Karnavedha Samskara: ಗಂಡು ಮಕ್ಕಳಿಗೆ ಕಿವಿ ಚುಚ್ಚಲೇಬೇಕು ಏಕೆ ಗೊತ್ತಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಹಿಂದೂ ಸಂಪ್ರದಾಯದಲ್ಲಿ ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು (ಕರ್ಣವೇದ ಸಂಸ್ಕಾರ) ಕೇವಲ ಫ್ಯಾಷನ್ ಆಗಿರದೆ, ಶುಭ ಸಂಸ್ಕಾರವಾಗಿದೆ. ಇದು ಆಧ್ಯಾತ್ಮಿಕವಾಗಿ ಋಣಾತ್ಮಕ ಶಕ್ತಿಗಳನ್ನು ದೂರವಿಡಲು, ಶೈಕ್ಷಣಿಕವಾಗಿ ಜ್ಞಾಪಕಶಕ್ತಿ, ಏಕಾಗ್ರತೆ ಹೆಚ್ಚಿಸಲು ಮತ್ತು ಆಯುರ್ವೇದದ ಪ್ರಕಾರ ನರಬಿಂದುಗಳ ಸಕ್ರಿಯತೆಗೆ ಸಹಕಾರಿ. 21 ವರ್ಷದೊಳಗಿನವರಿಗೆ ಇದನ್ನು ಮಾಡಿಸುವುದು ಉತ್ತಮ ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

Karnavedha Samskara: ಗಂಡು ಮಕ್ಕಳಿಗೆ ಕಿವಿ ಚುಚ್ಚಲೇಬೇಕು ಏಕೆ ಗೊತ್ತಾ? ಜ್ಯೋತಿಷ್ಯ ಸಲಹೆ ಇಲ್ಲಿದೆ
ಗಂಡು ಮಕ್ಕಳಿಗೆ ಕರ್ಣವೇದ ಸಂಸ್ಕಾರ
Image Credit source: Pinterest

Updated on: Jun 13, 2026 | 8:35 AM

ಹಿಂದೂ ಸನಾತನ ಸಂಪ್ರದಾಯದಲ್ಲಿ, ಅನೇಕ ಸಂಸ್ಕಾರಗಳು ವ್ಯಕ್ತಿಯ ಜೀವನದ ವಿವಿಧ ಹಂತಗಳಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅವುಗಳಲ್ಲಿ ಕರ್ಣವೇದ ಸಂಸ್ಕಾರ ಅಥವಾ ಕಿವಿ ಚುಚ್ಚಿಸುವುದು ಒಂದು ಪ್ರಮುಖ ವಿಧಿಯಾಗಿದೆ. ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಮಾತ್ರವಲ್ಲದೆ, ಗಂಡು ಮಕ್ಕಳಿಗೂ ಕಿವಿ ಚುಚ್ಚಿಸುವ ಪದ್ಧತಿ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ಇದು ಕೇವಲ ಅಲಂಕಾರಿಕ ಅಥವಾ ಆಧುನಿಕ ಫ್ಯಾಷನ್ ಆಗಿರದೆ, ಆಳವಾದ ಆಧ್ಯಾತ್ಮಿಕ, ವೈಜ್ಞಾನಿಕ ಮತ್ತು ಶೈಕ್ಷಣಿಕ ಮಹತ್ವವನ್ನು ಹೊಂದಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಕರ್ಣವೇದ ಸಂಸ್ಕಾರ ಎಂದರೇನು?

ಕರ್ಣವೇದ ಸಂಸ್ಕಾರವು ಪುಟ್ಟ ಮಕ್ಕಳ ಕಿವಿಯನ್ನು ಚುಚ್ಚುವ ಒಂದು ಧಾರ್ಮಿಕ ವಿಧಿಯಾಗಿದೆ. ಇದು ಹಿಂದೂ ಧರ್ಮದ ಷೋಡಶ ಸಂಸ್ಕಾರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಸಾಮಾನ್ಯವಾಗಿ, ಉಪನಯನದ ಸಮಯದಲ್ಲಿ ಅಥವಾ 21 ವರ್ಷ ವಯಸ್ಸಿನೊಳಗೆ ಈ ಸಂಸ್ಕಾರವನ್ನು ಮಾಡಿಸುವುದು ರೂಢಿಯಲ್ಲಿದೆ. ಇದು ಆಧ್ಯಾತ್ಮಿಕ ನಂಬಿಕೆಯ ಭಾಗವಾಗಿದ್ದು, ಪ್ರಾಚೀನ ಕಾಲದಿಂದಲೂ ಆಚರಿಸಿಕೊಂಡು ಬರಲಾಗಿದೆ.

