Valentine’s Day: ನಾ ಕಂಡ ಕನಸೆಲ್ಲಾ ಚೂರಾದವು, ಆ ಹುಡುಗ ನನ್ನ ಸ್ನೇಹಿತೆಯನ್ನು ಪ್ರೀತಿಸಿಬಿಟ್ಟ
My Love Story: ಆ ಹುಡುಗ ಬಹುದಿನಗಳ ಕಾಲ ನನ್ನ ಕಣ್ಣಲ್ಲಿ ಉಳಿದಿದ್ದ. ಹೆಸರು, ಮೊಬೈಲ್ ನಂಬರ್ ಗೊತ್ತಿದ್ರೆ ಬಹುಶಃ ನೇರ ಹೃದಯದಲ್ಲೇ ಉಳಿಯುತ್ತಿದ್ದ. ಆದ್ರೆ ಕಾಲೇಜು ಸೇರುವ ಮುನ್ನ ಯಾವುದೇ ಪ್ರೀತಿಗೆ ಜಾರಬಾರದು ಅಂತ ಶಪಥ ಮಾಡಿದ್ದು ನೆನಪಾಗುತ್ತಿತ್ತು.
ಡಿಗ್ರಿಯಲ್ಲಿ ವಿದ್ಯಾಭ್ಯಾಸದ ಕಡೆ ಗಮನ ಕೊಡದೆ, ಪ್ರೀತಿ ಗೀತಿ ಅಂತೆಲ್ಲಾ ಆಗಿ ಕಡಿಮೆ ಅಂಕ ಬಂತು. ಆದರೆ, ಕೊನೆಗೆ ಅತ್ತ ಪ್ರೀತಿ ಕೈ ಕೊಟ್ಟು, ಇತ್ತ ಕಡಿಮೆ ಅಂಕ ಬಂದು ಮುಂದೇನು ಮಾಡ್ಲಿ ಎಂಬ ಪ್ರಶ್ನೆ ಕಾಡತೊಡಗಿತು. ಕೆಲಸ ಹುಡುಕಬೇಕು ಅಂತ ಹೊರಟವಳಿಗೆ ಮನಸ್ಸಿಗೆ ಬಂದಿದ್ದು ಸ್ನಾತಕೋತ್ತರ ಪದವಿ ಮಾಡಬಹುದಲ್ಲಾ ಎಂಬ ಯೋಚನೆ. ಆಗಿದ್ದಾಗಲಿ ವಿದ್ಯಾಭ್ಯಾಸ ಮುಂದುವರೆಸೋಣ, ಇನ್ನು ಯಾವತ್ತಿಗೂ ಪ್ರೀತಿ ಕಡೆ ವಾಲಬಾರದು ಅಂತ ಶಪಥ ಮಾಡಿದೆ. ಆದ್ರೆ ನನ್ನ ಗೆಳತಿಯರು ಸುಮ್ಮನೆ ಇರಬೇಕಲ್ಲ. ಕಾಲೇಜಿನಲ್ಲಿ ನಡೆಯುವ ಸ್ಪರ್ಧೆಗೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಬರುತ್ತಿದ್ದರು. ಹುಡುಗರು ಕಾಲೇಜಿನ ಒಳಗೆ ಬರುತ್ತಿದಂತೆ ಇವರ ರಾಗ ಶುರುವಾಗುತ್ತಿತ್ತು. ಅವನ ಹೇರ್ ಸ್ಟೈಲ್ ನೋಡಾ, ಅವನ ಡ್ರೆಸಿಂಗ್ ಸ್ಟೈಲ್ ಚಂದ ಅಲಾ, ಅವನ ಐಡಿ ಕಾರ್ಡ್ ಅಲ್ಲಿ ಹೆಸರು ಗೊತ್ತಾಯ್ತು, ಹೆಸರು ಭಾರೀ ಚಂದ ಉಂಟು.. ಹೀಗೆ ಸಂಜೆ ಆಗುವಷ್ಟರಲ್ಲಿ ನೋಡಿಟ್ಟ ಕೆಲವೊಂದು ಹುಡುಗರ ಪೂರ್ತಿ ಜಾತಕವನ್ನೇ ತಿಳಿದುಕೊಂಡುಬಿಡ್ತಿದ್ರು. ಆ ದಿನ ಕೋರೆ ಹಲ್ಲಿನ ಒಬ್ಬ ಹುಡುಗ ನನ್ನ ಕಣ್ಣಲ್ಲೇ ಉಳಿದ. ಸಂಜೆ ಆದ್ರೂ ಅವನ ಕೋರೆ ಹಲ್ಲು ಬಿಟ್ರೆ ಬೇರೇನೂ ಗೊತ್ತಾಗಲಿಲ್ಲ. ಅವನು ಬೆಳಗ್ಗೆ ಒಂದು ಸ್ಪರ್ಧೆಗೆ ಭಾಗವಹಿಸಿ ಏನೋ Emergency ಅಂತ ಮನೆಗೆ ತೆರಳಿದನಂತೆ. ಹಾಗಾಗಿ ಅವನ ಬಗ್ಗೆ ಹೆಚ್ಚು ತಿಳಿದುಕೊಳ್ಳಲೂ ಸಾಧ್ಯವಾಗಲಿಲ್ಲ.
