ಅಕ್ಷಯ ತೃತೀಯ (Akshaya Tritiya) ಹಿಂದೂ ಧರ್ಮದಲ್ಲಿ ಬಹಳ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಬಂಗಾರ ಖರೀದಿ, ಹೊಸ ಕೆಲಸವನ್ನು ಪ್ರಾರಂಭಿಸುವುದು, ಮನೆ ಪ್ರವೇಶ, ಹೊಸ ಉದ್ಯೋಗ ಪ್ರಾರಂಭ ಇತ್ಯಾದಿ ಕೆಲಸಗಳನ್ನು ಮಾಡಲು ಶುಭ ಎಂದು ನಂಬಲಾಗಿದೆ. ಈ ವರ್ಷ ಅಕ್ಷಯ ತೃತೀಯವನ್ನು ಮೇ. 10 ರಂದು ಆಚರಣೆ ಮಾಡಲಾಗುತ್ತದೆ. ಈ ದಿನ ವಿಶೇಷವಾಗಿ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವ ಮೂಲಕ, ಲಕ್ಷ್ಮೀ ದೇವಿಯ ಪೂಜೆ ಮಾಡಲಾಗುತ್ತದೆ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆ ಬರುವುದಿಲ್ಲ ಎಂಬ ನಂಬಿಕೆ ಇದೆ. ಈ ದಿನ ವಸ್ತುಗಳನ್ನು ಖರೀದಿ ಮಾಡುವುದರ ಹೊರತಾಗಿ, ದಾನ ಮಾಡುವುದಕ್ಕೆ ವಿಶೇಷ ಫಲಗಳಿವೆ.
ಅಕ್ಷಯ ತೃತೀಯದ ದಿನದಂದು ಅಗತ್ಯವಿರುವವರಿಗೆ ಕೆಲವು ವಸ್ತುಗಳನ್ನು ದಾನ ಮಾಡಿದರೆ, ಅದು ಭಗವಾನ್ ವಿಷ್ಣು ಮತ್ತು ಲಕ್ಷ್ಮೀ ದೇವಿಯನ್ನು ಸಂತುಷ್ಟ ಪಡಿಸುತ್ತದೆ ಎಂದು ಶಾಸ್ತ್ರದಲ್ಲಿಯೂ ಹೇಳಲಾಗಿದೆ. ಜೊತೆಗೆ ನಿಮ್ಮ ಮನೆಯಲ್ಲಿ ಸಂತೋಷ, ಸಮೃದ್ಧಿ ಸದಾಕಾಲ ಇರುತ್ತದೆ. ಸಂಪತ್ತಿನ ದೇವತೆಯಾದ ಮಾತೆ ಲಕ್ಷ್ಮೀಯನ್ನು ಮೆಚ್ಚಿಸುವ ಮೂಲಕ ಮನೆಯ ಎಲ್ಲಾ ಆರ್ಥಿಕ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು.
ಜ್ಯೋತಿಷಿ ಪಂಡಿತ್ ದೇವ ನಾರಾಯಣ ಶರ್ಮಾ ಅವರು ಹೇಳುವ ಪ್ರಕಾರ, ಇಡೀ ವರ್ಷದಲ್ಲಿ ಅಕ್ಷಯ ತೃತೀಯ ಅತ್ಯಂತ ಮಂಗಳಕರ ದಿನ. ಈ ದಿನ ಬಂಗಾರ, ಬೆಳ್ಳಿಯ ಖರೀದಿ ಎಷ್ಟು ಮುಖ್ಯವೋ ಅಷ್ಟೇ ದಾನ ಮಾಡುವುದು ಕೂಡ ಮುಖ್ಯ. ಈ ದಿನ ಅಗತ್ಯ ಇರುವವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡುವುದರಿಂದ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಅಕ್ಷಯ ತೃತೀಯದಂದು ದಾನ ಮಾಡಿದ್ದಕ್ಕಿಂತ ನಿಮಗೆ 10 ಪಟ್ಟು ಸಮೃದ್ಧಿ ಪ್ರಾಪ್ತವಾಗುತ್ತದೆ.
ಈ ಸಮಯದಲ್ಲಿ ಶಾಖವು ಉತ್ತುಂಗದಲ್ಲಿರುವುದರಿಂದ ಅಕ್ಷಯ ತೃತೀಯದಂದು ಅಗತ್ಯ ಇರುವವರಿಗೆ ಛತ್ರಿ, ಚಪ್ಪಲಿ, ಬಟ್ಟೆ, ಬೆಲ್ಲ ಇತ್ಯಾದಿ ವಸ್ತುಗಳನ್ನು ದಾನ ಮಾಡಿದರೆ ಎಂದಿಗೂ ಆರ್ಥಿಕ ಸಂಕಷ್ಟ ಬರುವುದಿಲ್ಲ. ಜೊತೆಗೆ ನೀವು ಸಾಲದಿಂದ ಮುಕ್ತರಾಗುತ್ತೀರಿ. ಭಗವಾನ್ ಶ್ರೀ ಹರಿಯ ಕೃಪೆಯಿಂದ, ನಿಮ್ಮ ಮನೆಯಲ್ಲಿ ಯಾವುದಕ್ಕೂ ಕೊರತೆ ಬರುವುದಿಲ್ಲ.
ಇದನ್ನೂ ಓದಿ: ವಿಕಟ ಸಂಕಷ್ಟ ಚತುರ್ಥಿಯಂದು ಈ ಕೆಲಸವನ್ನು ತಪ್ಪದೆ ಮಾಡಿ!
ಅಕ್ಷಯ ತೃತೀಯದಂದು ಚಿನ್ನ ಅಥವಾ ಬೆಳ್ಳಿಯಿಂದ ಮಾಡಿದ ಆಭರಣಗಳು, ಭೂಮಿ, ಮನೆ, ಕಾರು, ಪಾತ್ರೆಗಳು, ಯಂತ್ರೋಪಕರಣಗಳು, ಪೀಠೋಪಕರಣಗಳು, ಬಟ್ಟೆಗಳು ಇತ್ಯಾದಿಗಳನ್ನು ಖರೀದಿಸುವುದು ಮಂಗಳಕರವಾಗಿದೆ. ಈ ದಿನ ಹೊಸ ಕೆಲಸವನ್ನು ಪ್ರಾರಂಭಿಸುವುದು ಆ ಕೆಲಸಕ್ಕೆ ಯಶಸ್ಸನ್ನು ತರುತ್ತದೆ. ಈ ದಿನ ಖರೀದಿಸಿದ ಬೆಲೆಬಾಳುವ ವಸ್ತುಗಳು ಉತ್ತಮ ಫಲಗಳನ್ನು ತರುತ್ತವೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:00 pm, Fri, 26 April 24