ರಿಯಾಗೆ ಬೆಂಬಲಕ್ಕೆ ವಿದ್ಯಾಬಾಲನ್ ಮತ್ತು ಲಕ್ಷ್ಮಿಮಂಚು

  • Publish Date - 5:22 pm, Wed, 2 September 20
ರಿಯಾಗೆ ಬೆಂಬಲಕ್ಕೆ ವಿದ್ಯಾಬಾಲನ್ ಮತ್ತು ಲಕ್ಷ್ಮಿಮಂಚು

ಸುಶಾಂತ್ ಸಿಂಗ್ ರಜಪೂತ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿಯೆಂದು ಬಿಂಬಿಸಲ್ಪಡುತ್ತಿರುವ ರಿಯಾ ಚಕ್ರವರ್ತಿ, ರಾಷ್ಟ್ರೀಯ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ನಂತರ ಆಕೆಯ ಬೆಂಬಲಕ್ಕೆ ಕೊನೆಗೂ ಕೆಲ ನಟಿಯರು ಮುಂದೆ ಬಂದಿದ್ದಾರೆ. ಬಾಲಿವುಡ್ ಸುಪ್ರಸಿದ್ಧ ತಾರೆ ವಿದ್ಯಾ ಬಾಲನ್ ಮಾಧ್ಯಮಗಳಲ್ಲಿ ಆಕೆಯ ಚಾರಿತ್ರ್ಯವಧೆ ಅಗುತ್ತ್ತಿದೆ, ಅದು ಕೂಡಲೇ ನಿಲ್ಲಬೇಕು ಎಂದಿದ್ದಾರೆ.

ವಿದ್ಯಾಗಿಂತ ಮೊದಲು, ರಿಯಾ ಅನುಭವಿಸುತ್ತಿರುವ ಮಾನಸಿಕ ಹಿಂಸೆಗೆ ಸ್ಪಂದಿಸಿದ್ದು ದಕ್ಷಿಣ ಭಾರತದ ನಟಿ ಲಕ್ಷ್ಮಿ ಮಂಚು. ರವಿವಾರದಂದು ರಿಯಾಳ ಸ್ಥಿತಿಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾ ಟ್ವೀಟ್ ಮಾಡಿರುವ ಲಕ್ಷ್ಮಿ, ಮಾಧ್ಯಮದಲ್ಲಿ ಆಕೆಯನ್ನು ರಾಕ್ಷಸಿಯಂತೆ ಚಿತ್ರಿಸಲಾಗುತ್ತಿದೆ ಎಂದು ಹೇಳುತ್ತಾ, ಆಕೆಯೆಡೆ ಕ್ರೌರ್ಯತೆ ಬಿಟ್ಟು, ಕನಿಕರ ತೋರಿ ಎಂದು ಮಾಧ್ಯಮದವರಿಗೆ ವಿನಂತಿಸಿಕೊಂಡಿದ್ದಾರೆ. 

‘‘ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಮತ್ತು ಸುಶಾಂತ್ ಸಿಂಗ್ ರಜಪೂತ ಅವರ ಸಾವಿಗೆ ನ್ಯಾಯ ಒದಗಿಸಲು ಹೆಣಗುತ್ತಿರುವ ಎಲ್ಲ ಸಂಸ್ಥೆಗಳ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ, ಆದರೆ ಪ್ರಕರಣದ ಸತ್ಯಾಸತ್ಯತೆಗಳು ಬಯಲಾಗುವವರೆಗೆ ನಾವು ರಿಯಾ ಮತ್ತು ಆಕೆಯ ಕುಟುಂಬದ ಸದಸ್ಯರ ಬಗ್ಗೆ ನಿರ್ದಯತೆಯಿಂದ ಮಾತಾಡುತ್ತಾ ಅವರ ಚಾರಿತ್ರ್ಯವಧೆಯಲ್ಲಿ ತೊಡಗುವುದನ್ನು ನಿಲ್ಲಿಸಬೇಕು,’’ ಎಂದು ಲಕ್ಷ್ಮಿ ಟ್ವೀಟ್ ಮಾಡಿದ್ದಾರೆ.