ಆಧ್ಯಾತ್ಮಿಕ ಮಹತ್ವ:

ಕಿವಿ ಚುಚ್ಚಿಸುವುದಕ್ಕೆ ಹಲವು ಆಧ್ಯಾತ್ಮಿಕ ಕಾರಣಗಳಿವೆ. ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ, ಅವರ ದೇಹದ ಸುತ್ತ ಋಣಾತ್ಮಕ ಶಕ್ತಿಗಳು ಆವರಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ನಂಬಲಾಗಿದೆ. ಕಿವಿ ಚುಚ್ಚಿಸುವುದರಿಂದ ದೇಹವು ಭಿನ್ನವಾಗುತ್ತದೆ. ಅಂದರೆ, ದೇಹದಲ್ಲಿ ಸಣ್ಣ ಗಾಯವಾಗಿರುವುದರಿಂದ, ಅದು ಕೆಟ್ಟ ಶಕ್ತಿಗಳ ಪ್ರಭಾವದಿಂದ ದೂರವಿರುತ್ತದೆ. ಒಂದು ಕಥೆಯ ಪ್ರಕಾರ, ಕಾಡಿನಲ್ಲಿ ರಾಜನೊಬ್ಬನ ಬೆರಳು ಕಟ್ ಆಗಿದ್ದ ಕಾರಣ, ಕಾಡಿನ ಜನರು ಆತನನ್ನು ದೇವಿಗೆ ಬಲಿ ನೀಡಲು ಅನರ್ಹ ಎಂದು ಹಿಂದಕ್ಕೆ ಕಳುಹಿಸುತ್ತಾರೆ. ಇದೇ ರೀತಿ, ದೇಹದಲ್ಲಿನ ಭಿನ್ನತೆ ಕೆಟ್ಟ ಶಕ್ತಿಗಳ ಆವಾಹನೆಯನ್ನು ತಡೆಯುತ್ತದೆ ಎಂದು ನಂಬಲಾಗಿದೆ. ನಿರ್ದಿಷ್ಟವಾಗಿ, ರಾಹು-ಕೇತುಗಳಂತಹ ಗ್ರಹಗಳ ನಕಾರಾತ್ಮಕ ಪ್ರಭಾವಗಳನ್ನು ಕಡಿಮೆ ಮಾಡಲು ಇದು ಸಹಕಾರಿ ಎಂದು ಹೇಳಲಾಗುತ್ತದೆ. ಒಂದು ಕಿವಿಗೆ ಬದಲಾಗಿ ಎರಡೂ ಕಿವಿಗಳನ್ನು ಚುಚ್ಚಿಸುವುದು ಹೆಚ್ಚು ಶುಭಕರ ಎಂದು ಹೇಳಲಾಗುತ್ತದೆ.

ಶೈಕ್ಷಣಿಕ ಮತ್ತು ವೈಜ್ಞಾನಿಕ ಪ್ರಯೋಜನಗಳು:

