿ ರೇಣುಕಾ ನಿಡಗುಂದಿ.
ನಮಸ್ಕಾರ ತೀರಥ್ ಸಿಂಗ್ ರಾವತ್ ಅವರಿಗೆ
ನೀವು ಉತ್ತರಾಖಂಡದ ಮುಖ್ಯಮಂತ್ರಿಗಳು ಎಂದಾಗ ಕಣ್ಣೆದುರಿಗೆ ಮನಾಲಿ, ಚಮೋಲಿ, ಚೋಪ್ತಾ, ಜೋಶಿಮಠದಂಥ ಎತ್ತರೆತ್ತರ ಹಿಮಾಚ್ಚಾದಿತ ರಮಣೀಯ ಬೆಟ್ಟಗುಡ್ದಗಳು, ಬೆಟ್ಟಗಳಿಂದ ಹರಿವ ತೊರೆಗಳು ಮತ್ತು ಎತ್ತರೆತ್ತರ ಹಸಿರು ವೃಕ್ಷಗಳು ಕಣ್ಣೆದುರಿಗೆ ನಿಂತವು. ಅಲ್ಲದೇ ನೀವು ಬಾಲ್ಯದಿಂದಲೂ ಉತ್ತರಾಖಂಡಕ್ಕೆ ಬರುವ ವಿದೇಶ ಪ್ರವಾಸಿಗರನ್ನು, ಚಾರಣಪ್ರೇಮಿಗಳನ್ನೂ ನೋಡುತ್ತಲೇ ಬೆಳೆದಿರಬೇಕಲ್ಲ. ನಾನು ಹೇಳಬಯಸುವುದೇನೆಂದರೆ ನೀವು ನೋಡಬೇಕಾದ ದೃಷ್ಟಿ ಆಲೋಚನೆಗಳೂ ನಿಮ್ಮ ತಾಯ್ನೆಲದ ರಮ್ಯತೆಯಂತೆ ಉನ್ನತವಾಗಿರಲಿ ಎಂದು ಆಶಿಸಿ ನಿಮ್ಮ ಗಮನಕ್ಕೆ ಕೆಲ ವಿಷಯಗಳನ್ನು ತರಬೇಕೆಂದುಕೊಂಡಿದ್ದೇನೆ.
ಬಹುಶಃ 2012ರಲ್ಲಿ ಆದ ನಿರ್ಭಯಾ ಘಟನೆ ನೆನಪಿರಬಹುದು. ದೇಶದಾದ್ಯಂತ ಹೊತ್ತಿದ ಆಕ್ರೋಶದ ಕಿಡಿಯಿಂದಾಗಿ ನಡೆದ ತೀವ್ರ ಆಂದೋಲನಗಳಿಂದಾಗಿ ಜಸ್ಟಿಸ್ ವರ್ಮಾ ಸಮಿತಿಯ ಶಿಫಾರಸ್ಸು, ತಿದ್ದುಪಡಿಗಳಿಂದ ಕಾನೂನಿನಲ್ಲಿ ಅನೇಕ ಸುಧಾರಣೆಗಳಾದವು. ಆದರೇನು ಅತ್ಯಾಚಾರಗಳು ನಿಂತಿವೆಯೇ? ಹಥರಸ್ ಯುವತಿಯ ಸಾವು, ಉನ್ನಾವಿನ ಮೂರು ಮೂರು ಸರಣಿ ಘಟನೆಗಳಲ್ಲಿ ಬಿಜೆಪಿ ಮುಖಂಡ ಕುಲದೀಪ್ ಸೇಂಗರನಿಂದ ಅತ್ಯಾಚಾರಕ್ಕೊಳಗಾದ ಯುವತಿಯನ್ನು ಕೊಲ್ಲಲು ಪ್ರಯತ್ನಿಸಿದ. ಆದರೆ ಆಕೆ ಸುರಕ್ಷಿತವಾಗಿದ್ದಾಳೆ. ಇನ್ನೊಬ್ಬ ಯುವತಿ ತನ್ನ ಹೇಳಿಕೆಯನ್ನು ಕೊಡುವ ಮುನ್ನವೇ ಸೀಮೆಯೆಣ್ಣೆ ಸುರಿದು ಹಾಡಾಹಗಲೇ ಆಕೆಯ ಹೊಲದಲ್ಲಿಯೇ ಕೇಡಿಗಳು ಆಕೆಯನ್ನು ಸುಟ್ಟು ಕೊಂದರು. ಕಠುವಾದ ಏಳುವರ್ಷದ ಪೋರಿ ಅಸೀಫಾಳಲ್ಲಿ ಕಾಮುಕರನ್ನು ಉದ್ರೇಕಿಸುವಂಥದ್ದು ಏನಿತ್ತು? ಆ ಹಸುಳೆಯನ್ನು ಹಿಸುಕಿ ಹೊಸಕಿದ್ದಲ್ಲದೇ ಕಲ್ಲು ಚಪ್ಪಡಿಯಿಂದ ಹೊಡೆದು ಸಾಯಿಸುವವರು ನಿಜಕ್ಕೂ ಮನುಷ್ಯರಾಗಿರಲು ಸಾಧ್ಯವಿಲ್ಲ. ಹೀಗೆ ಬರೆಯುತ್ತಾ ಹೋದರೆ ಈ ಪಟ್ಟಿ ಮುಗಿಯುವುದಿಲ್ಲ. ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ನೀವು ಇಂಥ ಸೂಕ್ಷ್ಮತೆಗಳನ್ನು ಕಡೆಗಣಿಸಲಾಗದು.
