ನೀವೀಗ ಬಸ್ಸೋ, ರೈಲೋ, ವಿಮಾನವೋ ಏನೋ ಒಂದು ಏರಿ ಕುಳಿತುಕೊಳ್ಳುತ್ತೀರಿ. ನಿಮ್ಮ ಅಕ್ಕಪಕ್ಕದವರ ಬಗ್ಗೆ ಮನುಷ್ಯ ಸಹಜ ಕುತೂಹಲದ ನೋಟ ಹರಿಸುತ್ತೀರಿ; ನಿಮ್ಮದು ಯಾವ ಊರು, ಏನು ಕೆಲಸ, ಎಲ್ಲಿಗೆ ಹೊರಟಿದ್ದೀರಿ… ಸಾಗಿದ ಮಾತು ಎಲ್ಲಿಂದೆಲ್ಲಿಗೆ ಬಂದು ನಿಲ್ಲುತ್ತದೆ ಅಥವಾ ತುಂಡರಿಸಿಕೊಳ್ಳುತ್ತದೆ ಎನ್ನುವುದು ನಿಮ್ಮ ನಿಮ್ಮ ಗುಣ, ಸ್ವಭಾವ, ಅಭಿರುಚಿ, ಆಸಕ್ತಿ ಮತ್ತು ದೃಷ್ಟಿಕೋನಗಳ ಮೇಲೆ ನಿಲ್ಲುತ್ತದೆ. ಸಿಕ್ಕ ಒಂದು ಸಮಾನ ತಂತು ಸಹಜವಾಗಿ ಸಂಧಿಸಿದರೆ ಪ್ರಯಾಣ ಚೇತೋಹಾರಿ. ಇಲ್ಲವಾದರೆ ಇಳಿದ ಮೇಲೆ ಅವರ್ಯಾರೋ ನಾವ್ಯಾರೋ. ಅದು ಅಷ್ಟಕ್ಕೇ ಮುಗಿದರೆ ಸರಿ. ಆದರೆ ಸಹಪ್ರಯಾಣಿಕರು ಇಳಿದು ಹೋದಮೇಲೆಯೂ ಅವರ ವೈಯಕ್ತಿಕ ಸಂಗತಿ ಅಥವಾ ಅಭಿಲಾಷೆಗಳ ಬಗ್ಗೆ ಅನವಶ್ಯಕವಾಗಿ ನೀವು ‘ಕತ್ತರಿ’ಯಾಡಿಸಿದರೆ? ಇದು ಮಾನವೀಯತೆಯೇ, ಸಂಸ್ಕಾರವೇ?
ಉತ್ತರಾಖಂಡದ ಮಾನ್ಯ ಮುಖ್ಯಮಂತ್ರಿ ತೀರಥ್ ಸಿಂಗ್ ಅವರೇ, ನಮ್ಮ ದೇಶದ ಯುವಜನತೆ Ripped Jean (ಹರಿದ ಜೀನ್ಸ್) ತೊಡುವ ಬಗ್ಗೆ ನೀವು ನಿಮ್ಮ ಅಭಿಪ್ರಾಯ ಹೇಳಿದ್ದೀರಿ. ನಮ್ಮ ಬರಹಗಾರರು ಅನುಭವಿಸಿದ ಗಳಿಗೆಗಳಿಗೆ ಜಾರಿ ವಾಸ್ತವಕ್ಕೆ ಬಂದು ನಿಮಗೆ ಪತ್ರಸ್ಪಂದನ ಮಾಡಿದ್ದಾರೆ.
ಪರಿಕಲ್ಪನೆ : ಶ್ರೀದೇವಿ ಕಳಸದ
ಲೇಖಕಿ, ಕವಿ, ಉಪನ್ಯಾಸಕಿಯೂ ಆಗಿರುವ ದೀಪಾ ಹಿರೇಗುತ್ತಿ ಅವರು ಕೊಪ್ಪದಿಂದ.