ಆ ಹುಡುಗ ಬಹುದಿನಗಳ ಕಾಲ ನನ್ನ ಕಣ್ಣಲ್ಲಿ ಉಳಿದಿದ್ದ. ಹೆಸರು, ಮೊಬೈಲ್ ನಂಬರ್ ಗೊತ್ತಿದ್ರೆ ಬಹುಶಃ ನೇರ ಹೃದಯದಲ್ಲೇ ಉಳಿಯುತ್ತಿದ್ದ. ಆದ್ರೆ ಕಾಲೇಜು ಸೇರುವ ಮುನ್ನ ಯಾವುದೇ ಪ್ರೀತಿಗೆ ಜಾರಬಾರದು ಅಂತ ಶಪಥ ಮಾಡಿದ್ದು ನೆನಪಾಗುತ್ತಿತ್ತು. ಹಾಗಾಗಿ ದೃಢ ಮನಸ್ಸಿಟ್ಟುಕೊಂಡು ಓದಿನ ಕಡೆ ಗಮನ ಕೊಟ್ಟೆ. ಅದು ಜನವರಿ 2021ರ ಕೊನೆಯ ವಾರ, ಕಾಲೇಜು ಮುಗಿದು ಮನೆ ಕಡೆ ಗೆಳತಿಯರ ಜೊತೆ ಹೋಗಬೇಕಾದ್ರೆ ಒಂದು ಕಾರು ಪಾಸ್ ಆಯ್ತು. ಕಾರಿನಲ್ಲಿ ಒಂದು ಪುಟ್ಟ ನಾಯಿಯನ್ನು ಹಿಡಿದು, ಮುಖವನ್ನು ಕಾರಿನ ಕಿಟಕಿಯಿಂದ ಹೊರಹಾಕಿ ನೋಡುತ್ತಿದ್ದಿದ್ದು ಅವನೇನಾ? ಹಾಗಾದ್ರೆ ಅವನು ಇದೇ ಊರಿನವನಾ? ಮನೆ ಎಲ್ಲಿ ಇರಬಹುದು? ಯಾವ ಕಾಲೇಜಿನಲ್ಲಿ ಕಲಿತಿರಬಹುದು? ಎಂಬ ಸಾಲುಸಾಲು ಪ್ರಶ್ನೆಗಳು ಕಾಡತೊಡಗಿದವು. ಹಾಗೆಯೇ ಕಾರು ಸ್ವಲ್ಪ ಮುಂದೆ ಹೋಗಿ ಒಂದು ಅಂಗಡಿಯ ಬಳಿ ನಿಂತಿತ್ತು. ಆ ಕಾರಿನಲ್ಲಿದ್ದ ಹುಡುಗ ಹೊರಗಡೆ ಕಾಲಿಟ್ಟದ್ದೇ ತಡ ನನ್ನ ಎದೆಬಡಿತ ಜೋರಾಯ್ತು. ಸಾಲದ್ದಕ್ಕೆ ಅವ ನನ್ನ ಬಳಿ ಒಮ್ಮೆ ನೋಡಿದ. ಮತ್ತೆ ಎದೆ ಬಡಿತ ಹೆಚ್ಚಾಯ್ತು. ಗೆಳತಿಯರಿಗೆ ಈ ಯಾವ ವಿಷಯವೂ ಗೊತ್ತಿರಲಿಲ್ಲ. ಹಾಗಾಗಿ ಅವರು ಅವರ ಪಾಡಿಗೆ ಇದ್ದರು.
