Calendar Vastu: ಮನೆಗೆ ಹೊಸ ವರ್ಷದ ಕ್ಯಾಲೆಂಡರ್ ತರುತ್ತಿದ್ದೀರಾ? ಹಾಗಿದ್ರೆ ಈ ವಿಷ್ಯ ತಿಳಿದುಕೊಳ್ಳಿ

ಹೊಸ ವರ್ಷದ ಕ್ಯಾಲೆಂಡರ್ ಕೇವಲ ದಿನಾಂಕ ಪಟ್ಟಿ ಅಲ್ಲ. ಇದು ಸರಸ್ವತಿಯ ಪ್ರತೀಕ, ಜ್ಞಾನದ ಮೂಲ. ಡಾ. ಬಸವರಾಜ್ ಗುರೂಜಿ ಪ್ರಕಾರ, ಸೋಮವಾರ, ಬುಧವಾರ, ಗುರುವಾರ ಕ್ಯಾಲೆಂಡರ್ ತರುವುದು ಶುಭ. ಪೂರ್ವ, ಪಶ್ಚಿಮ, ಉತ್ತರ ದಿಕ್ಕುಗಳಲ್ಲಿ ನೇತುಹಾಕುವುದು ಮಂಗಳಕರ, ದಕ್ಷಿಣ ದಿಕ್ಕು ವರ್ಜ್ಯ. ಇದು ಮನೆಯಲ್ಲಿ ಶಾಂತಿ, ಸಮೃದ್ಧಿ, ಹಣಕಾಸಿನ ಅಭಿವೃದ್ಧಿಗೆ ಸಹಕಾರಿ.

Calendar Vastu: ಮನೆಗೆ ಹೊಸ ವರ್ಷದ ಕ್ಯಾಲೆಂಡರ್ ತರುತ್ತಿದ್ದೀರಾ? ಹಾಗಿದ್ರೆ ಈ ವಿಷ್ಯ ತಿಳಿದುಕೊಳ್ಳಿ
ಕ್ಯಾಲೆಂಡರ್ ವಾಸ್ತು

Updated on: Nov 23, 2025 | 12:36 PM

ಹೊಸ ವರ್ಷವು ಪ್ರಾರಂಭವಾಗುತ್ತಿದ್ದಂತೆ, ಪ್ರತಿ ಮನೆಯಲ್ಲೂ ಹೊಸ ಕ್ಯಾಲೆಂಡರ್ ತರುವ ಸಂಪ್ರದಾಯ ಸಾಮಾನ್ಯವಾಗಿದೆ. ಆದರೆ ನಮ್ಮ ಹಿಂದೂ ಸನಾತನ ಸಂಸ್ಕೃತಿಯಲ್ಲಿ, ಕ್ಯಾಲೆಂಡರ್‌ಗೆ ಸಂಬಂಧಿಸಿದಂತೆ ಕೆಲವು ನಿಬಂಧನೆಗಳು ಮತ್ತು ವಿಧಿವಿಧಾನಗಳಿವೆ. ಅವುಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ಗುರೂಜಿಯವರು ಹೇಳುವಂತೆ, ಕ್ಯಾಲೆಂಡರ್ ಕೇವಲ ದಿನಾಂಕಗಳನ್ನು ತೋರಿಸುವ ಸಾಧನವಲ್ಲ. ಅದನ್ನು ಸರಸ್ವತಿಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅದು ಜ್ಞಾನ ಮತ್ತು ಮಾಹಿತಿಯನ್ನು ಒದಗಿಸುತ್ತದೆ. ಕ್ಯಾಲೆಂಡರ್‌ನಲ್ಲಿ ವಿವಾಹ, ಗೃಹಪ್ರವೇಶ, ಹಬ್ಬಗಳು, ಜನ್ಮದಿನಾಂಕಗಳು, ಶುಭ ಮುಹೂರ್ತಗಳು, ತಿಥಿ, ವಾರ, ನಕ್ಷತ್ರ, ಯೋಗ, ಕರಣ, ಮಾಸ, ಋತುಗಳು ಮತ್ತು ಪಕ್ಷಗಳಂತಹ ಪ್ರಮುಖ ವಿವರಗಳನ್ನು ನೀಡಲಾಗಿರುತ್ತದೆ. ಕೃಷಿ ವಿಚಾರವಾಗಿ, ಲೋನ್ ಕಂತುಗಳ ದಿನಾಂಕಗಳಂತಹ ಪ್ರಾಪಂಚಿಕ ವಿಷಯಗಳಿಗೂ ನಾವು ಕ್ಯಾಲೆಂಡರ್‌ನ್ನೇ ಅವಲಂಬಿಸುತ್ತೇವೆ. ಹಾಗಾಗಿ, ಅದನ್ನು ಮನೆಗೆ ಯಾವ ದಿನ ತರಬೇಕು ಮತ್ತು ಯಾವ ದಿಕ್ಕಿಗೆ ನೇತುಹಾಕಬೇಕು ಎಂಬುದು ಮಹತ್ವದ ವಿಷಯವಾಗಿದೆ.

