Valentine’s Day: ಪ್ರೀತಿ ಎಂಬ ಮಹಾಕಾವ್ಯದ ಮುನ್ನುಡಿ ನೀನು, ಇದೇ ನಲ್ಮೆಯಿಂದ ಜೊತೆಗಿದ್ದುಬಿಡು ಗೆಳೆಯ

|

Updated on: Feb 13, 2021 | 4:26 PM

My Love story: ಜಗದ ಜಂಜಾಟದಲ್ಲಿ ಕಳೆದು ಹೋಗಿದ್ದಾಗ ನನ್ನ ಅಸ್ತಿತ್ವದ ಅನಿವಾರ್ಯತೆಯ ತಿಳಿಸಿದ ನಿನ್ನ ಗುರುವೆನ್ನಲೇ? ಊಟ ಸಾಕು ಎಂದಾಗ ಕಣ್ಣಲೇ ಭಯ‌ ಹುಟ್ಟಿಸುವ ಅಮ್ಮ ಎನ್ನಲೇ? ಕೇಳಿದ್ದೆಲ್ಲವನ್ನೂ ನೀಡಿ ಮೌನದಲ್ಲೇ ಕಷ್ಟ ನುಂಗಿದ ನಿನ್ನ ಅಪ್ಪನ ಪ್ರತಿರೂಪ ಎಂದು ಬಿಡಲೇ?

Valentines Day: ಪ್ರೀತಿ ಎಂಬ ಮಹಾಕಾವ್ಯದ ಮುನ್ನುಡಿ ನೀನು, ಇದೇ ನಲ್ಮೆಯಿಂದ ಜೊತೆಗಿದ್ದುಬಿಡು ಗೆಳೆಯ
ಪ್ರೀತಿಯ ಚಿಗುರು ಮದುವೆಯಲ್ಲಿ ಹೂವಾಗಿ ಅರಳಲು ಕಾತರದಿಂದ ಕಾದಿದೆ
Follow us on

ನನಗಿನ್ನೂ ನೆನಪಿದೆ ಪ್ರೀತಿ ಎಂದರೆ ನೋವು, ಮೋಸ‌, ಕಣ್ಣೀರು ಅದೊಂದು ಸುಳ್ಳಿನ ಕಂತೆ, ಕೇವಲ ಭ್ರಮೆ ಹೀಗೆ ಅದೆಷ್ಟು ದೂರುಗಳಿದ್ದವು ನನ್ನಲ್ಲಿ. ಆದರೆ ಅದೆಲ್ಲವೂ ನಿನ್ನ ಆಗಮನದಿಂದಾಗಿ ತೆರೆಮರೆಗೆ ಸರಿಯಿತಲ್ಲ. ಹುಡುಗರೆಂದರೆ ಉರಿದು ಬೀಳುತ್ತಿದ್ದ ಈ ನನ್ನ ಬದುಕಿಗೆ ಅಕ್ಕರೆಯ ಅಕ್ಷಯ ಪಾತ್ರೆಯೊಂದಿಗೆ ಹೆಜ್ಜೆಯಿಟ್ಟ ನಿನಗೆ ಹೇಗೆ ಧನ್ಯವಾದ ಹೇಳೋದು. ಪಟಪಟ ಅಂತ ಮಾತನಾಡೋ ನಾನೂ ಸಹ ಹೇಳದೆ ಉಳಿದ ಮಾತುಗಳನ್ನ ಇಲ್ಲಿ ಅಕ್ಷರವಾಗಿಸಿದ್ದೀನಿ. ಒಮ್ಮೆ ಕಣ್ಣಾಡಿಸಿಬಿಡು ಹುಡುಗ.