2019ರ ಮಾರ್ಚ್ ತಿಂಗಳಲ್ಲಿ ಇಂಡಿಯಾನಾದ ನೊಟ್ರೆ ಡೆಮ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪತ್ರಿಕೆಗೆ ನಿಮ್ಮಂತೆಯೇ ಚಿಂತನೆಯುಳ್ಳ ಮೆರಿಯನ್ ವೈಟ್ ಎಂಬ ತಾಯೊಯೊಬ್ಬಳು ಪತ್ರ ಬರೆದಿದ್ದಳು. ಯುವತಿಯರು ಬಿಗಿಯಾದ ಲೆಗಿಂಗ್ಸ್ ಹಾಕುವುದರಿಂದ ತನ್ನ ಗಂಡುಮಕ್ಕಳ ಮನಸ್ಸು ಚಂಚಲವಾಗುತ್ತದೆ ಅವರಿಗೆ ಓದಿನಲ್ಲಿ ಮಗ್ನತೆ ಇರುವುದಿಲ್ಲ. ಅದಕ್ಕಾಗಿ ಲೆಗ್ಗಿಂಗ್ ಹಾಕುವುದನ್ನು ಕ್ಯಾಂಪಸ್ಸಿನಲ್ಲಿ ನಿಷೇಧಿಸಬೇಕು ಎಂದು ಆಕೆ ವಿನಂತಿಸಿಕೊಂಡಿದ್ದಳು. ಇಷ್ಟೇ ಅಲ್ಲದೇ ಆ ಮಹಿಳೆ ‘ಕ್ಯಾಥೊಲಿಕ್ ತಾಯಿ’ ಎಂದು ತನ್ನ ಧರ್ಮಕ್ಕೆ ಹೆಚ್ಚು ಒತ್ತುಕೊಟ್ಟು ಧರ್ಮ ಸಂಸ್ಕೃತಿಯ ಭಾರವನ್ನು ಹೇರಿದ್ದಳು.
ಆ ಪತ್ರದ ವೈಖರಿಯನ್ನು ಪ್ರತಿಭಟಿಸಿ ನೊಟ್ರೆ ಡೇಮಿನ ಯುವತಿಯರು ಮಾರ್ಚ್ 26ರಂದು ಬೀದಿಗಿಳಿದು ‘ಲೆಗ್ಗಿಂಗ್ಸ್ ಡೇ’ ನಡಿಗೆಯಿಂದ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದರು. ಟ್ವಿಟ್ಟರಿನಲ್ಲಿ ಹ್ಯಾಷಟ್ಯಾಗ್ leggingsdayND ಲೆಗಿಂಗ್ಸ್ ಡೇ ಎನ್ಡಿ, ಲವ್ ಯುವರ್ ಲೆಗ್ಗಿಂಗ್ಸ್ ಡೇ’ ಆಂದೋಲನಗಳಾಗಿದ್ದವು.
ನಿಮ್ಮ ಹೇಳಿಕೆಯ ನಂತರ ಟ್ವಿಟರ್, ಇನ್ಸ್ಟಾಗ್ರಾಂದಂಥ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಅನೇಕ ಯುವತಿಯರು ವಿಧವಿಧದ ಹರಿದ ಜೀನ್ಸ್ ತೊಟ್ಟು ಫೋಟೋ ಪ್ರತಿಭಟನೆಯನ್ನು ನಡೆಸಿದರು. ಯಾಕೆಂದರೆ ನಾವೇನು ತೊಡಬೇಕೆಂಬುದು ನಮ್ಮ ಖಾಸಗಿ ಆಯ್ಕೆ. ನಾವು ಧರಿಸಿರುವದು ಸಂಪೂರ್ಣವಾಗಿ ನಮ್ಮ ಸ್ವಂತ ಆಯ್ಕೆ ಎನ್ನುವುದನ್ನು ಇನ್ನೂ ಎಷ್ಟು ಕಾಲ ಹೇಳುತ್ತಿರೋಣ ಹೇಳಿ!
