Daily Devotional: ವಾಸ್ತು ಪ್ರಕಾರ ನಿಮ್ಮ ಮನೆಯ ಬಾತ್ರೂಮ್ ಹೇಗಿರಬೇಕು ಗೊತ್ತಾ?
ವಾಸ್ತುವು ಕೇವಲ ದೇವರ ಮನೆ ಅಥವಾ ಅಡುಗೆಮನೆಗೆ ಮಾತ್ರ ಸೀಮಿತವಲ್ಲ. ಬಾತ್ರೂಮ್ ವಾಸ್ತು ಕೂಡ ಅಷ್ಟೇ ಮುಖ್ಯ. ಮುರಿದ ಬಕೆಟ್, ಮಗ್, ಹಳೆಯ ಸ್ಕ್ರಾಪ್, ಒದ್ದೆ ಬಟ್ಟೆಗಳು, ಸೋರುವ ಟ್ಯಾಪ್‌ಗಳನ್ನು ಬಾತ್ರೂಮ್‌ನಲ್ಲಿ ಇಡಬೇಡಿ. ಬಕೆಟ್‌ನಲ್ಲಿ ಯಾವಾಗಲೂ ಸ್ವಲ್ಪ ನೀರು ಇಡಿ. ಸ್ವಚ್ಛತೆ ಮತ್ತು ಗಾಳಿ ಆಡುವ ವಾತಾವರಣ ನಿರ್ವಹಿಸಿ. ಇದು ಮನೆಯಲ್ಲಿ ಆರ್ಥಿಕ ಲಾಭ, ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಕಾರಣವಾಗುತ್ತದೆ. ಈ ವಾಸ್ತು ಸಲಹೆಗಳನ್ನು ಪಾಲಿಸುವುದರಿಂದ ಕುಟುಂಬದಲ್ಲಿ ಸುಖ ಸಮೃದ್ಧಿ ಹೆಚ್ಚುತ್ತದೆ.
ಮನೆಯಲ್ಲಿ ಬಾತ್ರೂಮ್ ವಾಸ್ತು ಸಹ ಯಾಕೆ ಮುಖ್ಯ ಎಂಬುದಕ್ಕೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಣೆ ನೀಡಿದ್ದಾರೆ. ಗುರೂಜಿ ಹೇಳುವಂತೆ, ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ಮೂಲೆಗೂ ಅದರದೇ ಆದ ಮಹತ್ವವಿದೆ. ದೈವಬಲ, ನಮ್ಮ ಬಲ ಮತ್ತು ಸ್ಥಾನಬಲ ಇವು ಮನುಷ್ಯನ ಜೀವನದಲ್ಲಿ ಅತಿ ಮುಖ್ಯ. ಈ ಮೂರೂ ಸರಿಯಾಗಿದ್ದರೆ ಮಾತ್ರ ಸುಖಕರ ಜೀವನ ಸಾಧ್ಯ. ವಾಸ್ತುವು ಕೇವಲ ದೇವರ ಮನೆ ಅಥವಾ ಅಡುಗೆಮನೆಗೆ ಮಾತ್ರ ಸೀಮಿತವಲ್ಲ. ಮನೆಯಲ್ಲಿ ಬಾತ್‌ರೂಮ್ ಅಥವಾ ಸ್ನಾನದ ಮನೆಯ ವಾಸ್ತು ಕೂಡ ಕುಟುಂಬದ ಸೌಖ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಆರ್ಥಿಕ ಲಾಭ, ಸಂಕಟಗಳ ನಿವಾರಣೆ, ಅನಾರೋಗ್ಯದಿಂದ ಮುಕ್ತಿ ಮತ್ತು ಸಾಲಬಾಧೆಯಿಂದ ದೂರವಿರಲು ಸಾಧ್ಯ. ಇದನ್ನು ನಿರ್ಲಕ್ಷಿಸಿದರೆ ಕಷ್ಟಗಳು ಎದುರಾಗಬಹುದು.
ವಿಡಿಯೋ ಇಲ್ಲಿದೆ ನೋಡಿ:
ಬಾತ್ರೂಮ್ ವಾಸ್ತುವಿನಲ್ಲಿ ಗಮನಿಸಬೇಕಾದ ಕೆಲವು ಪ್ರಮುಖ ಅಂಶಗಳು ಹೀಗಿವೆ:
ಮೊದಲನೆಯದಾಗಿ, ಬಾತ್ರೂಮ್‌ನಲ್ಲಿ ಉಪಯೋಗಿಸುವ ಬಕೆಟ್ ಮತ್ತು ಮಗ್‌ಗಳು ಯಾವಾಗಲೂ ಮುರಿದಿರಬಾರದು. ಮುರಿದ ಅಥವಾ ಒಡೆದ ವಸ್ತುಗಳನ್ನು ಬಳಸುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಅಲ್ಲದೆ, ಬಕೆಟ್‌ನಲ್ಲಿ ಯಾವಾಗಲೂ ಸ್ವಲ್ಪ ಪ್ರಮಾಣದ ನೀರನ್ನು ಇಡುವುದು ಶುಭಕರ. ಸಂಪೂರ್ಣವಾಗಿ ಖಾಲಿ ಬಿಡಬಾರದು, ಇದು ಮನೆಯಲ್ಲಿ ಸಮೃದ್ಧಿ ಹರಿಯಲು ನೆರವಾಗುತ್ತದೆ.
