ಒಂದೇ ಜೀವನ-ಮೂರು ಬದುಕು! ಈ ‘‘ಕೃಷಿ ಯೋಧ’’ನ ಸಾಧನೆ ಎಲ್ಲರಿಗೂ ಮಾದರಿ..
ಶ್ರೀಶೈಲ್ ಕೂಗಲಿ ಅವರು ಈ ಹಿಂದೆ ದಾಳಿಂಬೆ ,ಬಾಳೆ ಬೆಳೆದು ಯಶಸ್ವಿಯಾಗಿದ್ದರು ಇದರಿಂದ ಮತ್ತಷ್ಟು ಹುರುಪುಗೊಂಡ ಕೂಗಲಿ ಅವರು ಪುನಃ ಕೃಷಿ ಕಾರ್ಯ ಮುಂದುವರೆಸಿದ್ದಾರೆ. ತಮಗೆ ಬರುವ ನಿವೃತ್ತಿ ವೇತನದಲ್ಲಿ ಕೃಷಿಗೆ ಖರ್ಚು ಮಾಡುತ್ತಿದ್ದು, ಇನ್ನೇನು ಕೆಲ ದಿನಗಳಲ್ಲಿ ದಾಳಿಂಬೆ ಹೂ ಕಾಯಿ ಬಿಡುವುದಕ್ಕೆ ಶುರುವಾಗಲಿದ್ದು, ಮತ್ತೆ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಬಾಗಲಕೋಟೆ: ಇತ್ತೀಚೆಗೆ ಕೃಷಿ ಎಂದರೆ ಸಾಕು ಒಕ್ಕಲು ಸಮಸ್ಯೆ, ಸಾಲದಂತಹ ಸಮಸ್ಯೆ ಎಂದು ತಿಳಿದು, ನಗರಕ್ಕೆ ಹೋಗಿ ಖಾಸಗಿ ಕಂಪನಿಗಳಲ್ಲಿ ದುಡಿಯುವ ಪ್ರವೃತ್ತಿ ಹೆಚ್ಚಾಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಎರಡೆರಡು ಸರ್ಕಾರಿ ಹುದ್ದೆ ಮಾಡಿ ನಿವೃತ್ತಿಯಾದರೂ ಕೃಷಿ ಕಾಯಕ ಮಾಡಿ ಮಣ್ಣಿನ ಮಗನಾಗಿದ್ದಾರೆ. ಅಂದ ಹಾಗೆ ಇವರ ಹೆಸರು ಶ್ರೀಶೈಲ್ ಮಲ್ಲಯ್ಯ ಕೂಗಲಿ. ಇವರೇ ಸೈನಿಕ-ಪೊಲೀಸ್-ಕೃಷಿ ಮಾಡುತ್ತಾ ಒಂದೇ ಜೀವನದಲ್ಲಿ ಮೂರು ಬದುಕು ಕಂಡ ಅಪರೂಪದ ವ್ಯಕ್ತಿ.
ಜೈಜವಾನ್ ಜೈಕಿಸಾನ್ ಮೂಲ ಮಂತ್ರ: ಯೌವನದಲ್ಲಿ ಗಡಿ ಮಧ್ಯೆ ನಿಂತು ಹೋರಾಡಿದ ಯೋಧ ಈಗ ವೃದ್ಧಾಪ್ಯದಲ್ಲಿ ಕೃಷಿ ಕಾಯಕ ಮಾಡುತ್ತಿದ್ದು, ಕಲ್ಲು ತುಂಬಿಕೊಂಡು ಬರಡಾಗಿದ್ದ ಪ್ರದೇಶವನ್ನು ಬಂಗಾರ ಬೆಳೆಯುವ ಭೂಮಿಯನ್ನಾಗಿ ಮಾಡಿದ್ದಾರೆ. ತೋಟಗಾರಿಕೆ ಬೆಳೆ ಬೆಳೆದು ಯಶಸ್ಸು ಕಂಡಿದ್ದು, ಶ್ರೀಶೈಲ್ ಅವರು ಯೌವನಾವಸ್ಥೆಯಿಂದ ಮುಪ್ಪಿನವರೆಗೂ ಬರುವ ಮೂರು ಹಂತದಲ್ಲಿ ಮೂರು ಬಗೆಯ ದೇಶ ಮತ್ತು ಸಮಾಜ ಗೌರವಿಸುವ ಕಾಯಕ ಮಾಡಿದ್ದಾರೆ.