ಮಾನ್ಯ ರಾವತ್ ಅವರೇ,
ಬಹುಶಃ ನಿಮಗೆ ಗೊತ್ತಿರಲಿಕ್ಕಿಲ್ಲ. ನೀವು ಹರಕು ಜೀನ್ಸಿನ ಬಗೆಗಿನ ನಿಮ್ಮ ಜ್ಞಾನವನ್ನು ಮಾಧ್ಯಮಗಳ ಮೂಲಕ ನಮಗೆ ಹಂಚುವ ಆಸುಪಾಸಿನಲ್ಲೇ ನಮ್ಮ ರಾಜ್ಯದ ಸ್ವಾಮಿಯೊಬ್ಬರು ಒಂದು ಸಮುದಾಯದ ಹೆಣ್ಣುಮಕ್ಕಳ ಅಂತರ್ಜಾತಿ ವಿವಾಹಗಳ ಬಗ್ಗೆ ಭಾರೀ ತಲೆಕೆಡಿಸಿಕೊಂಡು ಹೇಳಿಕೆಯೊಂದನ್ನು ನೀಡಿದ್ದರು. ನಿಮ್ಮ ಉತ್ತರ ಭಾರತದಲ್ಲಂತೂ ಬಿಡಿ, ದಿನವೂ ಇದೇ ಕೇಸುಗಳು. ಇಂಥವುಗಳ ಮೇಲ್ವಿಚಾರಣೆಗೆ ಖಾಪ್ ಪಂಚಾಯತಿಗಳೆಂಬ ಅಧಿಕೃತ ಸಂಘಟನೆಗಳು ಬೇರೆ. ಬರೀ ನಿಮ್ಮಲ್ಲಿ ಮಾತ್ರವಲ್ಲ, ಈ ಮರ್ಯಾದಾಗೇಡು ಹತ್ಯೆಗಳು, ಮಹಿಳಾ ವಿರೋಧಿ ಹೇಳಿಕೆಗಳು ‘ಮುಂದುವರೆದ’ ನಮ್ಮ ದಕ್ಷಿಣ ಭಾರತದಲ್ಲಿಯೂ ಹೆಚ್ಚಲಾರಂಭಿಸಿವೆ. ಈ ಬೆಳವಣಿಗೆಗಳನ್ನು ಗಮನಿಸಿದಾಗ ಸಮಾಜ ಹಿಮ್ಮುಖವಾಗಿ ಚಲಿಸುತ್ತಿದೆಯೇ ಎಂಬ ಅನುಮಾನ ನನಗಂತೂ ಬರುತ್ತಿದೆ. ಆದರೆ ಸಮಾಜದ ಮುಮ್ಮುಖ ಚಲನೆಯ ಜವಾಬ್ದಾರಿಯನ್ನು ಮತದಾರರಿಂದ ಪಡೆದಿರುವ ನೀವು ಹೀಗೆ ಮಾಡಬಹುದೇ?