ಮಿತಿಗಳನ್ನೇ ನೆನೆದು ಕಣ್ಣೀರಿಟ್ಟ ಕಂಗಳಿಗೆ ನೀನೊಬ್ಬ ವಿಸ್ಮಯದ ಜೀವವಾಗಿದ್ದೆ. ನಾನಿರುವಂತೆಯೇ ನನ್ನ ಪ್ರೀತಿಸುವ ನಿನ್ನ ಗುಣವನ್ನು ಕಂಡು ಮುಗಿಲೇ ಹೊಟ್ಟೆಕಿಚ್ಚಿನಿಂದ ಕೆಂಪಗಾದಂತಿದೆ. ಅದೆಷ್ಟೋ ಕೋಟಿ ಜನರ ನಡುವೆ ಅಪರಿಚಿತನಾಗಿದ್ದ ನೀನು ಅಪ್ಪ, ಅಮ್ಮನಂತೇ ಒಲವಿನ ಮೂಟೆ ಹೊತ್ತು ಬಂದೆಯಲ್ಲಾ, ಆ ಭಾರಕ್ಕೆ ಬೆನ್ನು ಬಾಗಿ ಹೋಗಿರಬಹುದೇನೋ! ಒಮ್ಮೆ ಹಾಗೇ ಗಮನಿಸಿಬಿಡು ಇನಿಯಾ. ಜಗದ ಜಂಜಾಟದಲ್ಲಿ ನಾನೇ ಕಳೆದು ಹೋಗಿದ್ದಾಗ ನನ್ನ ಅಸ್ತಿತ್ವದ ಅನಿವಾರ್ಯತೆಯ ತಿಳಿಸಿದ ನಿನ್ನ ಗುರುವೆಂದು ಹೇಳಲೇ? ಊಟ ಸಾಕು ಇನ್ನೊಂದು ತುತ್ತೂ ಬೇಡ ಎಂದಾಗ ಕಣ್ಣಲೇ ಭಯ‌ ಹುಟ್ಟಿಸುವ ಅಮ್ಮ ಎಂದು ತಿಳಿದುಬಿಡಲೇ? ಕೇಳಿದ್ದೆಲ್ಲವನ್ನೂ ಇಲ್ಲವೆನ್ನದೇ ನೀಡಿ ಮೌನದಲ್ಲೇ ಕಷ್ಟ ನುಂಗಿದ ನಿನ್ನ ಅಪ್ಪನ ಪ್ರತಿರೂಪ ಎಂದುಬಿಡಲೇ? ಅಥವಾ ಜುಮ್ಮೆನ್ನಿಸುವ ಚಳಿಯಲ್ಲಿ ಬೆಚ್ಚನೆಯ ಸ್ಪರ್ಶ ನೀಡಿದ ನಿನ್ನ ಇನಿಯ ಎಂದು ಕರೆಯಲೇ? ಒಂದೇ ಎರಡೇ ಪ್ರೀತಿಯ ಪುಟದಲ್ಲಿ ತೆರೆದಷ್ಟೂ ಬತ್ತದ ಒರತೆ ಉಕ್ಕಿಸಿದ್ದಕ್ಕೆ ಏ ಹುಡ್ಗ ನಿನಗೊಂದು ಥ್ಯಾಂಕ್ಸ್ ಹೇಳಿಬಿಡ್ತೀನಿ.