ಸ್ವಲ್ಪ ಹೊತ್ತು ಕಳೆದ ಬಳಿಕ ಅವನ ಹೆಜ್ಜೆ ನನ್ನ ಕಡೆ ಬರುತ್ತಿರುವುದು ಕಾಣಿಸಿತು. ಏನೋ ಒಂಥರಾ ಭಯವಾಗಿ ಗೆಳತಿಯರ ಕೈ ಹಿಡಿದುಕೊಂಡೆ. ಹಲೋ.. ಎಕ್ಸ್ಕ್ಯೂಸ್ ಮೀ ಎಂದ. ಅವ ನನ್ನನ್ನೇ ನೋಡುತ್ತಿರಬಹುದು ಎಂದು ಮೆಲ್ಲನೆ ಕಣ್ಣು ತೆರೆದೆ. ಆದ್ರೆ ಅವನು ನನ್ನ ಕಣ್ಣ ಮುಂದೆ ಇರಲಿಲ್ಲ. ನೋಡಿದರೆ, ಅದೇ ಹುಡುಗ ನನ್ನ ಗೆಳತಿಯ ಮುಂದೆ ಇದ್ದಾನೆ! ವಿಷಯ ಬೇರೆ ಎಲ್ಲೋ ಹೋಗುತ್ತಿದೆಯಲ್ಲಾ ಅಂತ ಅವಳ ಕಡೆ ತಿರುಗಿದೆ. ಆಗ ಅಸಲಿ ವಿಷಯ ಗೊತ್ತಾಯ್ತು.
ಆವತ್ತು ಕಾಲೇಜಿನಲ್ಲಿ ನಡೆದ ಸ್ಪರ್ಧೆಯ ಸಮಯದಲ್ಲಿ ಅವನಿಗೆ ಇವಳು ಇಷ್ಟವಾಗಿದ್ದಾಳಂತೆ. ಆ ದಿನವೇ ಅವನ ಮನಸ್ಸಿನಲ್ಲಿ ನನ್ನ ಗೆಳತಿ ಹೊಕ್ಕಾಗಿತ್ತಂತೆ. ಫೇಸ್ಬುಕ್ನಲ್ಲಿ ರಿಕ್ವೆಸ್ಟ್ ಕಳುಹಿಸಿದ್ದನಂತೆ. ಆದ್ರೆ ಅವಳು ಅದನ್ನು ನೋಡಿರಲಿಲ್ಲ. ಹಾಗಾಗಿ ಇವತ್ತು ಬಂದು ನೇರವಾಗಿ ಪ್ರೊಪೋಸ್ ಮಾಡಿಯೇ ಬಿಟ್ಟ. ಆದ್ರೆ ಅವಳು ನನಗೆ ಸ್ವಲ್ಪ ಸಮಯ ಬೇಕು ಅಂದುಬಿಟ್ಳು. ಅದೇ ಅವನೇನಾದರೂ ನನ್ನ ಎದುರು ಬಂದು ಒಂದು ಮಾತು ನೀನು ಇಷ್ಟ ಅಂದಿದ್ರೆ ಅಲ್ಲೇ ಒಪ್ಪಿ ಬಿಡುತ್ತಿದ್ದೆ. ಆದ್ರೆ ಏನು ಮಾಡ್ಲಿ ನಾನು ಇಷ್ಟಪಟ್ಟ ಹುಡುಗ ನನ್ನ ಗೆಳತಿಯನ್ನು ಇಷ್ಟಪಟ್ಟಿದ್ದಾನೆ. ಅಷ್ಟೇ ಆಗಿದ್ದರೂ ಪರವಾಗಿರಲಿಲ್ಲವೇನು, ಆದರೆ ಅವನು ಕೊನೆಗೆ ಹೇಳಿದ ಮಾತು ಮಾತ್ರ ಕೆಟ್ಟ ಕೋಪ ಬರಿಸಿತು. ‘‘ಹೇ ಸಿಸ್ಟರ್ ಒಂದು ಸಹಾಯ ಮಾಡಿ. ಅವಳಿಗೆ ಒಂಚೂರು ಬುದ್ಧಿ ಹೇಳಿ, ನನ್ನನ ಒಪ್ಪಿಕೊಳ್ಳಲಿಕ್ಕೆ’’. ಅಂದುಬಿಟ್ಟ.
ನಮ್ಮ ಜೀವನದ ಹಾದಿಯಲ್ಲಿ ಕೆಲವೊಂದು ವ್ಯಕ್ತಿಗಳು ಹೀಗೆಯೇ ಬಂದು ಹೋಗುತ್ತಾರೆ. ಎಲ್ಲಾ ತಿಳಿಯುವ ಮೊದಲೇ ನನ್ನ ಜೀವನದ ಜೊತೆಗಾರ ಇವನೇ ಅಂತ ನಿರ್ಧಾರ ಮಾಡ್ತೇವೆ. ನಾನು ಕೂಡ ಹಾಗೆಯೇ ಅಂದುಕೊಂಡಿದ್ದೆ. ಆದ್ರೆ ಅವನು ನನ್ನ ಜೀವನದ ಜೊತೆಗಾರನಾಗಿ ಇರುತ್ತಾನೆ ಎಂದುಕೊಂಡರೆ ಕೊನೆಗೆ ಆದದ್ದೇ ಬೇರೆಯಾಗಿಬಿಟ್ಟಿತು.
ಚೈತ್ರಾ ಉಡುಪಿ