ನನಗೆ ಗೊತ್ತು ಇಲ್ಲಿ ನಿಮಗಿರುವ ಸಮಸ್ಯೆ ಹರಿದ ಜೀನ್ಸಿನದ್ದಲ್ಲ. ಅದನ್ನು ಹಾಕಿದ್ದು ಹೆಣ್ಣುಮಕ್ಕಳು ಎಂಬುದು. ಹರಿದ ಜೀನ್ಸ್ ಅಸಹ್ಯ ಎನಿಸಿದರೆ ಯಾರು ಹಾಕಿದರೂ ಅದು ಅಸಹ್ಯವೇ. ಹೆಣ್ಣುಮಕ್ಕಳು ಹಾಕಿದರೆ ಮಾತ್ರ ಅಲ್ಲ. ದೋಸೆಯೇನು, ಎಲ್ಲರ ಮನೆಯದ್ದೂ ತೂತೇ ಬಿಡಿ. ನನ್ನ ಪುಟ್ಟ ಮಗಳು ಮತ್ತು ಮಗ ಇಬ್ಬರೂ ಸೋಫಾ ಮೇಲೆ ಅಸ್ತವ್ಯಸ್ತವಾಗಿ ಕುಳಿತರೆ ನಮ್ಮ ಮಾವ ನನ್ನ ಮಗಳಿಗೆ ಹೆಣ್ಣು ಮಕ್ಕಳು ಹಾಗೆ ಕುಳಿತುಕೊಳ್ಳಬಾರದೆಂದು ಹೇಳುತ್ತಿರುತ್ತಾರೆ. ಅದಕ್ಕೆ ನಾನು, ನೀವು ಇಬ್ಬರಿಗೂ ಶಿಸ್ತಾಗಿ ಕೂರಲು ಹೇಳಿ, ಅದರಲ್ಲೂ ಗಂಡು ಹೆಣ್ಣು ಎಂಬ ವ್ಯತ್ಯಾಸವೇಕೆ ಎಂದು ಹೇಳುತ್ತಿರುತ್ತೇನೆ. ನನ್ನ ಮಗ ಗಂಡು ಎಂಬ ಕಾರಣಕ್ಕೆ ಅಶಿಸ್ತಿನಿಂದ ಕೂರುವುದು ನನಗೆ ಬೇಕಾಗಿಲ್ಲ! ಇಷ್ಟೇ ಅಲ್ಲ ಒಂದೇ ವಿಷಯವನ್ನು ಗಂಡು ಮಕ್ಕಳಿಗೆ ಒಂದು ರೀತಿ ಹೆಣ್ಣುಮಕ್ಕಳಿಗಾದರೆ ಇನ್ನೊಂದು ರೀತಿ ಅನ್ವಯಿಸಲಾಗುತ್ತದೆ. ನಮ್ಮ ಶಾಲಾ ಕಾಲೇಜುಗಳಲ್ಲೂ ಗಂಡು ಮಕ್ಕಳೇನೋ ಓದಲ್ಲ, ಹೆಣ್ಣು ಮಕ್ಕಳಿಗೇನಾಗಿದೆ ಎಂಬ ಮಾತು ಹೆಚ್ಚಿನ ಶಿಕ್ಷಕರ ಬಾಯಲ್ಲಿ ಬಂದೇ ಬರುತ್ತದೆ. ಕೆಲಸಕ್ಕೆ ಸೇರಿದ ಹೊಸದರಲ್ಲಿ ಒಂದೆರಡು ಸಲ ಅದೇ ಅರ್ಥ ಬರುವ ಮಾತುಗಳನ್ನು ಕೋಪದಲ್ಲಿ ನಾನೂ ಹೇಳಿ ಕೊನೆಗೆ ನಾಚಿಕೆಪಟ್ಟು ತಿದ್ದಿಕೊಂಡಿದ್ದಿದೆ.