ಇನ್ನೆಂದೂ ಕೂಡ ಮರೆಯಾಗದಂತೆ ಉಳಿದುಬಿಡು ಒಲವಿನಲಿ. ಪ್ರೇಮರಾಗ ನುಡಿಸುವಾಗಲಾದರೂ ಶೃತಿ ತಪ್ಪಬಹುದೇನೋ‌ ಆದರೆ ನಿನ್ನ ಪ್ರೀತಿ ಆರೈಕೆಯಲ್ಲಿ ಕಿಂಚಿತ್ತೂ ಕೊರತೆಯಿಲ್ಲ. ಈವಾಗಲೂ ನೆನಪಿದೆ ನೀನಂದ್ರೆ ನನ್ ಜೀವ ಏನೇ ಆದ್ರೂ ಜೊತೆಗಿದ್ದು ಬಿಡ್ತೀಯಾ ಪ್ಲೀಸ್? ಹೀಗೇ ಕೇಳ್ಬೇಕು ಅಂತ ಧೈರ್ಯ ಮಾಡಿ ನಿನ್ನೆದುರು ನಿಂತಿದ್ದೆ. ತುಟಿಯೆಲ್ಲಾ ಭಯದಿಂದ ಒಣಗಿ ಹೋಗಿದ್ದರೂ ನಿನ್ನ ಪ್ರೀತಿಯ ಕಾರಂಜಿಯಿಂದ ಮತ್ತದೇ ಮಂದಹಾಸ ಬೀರುತ್ತಾ ನಿನ್ನ ಕಣ್ಣಲ್ಲಿ ನನ್ನ ಬಗೆಗಿರುವ ಭಾವನೆಗಳ ಹುಡುಕಾಟದಲ್ಲಿದ್ದವಳಿಗೆ ನೀ ಮಂಡಿಯೂರಿ ಕುಳಿತಿದ್ದು ಅರಿವಾಗಲೇ ಇಲ್ಲ. ಅಬ್ಬಾ ಪ್ರೇಮ ನಿವೇದನೆ ಇಷ್ಟೊಂದು ಕಷ್ಟವೇ ಮನದಲ್ಲಿನ ಭಾವನೆಗಳನ್ನು ಹೊರ ಹಾಕಿ ನಿರಾಳನಾಗುವ ತವಕ ನಿನಗೆ. ಬದುಕಿನ ನೋವನ್ನೆಲ್ಲಾ ಸಾಗರದಾಳಕ್ಕೆ ತಳ್ಳಿ ನಿನ್ನ ನಲ್ಮೆಯ ಒಡತಿಯಾಗುವ ಬಯಕೆ ನನಗೆ. ಕೊನೆಗೂ ನೀ ಕೇಳಿಯೇ ಬಿಟ್ಟಿದ್ದೆ, ‘‘ನೀ ನನ್ನ ಜೀವನ‌ದುದ್ದಕ್ಕೂ ಜೊತೆಯಲ್ಲೇ ಇದ್ದು ಬಿಡ್ತೀಯಾ? ನೀನಿಲ್ಲದೇ ಬದುಕೇ ಇಲ್ಲ ಎಂಬ ಹುಚ್ಚು ಮಾತನ್ನು ನಾ ಹೇಳಲಾರೆ. ಆದ್ರೆ ನೀ ನನ್ನ ಜೊತೆಗಿರುವ ಜಗತ್ತು ಮಾತ್ರ ಎಂದಿಗಿಂತ ತುಂಬಾ ವಿಶೇಷ. ನನ್ನ ಮದುವೆ ಆಗ್ತೀಯಾ?’’ ಹೀಗೆ ಕೈಯಲ್ಲೊಂದು ರಿಂಗ್ ಹಿಡಿದು ಮಂಡಿಯೂರಿದ ನಿನ್ನ ಮುಂದೆ ನಾನು ಕರಗಿ ಹೋಗಿದ್ದೆ.

ಜೀವನ ಸಂಗಾತಿ ಸಿಕ್ಕನೆಂಬ ಖುಷಿಯೋ ಅಥವಾ ನನಗಾಗಿ ಇರುವ ಜೀವ ಇದೇನಾ? ಎಂಬ ಸಂಭ್ರಮದ ತೊಳಲಾಟವೋ? ಹೀಗೆ ಭಾವನೆಗಳ ಕಾದಾಟದಲ್ಲಿ ಪ್ರೀತಿಯ ಜಯವಾಗಿತ್ತು. ಅಂದಿನಿಂದ ಬೇರೆಯದ್ದೇ ಜಗತ್ತು ನನ್ನ ಮುಂದಿತ್ತು. ಹಾಗೆಂದ ಮಾತ್ರಕ್ಕೆ ನಮ್ಮಿಬ್ಬರ ನಡುವೆ ಕೊರತೆಯೇ ಇಲ್ಲವೆಂದೇನಲ್ಲ. ನೀನು ನಿನ್ನ ಕೆಲಸದಲ್ಲಿ ಬ್ಯುಸಿ ಇದ್ದಾಗ ನನಗೆ ಟೈಮ್ ಕೊಡೋಕೆ ಆಗಲ್ವಾ ಅಂತ ನಾನು ರೇಗಾಡಿದ್ದೂ ಇದೆ, ಹುಸಿಮುನಿಸಿದೆ, ಅಳುವಿದೆ, ಜನರ ಟೀಕೆಗಳಿವೆ.. ಅಬ್ಬಾ ಒಂದೇ ಎರಡೇ. ಆದರೆ ನನ್ನ ಆಯ್ಕೆ ಸರೀನಾ ಎಂದು ಯೋಚಿಸುವಾಗಲೆಲ್ಲ ನಿನ್ನ ಪ್ರೀತಿ ನನ್ನೆಲ್ಲಾ ಗೊಂದಲಗಳನ್ನು ಬದಿಗೆ ತಳ್ಳಿ, ‘‘ಹೌದು, ಇವನೇ ನನ್ನ ಅತ್ಯುತ್ತಮ ಆಯ್ಕೆ’’ ಅಂತ ಸಾವಿರ ಬಾರಿ ಹೇಳುತ್ತದೆ.