ಈ ಇಂಡಿಯಾನಾದ ಸುದ್ದಿಯನ್ನು ಯಾಕೆ ಪ್ರಸ್ತಾಪಿಸಿದೆನೆಂದರೆ ಧರ್ಮದ ಅಮಲು ಬಹಳ ಕೆಟ್ಟದ್ದು. ಈ ಅಮಲಿನಲ್ಲಿ ಬುದ್ಧಿ ವಿವೇಕಗಳನ್ನು ಕಳೆದುಕೊಂಡವರು ಬರೀ ಪುರುಷರಷ್ಟೇ ಅಲ್ಲ ಮಹಿಳೆಯರೂ ಇದ್ದಾರೆ, ಅದು ದೇಶಾತೀತ ಮತ್ತು ಕಾಲಾತೀತ ಎಂಬುದಕ್ಕಷ್ಟೇ ಉದಾಹರಿಸಿದ್ದು. ಮತ್ತು ನಿಮ್ಮಂಥ ಪುರುಷರು ನೀವೊಬ್ಬರೇ ಇಲ್ಲ, ನಿಮಗಿಂತ ಮೊದಲೂ ಅನೇಕರಿದ್ದರು ನಿಮ್ಮ ನಂತರವೂ ಇನ್ನೂ ಅನೇಕರು ತಮ್ಮ ಸಂಸ್ಕೃತಿಯ ಜ್ಞಾನವನ್ನು ಧರ್ಮದ ಹೆಸರಿನಲ್ಲಿ ಹಂಚುತ್ತ ಮಹಿಳೆಯರನ್ನು ಹತ್ತಿಕ್ಕಲು ಇದ್ದೇ ಇರುತ್ತಾರೆ.
2012ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರು ಪುರುಷರ ತಂಡದಿಂದ ಒಂದು ಕಿರುಕುಳದ ತನಿಖೆ ಮಾಡಲು ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗಿಯ ಅವರು ಗುವಾಹಟಿಗೆ ಹೋಗಿದ್ದಾಗ ‘ಪುರುಷರನ್ನು ಕೆರಳಿಸುವ ರೀತಿಯಲ್ಲಿ ಮಹಿಳೆಯರು ಉಡುಗೆ ತೊಡಬಾರದು’ ಎಂದು ಹೇಳಿದ್ದರು. ಮುಂದೆ ಇದೇ ವಿಜಯವರ್ಗಿಯ ರಾಮಾಯಣವನ್ನು ಉಲ್ಲೇಖಿಸಿ, ಸೀತೆಯನ್ನು ರಾವಣನಿಂದ ಅಪಹರಿಸಿದಂತೆ, ಮಹಿಳೆ ತನ್ನ ಮಿತಿಗಳನ್ನು ಮೀರಿದರೆ ಶಿಕ್ಷೆ ಅನುಭವಿಸಬೇಕಾಗಬಹುದು ಎಂದು ಹೇಳಿದ್ದರು.
ಇದೇ ರೀತಿ ಉತ್ತರ ಪ್ರದೇಶದ ಮುಜಫರ್ನಗರ ಜಿಲ್ಲೆಯ ಖಪ್ ಪಂಚಾಯತಿಯಿಂದ ಹಿಂದೆ ಮಹಿಳೆಯರು ಜೀನ್ಸ್ ಮತ್ತು ಪುರುಷರು ಶಾರ್ಟ್ಸ್ ಧರಿಸುವುದನ್ನು ನಿಷೇಧಿಸಿತು. ಜೀನ್ಸ್ ಉಡುಗೆಯು ಪಾಶ್ಚಿಮಾತ್ಯ ಸಂಸ್ಕೃತಿಯ ಭಾಗವಾಗಿದೆ ಮತ್ತು ಜನರು ಸಾಂಪ್ರದಾಯಿಕ ಭಾರತೀಯ ಬಟ್ಟೆಗಳನ್ನು ಧರಿಸಬೇಕು ಎಂದು ಹೇಳಿತ್ತು. ಇವರಷ್ಟೇ ಏಕೆ ಬ್ರಹ್ಮಾಂಡದ ನರೇಂದ್ರ ಬಾಬೂ ಮಹಾಶಯರು ಜೀನ್ಸ್ ತೊಡುವುದರಿಂದ ಗರ್ಭಾಶಯದ ಕ್ಯಾನ್ಸರ್ ಆಗುತ್ತದೆಯೆಂದು ಹೆದರಿಸಿದ್ದು ನೆನಪಾದರೆ ನಗು ಬರುತ್ತದೆ.
