Smart Phone : ಎರಡೇ ತಿಂಗಳಲ್ಲಿ ಅತ್ತೆಯನ್ನು ಬದಲಾಯಿಸಿದ ಕಥೆ ಇದು!

| Updated By: ಶ್ರೀದೇವಿ ಕಳಸದ

Updated on: Apr 20, 2022 | 3:18 PM

Mother-in-law : ಸೊಸೆ ಗಂಡನೊಂದಿಗೆ ಹೊರಗಡೆ ಹೊರಟರೆ ಮುಖ ದಪ್ಪ ಮಾಡುವುದು, ರೂಮಿನಲ್ಲಿ ಸರಸ ಸಲ್ಲಾಪದಲ್ಲಿದ್ದಾಗ ಏನಾದರೂ ನೆವ ಹೇಳಿ ಅತ್ತೆ ಬಾಗಿಲು ತಟ್ಟಿ ತನಗೆ ಒಬ್ಬಳಿಗೇ ಬೇಸರವಾಗುತ್ತಿದೆ ಎನ್ನುವುದು...

Smart Phone : ಎರಡೇ ತಿಂಗಳಲ್ಲಿ ಅತ್ತೆಯನ್ನು ಬದಲಾಯಿಸಿದ ಕಥೆ ಇದು!
ಸಾಂದರ್ಭಿಕ ಚಿತ್ರ
Follow us on

Smart Phone : “ತಕ್ಷಣ ಬಾ” ಅತ್ತೆಯ ಕರೆ ಬಂದಾಗ ಭಯ ಆಯ್ತು ಸೌಮ್ಯಳಿಗೆ. ಬೆಳಗ್ಗೆ ಕಚೇರಿಗೆ ಹೊರಡುವಾಗ ಸರಿ ಇದ್ರಲ್ಲ, ಏನಾಯ್ತು ಇವರಿಗೆ. ಯೋಚನೆಯಲ್ಲಿ ಇದ್ದವಳಿಗೆ “ಗಾಬರಿ ಬೇಡ. ವೈಫೈ ಕೆಲಸ ಮಾಡುತ್ತಿಲ್ಲ. ಲಂಚ್ ಬ್ರೇಕ್ ಅಲ್ಲಿ ಬಂದು ಹೋಗು” ಅವರ ದನಿ ಕೇಳಿ ಹೋದ ಜೀವ ಬಂದ ಹಾಗಾಯಿತು. ನಕ್ಕು ಕರೆ ಕಟ್ ಮಾಡಿ, ಲಂಚ್ ಅವರ್ ಆದ ಕೂಡಲೇ, ಆಫೀಸಿನ ಹತ್ತಿರವೇ ಇದ್ದ ಮನೆಗೆ ಹೊರಟಳು. ವೈಫೈ ಕೇಬಲ್ ಲೂಸ್ ಆಗಿತ್ತು. ಕೆಲಸದವಳು ಧೂಳು ಹೊಡೆಯುವಾಗ ಅದರ ಮೇಲೆ ಕೈ ಆಡಿಸಿ, ಅದು ಸರಿಯಾಗಿ ಕೆಲಸ ಮಾಡುತ್ತಾ ಇರಲಿಲ್ಲ. ಅದನ್ನು ಸರಿಪಡಿಸಿದಾಗ ಅವಳ ಮುಖದಲ್ಲಿ ಗೆಲುವು ಕಂಡಿತು. ಅತ್ತೆಯ ಜತೆಯಲ್ಲೇ ಊಟ ಮಾಡೋಣ ಎಂದು ಬೆಳಗ್ಗೆ ಪ್ಯಾಕ್ ಮಾಡಿದ್ದ ಡಬ್ಬಿ ವಾಪಸ್ಸು ತಂದಿದ್ದಳು. ಆದರೆ ಅತ್ತೆ ಬಿಝಿ. ಬೆಳಗ್ಗಿನಿಂದ ನೋಡದೇ ಇದ್ದ ವಾಟ್ಸಪ್, ಮುಖಪುಟ ಅಷ್ಟೇಕೆ ಇನ್ಸ್ಟಗ್ರಾಂ ತೆಗೆದು ಎಲ್ಲಾ ನೋಟಿಫಿಕೇಶನ್, ಪಟಗಳು ನೋಡುತ್ತಾ ಇದ್ದ ಅವರಿಗೆ ಸೊಸೆಯ ಇರುವಿಕೆ ಗಮನಕ್ಕೆ ಬರಲೇ ಇಲ್ಲ. ತನ್ನ ಪಾಡಿಗೆ ತಾನು ಊಟ ಮುಗಿಸಿ ಹೊರಟಳು. ಸಂಜೆ ಝೂಮ್ ಮೀಟಿಂಗ್ ಇದೆ, ಬ್ಯೂಟಿ ಪಾರ್ಲರ್ ಹುಡುಗಿಗೆ ಬರ ಹೇಳು ಅಂದರು ಅತ್ತೆ. ನಿಟ್ಟುಸಿರಿಟ್ಟ ಸೌಮ್ಯ ಆಫೀಸಿನ ಕಡೆ ಹೆಜ್ಜೆ ಹಾಕಿದಳು.
ಸಹನಾ ಪ್ರಸಾದ, ಲೇಖಕಿ