ಎರಡನೆಯದಾಗಿ, ಬಾತ್ರೂಮ್‌ನಲ್ಲಿ ಯಾವುದೇ ರೀತಿಯ ಒಡೆದ ಗಾಜಿನ ಪೀಸ್‌ಗಳು, ಕನ್ನಡಿಗಳು ಅಥವಾ ಇತರೆ ಗ್ಲಾಸ್ ವಸ್ತುಗಳು ಇರಬಾರದು. ಇವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಮತ್ತು ಕಂಟಕಗಳನ್ನು ತರಬಹುದು.
ಮೂರನೆಯದಾಗಿ, ಉಪಯೋಗಕ್ಕೆ ಬಾರದ ಹಳೆಯ ವಸ್ತುಗಳು, ಖಾಲಿ ಶಾಂಪೂ ಬಾಟಲಿಗಳು, ಸೋಪ್ ಬಾಕ್ಸ್‌ಗಳು ಅಥವಾ ಯಾವುದೇ ಸ್ಕ್ರಾಪ್‌ಗಳನ್ನು ಬಾತ್ರೂಮ್‌ನಲ್ಲಿ ಸಂಗ್ರಹಿಸಬಾರದು. ಇವು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಅನಗತ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಬಾತ್ರೂಮ್ ಅನ್ನು ಸ್ನಾನ ಮಾಡಲು ಮಾತ್ರ ಉಪಯೋಗಿಸಬೇಕು, ವಸ್ತುವಿನ ಗೋದಾಮಾಗಿ ಪರಿವರ್ತಿಸಬಾರದು.
ನಾಲ್ಕನೆಯದಾಗಿ, ಸ್ನಾನ ಮಾಡಿದ ನಂತರ ಉಪಯೋಗಿಸಿದ ಒದ್ದೆ ಬಟ್ಟೆಗಳನ್ನು ಹೆಚ್ಚು ಸಮಯ ಬಾತ್ರೂಮ್‌ನಲ್ಲಿ ಇಡಬಾರದು. ಅವುಗಳನ್ನು ಕೂಡಲೇ ಒಗೆಯುವ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು ಅಥವಾ ಪ್ರತ್ಯೇಕ ಬ್ಯಾಗ್‌ಗೆ ಹಾಕಿ ಇಡಬೇಕು. ಒದ್ದೆ ಬಟ್ಟೆಗಳನ್ನು ಬಾತ್ರೂಮ್‌ನಲ್ಲಿ ಬಿಡುವುದರಿಂದ ಮನೆಯಲ್ಲಿ ರೋಗಗಳು ಮತ್ತು ನಕಾರಾತ್ಮಕ ಪ್ರಭಾವ ಹೆಚ್ಚುತ್ತದೆ.
ಐದನೆಯದಾಗಿ, ಬಾತ್ರೂಮ್‌ನಲ್ಲಿ ಮುರಿದ ಅಥವಾ ಹರಿದ ಚಪ್ಪಲಿಗಳನ್ನು ಬಳಸಬಾರದು. ವಾಸ್ತು ಪ್ರಕಾರ, ಬಾತ್ರೂಮ್‌ನಲ್ಲಿ ಚಪ್ಪಲಿಗಳನ್ನು ಇಡದಿರುವುದು ಇನ್ನೂ ಉತ್ತಮ.
ಆರನೆಯದಾಗಿ, ಸೋರುವ ಟ್ಯಾಪ್‌ಗಳು ಅಥವಾ ನಲ್ಲಿಗಳನ್ನು ಕೂಡಲೇ ಸರಿಪಡಿಸಬೇಕು. ನೀರು ವ್ಯರ್ಥವಾಗಿ ಹರಿಯುವುದು ಹಣದ ನಷ್ಟ ಮತ್ತು ಆರ್ಥಿಕ ಸಮಸ್ಯೆಗಳನ್ನು ಸೂಚಿಸುತ್ತದೆ.
ಏಳನೆಯದಾಗಿ, ಕಿಲುಬಿನ ಪದಾರ್ಥಗಳು, ಕಬ್ಬಿಣದ ವಸ್ತುಗಳು ಅಥವಾ ಉಪಯೋಗಿಸಿದ ಶೇವಿಂಗ್ ಬ್ಲೇಡ್‌ಗಳಂತಹ ತುಕ್ಕು ಹಿಡಿದ ವಸ್ತುಗಳನ್ನು ಬಾತ್ರೂಮ್‌ನಲ್ಲಿ ಇಡಬಾರದು. ಇವು ಸಹ ನಕಾರಾತ್ಮಕ ಶಕ್ತಿ ಮತ್ತು ಅನಾರೋಗ್ಯಕ್ಕೆ ಕಾರಣವಾಗಬಹುದು.
ಬಾತ್ರೂಮ್ ಅನ್ನು ಯಾವಾಗಲೂ ಸ್ವಚ್ಛವಾಗಿ, ಒಣಗಿದಂತೆ ಮತ್ತು ಉತ್ತಮ ಗಾಳಿಯಾಡುವಂತೆ ಇಟ್ಟುಕೊಳ್ಳುವುದು ಅತ್ಯಗತ್ಯ. ಶುದ್ಧವಾದ ಮತ್ತು ಧನಾತ್ಮಕ ವಾತಾವರಣವು ಮಾನಸಿಕ ನೆಮ್ಮದಿ, ಆರೋಗ್ಯ ಮತ್ತು ಆರ್ಥಿಕ ಸುಸ್ಥಿತಿಗೆ ಕಾರಣವಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