ನಿರ್ಭಯಾ ಪ್ರಕರಣದ ನಂತರ ಹೇಳಿಕೆ ಕೊಟ್ಟವರಲ್ಲಿ ಚೌಧರಿ ಮುಲಾಯಂ ಸಿಂಗ್ ಯಾದವ್ ಅವರೂ ಹಿಂದೆ ಬೀಳಲಿಲ್ಲ. ‘ಏನೋ ಹೀಗೇ ಗಂಡುಹುಡುಗರು ತಪ್ಪು ಮಾಡ್ತಾರೆ’ ಎಂಬ ಉಡಾಫೆಯಲ್ಲಿ ನುಡಿದಿದ್ದರು. ‘ಏನೋ ಹುಡುಗ ಅಪ್ಪನ ಜೇಬಿನಿಂದ ರುಪಾಯಿ ಕದ್ದರೇನಾಯ್ತು ಬಿಡು’ ಅನ್ನುವಂತೆ. ಕೆಲವರು ಆಕೆ ರಾತ್ರಿ ಒಂಬತ್ತಕ್ಕೆ ಮನೆಯಿಂದ ಗೆಳೆಯನೊಂದಿಗೆ ಇದ್ದುದೇಕೆ? ಆಕೆ ಕೂದಲನ್ನು ಇಳಿಬಿಟ್ಟಿದ್ದಳು ಅದಕ್ಕೇ ಅತ್ಯಾಚಾರವಾಯ್ತು. ಆಕೆಯನ್ನು ‘ಗೆಳೆಯ’ ನೊಂದಿಗೆ ನೋಡಿ ಬಸ್ಸಿನ ಪುಂಡರು ಉದ್ರೇಕಗೊಂಡರೇ? ಈ ದೇಶದಲ್ಲಿ ಪ್ರತಿಯೊಬ್ಬ ಯುವತಿಯೂ ಒಬ್ಬ ಅಪ್ಪನ ಮಗಳಾಗಿರುತ್ತಾಳೆ. ಆ ಮನೆಯ ಜ್ಯೋತಿ, ತಂದೆತಾಯಿಯರ ಕಣ್ಮಣಿ ಅವಳು. ನಿಮ್ಮ ಮನೆಯೊಳಗಿದ್ದರೆ ಆಕೆ ಕಣ್ಮಣಿ, ಹೊರಗಿನವರ ಮಗಳಾದರೆ ಆಕೆ ಉಪಭೋಗಕ್ಕೆ ಎನ್ನುವ ಮನಸ್ಥಿತಿ ಬದಲಾಗುವವರೆಗೂ ನಾವು ಏನನ್ನೂ ನಿರೀಕ್ಷಿಸುವ ಹಾಗಿಲ್ಲ. ಇನ್ನು ಆಕೆ ತೊಡುವ ಉಡುಪು ಹೇಗಿರಬೇಕೆಂದು ನಿರ್ದೇಶಿಸುವುದನ್ನು ಬಿಟ್ಟುಬಿಡಿ. ಬಾಲ್ಯದಲ್ಲಿ ನಾನೂ ಹರಿದ ಬಟ್ಟೆಗಳನ್ನು ರಫೂ ಮಾಡಿಯೇ ತೊಟ್ಟಿದ್ದಿದೆ. ನಾನು ಉಟ್ಟು ಹಳತಾದ ಅಂಗಿಗಳನ್ನು ನನ್ನ ತಂಗಿಯರು ಮಾಮನ ಮಕ್ಕಳೂ ತೊಡುತ್ತಿದುದು ನೆನಪಾಗುತ್ತದೆ. ಆಗ ಯಾರೂ ಪಿಸಿದ ಅಂಗಿಯೊಳಗೆ ಇಣುಕುವುದಿಲ್ಲ ಎಂಬ ನಂಬಿಗೆಯಿತ್ತು ನಮಗೆ. ಅಂಥ ಯಾವ ಮುಳ್ಳುನೋಟಗಳೂ ನೆನಪಿಲ್ಲ ನನಗೆ.
ನಾನು ಒಂಥರ ಪ್ರಮೀಳಾ ರಾಜ್ಯದಲ್ಲಿ ಬೆಳೆದವಳು. ಅಂದರೆ ನಮ್ಮ ಅವ್ವ ಮತ್ತು ನಾವು ಮೂವರು ಹೆಣ್ಣುಮಕ್ಕಳು ಒಬ್ಬ ತಮ್ಮ ಇಷ್ಟು ಪುಟ್ಟ ಲೋಕದಲ್ಲಿ ಬೆಳೆದೆ. ಅಪ್ಪ ದೂರದ ದಹಾನುವಿನಲ್ಲಿ ಹೊಟ್ಟೆಪಾಡಿಗಾಗಿ ನಾನು ಹತ್ತು ವರ್ಷದವಳಿದ್ದಾಗಲೇ ವರ್ಗವಾಯಿತೆಂದು ಹೋಗಿದ್ದ. ಆಗ ಅಪ್ಪ ತಂದ ಆಕಾಶನೀಲಿ ನೈಲಾನ್ ಫ್ರಾಕ್ ಬಿಟ್ಟರೆ ಅಷ್ಟು ಚೆಂದದ ಫ್ರಾಕ್ ತೊಟ್ಟ ನೆನಪಿಲ್ಲ.
