ಗಂಡನ ಆಯಸ್ಸು ವೃದ್ದಿಯಾಗಲೆಂದು ಪತ್ನಿಯರು ಆಚರಿಸುವ ಭೀಮನ ಅಮಾವಾಸ್ಯೆಯನ್ನು(Bheemana Amavasya) ಆಷಾಡದ ಅಮವಾಸ್ಯೆಯಂದು(Ashadha Amavasya) ಕೂಡ ಆಚರಿಸಲಾಗುತ್ತೆ. ಭೀಮನ ಅಮಾವಾಸ್ಯೆಯನ್ನು ಮಹಿಳೆಯರು ಭಕ್ತಿಯಿಂದ ಆಚರಿಸುತ್ತಾರೆ. ಇಂದು(ಜುಲೈ 28) ಭೀಮನ ಅಮಾವಾಸ್ಯೆಯ ಈ ದಿನ ಜ್ಯೋತಿರ್ಭೀಮೇಶ್ವರ ವ್ರತ ಮಾಡಲಾಗುತ್ತೆ.
ಹಿಂದೂ ಸಂಪ್ರದಾಯದಲ್ಲಿ ಆಷಾಢ ಮಾಸದ ಕೊನೆಯ ದಿನವಾದ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಭೀಮ ಎಂದರೆ ಪಾಂಡವ ವಂಶಜ ಭೀಮಸೇನನಲ್ಲ. ಈಶ್ವರನನ್ನು ಈ ಹೆಸರಿನಿಂದ ಕರೆಯಲಾಗುತ್ತದೆ. ಅಪರಿಮಿತ ಬಲ, ಭಕ್ತರ ಮನೋಭಿಷ್ಟ ಈಡೇರಿಕೆಯಂತಹ ಸದ್ಗುಣಗಳುಳ್ಳ ಶ್ರೀರುದ್ರದೇವರನ್ನೂ ಭೀಮ ಎಂದು ಕರೆಯಲಾಗುತ್ತದೆ. ಈ ಭೀಮನಾಮಕ ಶ್ರೀರುದ್ರದೇವರನ್ನು ಜ್ಯೋತಿ ರೂಪದ ದೀಪದಲ್ಲಿ ಆವಾಹಿಸಿ ಪೂಜಿಸುವುದರಿಂದ ಜ್ಯೋತಿರ್ಭೀಮೇಶ್ವರ ವ್ರತ ಎಂದು ಕರೆಯಲಾಗುತ್ತದೆ.
ವಿವಾಹಿತ ಮಹಿಳೆಯರು ತನ್ನ ಪತಿಯ ಆಯುಷ್ಯ ಹಾಗೂ ಶ್ರೇಯಸ್ಸಿಗಾಗಿ, ಈ ದಿನ ಶ್ರೀರುದ್ರದೇವರು(ಶಿವ) ಹಾಗೂ ಪಾರ್ವತಿದೇವಿಯನ್ನು ಶ್ರೀಜ್ಯೋತಿರ್ಭೀಮೇಶ್ವರ ರೂಪದಲ್ಲಿ ಆರಾಧಿಸಬೇಕು. ಕನ್ಯೆಯರು ಉತ್ತಮ ಗುಣಗಳಿಂದ ಕೂಡಿದ ವರ ಪ್ರಾಪ್ತವಾಗಲೆಂದು ಈ ವ್ರತ ಆಚರಿಸುತ್ತಾರೆ. ಆಷಾಢ ಮಾಸದ ಕೊನೆಯ ದಿನವೇ ಭೀಮನ ಅಮಾವಾಸ್ಯೆ, ಇದನ್ನು ನಾಗರ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಈ ದಿನ ಶ್ರೀ ರುದ್ರದೇವರು ಹಾಗೂ ಪಾರ್ವತಿ ದೇವಿಯನ್ನು ಭಕ್ತಿಯಿಂದ ಪೂಜಿಸಬೇಕು. ಪತಿಗೆ ದೀರ್ಘಾಯುಷ್ಯ, ಆರೋಗ್ಯ ಸೇರಿದಂತೆ ಯಶಸ್ಸನ್ನು ಕರುಣಿಸಲೆಂದು ಬೇಡಿಕೊಳ್ಳಬೇಕು.
ಭೀಮನ ಅಮಾವಾಸ್ಯೆ ಪೂಜೆ ಹೇಗೆ?
ಮಹಿಳೆಯರು ಬೆಳಗ್ಗೆ ಎದ್ದು, ಶುಚಿರ್ಭೂತರಾಗಿ ಹೊಸ ವಸ್ತ್ರ ಧರಿಸಬೇಕು. ನಂತರ ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ, ಅದರ ಮೇಲೆ ಎರಡು ದೀಪಸ್ತಂಭಗಳನ್ನಿಟ್ಟು ತುಪ್ಪ, ಶುದ್ಧ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಹಾಕಿ ಹಚ್ಚಬೇಕು. ಈ ದೀಪಗಳಲ್ಲಿ ಪುರುಷ ಹಾಗೂ ಪ್ರಕೃತಿ ಸ್ವರೂಪರಾದ ಶ್ರೀರುದ್ರದೇವರು ಮತ್ತು ಪಾರ್ವತಿ ದೇವಿಯನ್ನು ಆವಾಹನೆ ಮಾಡಿ ಪೂಜಿಸಬೇಕು. ಜ್ಯೋತಿಯಲ್ಲಿ ಶ್ರೀಜ್ಯೋತಿರ್ಭೀಮೇಶ್ವರ ನನ್ನು ಅನುಸಂಧಾನ ಮಾಡಬೇಕು. ಪೂಜೆಯ ನಂತರ ಕೈಗೆ ಕಟ್ಟಿಕೊಳ್ಳಲು ಬೇಕಾಗುವ ದಾರವನ್ನು ಪೂಜೆಗೆ ಮೊದಲು ಸಿದ್ಧಪಡಿಸಬೇಕು. ಒಂಭತ್ತು ಅಥವಾ ಹನ್ನೆರಡು ಎಳೆಯ ದಾರವನ್ನು ತೆಗೆದುಕೊಂಡು ಒಂಭತ್ತು ಗಂಟು ಹಾಕಬೇಕು. ಇದನ್ನು ದೇವರ ಸಮೀಪದಲ್ಲಿ ವೀಳೆಯದೆಲೆ ಅಥವಾ ಬೆಳ್ಳಿತಟ್ಟೆಯಲ್ಲಿಡಬೇಕು.