ಕರ್ಣವೇದ ಸಂಸ್ಕಾರವು ಮಕ್ಕಳ ಬೌದ್ಧಿಕ ಬೆಳವಣಿಗೆಗೂ ಸಹಕಾರಿಯಾಗಿದೆ. ಕಿವಿ ಚುಚ್ಚಿಸುವುದರಿಂದ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುತ್ತದೆ. ಮೆಮೊರಿ ಪವರ್ ಹೆಚ್ಚುತ್ತದೆ, ಏಕಾಗ್ರತೆ ವೃದ್ಧಿಸುತ್ತದೆ, ತಾಳ್ಮೆ ಮತ್ತು ಸಹನೆ ಹೆಚ್ಚಾಗುತ್ತದೆ. ಇದು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಡೆಯುತ್ತದೆ ಮತ್ತು ಯೋಚನಾ ಶಕ್ತಿಯನ್ನು ಸುಧಾರಿಸುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಇದಕ್ಕೆ ವೈಜ್ಞಾನಿಕ ಆಧಾರವೂ ಇದೆ. ಆಯುರ್ವೇದದಲ್ಲಿ, ಕಿವಿಯ ನರಬಿಂದುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಕಿವಿಯಲ್ಲಿರುವ ಕೆಲವು ನರಬಿಂದುಗಳು ಮೆದುಳಿಗೆ ನೇರವಾಗಿ ಸಂಪರ್ಕ ಹೊಂದಿವೆ. ಕಿವಿ ಚುಚ್ಚಿದಾಗ ಈ ನರಬಿಂದುಗಳು ಸಕ್ರಿಯಗೊಳ್ಳುತ್ತವೆ ಎಂದು ನಂಬಲಾಗಿದೆ. ಇದು ಮಿದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಸ್ಮರಣ ಶಕ್ತಿ ಮತ್ತು ಏಕಾಗ್ರತೆಗೆ ಸಹಾಯ ಮಾಡುತ್ತದೆ. ಆಯುರ್ವೇದವು ಶರೀರಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಕಿವಿಯ ಮೇಲೆ ಚಿಕಿತ್ಸೆಯನ್ನು ಸೂಚಿಸುತ್ತದೆ.

ಯಾವ ವಯಸ್ಸಿನಲ್ಲಿ ಸೂಕ್ತ?

ಈ ಸಂಸ್ಕಾರಕ್ಕೆ ವಯಸ್ಸಿನ ಮಿತಿಯಿದ್ದರೂ, ಸಾಮಾನ್ಯವಾಗಿ ಪ್ರೌಢಾವಸ್ಥೆಗೆ ಬರುವ ಮೊದಲು ಅಂದರೆ 21 ವರ್ಷದ ಒಳಗಡೆ ಕಿವಿ ಚುಚ್ಚಿಸುವುದು ಸೂಕ್ತ ಎಂದು ಪರಿಗಣಿಸಲಾಗುತ್ತದೆ. ಈ ವಯಸ್ಸಿನಲ್ಲಿ ಮಕ್ಕಳು ಇನ್ನೂ ಬೆಳೆಯುತ್ತಿರುವುದರಿಂದ, ಯಾವುದೇ ಕೆಟ್ಟ ಶಕ್ತಿಗಳು ಅವರ ಮೇಲೆ ಆವಾಹನೆ ಆಗುವುದಿಲ್ಲ ಮತ್ತು ಕೆಟ್ಟ ಪ್ರಭಾವ ಬೀರುವುದಿಲ್ಲ ಎಂದು ನಂಬಲಾಗಿದೆ. ಮಗು ಮಂಕಾಗಿದೆ, ಓದುವುದಿಲ್ಲ ಅಥವಾ ಜ್ಞಾಪಕಶಕ್ತಿ ಕಡಿಮೆಯಾಗಿದೆ ಎಂದು ಪೋಷಕರು ಚಿಂತಿಸಿದಾಗ, ಈ ಸಾಂಪ್ರದಾಯಿಕ ಪದ್ಧತಿಯು ಉತ್ತಮ ಪರಿಹಾರ ನೀಡುತ್ತದೆ ಎಂದು ಕೆಲವರು ನಂಬುತ್ತಾರೆ.

ಕೊನೆಯದಾಗಿ, ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಕೇವಲ ಒಂದು ಪದ್ಧತಿಯಲ್ಲ. ಇದು ಸಾಂಪ್ರದಾಯಿಕವಾಗಿ, ಆಧ್ಯಾತ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ಹಲವು ಶುಭ ಫಲಗಳನ್ನು ನೀಡುತ್ತದೆ ಎಂದು ಹಿಂದೂ ನಂಬಿಕೆಗಳು ಮತ್ತು ಆಯುರ್ವೇದದ ತತ್ವಗಳು ಹೇಳುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:30 am, Sat, 13 June 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us