ನಿವೃತ್ತಿಯೇ ಇಲ್ಲದ ಭೂಮಾತೆಯ ಸೇವೆಯಲ್ಲಿ.. ಸಿಪಾಯಿಯಾಗಿ ದೇಶ ಸೇವೆಗೆ ಅರ್ಪಿಸಿಕೊಂಡು, ಸೇನೆಯ ನಿವೃತ್ತಿ ಬಳಿಕ ಖಾಕಿ ತೊಟ್ಟು ನಾಡಿನ ಸೇವೆಗೈದು ಅಲ್ಲಿಯೂ ನಿವೃತ್ತಿಯಾದ ಬಳಿಕ.. ನಿವೃತ್ತಿಯೇ ಇಲ್ಲದ ಭೂಮಾತೆಯ ಸೇವೆಗಿಳಿದ್ದಾರೆ. ಸದ್ಯ ಅನ್ನದಾತನ ಕಾಯಕ ನಿರ್ವಹಿಸುತ್ತಿದ್ದು, ದಣಿವರಿಯದ ಈ ಜೀವ ಮಣ್ಣಿಂದ ಬಂದಿದ್ದು, ಮಣ್ಣಿಗೆ ಅರ್ಪಣೆ ಎನ್ನುವ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ.
ಬತ್ತದ ಕೃಷಿ ಉತ್ಸಾಹ.. ಬಾಗಲಕೋಟೆ ನಿವಾಸಿಯಾದ ಶ್ರೀಶೈಲ ಮಲ್ಲಯ್ಯ ಕೂಗಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯಿಂದ ನಿವೃತ್ತರಾಗಿ ನಾಲ್ಕೈದು ವರ್ಷಗಳು ಆಗಿವೆ. ವೃತ್ತಿಯಲ್ಲಿ ಇದ್ದಾಗ ಕೃಷಿ ಪ್ರವೃತ್ತಿ ಮಾಡಿಕೊಂಡಿದ್ದ ಇವರಿಗೆ ಇದೀಗ ಕೃಷಿಯೇ ಮೂಲ ವೃತ್ತಿ ಆಗಿದೆ. ಈ ಇಳಿವಯಸ್ಸಿನಲ್ಲೂ ಇವರು ನಿತ್ಯ ಜಮೀನಿನಲ್ಲಿ ಬೆವರು ಹರಿಸುತ್ತಿರುವುದು ಬತ್ತದ ಕೃಷಿ ಉತ್ಸಾಹಕ್ಕೆ ಉದಾಹರಣೆ ಆಗಿದೆ.
19 ನೇ ವಯಸ್ಸಿನಲ್ಲಿ ಸೇನೆ ಸೇರಿ 17 ವರ್ಷಗಳ ಕಾಲ ದೇಶದ ಗಡಿ ಕಾದ ಶ್ರೀಶೈಲ್ ಕೂಗಲಿ, ಸೇನಾ ಅವಧಿ ಮುಕ್ತಾಯವಾದ ನಂತರ ಸಮಾಜದಲ್ಲಿ ನಡೆಯುವ ದುಷ್ಕೃತ್ಯಗಳ ತಡೆಗಟ್ಟಲು ಪೊಲೀಸ್ ಇಲಾಖೆಯ ಗುಪ್ತದಳ ವಿಭಾಗದಲ್ಲಿ ಕೆಲಸ ಮಾಡಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ತಮ್ಮ ಮಧ್ಯವಯಸ್ಸನ್ನು ಮೀಸಲಿಟ್ಟಿದ್ದಾರೆ.
24 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಪೊಲೀಸ್ ಇಲಾಖೆ ಸೇವಾವಧಿ ಮುಗಿದ ನಂತರ ನಿವೃತ್ತಿ ಪಡೆದ ಮೇಲೆ ಕೈಯಲ್ಲಿ ನೇಗಿಲು ಹಿಡಿದು ನೇಗಿಲಯೋಗಿಯಾಗಿ ಕೃಷಿ ಕೆಲಸದಲ್ಲಿ ಮುನ್ನಡೆಯುತ್ತಿದ್ದಾರೆ.