 

ಸೌಮ್ಯಳ ಅತ್ತೆ ರೇಣುಕಾದೇವಿ. ಆದರೆ ಈಗ ಎಲ್ಲೆಡೆ , ಬರೀ “ರೇಣು”. ಎಲ್ಲೆಡೆ ಅಂದರೆ ಎಲ್ಲಾ ಸಾಮಾಜಿಕ ಜಾಲ ತಾಣಗಳಲ್ಲೂ ಹೊಸ ಹೊಸ ಡೀಪಿ, ಹೊಸ ಪಟಗಳು, ತರಹ ತರಹದ ಕೇಶ ವಿನ್ಯಾಸಗಳು, ಅಡುಗೆಗಳು, ಬ್ಲೌಸ್ ಡಿಸೈನ್ ಗಳು ಆಕೆಗೆ ಖ್ಯಾತಿ ತಂದುಕೊಟ್ಟಿತ್ತು.

ಕೇವಲ ಒಂದು ವರುಷದ ಹಿಂದೆ ಹದಿನಾರಾಣೆ ಗೃಹಿಣಿ. ಅವರ ಆಸಕ್ತಿ ಏನಿದ್ದರೂ ಅಡುಗೆ, ತಿಂಡಿ, ಟೀವಿ ನೋಡುವುದು, ಅಕ್ಕಪಕ್ಕದ ಮನೆಯವರೊಂದಿಗೆ ಹರಟುವುದು. ಇದ್ದೊಬ್ಬ ಮಗ ಆಫೀಸಿಗೆ ಹೋದ ಮೇಲೆ ಆಕೆ ಸಂಪೂರ್ಣ ಸ್ವತಂತ್ರಳು. ಗಂಡ ಬಹಳ ವರುಷಗಳಿಂದ ಹಳ್ಳಿಯಲ್ಲೇ ನೆಲೆಸಿದ್ದ. ತನ್ನ ದಾಯಾದಿಗಳೊಂದಿಗೆ ಉಳುವರಿ ಮಾಡಿಕೊಂಡು ಹಾಯಾಗಿದ್ದ. ಮನಸ್ಸು ಬಂದಾಗ ಒಂದು ರಾಶಿ ತರಕಾರಿ, ಕೊಬ್ಬರಿ, ತೆಂಗಿನಕಾಯಿ, ಸಣ್ಣಕ್ಕಿ ಮೂಟೆ, ಹಣ್ಣುಗಳೊಂದಿಗೆ ಹಾಜರಾಗುತ್ತಿದ್ದ.