ಹೆಣ್ಣುಮಕ್ಕಳ ಬಗ್ಗೆ ಸದಾ ಚಿಂತಿಸುವುದು, ಅವರ ವಿರುದ್ಧ ಹೇಳಿಕೆಗಳನ್ನು ಕೊಡುವುದು ನಿಮ್ಮಂತಹ ರಾಜಕಾರಣಿಗಳಿಗೆ, ಧಾರ್ಮಿಕ ಮುಖಂಡರಿಗೆ ಬಹಳ ಹಿಂದಿನಿಂದಲೂ ರೂಢಿಯಾಗಿಬಿಟ್ಟಿದೆ. ಹೆಣ್ಣುಮಕ್ಕಳು ಹಾಕುವ ಬಟ್ಟೆ, ಮಾತಾಡಬೇಕಾದ ಜನರು, ಸಮಯ, ಹೋಗಬೇಕಾದ ದಾರಿ, ವಿವಾಹವಾಗಬೇಕಾದ ವ್ಯಕ್ತಿ ಎಲ್ಲವನ್ನೂ ಅವರ ಪರವಾಗಿ ಗಂಡಸರೇ ನಿರ್ಧರಿಸುವ ಕೆಟ್ಟ ಸಂಪ್ರದಾಯಕ್ಕೆ ಇದು ಬಹು ಹಿಂದಿನಿಂದಲೂ ಹಾದಿ ಹಾಕಿಕೊಟ್ಟಿದೆ. ಅದರ ಪರಿಣಾಮವನ್ನು ನಾವೆಲ್ಲ ಹೆಣ್ಣುಮಕ್ಕಳು ಅನುಭವಿಸುತ್ತಿದ್ದೇವೆ. ಇವತ್ತು ಶಾಲಾ ಕಾಲೇಜುಗಳಲ್ಲಿ ಶಿಕ್ಷಕಿಯರು ಆರಾಮಾಗಿ ಮೈಮುಚ್ಚುವ, ಮುಜುಗರವೂ ಇಲ್ಲದ, ಆರಾಮದಾಯಕವೂ ಆದ ಚೂಡಿದಾರ್ ಧರಿಸುವಂತಿಲ್ಲ. ಎಲ್ಲೋ ಕೆಲವು ಕಡೆ ಗಲಾಟೆ ಮಾಡಿಕೊಂಡು ಕೆಲವರು ಧರಿಸುತ್ತಿರಬಹುದಷ್ಟೇ. ಡಿ ಎಡ್ ಬಿಎಡ್ ಓದುವ ಪುಟ್ಟ ಪುಟ್ಟ ಹೆಣ್ಣುಮಕ್ಕಳಂತೂ ದಿನವೂ ಕಾಲೇಜಿಗೆ ಸೀರೆ ಉಟ್ಟು ಉಟ್ಟು ಹೈರಾಣಾಗುತ್ತಾರೆ. ಇನ್ನು ಬುರ್ಖಾ ಧರಿಸಲೇಬೇಕಾದ ನಮ್ಮ ಮುಸ್ಲಿಮ್ ಸೋದರಿಯರ ಅನಿವಾರ್ಯತೆಯ ಸಂಕಟ ನಮಗೆ ಗೊತ್ತಿಲ್ಲದ್ದೇನಲ್ಲ. ಧರ್ಮ ಯಾವುದೇ ಆದರೂ ಬಟ್ಟೆಯ ವಿಚಾರದಲ್ಲಿ ಸಂಸ್ಕೃತಿ ಕಾಪಾಡಬೇಕಾದ ಮಹಾನ್ ಸ್ಥಾನವನ್ನು ಪುರುಷರು ಬಹು ದೊಡ್ಡ ಮನಸ್ಸಿನಿಂದ ಹೆಣ್ಣು ಮಕ್ಕಳಿಗೇ ಕೊಟ್ಟು ಬಿಟ್ಟಿದ್ದಾರೆ.