ಹೌದು ಶ್ರೀಶೈಲ್ ಕೂಗಲಿ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಅನಗವಾಡಿ ಗ್ರಾಮ ವ್ಯಾಪ್ತಿಯಲ್ಲಿ ಎಂಟು ಎಕರೆ ಜಮೀನು ಹೊಂದಿದ್ದು, ಹಿಂದೆ ಈ ಜಮೀನು ಕಲ್ಲು ತುಂಬಿಕೊಂಡು ಒಂದು ರೀತಿಯಲ್ಲಿ ಬರಡು ಭೂಮಿಯಾಗಿತ್ತು. ಮಳೆ ಆಶ್ರಿತವಾಗಿ ಅಷ್ಟಿಷ್ಟು ಬೆಳೆ ತೆಗೆಯುತ್ತಿದ್ದರು. ಅಕ್ಕಪಕ್ಕದ ರೈತರು ಜಮೀನುಗಳಿಗೆ ಕೊಳವೆಬಾವಿ ಹಾಕಿಸಿದ್ದು, ನೀರು ಇಳುವರಿ ಚೆನ್ನಾಗಿ ಬಂದಿದ್ದು, ಇದನ್ನು ಕಂಡ ಶ್ರೀಶೈಲ್ ಕೊಳವೆಬಾವಿಯನ್ನು ತಾವು ಅಳವಡಿಸಿ ಕೃಷಿ ಮಾಡಿದ್ದಾರೆ.
ಯಾವುದೇ ಸರ್ಕಾರಿ ನೌಕರರಾಗಲಿ ನಿವೃತ್ತಿಯಾದ ಮೇಲೆ ಆರಾಮಾಗಿ ನಿವೃತ್ತಿ ಜೀವನ ಕಳೆಯಬಯಸುತ್ತಾರೆ. ಆದರೆ ಶ್ರೀಶೈಲ್ ಕೂಗಲಿ ಹಾಗೆ ವಿಶ್ರಾಂತಿ ಜೀವನ ಕಳೆಯುವ ಬದಲಿಗೆ ತಮ್ಮಲ್ಲಿ ಇದ್ದ ಕೃಷಿ ಪ್ರೀತಿಗೆ ಜೀವ ತುಂಬಿಕೊಂಡರು. ತಮ್ಮ ಚಿತ್ತವನ್ನು ಜಮೀನಿನ ಕಡೆಗೆ ಹರಿಸಿದ್ದು, ತೋಟಗಾರಿಕೆ ವಿವಿ ಸಂಪರ್ಕ ಮಾಡಿ, ತೋಟಗಾರಿಕೆ ಬೆಳೆ ಬಗ್ಗೆ ಮಾಹಿತಿ ಪಡೆದುಕೊಂಡು ಕೃಷಿ ಮಾಡಿದ್ದಾರೆ.
ಪ್ರಾರಂಭದಲ್ಲಿ ಶ್ರೀಶೈಲ್ ಕೃಷಿ ಆರಂಭಿಸಿದ ಅವರು ಬಾಳೆ ಬೆಳೆದು, ಲಾಭ ಮಾಡಿಕೊಂಡರು. ಜೊತೆಗೆ 6ಎಕರೆಯಲ್ಲಿ ದಾಳಿಂಬೆ ಬೆಳೆದಿದ್ದು, ದುಂಡಾಣು ರೋಗ ಬಾರದಂತೆ ಎಚ್ಚರಿಕೆ ವಹಿಸಿದರು. ತಾಯಿ ಮಗುವನ್ನು ಜೋಪಾನ ಮಾಡಿದ ಹಾಗೆ ದಾಳಿಂಬೆ ಜೋಪಾನ ಮಾಡಬೇಕಾಗಿದ್ದು, ಸಾವಯವ ಗೊಬ್ಬರ ಹಾಕಿ ನಿತ್ಯ ನಿಗಾ ವಹಿಸಬೇಕು. ಬದಲಾವಣೆ ಗಮನಿಸುತ್ತ ಇರಬೇಕು, ಹೆಚ್ಚು ಕಡಿಮೆ ಕಾಣಿಸಿಕೊಂಡಲ್ಲಿ ತಕ್ಷಣವೆ ಆರೈಕೆ ಮಾಡಬೇಕು. ಅಲ್ಪಸ್ವಲ್ಪ ರಾಸಾಯನಿಕ ಗೊಬ್ಬರ, ಔಷಧ ಬಳಿಕೆಯನ್ನು ಮಾಡಬೇಕು. ಆಗ ದಾಳಿಂಬೆ ಚೆನ್ನಾಗಿ ಬೆಳೆಯಬಹುದು ಎಂದು ಶ್ರೀಶೈಲ್ ಕೂಗಲಿ ಹೇಳಿದ್ದಾರೆ.