ರೇಣುಕಾದೇವಿಯ ಸುಪುತ್ರ ಸೌಮ್ಯಳನ್ನು ಮದುವೆಯಾದಾಗ ಆಕೆಯ ಬದುಕಿನ ಹೊಸ ಅಧ್ಯಾಯ ಶುರುವಾಯಿತು. ಅತ್ತೆಯ ಬಗ್ಗೆ ಅನೇಕ ಕತೆಗಳನ್ನು ಕೇಳಿ ಬೆಳೆದ ಸೌಮ್ಯ, ಈ ಅತ್ತೆಯ ಪ್ರೀತಿ, ವಾತ್ಸಲ್ಯ, ಮೃದು ಮಾತಿಗೆ ಸೋತು ಹೋದಳು. ಆದರೆ ತಾನು ಹಾಗೂ ಗಂಡ ಹೊರಗಡೆ ಹೊರಟರೆ ಮುಖ ದಪ್ಪ ಮಾಡುವುದು, ತಾವಿಬ್ಬರೂ ರೂಮಿನಲ್ಲಿ ಸರಸ ಸಲ್ಲಾಪದಲ್ಲಿ ಇದ್ದಾಗ ಏನಾದರೂ ನೆವ ಹೇಳಿ ಬಾಗಿಲು ತಟ್ಟುವುದು, ತನಗೆ ಒಬ್ಬಳೇ ಬೇಸರವಾಗುತ್ತದೆ ಎಂದು ಬಾರಿ ಬಾರಿ ಹೇಳುವುದು, ಇವೆಲ್ಲವೂ ಕಷ್ಟವಾಗತೊಡಗಿತು. ತನ್ನ ಹಿಂದೆ, ಮುಂದೆ ಸುತ್ತುವ ಅತ್ತೆಗೆ ಪ್ರೀತಿಯಿಂದಲೇ ಬುದ್ದಿ ಕಲಿಸಬೇಕು ಎಂದು ಯೋಚಿಸಿ, ಆಕೆಗೆ ಹೊಸ ಸ್ಮಾರ್ಟ್ ಫೋನ್ ಕೊಡಿಸಿ, ಇಂಟರ್ನೆಟ್ ಬಳಕೆ, ಸಾಮಾಜಿಕ ಜಾಲತಾಣಗಳ ಪರಿಚಯ ಮಾಡಿಸಿದಳು. ಕೇವಲ ಎರಡೇ ತಿಂಗಳಲ್ಲಿ ರೇಣುಕಾದೇವಿ ಸಂಪೂರ್ಣ ಬದಲಾದಳು.

ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ; ನಮ್ಮ ಕನಸುಗಳನ್ನು ತ್ಯಜಿಸುವುದೆಂದರೆ ನಮ್ಮನ್ನು ನಾವೇ ದಿವಾಳಿಗೆಬ್ಬಿಸಿಕೊಂಡಂತೆ