ಪ್ರೀತಿಯ ಚಿಗುರು ಮದುವೆಯಲ್ಲಿ ಹೂವಾಗಿ ಅರಳಲು ಕಾತರದಿಂದ ಕಾದಿದೆ.

ಜಗತ್ತಿನ ಪ್ರೀತಿಯ ವ್ಯಾಖ್ಯಾನದ ಹಂಗು ನನಗಿಲ್ಲ. ನಮ್ಮಿಬ್ಬರ ಅಭಿರುಚಿಗಳೇ ಬೇರೆಬೇರೆ. ನೀನು ಇಂಗ್ಲೀಷ್ ಆಲ್ಬಂ ಸಾಂಗ್ಸ್ ಪ್ರಿಯನಾದರೆ ನನಗೀಗಲೂ ಕನ್ನಡ ಭಾವಗೀತೆಗಳೇ ಅಚ್ಚುಮೆಚ್ಚು, ವೀಕೆಂಡ್ ಪಾರ್ಟಿ ನಿನ್ನ ಆದ್ಯತೆಯಾದ್ರೆ ಮನೆಯಲ್ಲೇ ನಿನ್ನ ಪಕ್ಕದಲ್ಲಿ ಕುಳಿತು ಸಿನಿಮಾ ನೋಡೋದು ನನಗಿಷ್ಟ, ಕಡಲ ತೀರ ನನಗಿಷ್ಟ ಬೆಟ್ಟ ಗುಡ್ಡ ಹತ್ತೋ ಟ್ರೆಕಿಂಗ್ ನಿನಗಿಷ್ಟ, ಮುಂಗೋಪಿ ನಾನಾದ್ರೆ ತಾಳ್ಮೆಯನ್ನೇ ತವರುಮನೆ ಮಾಡಿಕೊಂಡ ನೀನು ಇನ್ನೊಂದು ಕಡೆ, ಆದರೆ, ನಮ್ಮ ಪ್ರೀತಿ ಉಳಿದಿದ್ದು ಎಲ್ಲಿ ಗೊತ್ತಾ ಈ ಎಲ್ಲಾ ಭಿನ್ನತೆಗಳನ್ನ ಗೌರವಿಸಿ ಅದೇನೂ ದೊಡ್ಡ ವಿಷಯಾನೇ ಅಲ್ಲ ಎಂಬಂತೆ ಬದುಕ್ತಿದೀವಲ್ಲಾ ಅಲ್ಲಿ. ಅದರಿಂದಲೇ ಮತ್ತೆಮತ್ತೆ ಪ್ರೀತಿ ಜಾಸ್ತಿ ಆಗ್ತಿದೆ.