ಒಂದು ರೀತಿಯ ಆರ್ಥಿಕ ಹೊಣೆಗಾರಿಗೆ ನಮಗಿತ್ತು.ಇದ್ದುದರಲ್ಲಿಯೇ ನಾವು ಓದಬೇಕು. ಅವ್ವ ಮನೆ ನಡೆಸಬೇಕು ಎಂಬ ಅರಿವು ಪ್ರಜ್ಞೆ ಇದ್ದುದರಿಂದಲೋ ಏನೋ ನಾನು ಯಾವತ್ತೂ ಹೊಸ ಬಟ್ಟೆಬರೆಗಾಗಿ ಕಾಡಿಸಿದ್ದಿಲ್ಲ. ನನ್ನ ಗೆಳತಿಯರು ಆಗ ಹಾಂಕಾಂಗ್ ಬಟ್ಟೆ ಅಂತ ಗುಳ್ಳುಗುಳ್ಳೆ ಬಟ್ಟೆಯ ಚೆಂದಾ ಚೆಂದ ಫ್ರಾಕು ಸ್ಕರ್ಟ್ ಹಾಕುತ್ತಿದ್ದರು. ನಾನೊಂದು ಸಲವೂ ಹೊಲಿಸಿಕೊಳ್ಳಲಾಗಲಿಲ್ಲ.
ಇನ್ನು ನಾ ಹೈಸ್ಕೂಲ್ ಸೇರಿದಾಗ ಕರ್ನಾಟಕ ಹೈಸ್ಕೂಲ್. ಕೆ.ಎನ್.ಕೆ ಗರ್ಲ್ಸ್ ಸ್ಕೂಲ್ ಒಂದೇ ಆವರಣದಲ್ಲಿದ್ದವು. ನಾವು ಹುಡುಗಿಯರೆಲ್ಲ ಸಂಸ್ಕೃತ ತರಗತಿಗೆ ಹುಡುಗರ ತರಗತಿಗೆ ಹೋಗಬೇಕಿತ್ತು ಆಗಲೇ ವಯಸ್ಸಿಗೆ ಮೀರಿದ ಬೆಳವಣಿಗೆಯ ಹುಡುಗಿಯರೂ ಇದ್ದುದರಿಂದ ನಾ ಸೇರಿಕೊಂಡ ವರ್ಷವೇ ಎಂಟರಿಂದ ಹತ್ತನೇ ತರಗತಿಯವರಿಗೆ ಸ್ಕರ್ಟ್ ಬದಲು ಯೂನಿಫಾರ್ಮ್ ಲಂಗ ಕಡ್ಡಾಯವಾಗಬೇಕೆ? ನಾನೂ ಅಗಲಗಲದ ಪ್ಲೀಟ್ಸ ಇರುವ ಸ್ಕರ್ಟ ತೊಡಬೇಕು ಅಂತ ಕನಸು ಕಂಡರೆ ಅದೂ ನುಚ್ಚುನೂರಾಯ್ತು.
ಬ್ಲೌಸಿನ ಕಾಲರ್, ತೋಳಿನ ಒಳಭಾಗ ಬಗಲಿನ ಬಳಿಯೇ ಪಿಸಿದು ಹೋಗುತ್ತಿದ್ದುದರಿಂದ ಹರಿದವುಗಳು ಮನೆಯೊಳಗೆ ತೊಡುವ ಉಡುಪು, ಒಳ್ಳೆಯವು ಹೊರಗಿನ ಉಡುಪುಗಳಾಗಿ ಮಲಮಕ್ಕಳಂತೆ ಒಂದೇ ಪೆಟ್ಟಿಗೆಯಲ್ಲಿರುತ್ತಿದ್ದವು. ನಮ್ಮ ಮನೆಯಲ್ಲಿ ಉಷಾ ಹೊಲಿಗೆಯಂತ್ರವಿದ್ದುದರಿಂದ ನಾವೆಲ್ಲ ತಕ್ಷಣ ಹರಿದದ್ದು ಕಿತ್ತಿದ್ದನ್ನು ರಫೂ ಮಾಡಿಕೊಳ್ಳುತ್ತಿದ್ದೆವು. ನನ್ನ ಉದ್ದದ ಲಂಗ ಗಿಡ್ಡವಾಗಿಸಿ ತಂಗಿಯರು ಹಾಕಿಕೊಳ್ಳಬಹುದಿತ್ತು. ಹೀಗೆ ಹೊಲಿಗೆಯಂತ್ರ ನಮ್ಮ ಸಂಗಾತಿಯಾಗಿದ್ದು ಈಗಲೂ ಹೆಮ್ಮಯೆನಿಸುತ್ತದೆ.
