Valentine’s Day: ನಿಮ್ಮನ್ನ Love ಮಾಡ್ಬೇಕಂತ ಮಾಡೇನ್ರಿ, ಪ್ಲೀಸ್ ಹಂಗ..

|

Updated on: Feb 12, 2021 | 8:10 PM

My Love Story: ಅವಳು ಅವತ್ತು ನನ್ನ ಬಗ್ಗೆ ಏನೆಂದುಕೊಂಡಳು? ಇವತ್ತು ಅದೆಷ್ಟು ಮರೆತಿರಬಹುದು? ಅವತ್ತು ಅವಳು ಅತ್ತಿರಬಹುದಾ? ಇವತ್ತು ನೆನೆಸಿಕೊಂಡು ನಗುತ್ತಿರಬಹುದಾ? ಮುಖ ಕೂಡ ನೆನಪಿರದ ಇಂಥವರೊಬ್ಬರ ನೆನಪು ಯಾಕಿಷ್ಟು ಬದುಕಿಸುತ್ತದೆ?

Valentines Day: ನಿಮ್ಮನ್ನ Love ಮಾಡ್ಬೇಕಂತ ಮಾಡೇನ್ರಿ, ಪ್ಲೀಸ್ ಹಂಗ..
ಅದು ಸೆಳೆತವಾ? ಆಕರ್ಷಣೆಯಾ? ಕರ್ಷಣೆಯಾ? ಹೃದಯದ ಬಗ್ಗೆ ತಿಳುವಳಿಕೆ ಇಲ್ಲದ ದಿನಗಳಾದ್ದರಿಂದ ಅದು ಮೆದುಳು ತಪ್ಪಿದ ದಿಕ್ಕಾ?
Follow us on

ಹೈಸ್ಕೂಲು ಮುಗಿಯುವ ಹಂತದ ದಿನಗಳು, ನಾನಾಗ ಎಸ್ಸೇಸೆಲ್ಸಿ – ಹತ್ನೇತಾ – I mean Tenth. ಶಾಲೆಯಿಂದ ಮನೆ ಒಂದು ಕಿಲೋ ಮೀಟರ್ ದೂರವಾ? ಇರಬಹುದು 20 ನಿಮಿಷದ ನಡಿಗೆ. ಒಂದು ಅಂದಾಜಿನಲ್ಲಿ ಮುಕ್ಕಾಲು ಕೇಜಿ ಪಾಟಿಚೀಲ I mean School bag ಹೊತ್ಕೊಂಡು ನಾನು ಪೂಜಾರಿ ನಾಗ್ರಾಜಾ ಶಾಲೆ ಬಿಟ್ಟಾಗ ಒಟ್ಟಿಗೆ ಹೊರಟರೆ ನಮ್ಮ ಮುಂದೆ ನಮ್ಮ ಶಾಲೆಯದೇ ಒಂದು ಹುಡುಗಿ, ಅವಳ ಹೆಸರು? ಇಯತ್ತೇ I mean Standard? ಊರು? ನಮ್ಮ ಮನೆ ದಾಟಿ ಎಲ್ಲಿಯೋ? ಇರಬಹುದಾದ ಅವಳ ಮನೆ ಎಲ್ಲಿ? ಊಹ್ಞುಂ! ಇದ್ಯಾವದೂ ಆವತ್ತು ಮತ್ತೀವತ್ತು ಗೊತ್ತಿಲ್ಲ.

ಗೊತ್ತಿದ್ದದ್ದು ಅವಳು ನಮ್ಮ ಮುಂದೆ ಮುಂದೆ ಹೋಗುತ್ತಿದ್ದಳು..! ನನಗೆ ಕಂಡದ್ದು ಕಡು ಕಪ್ಪು ಕಾಫೀ ಬಣ್ಣದ ಕಾಲ್ಚೀಲ I mean socks, ಅಷ್ಟೇ ಕಡುಗಪ್ಪು ಬಣ್ಣದ ಸಮವಸ್ತ್ರ I mean Uniform skirt, ನಡುವಿನ ಚೋಟುದ್ದ ಅಂತರದಲ್ಲಿ.. ಹಾಲು ಹಾಕಿದ ಚಹಾದಲ್ಲಿ ಅದ್ದಿ ತೆಗೆದ ಬ್ರೆಡ್ (Bread) ಬಣ್ಣದ ಒಂದು ಜೊತೆ ಮೀನಖಂಡಗಳು..