ಶ್ರೀಶೈಲ್ ಕೂಗಲಿ ಬೆಳೆದ ದಾಳಿಂಬೆಯ ಪ್ರತಿ ಕಾಯಿ 300 ರಿಂದ 350 ಗ್ರಾಮ್ ತೂಕ ಇದ್ದು, ಮಾರುಕಟ್ಟೆಯಲ್ಲಿ ಒಳ್ಳೆಯ ಲಾಭ ಪಡೆದಿದ್ದಾರೆ. ದಾಳಿಂಬೆಗೆ ಡಬಲ್ ಡ್ರಿಪ್ ಅಳವಡಿಸಿದ್ದು, ಡ್ರಿಪ್ ಮೂಲಕ ಔಷಧ, ಗೊಬ್ಬರ ಬಿಡಲಾಗುತ್ತದೆ. ಗಿಡಗಳು ದಷ್ಟಪುಷ್ಟ ಇದ್ದು, ಉತ್ತಮ ಗುಣಮಟ್ಟದ ಹಣ್ಣು ಬೆಳೆಯಲು ಸಾಧ್ಯವಾಗಿದೆ.
ಲಕ್ಷಾಂತರ ರೂಪಾಯಿ ಹಾಕಿ, ಲಕ್ಷಾಂತರ ರೂಪಾಯಿ ತೆಗೆಯುವ ದಾಳಿಂಬೆ ಬೆಳೆಯಲ್ಲಿ ಶ್ರೀಶೈಲ್ ಕೂಗಲಿ ಯಶಸ್ಸು ಕಂಡಿದ್ದಾರೆ. ಬರಿ ದಾಳಿಂಬೆ ಬೆಳೆಯಿಂದ ಕಳೆದ ವರ್ಷ 8 ಲಕ್ಷದಷ್ಟು ಲಾಭ ಪಡೆದಿದ್ದು, ಇನ್ನು ಬಾಳೆಯಿಂದಲೂ ಎರಡುವರೆಯಿಂದ 3 ಲಕ್ಷ ರೂಪಾಯಿ ಲಾಭ ಪಡೆದಿದ್ದಾರೆ.
ಇನ್ನು ಶ್ರೀಶೈಲ ಅವರು ಬಾಗಲಕೋಟೆಯಲ್ಲಿ ವಾಸ ಇದ್ದು, ನಿತ್ಯ ಬೆಳಿಗ್ಗೆ ಸ್ನಾನ, ಪೂಜೆ, ಉಪಹಾರ ಮುಗಿಸಿ ಮಧ್ಯಾಹ್ನಕ್ಕೆ ಬುತ್ತಿ ಕಟ್ಟಿಕೊಂಡು ಜಮೀನಿನ ಕಡೆಗೆ ಮುಖ ಮಾಡುತ್ತಾರೆ. ಬೆಳಗ್ಗೆಯಿಂದ ಸಂಜೆವರೆಗೂ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ನೀರು ಬಿಡುವುದು, ಔಷಧ ಗೊಬ್ಬರ ಕೊಡುವುದು, ಕಳೆ ತೆಗೆಯುವುದು, ಹೂವು, ಕಾಯಿ ಪರಿಶೀಲನೆ ಮಾಡುವ ಕಾರ್ಯದಲ್ಲಿ ಶ್ರೀಶೈಲ್ ಕೂಗಲಿ ನಿರತರಾಗಿದ್ದಾರೆ.