ಆವಾಹನೆ ಮಾಡಿದ ದೇವರಿಗೆ ಗಂಧ, ಪುಷ್ಪ ಅರ್ಪಿಸಬೇಕು. ಈ ದಿನ ಕರಿಗಡಬು ಸಮರ್ಪಣೆ ವಿಶೇಷವಾದ್ದರಿಂದ ನೈವೇದ್ಯಕ್ಕೆ ಕರಿಗಡಬು ಹಾಗೂ ಪಾಯಸ ಮತ್ತಿತರ ಭಕ್ಷ್ಯಗಳನ್ನು ಸಮರ್ಪಿಸಬೇಕು. ನಂತರ ಆರತಿ ಮಾಡಿ ಪ್ರಾರ್ಥಿಸಬೇಕು. ದೇವ ದೇವಿಗೆ ನಮಿಸಿ, ಭಕ್ತಿಯುಂದ ಪ್ರಾರ್ಥಿಸಿ ತರುವಾಯ ಗೌರಿ ದಾರವನ್ನು ಕೈಗೆ ಕಟ್ಟಿಕೊಳ್ಳಬೇಕು. ಸುಖ, ಸಂಪತ್ತು, ಸಂತಾನ ಪ್ರದಾಯಕಳಾದ ಪಾರ್ವತಿದೇವಿಯನ್ನು ವಿಶೇಷವಾಗಿ ಪ್ರಾರ್ಥಿಸಿ, ಸ್ಥಿರ ಮಾಂಗಲ್ಯ ಭಾಗ್ಯ ನೀಡುವ ಮೂಲಕ ಪತಿಗೆ ಆಯುಷ್ಯ ಕರುಣಿಸುವಂತೆ ಬೇಡ ಬೇಕು.
ಇದಾದ ಮೇಲೆ ವಿವಾಹಿತ ಮಹಿಳೆ ತನ್ನ ಪತಿಯ ಪಾದಪೂಜೆ ನಡೆಸಿ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು. ಹೊಸದಾಗಿ ಮದುವೆಯಾದ ದಂಪತಿಗೆ ಇದು ವಿಶೇಷ ದಿನ. ಆಷಾಢಮಾಸ ಕಳೆಯಲು ತವರಿಗೆ ಬಂದ ನವವಧು, ಶ್ರಾವಣದಲ್ಲಿ ಗಂಡನ ಮನೆಗೆ ತೆರಳುತ್ತಾಳೆ. ಪತ್ನಿಯನ್ನು ಕರೆದೊಯ್ಯಲು ಬರುವ ಪತಿಯ ಪಾದಪೂಜೆ ನಡೆಸಿ ಆತನಿಗೆ ವಿಶೇಷ ಆತಿಥ್ಯ ನೀಡುವ ದಿನವಿದು.
ಕನ್ಯೆಯರು ದೇವರ ಪೂಜೆಯ ನಂತರ ಮಾತಾ ಪಿತೃಗಳ ಆಶೀರ್ವಾದ ಪಡೆಯಬಹುದು. ದಂಪತಿ ಜೀವನ ಅನೋನ್ಯವಾಗಿದ್ದರೆ ಸುಖ, ಸಂತಸ, ಸಂಭ್ರಮ ಸದಾ ಇರುತ್ತದೆ. ಈ ಉದ್ದೇಶದಿಂದ ಈ ವ್ರತವನ್ನು ಆಚರಿಸಲಾಗುತ್ತದೆ. ಒಮ್ಮೆ ಆರಂಭಿಸಿದ ವ್ರತವನ್ನು ಐದು, ಒಂಭತ್ತು ಅಥವಾ ಹದಿನಾರು ವರ್ಷ ಆಚರಿಸಬೇಕು. ಒಮ್ಮೆ ಉದ್ಯಾಪನೆ ಮಾಡಿ, ಬಂಧು ಮಿತ್ರರಿಗೆ ಭೂರಿ ಭೋಜನ ಮಾಡಿಸಬೇಕು. ಆಷಾಢಮಾಸದ ಅಂತ್ಯ ಹಾಗೂ ಹಬ್ಬಗಳ ತಿಂಗಳಾದ ಶ್ರಾವಣಮಾಸದ ಆರಂಭದ ಪರ್ವಕಾಲದಲ್ಲಿ ಶ್ರೀರುದ್ರದೇವರನ್ನು ಸ್ಮರಿಸೋಣ.