ರಿಯಾಳನ್ನು ಸಪೋರ್ಟ್ ಮಾಡಿರುವ ಲಕ್ಷ್ಮಿ ಬಗ್ಗೆ ಮೆಚ್ಚುಗೆ ಸೂಚಿಸಿರುವ ವಿದ್ಯಾ ಬಾಲನ್, ರಿಯಾ ಅನುಭವಿಸುತ್ತಿರುವ ಸಂಕಟ ನೋಡುತ್ತಿದ್ದರೆ, ಹೃದಯ ಕಿತ್ತುಬಂದಂತಾಗುತ್ತದೆ ಎಂದು ಹೇಳಿದ್ದಾರೆ.

‘‘ನಮ್ಮೆಲ್ಲರ ಅಚ್ಚುಮೆಚ್ಚಿನ ಯುವನಟರಾಗಿದ್ದ ಸುಶಾಂತ್ ಸಿಂಗ್ ರಜಪೂತನ ಅಕಾಲಿಕ ಮರಣವು ಒಂದು ಮಿಡಿಯಾ ಸರ್ಕಸ್ ಆಗಿ ಮಾರ್ಪಟ್ಟಿರುವುದು ನಿಜಕ್ಕೂ ದುರಂತ. ಮಿಡಿಯಾದಲ್ಲಿ ಪ್ರತಿದಿನ ರಿಯಾಳ ಚಾರಿತ್ರ್ಯವಧೆಯಾಗುತ್ತಿರುವದನ್ನು ನೋಡುತ್ತಿದ್ದರೆ ಕರುಳು ಕಿತ್ತುಬಂದಂತಾಗುತ್ತದೆ. ನಮಗೆಲ್ಲ ಗೊತ್ತಿರೋದು ಆರೋಪ ಸಾಬೀತಾಗುವವರೆಗೂ ಯಾರೊಬ್ಬರೂ ದೋಷಿಯಲ್ಲ. ಅದರಿದು ಉಲ್ಟಾ ಆದಂತಿದೆ. ನಿರ್ದೋಷಿಯೊಬ್ಬನ ಅಮಾಯಕತನ ಸಾಬೀತಾಗುವವರೆಗೆ ಅವನು ಆರೋಪಿ ಎಂದು ಬಿಂಬಿಸಲಾಗುತ್ತಿದೆ. ನ್ಯಾಯಾಂಗದ ಏಜೆನ್ಸಿಗಳು ತಮ್ಮ ಕೆಲಸ ಮಾಡುತ್ತಿವೆ. ತೀರ್ಪುಗಳನ್ನು ಹೇಳಿಬಿಡುವ ಪ್ರವೃತ್ತಿಯಿಂದ ನಾವು ದೂರವಿರವುದು ಒಳಿತು.‘‘ ಎಂದು ವಿದ್ಯಾ ಹೇಳಿದ್ದ್ದಾರೆ. 

ನಿಮಗೆ ಗೊತ್ತಿರಬಹುದು. ಸಿಬಿಐ ಅಧಿಕಾರಿಗಳು ಕಳೆದ ನಾಲ್ಕು ದಿನಗಳಲ್ಲಿ ರಿಯಾಳನ್ನು 35 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಸಿಬಿಐ ಅಲ್ಲದೆ, ಜಾರಿ ನಿರ್ದೇಶನಾಲಯ (ಇಡಿ) ಮತ್ತು ಮಾದಕ ಪದಾರ್ಥ ನಿಯಂತ್ರಣ ಬ್ಯುರೊ (ಎನ್​ಸಿಬಿ) ಸಹ ರಿಯಾ, ಮತ್ತಾಕೆಯ ಕುಟುಂಬದ ಸದಸ್ಯರನ್ನು ವಿಚಾರಣೆ ನಡೆಸುತ್ತಿವೆ.

Click on your DTH Provider to Add TV9 Kannada