ಇನ್ನು ಇವರ ಕೃಷಿಯನ್ನು ಕಂಡು ಅನೇಕರು ಇವರ ಜಮೀನಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಾರೆ. ಬಂದವರಿಗೆ ತಾವು ತಿಳಿದುಕೊಂಡಿರುವ ಕೃಷಿ ಮಾಹಿತಿಯನ್ನು ಹಂಚಿದ್ದು, ಕಾಟಾಚಾರಕ್ಕೆ ಕೃಷಿ ಮಾಡದೆ ವಿಶ್ವಾಸ, ಪ್ರೀತಿ ಮತ್ತು ಸಂಪೂರ್ಣವಾಗಿ ತೊಡಗಿಸಿಕೊಳ್ಳಿ. ದಿನ ದಿನ ಬೆಳೆಗಳ ಬೆಳವಣಿಗೆ ವಾತಾವರಣ ಬದಲಾವಣೆ ಆದಾಗೆಲ್ಲ ಗಿಡಗಳಲ್ಲಿ ಆಗುವ ಬದಲಾವಣೆ ಗಮನಿಸಿ ಅದಕ್ಕೆ ತಕ್ಕಂತೆ ಪರಿಹಾರೋಪಾಯ ಕಂಡುಕೊಳ್ಳಬೇಕು. ತೋಟಗಾರಿಕೆ ತಜ್ಞರಿಂದ ಸಲಹೆ ಪಡೆದುಕೊಳ್ಳಿ ಎನ್ನುವ ಮಾಹಿತಿಯನ್ನು ಶ್ರೀಶೈಲ್ ಕೂಗಲಿ ಕೊಡುತ್ತಾರೆ.
ಶ್ರೀಶೈಲ್ ಕೂಗಲಿ ಅವರು ಈ ಹಿಂದೆ ದಾಳಿಂಬೆ ,ಬಾಳೆ ಬೆಳೆದು ಯಶಸ್ವಿಯಾಗಿದ್ದರು ಇದರಿಂದ ಮತ್ತಷ್ಟು ಹುರುಪುಗೊಂಡ ಕೂಗಲಿ ಅವರು ಪುನಃ ಕೃಷಿ ಕಾರ್ಯ ಮುಂದುವರೆಸಿದ್ದಾರೆ. ತಮಗೆ ಬರುವ ನಿವೃತ್ತಿ ವೇತನದಲ್ಲಿ ಕೃಷಿಗೆ ಖರ್ಚು ಮಾಡುತ್ತಿದ್ದು, ಇನ್ನೇನು ಕೆಲ ದಿನಗಳಲ್ಲಿ ದಾಳಿಂಬೆ ಹೂ ಕಾಯಿ ಬಿಡುವುದಕ್ಕೆ ಶುರುವಾಗಲಿದ್ದು, ಮತ್ತೆ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಕೃಷಿ ನಮ್ಮ ಮಾತೃ ಉದ್ಯೋಗ. ಅದುವೆ ನಮ್ಮ ಜೀವಾಳ. ಹೀಗಾಗಿ ಈ ವಯಸ್ಸಿನಲ್ಲೂ ನನಗೆ ಕೃಷಿ ಮಾಡುವುದೆಂದರೆ ಎಲ್ಲಿಲ್ಲ ಪ್ರೀತಿ. ಮೈಯಲ್ಲಿ ಶಕ್ತಿ ಇರುವವರೆಗೂ ಈ ಕಾಯಕ ಮಾಡಿಕೊಂಡಿರುತ್ತೇನೆ ಎನ್ನುವ ಶ್ರೀಶೈಲ್ ಕೂಗಲಿ ಅಕ್ಕಪಕ್ಕದ ರೈತರಿಗೆ ಸಲಹೆ ಮಾರ್ಗದರ್ಶನ ನೀಡುತ್ತಾರೆ. ಸಾವಯವ ಹಾಗೂ ಅಲ್ಪಮಟ್ಟಿಗೆ ರಸಾಯನಿಕ ಬಳಕೆ ಮೂಲಕ ಕೃಷಿ ಮಾಡಿ ಹೊಲವನ್ನು ಹಸಿರಾಗಿಸಿದ ಈ ಸಿಪಾಯಿ, ಪೊಲೀಸ್ ಕೃಷಿ ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ.
ಬರದ ನಾಡಿನಲ್ಲಿ ರೈತನ ವಿನೂತನ ಪ್ರಯೋಗ: ಕಡಿಮೆ ಹಣದಲ್ಲಿ ದೊಡ್ಡ ಬೆಳೆ ತೆಗೆದ ರೈತ
Published On - 1:40 pm, Fri, 29 January 21