ಇದನ್ನೂ ಓದಿ: ಊಹಿಸಿರಲಿಲ್ಲ ನಿನ್ನ ನೋಡುವ ತನಕ, ಒಂದು ಭಾವನೆ ಇಷ್ಟು ತೀವ್ರವೆಂದು

ನಿನಗೆ ಗೊತ್ತಿದ್ಯೋ ಇಲ್ವೋ ತುಂಬಾ ಜನ ಹುಡುಗೀರಿಗೆ ಒಂದು ರೀತಿ ಭಯ ಇರುತ್ತೆ. ನನಗಿಂತ ಸುಂದರವಾಗಿರೋ ಹುಡುಗಿ ಸಿಕ್ಕಿ ಇವನು ನನ್ನ ಇಷ್ಟ ಪಡದೇ ಇದ್ರೆ ಅಂತ. ಆದ್ರೆ, ನಿಜವಾದ ಪ್ರೀತಿ ಇದ್ದಾಗ ಈ ಅಂದ ಚಂದಗಳ ವ್ಯಾಖ್ಯಾನವೇ ಬೇರೆ ಅನ್ನೋದು ನೀನು ಸಿಕ್ಕಿದ ಮೇಲೇನೆ ಅರ್ಥ ಆಗಿದ್ದು. ಸೌಂದರ್ಯವನ್ನೇ ನುಂಗಿ ನೀರು ಕುಡಿದವರ ನಡುವೆ ಅಲ್ಲೆಲ್ಲೋ ಮೂಲೆಯಲ್ಲಿ ತನ್ನಿಷ್ಟದಂತೆ ಬದುಕುವ ಜೀವ ನಿನ್ನ ಕಣ್ಣಿಗೆ ಅಪ್ಸರೆಯಂತೆ ಕಂಡಿದ್ದು ನಿಜಕ್ಕೂ ವಿಸ್ಮಯವೇ. ಎಲ್ಲವೂ ನೋಡುವ ನೋಟದಲ್ಲಿದೆ ಎಂಬುದಕ್ಕೆ ನೀನೆ ಸಾಕ್ಷಿಯಾಗಿದ್ದೆ. ಮನಸ್ಸಿಗೆ ನಿನ್ನೆಲ್ಲಾ ಮಿತಿಗಳು ತಿಳಿದ ಮೇಲೂ ಇವನೇ ಬೆಸ್ಟ್ ಎಂದು ಎದೆಗೂಡಿನ ಹಕ್ಕಿ ಪಿಸುಗುಟ್ಟಿತಲ್ಲ ಹಾಗಾದ್ರೆ ಪ್ರೀತಿ ಅಂದ್ರೆ ಇದೇನಾ? ಹೀಗೇನಾ? ಗಂಟೆಗಟ್ಟಲೆ ಮಾತನಾಡದಿದ್ರೂ, ದಿನಕ್ಕೆ ನೂರೈವತ್ತು ಮೆಸೇಜ್ ಮಾಡದಿದ್ರೂ ಇದೆಲ್ಲಾ ಜಗಳ ಮಾಡೋ ವಿಷ್ಯಾನೇ ಅಲ್ಲ ಅಂತ ಜೀವನ ಪಾಠ ಹೇಳಿಕೊಟ್ಟಿತ್ತು.

ಇದನ್ನೂ ಓದಿ: ನಾವಿಬ್ರೂ ಒಂದೇ ಆಸ್ಪತ್ರೆಯಲ್ಲಿ ಹುಟ್ಟಿದ್ದು.. ನಮ್ಮ ಲವ್​ ಸ್ಟೋರಿಯನ್ನ ಎಲ್ಲಿಂದ ಶುರುಮಾಡ್ಲಿ?

ಇನ್ನೇನು ಒಂದು ವಾರ ಅಷ್ಟೇ, ನಾಲ್ಕು ವರ್ಷದ ಪ್ರೀತಿಗೆ ಮದುವೆ ಎಂಬ ಅದ್ಭುತವನ್ನು ಉಡುಗೊರೆಯಾಗಿ ಕೊಡ್ತಾ ಇದೀಯಾ. ಯಾರ ಬಳಿಯೂ ಏನನ್ನೂ ಕೇಳದ ನೀನು, ನನ್ನ ಪಡೆಯೋದಕ್ಕೆ ನಮ್ಮಿಬ್ಬರ ಅಪ್ಪ, ಅಮ್ಮನ ಹತ್ರ ಮಗುವಿನಂತೆ ಅಂಗಲಾಚಿದ್ದೆ. ಮುದ್ದು ಕಂದನಂತೆ ಹಠ ಮಾಡಿದ್ದೆ. ಕೊನೆಗೂ ನಮ್ಮಿಬ್ಬರ ಆಯ್ಕೆ ಸರಿ‌ ಎಂದು ಅರಿವಾದಾಗ ಅವರು ಮದುವೆಗೆ ಮರುಮಾತಾಡದೇ ಒಪ್ಪಿಗೆ ನೀಡಿದ್ರು. ಪ್ರೀತಿಯ ಚಿಗುರು ಮದುವೆಯಲ್ಲಿ ಹೂವಾಗಿ ಅರಳಲು ಕಾತರದಿಂದ ಕಾದಿದೆ. ಮುಂದೆಯೂ ಹೀಗೇ ವೃದ್ಧಾಪ್ಯದಲ್ಲಿ ಕೈ ನಡುಗುವಾಗಲೂ, ತಲೆಗೂದಲು ಬೆಳ್ಳಗಾದಾಗಲೂ, ಬೆನ್ನುಬಾಗಿ ಮಂಡಿ ನೋವು ಬಂದಾಗಲೂ‌ ಕೊನೆಗೆ ಜೀವನ ಪಯಣ ಮುಗಿಸುವಾಗಲೂ ಇದೇ ನಲ್ಮೆಯಿಂದ ಜೊತೆಗಿದ್ದುಬಿಡು ಗೆಳೆಯ.

ಪ್ರಣಿತ ತಿಮ್ಮಪ್ಪ

Published On - 4:26 pm, Sat, 13 February 21