ಏನಪ್ಪಾ ವಿಷಯ ಅಂದ್ರೆ ಆಗಿನ ಕಾಲದಲ್ಲಿ ಎಲ್ಲರೂ ಬಡವರೇ ಆಗಿದ್ರು. ಶ್ರೀಮಂತರೆಂದರೆ ಸೈಕಲ್ಲು, ಸ್ಕೂಟರು ಇದ್ದರೆ ದೊಡ್ಡದು. ಸಾಲು ಮನೆಗಳ ಕಮತ ಮಾಡುವ ರೈತಾಪಿ ಹೆಂಗಸರು ನೆತ್ತಿಯ ಮೇಲೇ ಸೆರಗು ಪಿಸಿದದ್ದನ್ನು ಪರಪರ ಹರಿದುಹಾಕಿ ಕೈಯಿಂದ ಜಿನುಗು ರವೆಯನ್ನು ಒತ್ತಾಗಿ ಇಟ್ಟಂತೆ ಸಣ್ಣ ಸೂಜಿಯಿಂದ ತುರುಪಿ ಹಾಕಿ ಹೊಲಿದು ಉಡುತ್ತಿದ್ದುದು ಯಾರಿಗಾದರೂ ಅಸಹ್ಯ ಎನಿಸಿತ್ತಾ? ತಾವೇ ಕುಬುಸ ಹೊಲಿದುಕೊಳ್ಳುವ ಅಜ್ಜಿಗಳು, ಕೌದಿಯಿಂದ ಹಿಡಿದು ಎಲೆಯಡಿಕೆ ಸಂಚಿಯನ್ನೂ ಕೈಯಲ್ಲೇ ಹೊಲಿಯುತ್ತಿದ್ದರು. ಒಬ್ಬರೂ ಬ್ಯಾಸರಾ ಮಾಡಿಕೊಂಡು ‘ಹೋಗತ್ತಲಾಕ ಯಾಂವ ಹೊಲೀತಾನ!’ ಅಂತ ಅಂತಿದ್ದಿಲ್ಲ.
ಒಮ್ಮೆ ಶ್ರೀನಿವಾಸ ಟಾಕೀಜಿಗೆ ಹಿಂದಿ ‘ಸಂಗಮ್’ ಸಿನೇಮ ಬಂದಿತ್ತು. ನಾನು ಎಂಟೋ, ಒಂಬತ್ತನೆ ತರಗತಿಯಲ್ಲೋ ಇದ್ದೆ. ಬಹಳ ಕ್ಲಾಸಿಕ್ ಸಿನೇಮ. ಐದು ತಾಸಿನ ಸಿನೇಮ. ರಾಜಕಪೂರ್ ವೈಜಯಂತಿಮಾಲಾ ಸಿನೇಮ ಅಂತೆಲ್ಲ ಬಹಳವೇ ಚರ್ಚೆಯಾಗುತ್ತಿತ್ತು. ಯಾವ ರಾಜಕಪೂರನೋ ಯಾವ ವೈಜಯಂತಿಮಾಲಾಳೋ ನಮಗೇನೂ ಗೊತ್ತಿಲ್ಲದ ದಡ್ಡರು. ರಾಜಕುಮಾರ್ ಮಂಜುಳಾ, ಆರತಿ ಶ್ರೀನಾಥ ಜೋಡಿಗಳನ್ನು ಬಿಟ್ಟರೆ ನಮಗೆ ಬೇರೆ ಭಾಷೆಯೂ ಗೊತ್ತಿಲ್ಲ. ನಟನಟಿಯರೂ ಗೊತ್ತಿಲ್ಲ. ಸರಿ ನನ್ನ ಗೆಳತಿಯರೆಲ್ಲ ಹೋಗಲು ಪ್ಲ್ಯಾನ್ ಮಾಡಿದ್ರು. ನನಗೂ ಹೋಗುವ ಆಸೆ. ಮನೆಯಲ್ಲಿ ಅವ್ವನ ಅಪ್ಪಣೆ ಸಿಗಬೇಕಲ್ಲ? ಇವರೆಲ್ಲ ಮನೆಗೆ ಬಂದು ಹೇಳ್ತೀವಿ ನಿಮ್ಮ ಅವ್ವಾರಿಗೆ ಅಂತ ಒಪ್ಪಿಸಿದ್ದರು. ಆದರೆ ಯಾವಾಗ ಬರ್ತಾರಂತ ಗೊತ್ತಿದ್ದಿಲ್ಲ.
