ಅಸ್ತಂಗತವಾದ ‘ಯಶೋ’ ಸೂರ್ಯ: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಲಶ ಯಶೋವರ್ಮ
1955 ರಲ್ಲಿ ಜನಿಸಿದ ಇವರು ಧರ್ಮಸ್ಥಳದ ಮಾತೃಶ್ರೀ ಡಾ. ಹೇಮಾವತಿ ಹೆಗ್ಗಡೆಯವರ ಸಹೋದರ. 1993 ರಲ್ಲಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾಗಿ ನೇಮಕಗೊಂಡ ಇವರು ಎಸ್.ಡಿ.ಎಂ ಸಂಸ್ಥೆಗೆ ಪರಿಪೂರ್ಣ ರೂಪ ತಂದು ಕೊಟ್ಟರು. ವಿದ್ಯಾ ಸಂಸ್ಥೆಗಳು ಹಣ ಮಾಡುತ್ತಿರುವ ಹಾಗೂ ವಾಣಿಜ್ಯೀಕರಣಕ್ಕೆ ಮಾರಿಹೋಗುತ್ತಿರುವ ಈ ಕಾಲ ಘಟ್ಟದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯು ಇವುಗಳ ಹೊರತಾಗಿ ನಿಂತಿರುವುದು ಇವರ ಮಹತ್ತರ ಸಾಧನೆ.
ನೇರನುಡಿಯ ವ್ಯಕ್ತಿತ್ವ… ಸದಾ ನುಗುಮೊಗದಲ್ಲೇ ಎಲ್ಲರನ್ನು ಆಕರ್ಷಿಸುತ್ತಿದ್ದ ಮುಖಭಾವ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮಾಸ್ಟರ್, ಎಲ್ಲರ ಪ್ರೀತಿಯ ಸಹೋದ್ಯೋಗಿ,ದಿಟ್ಟ ನಿರ್ಧಾರಗಳಿಂದಲೇ ಎಲ್ಲರ ಮನಗೆದ್ದ ಧೀರ, ಇಟ್ಟ ಹೆಜ್ಜೆಯನ್ನು ಗುರಿಯತ್ತ ಕೊಂಡೊಯ್ದ ಮಹಾ ದಾರ್ಶನಿಕ ಹೆಸರಿನಲ್ಲೇ ಯಶಸ್ಸನ್ನು ಸದಾ ಹೊತ್ತೊಯ್ಯುತ್ತಿದ್ದ ಯಶೋವರ್ಮ ಇನ್ನಿಲ್ಲ…. ಇಂದು ಮುಂಜಾವಿನಿಂದಲೇ ಉಜಿರೆಗೆ ಯಾವುದೋ ಮುಂಕು ಕವಿದಂತಿತ್ತು. ಆಕಾಶದಲ್ಲಿ ಸೂರ್ಯನೂ ಬಾರದೆ ಮೋಡ ಮುಸುಕಿತ್ತು. ಎಂದಿನಂತೆ ಚಟುವಟಿಕೆಯಿಂದಿರುವ ಉಜಿರೆಯ ಶಿಕ್ಷಣ ಸಮೂಹ ಇಂದು ನೀರಸವಾಗಿತ್ತು. ಇಡೀ ಎಸ್.ಡಿ.ಎಂ ವೃಂದವು ಇಂದು ಶೋಕ ಸಾಗರದಲ್ಲಿ ಮುಳುಗಿತ್ತು. ಇದಕ್ಕೆಲ್ಲಾ ಕಾರಣವಾಗಿದ್ದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಎಸ್.ಡಿ.ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಬಿ ಯಶೋವರ್ಮ ಅವರ ಅಗಲಿಕೆ.
1955 ರಲ್ಲಿ ಜನಿಸಿದ ಇವರು ಧರ್ಮಸ್ಥಳದ ಮಾತೃಶ್ರೀ ಡಾ. ಹೇಮಾವತಿ ಹೆಗ್ಗಡೆಯವರ ಸಹೋದರ. 1993 ರಲ್ಲಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾಗಿ ನೇಮಕಗೊಂಡ ಇವರು ಎಸ್.ಡಿ.ಎಂ ಸಂಸ್ಥೆಗೆ ಪರಿಪೂರ್ಣ ರೂಪ ತಂದು ಕೊಟ್ಟರು. ವಿದ್ಯಾ ಸಂಸ್ಥೆಗಳು ಹಣ ಮಾಡುತ್ತಿರುವ ಹಾಗೂ ವಾಣಿಜ್ಯೀಕರಣಕ್ಕೆ ಮಾರಿಹೋಗುತ್ತಿರುವ ಈ ಕಾಲ ಘಟ್ಟದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯು ಇವುಗಳ ಹೊರತಾಗಿ ನಿಂತಿರುವುದು ಇವರ ಮಹತ್ತರ ಸಾಧನೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ವಿಭಿನ್ನ ಪ್ರತಿಭೆ, ಕಲ್ಪನೆ ಹಾಗೂ ದೃಷ್ಟಿಕೋನವಿರುತ್ತದೆ. ಆ ವಿಭಿನ್ನತೆಯನ್ನು ಗುರುತಿಸಿ, ಅನ್ವೇಷಿಸಿ, ಅವುಗಳ ಒಳ ಹರಿವುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಆ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ಯಶೋವರ್ಮರು ಒದಗಿಸಿದ್ದರು.
ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ ನಂತರ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ಅಧಿಕಾರವನ್ನು ಸ್ವೀಕರಿಸಿದ ತಮಗೆ ಸಿಕ್ಕ ಅವಕಾಶವನ್ನು, ಅಧಿಕಾರವನ್ನು ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಯಲ್ಲಿ ಅಳವಡಿಸಿಕೊಂಡು ಯಶಸ್ವಿಯಾದರು. ಅಧಿಕಾರ ಸಿಗುವುದು ಹಲವರಿಗೆ. ಆದರೆ ಆ ಹಲವರಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸಮರ್ಥರಾಗಿರುತ್ತಾರೆ, ಯಾರೂ ಮರೆಯದಂತೆ ಕೆಲಸ ಮಾಡಿರುತ್ತಾರೆ ಎಂಬುದಕ್ಕೆ ಯಶೋವರ್ಮರೇ ಕಣ್ಣಮುಂದಿನ ಸಾಕ್ಷಿ.
ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಶಿಕ್ಷಣ ಬರೀ ಸ್ಕೂಲು, ಕಾಲೇಜುಗಳ ಪಾಠವಲ್ಲ, ಅಂಕಗಳಲ್ಲ, ಸರ್ಟಿಫಿಕೇಟ್ ಕೂಡ ಅಲ್ಲ. ಅವುಗಳ ಹೊರತಾಗಿ ಶಿಕ್ಷಣ ಜೀವನದಲ್ಲಿ ಮಾನವೀಯ ಮೌಲ್ಯಗಳ ಅಳವಡಿಕೆಯ ಕ್ರಮ ಎಂದು ತೋರಿಸಿಕೊಟ್ಟಿದ್ದಾರೆ. ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡಿ, ಅವುಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಇವರು ಯಶಸ್ವಿಯಾದರು.
ಸಂಸ್ಥೆಯ ಬಗ್ಗೆ ಅವರಿಗಿದ್ದ ಒಲವಿನ ಕುರಿತು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ಎನ್.ಕೆ ಪದ್ಮನಾಭ ಅವರ ಮಾತು. ‘ಶೈಕ್ಷಣಿಕ ನಾಯಕತ್ವಕ್ಕೆ ಹೊಸ ಆಯಾಮ ನೀಡಿದವರು ಡಾ.ಬಿ.ಯಶೋವರ್ಮ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯತ್ತಗಳ ಮೂಲಕ ವಿದ್ಯಾರ್ಥಿಗಳ ಅಭಿವೃದ್ಧಿಗೆ ಕಾರಣರಾದರು. ಒಂದು ಸಣ್ಣ ಗ್ರಾಮ ಉಜಿರೆಯನ್ನು ಕರ್ನಾಟಕದ ಶಿಕ್ಷಣ ಕಾಶಿಯನ್ನಾಗಿ ಪರಿವರ್ತಿಸುವಲ್ಲಿ ಯಶೋವರ್ಮರ ಪಾತ್ರ ಬಹಳ ದೊಡ್ಡದು. ಅವರ ಅಗಲಿಕೆ ಅನಿರೀಕ್ಷಿತ ಹಾಗೂ ಆಘಾತಕಾರಿಯಾಗಿದೆ’.
ಯಶೋವರ್ಮರು ತಮ್ಮ ಕೊನೆ ಉಸಿರಿನವರೆಗೂ ಸಂಸ್ಥೆಯ ಏಳಿಗೆಯನ್ನು ಬಯಸಿದವರು. ಇಂದು ಅವರ ಅಗಲಿಕೆ ಇಡೀ ಎಸ್.ಡಿ.ಎಂ ಶಿಕ್ಷಣ ಸಮೂಹನ್ನು ದುಃಖದಲ್ಲಿ ದೂಡಿದೆ.ನಾನು ಅವರನ್ನು ಮುಖತಃ ಭೇಟಿಯಾಗದಿದ್ದರೂ, ಅವರ ಬಗ್ಗೆ ಇಷ್ಟು ಒಳ್ಳೆಯ ಮಾತುಗಳನ್ನು ಸಾಧನೆಯನ್ನು ಎಲ್ಲರ ಬಾಯಿಂದ ಕೇಳಿರುವೆ. ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೂ, ಎಸ್.ಡಿ.ಎಂ ಸಮೂಹಕ್ಕೂ ಬೇಡುತ್ತಾ….ಅವರಿಗೊಂದು ಭಾವಪೂರ್ಣ ಶ್ರದ್ಧಾಂಜಲಿ
ಶ್ರೀರಕ್ಷಾ ಶಂಕರ್, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ.
ಟಿವಿ9ನ ಕ್ಷಣ ಕ್ಷಣದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:19 pm, Mon, 23 May 22