ಅದು ಸೆಳೆತವಾ? ಆಕರ್ಷಣೆಯಾ? ಕರ್ಷಣೆಯಾ? ಹೃದಯದ ಬಗ್ಗೆ ತಿಳುವಳಿಕೆ ಇಲ್ಲದ ದಿನಗಳಾದ್ದರಿಂದ ಅದು ಮೆದುಳು ತಪ್ಪಿದ ದಿಕ್ಕಾ? ಕಕ್ಕಾಬಿಕ್ಕಿಯಾ? ಅಥವಾ ಮೊದಲ ಬಾರಿಗೆ ಕಣ್ಣು ಕಂಡ ಅನನ್ಯ ವಿಭಿನ್ನ ಚೆಲುವಾ? ಅತ್ತ ಕಿರಿಯ ಅಲ್ಲದ ಇತ್ತ ಹರೆಯ ಅನ್ನಲೂ ಬಾರದ ನಟ್ಟ ನಡು ವಯಸ್ಸಿನ ತಪರಾಕಿ ಉನ್ಮಾದವಾ? ಬರೋಬ್ಬರಿ ನಾಕೂ ಕಾಲು ತಿಂಗಳು. ಭರ್ತಿ ಮೀನಖಂಡ ಕಾಲುಗಳ ಬೆನ್ನು ಹತ್ತಿ ಒಂದಿನ – ಸ್ವಲ್ಪ ತಡೀರಿ.. ಅನ್ನೊವಲ್ಲಿಗೆ ಬಂದು ನಿಂತವು. ಪಾಪ ಅಮಾಯಕಿ ತಡೆದು ನಿಂತಳು. ತಿರುಗಿ ನಿಂತಳಾ? ನೋಡಿದಳಾ? ಅವಳ ಮುಖ ಹೇಗಿತ್ತು? ಕೆಳಗೆ ಹಾಕಿದ ತಲೆ ನಾ ಮೇಲೆತ್ತಲಿಲ್ಲ, ಅವಳು ‘‘ಏನ್ ಹೇಳ್ರಿ’’ ಅಂದಿದ್ದು ಮಾತ್ರ ಕೇಳಿಸಿತು, ಏನಿಲ್ಲಾ ‘‘ನಾ ನಿಮ್ಮನ್ನ Love ಮಾಡ್ಬೇಕಂತ ಮಾಡೇನ್ರಿ’’ ನನ್ನ ಮರುಳು ಮಾತಿಗೆ ಅವಳ ಮರುತ್ತರ ‘‘ಹೌದೇನ್ರಿ Please ಹಂಗ ಮಾಡಬ್ಯಾಡ್ರಿ..!’’

ಇದನ್ನೂ ಓದಿ: ಗೆಳತಿ, ಮಾತು ಚುಚ್ಚಿ ತೆಗೆವ ಶೂಲ, ಮೌನ ಒಳಗೊಳಗೆ ನಾಟುವ ಮುಳ್ಳು

ಆಮೇಲಿನ ದಿನಗಳು ನಾನು ಮೊದಲು ಮನೆ ಸೇರುತಿದ್ದೆ ಎಷ್ಟೋ ಹೊತ್ತಿನ ನಂತರ ಅವಳು ನಮ್ಮ ಮನೆ ದಾಟಿ ಹೋಗುತ್ತಿದ್ದಳು.. ತೀರಾ ಎದುರಾ ಎದುರು ನಡೆದು ಹೋಗುತ್ತಿದ್ದಳು. ಎರಡು ಜಡೆ, ಬೆಳ್ಳಗಿದ್ದಳು ಅನ್ನುವುದು ಬಿಟ್ಟರೆ ಮುಖ ಇವತ್ತಿಗೂ ನೆನಪಿಗೆ ಬಾರದ ಚಿತ್ರ. ಮೀನಖಂಡಗಳು ಮರೆಯಲಾಗದ ಸಚಿತ್ರ. ವಿಚಿತ್ರ..! ಇವತ್ತಿಗೂ ಮಾಸದ, ಮನಸ್ಸು ನೆನನೆನೆಸಿ ನಕ್ಕು ಸುಮ್ಮನಾಗುವ ಚಿತ್ರ. ಅವಳ್ಯಾರು? ಅವಳು ಅವತ್ತು ನನ್ನ ಬಗ್ಗೆ ಏನೆಂದುಕೊಂಡಳು? ಇವತ್ತು ಅದೆಷ್ಟು ಮರೆತಿರಬಹುದು? ಅವತ್ತು ಅವಳು ಅತ್ತಿರಬಹುದಾ? ಇವತ್ತು ನೆನೆಸಿಕೊಂಡು ನಗುತ್ತಿರಬಹುದಾ? ಮುಖ ಕೂಡ ನೆನಪಿರದ ಇಂಥವರೊಬ್ಬರ ನೆನಪು ಯಾಕಿಷ್ಟು ಬದುಕಿಸುತ್ತದೆ?

ರಾಜಕುಮಾರ ಮಡಿವಾಳರ

Published On - 8:09 pm, Fri, 12 February 21