ಒಂದಿನ ದಿಢೀರಂತ ಗೆಳತಿಯರ ಗುಂಪು ಮನೆ ಬಾಗಿಲಿಗೆ. ನಡುಮನೆಯಿಂದ ನಾನು ಚೂರು ಮುಖ ಮುಂದೆ ಚಾಚಿ ‘ಬರ್ರೆಲೇ ಬಂದೆ ಅಂತ ಒಳಗೋಡಿದೆ ಎಷ್ಟೊತ್ರಾದರೂ ನಾ ಹೊರಗ ಬಂದಿರಲಿಲ್ಲ. ಮನ್ಯಾಗದೀನಲ್ಲ ಅಂತ ಯಾವುದೋ ಹರಿದ ಡ್ರೆಸ್ ಹಾಕೊಂಡಿದ್ದೆ. ಅಪರೂಪಕ್ಕೆ ಮನೆಗೆ ಬಂದ ಗೆಳತಿಯರ ಮುಂದೆ ಹಾಕಿಕೊಂಡು ಬರಲು ನನಗೊಂದೂ ಡ್ರೆಸ್ ಕೈಗೆ ಸಿಕ್ಕಿದ್ದಿಲ್ಲ. ಇದ್ದರೆ ತಾನೇ? ಅಂತೂ ಬಹಳ ಹಿಡಿಯಾಗಿ ಅವರೆದುರು ಬಂದೆ. ಹೇಗೆ ಬಂದೆನೋ ನೆನಪಿಲ್ಲ. ಅಂತೂ ನನ್ನ ಮೊದಲ ಹಿಂದಿ ಸಿನೇಮ ‘ಸಂಗಮ್’ ನೋಡಿ ಬಂದೆ.
ಹೀಗೆ ನಾವು ಹೆಣ್ಣುಮಕ್ಕಳು ಬೆಳೆಯುತ್ತಲೇ ತಿಳುವಳಿಕೆ ಮೂಡುತ್ತಿದೆ ಎನ್ನುವಾಗಲೇ ನಮ್ಮ ಉಡುಪು, ನಮ್ಮ ನಡವಳಿಕೆ, ನಮ್ಮ ನಗು..ಆಗಷ್ಟೇ ಕನ್ನಡಿಯಲ್ಲಿ ಮುಖ ಚೆಂದ ಎನಿಸುವ ವಯಸ್ಸಿನಲ್ಲಿ. ಇದೇನು ಅಲಂಕಾರ ಎಂದು ಹಿರಿಯರು ಲಗಾಮು ಹಿಡಿದೆಳೆಯುತ್ತಿದ್ದರು. ಕೂದಲನ್ನು ಸುರುಳಿ ಸುತ್ತಿ ಪಿನ್ ಜಡಿದು ಗುಂಗುರಾಗುಸುವ ಕಲೆಯನ್ನೂ ನಾವು ಈ ಅವ್ವಂದಿರ ಕಣ್ಷು ತಪ್ಪಿಸಿ ಮಾಡಿದರೂ ತಪ್ಪಿಸಿಕೊಳ್ಳುವಂತಿದ್ದಿಲ್ಲ. ಅದೆಲ್ಲ ನಮ್ಮ ಸುರಕ್ಷತೆಗೆಂದೇ ಗೊತ್ತು. ಬೀದಿ ಕಾಮಣ್ಣರ ಕಣ್ಣಿಂದ ತಮ್ಮಮಕ್ಕಳು ಸುರಕ್ಷಿತವಾಗಿರಲಿ ಎಂದೇ ನಮ್ಮ ತಾಯಂದಿರು ಲಗಾಮು ಹಿಡಿದೆಳೆಯುತ್ತಿದ್ದರೆ ತಪ್ಪೇನು ಇಲ್ಲ.
ಈಗ ಕಾಲ ಬದಲಾಗಿದೆ. ಬದಲಾವಣೆ ಕಾಲದ ನಿಯಮ. ನಮ್ಮ ಉಡುಪುಗಳೇ ನಮ್ಮ ವ್ಯಕ್ತಿತ್ವದ ಚೆಹರೆಗಳಲ್ಲ ಮತ್ತು ನಮ್ಮ ಚಾರಿತ್ರ್ಯವನ್ನು ಅಳೆಯುವ ಅಳತೆಗೋಲಗಳೂ ಅಲ್ಲ. ಅಲಂಕೃತಾ ಶ್ರೀವಾಸ್ತವ ನಿರ್ದೇಶನದ ‘ಬಾಂಬೆ ಬೇಗಮ್ಸ್’ ವೆಬ್ ಸೀರಿಯಲ್ ನೋಡಿದವರಿಗೆ ಈ ಪಿತೃಸಂಸ್ಕೃತಿಯ ನಮ್ಮ ಸಮಾಜ ಎಷ್ಟೇ ಪ್ರಗತಿಶೀಲವಾಗಿದ್ದರೂ ಮಹಿಳೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಒಂದು ಕಾರ್ಪೋರೇಟ್ ಬ್ಯಾಂಕನ್ನು ನಡೆಸುವ ಕ್ಷಮತೆಯುಳ್ಳವಳಾಗಿದ್ದರೂ ಆಕೆಯನ್ನು ಸೋಲಿಸಬೇಕೆನ್ನುವ, ಆಕೆಯ ಸೋಲನ್ನು ವಿಜೃಂಭಿಸಬೇಕೆನ್ನುವ ಪುರುಷರು ಈಗಲೂ ಇದ್ದಾರೆ. ಒಬ್ಬ ವೇಶ್ಯೆಯೂ ತಾನು ಘನತೆಯಿಂದ ಬದುಕಬೇಕು ‘ಇಜ್ಜತ್ ಸೇ ಜೀನಾ ಮಾಂಗತಾ’ ಅಂದಾಗ ನಿನ್ನ ಧರ್ಮವನ್ನು ನಿಭಾಯಿಸು. ಮೈ ಮಾರಿಕೊಳ್ಳುವುದೇ ನಿನ್ನ ಧರ್ಮ ಎಂದು ಉಪದೇಶಿಸುತ್ತಾನೆ ಒಬ್ಬ ಪುಢಾರಿ.