ಅತ್ತೆಗೆ ಹೊಸ ಸೀರೆಗಳು, ಡಿಸೈನ್ ಬ್ಲೌಸುಗಳು, ಬ್ಯೂಟಿ ಪಾರ್ಲರ್ ಖರ್ಚುಗಳು ಸೌಮ್ಯಳ ಹೆಗಲೇರಿದವು. ಮಕ್ಕಳು ಹೊಸ ಆಟಿಕೆ ಕಂಡಂತೆ ಆಡುತ್ತಿರುವ ಅತ್ತೆಯನ್ನು ನೋಡಿ ಸೌಮ್ಯ ನಕ್ಕು ಅವರು ಬೇಕೆಂದಿದ್ದೆಲ್ಲಾ ಕೊಡಿಸಿದಳು. ಇನ್ನೂ ಕೆಲವು ತಿಂಗಳು ಕಳೆಯುವಷ್ಟರಲ್ಲಿ ರೇಣುಕಾದೇವಿ ವಿವಿಧ ಗುಂಪಿನಲ್ಲಿ ಅನಭಿಷಿಕ್ತ ರಾಣಿಯಾಗಿ ಮೆರೆಯತೊಡಗಿದರು. ಸೌಮ್ಯ ಕೂಡ ಸಮಯದ ಅಭಾವದಿಂದ ಕೆಲವೊಮ್ಮೆ ಕೈಗೆ ಸಿಕ್ಕಿದ ಸೀರೆ ಉಟ್ಟು, ಹಣೆಗೆ ಸ್ಟಿಕರ್ ತಗುಲಿಸಿ, ಅವಸರದಲ್ಲಿ ತಲೆ ಬಾಚಿ ಕೆಲಸಕ್ಕೆ ಓಡುತ್ತಿದ್ದಳು. ಆದರೆ ರೇಣು ಹಾಗಲ್ಲ. ಮನೆಯಲ್ಲೇ ಇದ್ದರೂ ನೀಟಾಗಿ ಸೀರೆ ಉಟ್ಟು, ಮಾಚಿಂಗ್ ಬಳೆ, ಸರ ತೊಟ್ಟು, ಗುಂಪುಗಳಲ್ಲಿ ಚಾಟಿಂಗ್, ಝೂಮ್ ಮೀಟಿಂಗ್ ಅಟೆಂಡ್ ಮಾಡುವುದರಲ್ಲಿ ಬಿಝಿ. ಈಗ ಮಗ ಸೊಸೆಯ ಕಡೆಗೆ ನೋಡಲು ಸಹ ಪುರುಸೊತ್ತಿಲ್ಲ. “ನಾವು ಹೊರಗಡೆ ಸುತ್ತಾಡಿ, ಊಟ ಮುಗಿಸಿ ಬರುತ್ತೀವಿ” ಎಂದರೆ ಅಡುಗೆ ವೇಸ್ಟ್ ಆಗುವುದು, ವಾರಾಂತ್ಯದಲ್ಲಿ ಕೂಡ ಒಬ್ಬಳನ್ನೆ ಇಡೀ ದಿನ ಬಿಟ್ಟು ಹೋಗುತ್ತೀರಾ ಎಂದು ತಕರಾರು ಮಾಡುತ್ತಿದ್ದ ರೇಣು ಈಗ “ನಂಗೂ ಊಟ ಆರ್ಡರ್ ಮಾಡಿ ಹೊರಡಿ” ಎಂದು ಫೋನ್ ತೆರೆದು ಕೂರುತ್ತಿದ್ದರು.

ಅತ್ತೆ ಚಿಕ್ಕ ವಯಸ್ಸಿನಲ್ಲಿ ಇದೆಲ್ಲ ಕಾಣಲಿಲ್ಲ. ಸಂಸಾರಕ್ಕೆ ಸಮಯ, ಶಕ್ತಿಯೆಲ್ಲಾ ಮೀಸಲು ಇಟ್ಟರು. ಈಗ ಆರಾಮಾಗಿ ಇರ್ಲಿ. ಅವರು ಅಲ್ಲೆಲ್ಲ ಬಿಝಿ ಇದ್ದರೆ, ನಮ್ಮ ತಂಟೆಗೆ ಬರುವುದಿಲ್ಲ. ಆಗ ನಾನೂ ನನ್ನ ಗಂಡ ಕೂಡ ಆರಾಮಾಗಿ ಇರುತ್ತೇವೆ. ಹಾಗಾಗಿ ಆ ಖರ್ಚುಗಳು ಲೆಕ್ಕಕ್ಕೆ ಬರುವುದಿಲ್ಲ!

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : No Delete Option : ಒಂದಾನೊಂದು ಕಾಲದಲ್ಲಿ ಕೊಡಗಿನಲ್ಲಿ ನಡೆದ ಸತ್ಯಕಥೆ

 

Published On - 2:44 pm, Wed, 20 April 22