ಇನ್ನು ವೈಯಕ್ತಿಕವಾಗಿ ನನಗೆ ಆಧುನಿಕ ಉಡುಪು ಇಷ್ಟವೇ. ಈಗ್ಗೆ ಇಪ್ಪತ್ತು ವರ್ಷಗಳ ಹಿಂದೆ ಶಿರಸಿಯಿಂದ ಧಾರವಾಡಕ್ಕೆ ಎಂಎ ಮಾಡಲು ಹೋದವಳು ಮೊದಲ ದಿನ ನಮ್ಮ ಇಂಗ್ಲಿಷ್ ಡಿಪಾರ್ಟ್‍ಮೆಂಟಿಗೆ ಮೊಣಕಾಲಿಗಿಂತ ತುಸುವೇ ಮೇಲಿದ್ದ ಡ್ರೆಸ್ ಹಾಕಿಕೊಂಡು ಹೋಗಿದ್ದೆ. ಎಲ್ಲರೂ ವಿಚಿತ್ರ ಪ್ರಾಣಿಯನ್ನು ನೋಡಿದಂತೆ ನನ್ನನ್ನು ನೋಡುತ್ತಿದ್ದರು. ಅಯ್ಯೋ ಇವೆಲ್ಲ ಹಾಕಿದರೆ ಮಾರ್ಕು ತೆಗೆದುಬಿಡುತ್ತಾರೆ ಎಂದು ಸೀನಿಯರ್ ಹುಡುಗಿಯರು ಹೆದರಿಸಿಯೂ ಆಯಿತು, ನಾನು ಹೆದರಿ ಚೂಡಿದಾರ್‍ಗೆ ಶರಣು ಹೋದದ್ದೂ ಆಯಿತು. ಈಗ ನೋಡಿದರೆ ನಾನಿರುವ ಪುಟ್ಟ ಪಟ್ಟಣದಲ್ಲಿ ಬಯಸಿಯೂ ಆಧುನಿಕ ಉಡುಪು ಧರಿಸಲಾರೆ. ಹಾಗಂತ ಯಾರೂ ಲಿಖಿತವಾಗಿ ಇಲ್ಲಿ ಕಾನೂನು ಹೊರಡಿಸಿಲ್ಲ. ಆದರೆ ನಮ್ಮ ತಲೆಯೊಳಗೆ ಇಂತಹ ವಿಚಾರಗಳನ್ನು ವ್ಯವಸ್ಥಿತವಾಗಿ ತುಂಬುವ ಕೆಲಸ ವಿವಿಧ ರೀತಿಯಲ್ಲಿ ಆಗುತ್ತ ಬಂದಿದೆ. ಯಾರು ಏನು ಅಂದುಕೊಳ್ಳುತ್ತಾರೋ, ಅಲ್ಲಿ ಈ ಡ್ರೆಸ್ ಹಾಕಬಹುದಾ, ಬೇಡವಾ ಎಂಬ ಜುಜುಬಿ ವಿಚಾರಗಳೇ ಮುಖ್ಯ ವಿಚಾರಗಳಾಗುವ ಹಾಗೆ ಮಾಡಲಾಗಿದೆ.
ಮೊಣಕಾಲಿನ ಹತ್ತಿರ ಜೀನ್ಸ್ ಕತ್ತರಿಸಿಕೊಂಡು ಹೆಣ್ಣುಮಕ್ಕಳು ಶ್ರೀಮಂತರಂತೆ ತೋರಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆಂದು ನೀವು ಹೇಳುತ್ತೀರಿ. ಹೌದು, ಬಡವರಿಗೆ ಸಮಾಜ ಎಂಥ ಮರ್ಯಾದೆ ಕೊಡುತ್ತದೆ ಎಂದು ಗೊತ್ತಿದ್ದ ಮೇಲೂ ಯಾರು ತಾನೇ ಬಡವರೆಂದು ತೋರಿಸಿಕೊಳ್ಳಲು ಇಷ್ಟಪಡುತ್ತಾರೆ ಹೇಳಿ? ಅಷ್ಟಕ್ಕೂ ನಮ್ಮ ಹೆಣ್ಣುಮಕ್ಕಳು, ತಾಯಂದಿರು ಬಡತನವಿದ್ದರೂ ಹೊರಜಗತ್ತಿಗೆ ತೋರಿಸಿಕೊಳ್ಳದೇ ಬದುಕು ನಡೆಸಿದವರು, ನಡೆಸುತ್ತಿರುವವರು. ಪಿಯುಸಿಗೆ, ಡಿಗ್ರಿಗೆ ಕಡುಬಡತನದ ಹಿನ್ನೆಲೆಯಿಂದ ಬರುವ ಹುಡುಗಿಯರು ಅದರ ಸುಳಿವೇ ಸಿಗದಂತೆ, ಯಾರ ಹತ್ತಿರವೂ ಕೈ ಒಡ್ಡದೇ ಇದ್ದುದರಲ್ಲೇ ನಿಭಾಯಿಸಿಕೊಂಡು ಆತ್ಮಗೌರವದ ಬದುಕು ನಡೆಸಿಕೊಂಡು ಹೋಗುತ್ತಿರುವುದನ್ನು ಸರ್ಕಾರಿ ಕಾಲೇಜಿನ ಉಪನ್ಯಾಸಕಿಯಾದ ನಾನು ಹತ್ತಿರದಿಂದ ನೋಡಿದ್ದೇನೆ. ನಮ್ಮ ಹೆಣ್ಣುಮಕ್ಕಳ ಬಗ್ಗೆ ಅಭಿಮಾನ ಪಟ್ಟಿದ್ದೇನೆ.