ಪ್ರಗತಿಶೀಲ, ಸಭ್ಯ ಶಿಷ್ಟ ಸಮಾಜದಲ್ಲಿಯೂ ಮಹಿಳೆ ತಮ್ಮ ಅಡಿಯಾಳು, ತಮ್ಮ ಪ್ರಾಪರ್ಟಿಯನ್ನಾಗಿ, ಉಂಡಾಕಿ ಬೀಸುವವರು ಈಗಲೂ ಇದ್ದಾರೆ ಮುಂದೂ ಇರುತ್ತಾರೆ. ಅವಳ ದೇಹ, ಅವಳ ಆಯ್ಕೆಯನ್ನು ಉಲ್ಲಂಘಿಸುವ, ಪ್ರಶ್ನಿಸುವ ತಂದೆ ತಾಯಿ ಕುಟುಂಬ ಗಂಡ, ಮಕ್ಕಳು, ಸಮಾಜವೊಂದರಲ್ಲಿ ಈ ಪುರುಷ ನಿರ್ಮಿತ ಗಾಜಿನ ಛಾವಣಿಯನ್ನು ಮುರಿಯುತ್ತಲೇ ನಮ್ಮನ್ನು ಕಟ್ಟಿಕೊಳ್ಳುತ್ತ ಸಾಗುವ ದಾರಿ ಇನ್ನೂ ಇದೆ. ಗಾಜಿನ ಚಾವಣಿಯನ್ನು ನಾವು ಮುರಿಯುತ್ತಲೇ ಇರ್ತೀವಿ ನೀವೇನಾದರೂ ಮಾಡಿಕೊಳ್ಳಿ.
ತೀರಥ್ ಸಿಂಗ್ ರಾವತ್ ಅವರು ತಮ್ಮ ರಾಜ್ಯದಲ್ಲಿ ಬೆಟ್ಟಪ್ರದೇಶದ ಮಹಿಳೆಯರು ಎಷ್ಟು ಕಷ್ಟಪಡುತ್ತಾರೆ ಕುಟುಂಬ ನಿರ್ವಹಣೆಗೆ… ಅವರ ಶಿಕ್ಷಣ ಉದ್ಯೋಗ ಭದ್ರತೆಗಾಗಿ ಶ್ರಮಿಸಬೇಕು. ಅದೆಷ್ಟು ಲಕ್ಷಾನುಲಕ್ಷ ಜನರು ಉತ್ತರಾಖಂಡದ ಬೆಟ್ಟಪ್ರದೇಶಗಳಿಂದ ನಗರಗಳಿಗೆ ವಲಸೆ ಹೋಗಿ ಬೆಟ್ಟಪ್ರದೇಶಗಳಲ್ಲಿ ವೃದ್ಧರೇ ತುಂಬಿದ್ದಾರೆ. ಅವರ ಬದುಕನ್ನು ಸರಳವಾಗಿಸುವಂತ ಯೋಜನೆಗಳನ್ನು ರೂಪಿಸಬೇಕು. ಜೀನ್ಸ್ ಹಾಕುವ ಮಹಿಳೆಯರೆಲ್ಲ ಚಾರಿತ್ರ್ಯಹೀನರು ಅವರೇನು ಮಕ್ಕಳಿಗೆ ಹೇಳಿಕೊಡ್ತಾರೆ ಎಂದು ಚಿಂತಿಸಬೇಕಿಲ್ಲ. ನಿಮ್ಮ ಮೆದುಳನ್ನು ಗಾಳಿ ಬೆಳಕಿಗೆ ತೆರೆದಿಡಿ ಸರಿಯಾಗ್ತೀರಿ, ಅಂತಷ್ಟೇ ಹೇಳಬಹುದು.
ಇದನ್ನೂ ಓದಿ : Ripped Jeans; ತಿರತ್ ಸಿಂಗ್ ಅವರಿಗೊಂದು ಪತ್ರ : ನೀವು ಟೀಚರ್ ಅಂತ ಹೆಂಗ್ ಗುರ್ತ್ ಹಿಡೀತಾವು ಹುಡ್ರು?
Published On - 5:37 pm, Sun, 21 March 21