ಕ್ಯಾಲೆಂಡರ್ ತರಲು ಶುಭ ದಿನಗಳು:

ಹೊಸ ಕ್ಯಾಲೆಂಡರ್‌ನ್ನು ಮನೆಗೆ ತರಲು ಸೋಮವಾರ, ಬುಧವಾರ ಮತ್ತು ಗುರುವಾರಗಳು ಅತ್ಯಂತ ಶುಭಕರ ಎಂದು ಹೇಳಲಾಗುತ್ತದೆ.

  • ಸೋಮವಾರ: ಇದು ಚಂದ್ರನ ದಿನ. ಚಂದ್ರನು ಮನಸ್ಸಿನ ಶಾಂತಿ, ಒಳ್ಳೆಯ ಭಾವನೆಗಳು ಮತ್ತು ನೆಮ್ಮದಿಯ ಪ್ರತೀಕ. ಸೋಮವಾರದಂದು ಕ್ಯಾಲೆಂಡರ್ ತರುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಶಾಂತಿ ನೆಲೆಸುತ್ತದೆ. ಬಿಳಿ ಬಣ್ಣವು ಚಂದ್ರನ ಪ್ರತೀಕವಾಗಿದೆ.
  • ಬುಧವಾರ: ಈ ದಿನಕ್ಕೆ ವಿಷ್ಣು, ಗಣಪತಿ ಮತ್ತು ಕಾಲಭೈರವ ಅಧಿಪತಿಗಳು. ಹಸಿರು ಬಣ್ಣವು ಸಮೃದ್ಧಿ ಮತ್ತು ಅಭಿವೃದ್ಧಿಯ ಸಂಕೇತವಾಗಿದೆ. ಬುಧವಾರ ಕ್ಯಾಲೆಂಡರ್ ತರುವುದರಿಂದ ಮನೆಯಲ್ಲಿ ಸಮೃದ್ಧಿ ಮತ್ತು ಯಶಸ್ಸು ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ.
  • ಗುರುವಾರ: ಇದು ಗುರುವಿನ ದಿನ, ಅಂದರೆ ಬೃಹಸ್ಪತಿಯ ದಿನ. ಹಳದಿ, ಚಿನ್ನ ಮತ್ತು ಬಂಗಾರದ ಪ್ರತೀಕವಾಗಿದೆ. ಗುರುವಾರ ಕ್ಯಾಲೆಂಡರ್ ತರುವುದರಿಂದ ವರ್ಷವಿಡೀ ಹಣಕಾಸಿನ ಸಮೃದ್ಧಿ ಮತ್ತು ಅದೃಷ್ಟ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮಹಿಳೆಯರು ಶವ ಯಾತ್ರೆಯಲ್ಲಿ ಭಾಗವಹಿಸಬಹುದೇ? ವೈಜ್ಞಾನಿಕ ದೃಷ್ಟಿಕೋನ ಇಲ್ಲಿದೆ

ಕ್ಯಾಲೆಂಡರ್ ನೇತುಹಾಕಲು ಶುಭ ದಿಕ್ಕುಗಳು:

ಕ್ಯಾಲೆಂಡರ್‌ನ್ನು ಮನೆಗೆ ತಂದ ನಂತರ ಅದನ್ನು ಸರಿಯಾದ ದಿಕ್ಕಿನಲ್ಲಿ ನೇತುಹಾಕುವುದು ಸಹ ಮುಖ್ಯ.

  • ಪೂರ್ವ ದಿಕ್ಕು: ಕ್ಯಾಲೆಂಡರ್‌ನ್ನು ಪೂರ್ವದ ಗೋಡೆಗೆ ಹಾಕುವುದು ಅತ್ಯಂತ ಶುಭಕರ ಎಂದು ಪರಿಗಣಿಸಲಾಗಿದೆ. ಪೂರ್ವದಿಂದ ಪಶ್ಚಿಮಕ್ಕೆ ನೋಡುವ ರೀತಿಯಲ್ಲಿ ಹಾಕುವುದರಿಂದ ಮನೆಯಲ್ಲಿ ಒಳ್ಳೆಯ ಫಲಗಳು ದೊರೆಯುತ್ತವೆ.
  • ಪಶ್ಚಿಮ ದಿಕ್ಕು: ಪೂರ್ವದ ನಂತರ ಪಶ್ಚಿಮದ ಗೋಡೆಗೆ ಹಾಕುವುದೂ ಸಹ ಶುಭಕರವೆಂದು ಹೇಳಲಾಗುತ್ತದೆ.
  • ಉತ್ತರ ದಿಕ್ಕು: ಉತ್ತರದ ಗೋಡೆಗೂ ಕ್ಯಾಲೆಂಡರ್ ಹಾಕಬಹುದು. ಇದು ಸಹ ಶುಭಫಲಗಳನ್ನು ನೀಡುತ್ತದೆ.
  • ದಕ್ಷಿಣ ದಿಕ್ಕು: ದಕ್ಷಿಣ ದಿಕ್ಕಿನ ಗೋಡೆಗೆ ಕ್ಯಾಲೆಂಡರ್‌ನ್ನು ನೇತುಹಾಕುವುದನ್ನು ತಪ್ಪಿಸಬೇಕು. ಏಕೆಂದರೆ ಈ ದಿಕ್ಕು ಅಷ್ಟು ಶುಭ ಫಲಗಳನ್ನು ನೀಡುವುದಿಲ್ಲ ಎಂದು ಹಿಂದೂ ಸಂಪ್ರದಾಯದಲ್ಲಿ ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