ಪರಿಸ್ಥಿತಿ ಹೀಗಿರುವಾಗ, ರಾವತ್‍ರವರೇ, ನಿಮ್ಮಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಆಡುವ ಈ ಸಡಿಲ ಮಾತುಗಳು ಹೆಣ್ಣುಮಕ್ಕಳು ಈಗತಾನೇ ಉಸಿರಾಡಲು ಶುರು ಮಾಡಿರುವ ಸ್ವಾತಂತ್ರ್ಯದ ಗಾಳಿಯನ್ನು ಅವರಿಂದ ಮತ್ತೆ ವಂಚಿತವಾಗಿಸಲು ಕೊಡುಗೆ ಸಲ್ಲಿಸುತ್ತದೆ ಎಂಬುದು ನಿಮಗೆ ಗೊತ್ತಿಲ್ಲದೇ ಇಲ್ಲ. ಅಷ್ಟಕ್ಕೂ ನಮ್ಮದೇನು ರಸ್ತೆಯ ಮೇಲಿನ ಸರಾಗ ನಡಿಗೆಯಿಂದ ಗುರಿ ತಲುಪುವ ಗಮ್ಯವಲ್ಲ. ಇದು ಕಡಿದಾದ ಬೆಟ್ಟ ಹತ್ತುವ ಸರ್ಕಸ್. ದೀರ್ಘ ಉಸಿರೆಳೆದುಕೊಂಡು ಹತ್ತುವ ಒಂದೊಂದು ಹೆಜ್ಜೆಯೂ ನೆಲದ ಮೇಲಿನ ನೂರು ಹೆಜ್ಜೆಗೆ ಸಮ. ಹೆಣ್ಣುಮಕ್ಕಳ ಬದುಕಿನ ಹಾದಿಗೂ ಗಂಡುಮಕ್ಕಳ ಜೀವನದ ದಾರಿಗೂ ಇದೇ ವ್ಯತ್ಯಾಸ ಎಂಬುದು ಹಿರಿಯರಾದ ನಿಮಗೆ ಗೊತ್ತಿಲ್ಲವೇ? ಇನ್ನಾದರೂ ಹೆಣ್ಣುಮಕ್ಕಳು ಮತ್ತು ಗಂಡು ಮಕ್ಕಳಲ್ಲಿ ತಾರತಮ್ಯ ಮಾಡುವ ನಿಮ್ಮ ಮನಸ್ಥಿತಿ ಬದಲಾಗಲಿ ಎಂದು ಆಶಿಸುತ್ತೇನೆ.
ಇದನ್ನೂ ಓದಿ: Ripped Jeans; ತೀರಥ್ ಸಿಂಗ್ ಅವರಿಗೊಂದು ಪತ್ರ: ಬಸ್ಸಿನಲ್ಲಿ ಹಿಂದಿನ ಸೀಟಿನಿಂದ ತಡಕಾಡುವ ಕಾಲುಕೈಗಳಿಗೆ ಏನು ಹೇಳುತ್ತೀರಿ?