Champa Shashti 2025: ಇಂದು ಸ್ಕಂದ ಷಷ್ಠಿ; ಶುಭ ಮುಹೂರ್ತ ಮತ್ತು ಆಚರಣೆಯ ಮಹತ್ವ ತಿಳಿಯಿರಿ
ಚಂಪಾ ಷಷ್ಠಿಯು ಸುಬ್ರಹ್ಮಣ್ಯನ ಆರಾಧನೆಗೆ ಮೀಸಲಾದ ಪವಿತ್ರ ದಿನ. ಸಂತಾನ ಪ್ರಾಪ್ತಿ ಮತ್ತು ಕುಜದೋಷ ನಿವಾರಣೆಗಾಗಿ ಈ ದಿನದಂದು ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸಲಾಗುತ್ತದೆ. ವಿಶೇಷ ಪೂಜಾ ವಿಧಾನಗಳು, ಮಂತ್ರ ಜಪ ಮತ್ತು ಕ್ಷೇತ್ರ ದರ್ಶನದಿಂದ ಉತ್ತಮ ಫಲಗಳು ದೊರೆಯುತ್ತವೆ. ಈ ವರ್ಷ, ಷಷ್ಠಿ ತಿಥಿ ನವೆಂಬರ್ 25 ರಂದು ಸಂಜೆ 7:15 ಕ್ಕೆ ಪ್ರಾರಂಭವಾಗಿ ನವೆಂಬರ್ 26 ರಂದು ಸಂಜೆ 7:56 ಕ್ಕೆ ಕೊನೆಗೊಳ್ಳುತ್ತಿದೆ.

ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ತಿಥಿಯನ್ನು ಚಂಪಾ(ಸ್ಕಂದ) ಷಷ್ಠಿ ಎಂದು ಕರೆಯಲಾಗುತ್ತದೆ. ಇದು ಸುಬ್ರಹ್ಮಣ್ಯನಿಗೆ ಪ್ರಿಯವಾದ ದಿನವಾಗಿದೆ. ಚಂಪಾ ಷಷ್ಠಿಯ ಮಹತ್ವ, ಪೂಜಾ ವಿಧಾನಗಳು ಮತ್ತು ಪ್ರಯೋಜನಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ನೀಡಿದ ಮಾಹಿತಿ ಇಲ್ಲಿದೆ.
ಮಹತ್ವದ ಪರ್ವ ಕಾಲಗಳಲ್ಲಿ ಮಾಡುವ ಜಪ, ಪೂಜೆ ಮತ್ತು ಧ್ಯಾನದಿಂದ ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅಂತಹ ವಿಶೇಷ ದಿನಗಳಲ್ಲಿ ಚಂಪಾ ಷಷ್ಠಿ ಪ್ರಮುಖವಾಗಿದೆ. ಈ ದಿನ ಸುಬ್ರಹ್ಮಣ್ಯ ಸ್ವಾಮಿಯನ್ನು ವಿಗ್ರಹ ರೂಪದಲ್ಲಿ, ನಾಗನ ರೂಪದಲ್ಲಿ ಅಥವಾ ಹುತ್ತದ ರೂಪದಲ್ಲಿ ಪೂಜಿಸಲಾಗುತ್ತದೆ. ಈ ಆರಾಧನೆಯು ಸಂತಾನ ಪ್ರಾಪ್ತಿಗಾಗಿ, ಕುಜದೋಷ ನಿವಾರಣೆಗಾಗಿ ವಿಶೇಷವಾಗಿ ಆಚರಿಸಲ್ಪಡುತ್ತದೆ. ಭಾರತದಾದ್ಯಂತ ಈ ಚಂಪಾ ಷಷ್ಠಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ ಮತ್ತು ಆಂಧ್ರದಲ್ಲಿರುವ ಕಾಳಹಸ್ತಿಯಂತಹ ಕ್ಷೇತ್ರಗಳು ಸುಬ್ರಹ್ಮಣ್ಯನ ಆರಾಧನೆಗೆ ಪ್ರಸಿದ್ಧವಾಗಿವೆ.
ಷಷ್ಠಿಯ ಶುಭ ಮುಹೂರ್ತ:
ಈ ವರ್ಷ ಮಾರ್ಗಶಿರ ಶುದ್ಧ ಷಷ್ಠಿ ಬುಧವಾರ, ನವೆಂಬರ್ 26 ರಂದು ಆಚರಿಸಲಾಗುತ್ತದೆ. ಈ ವರ್ಷ, ಷಷ್ಠಿ ತಿಥಿ ನವೆಂಬರ್ 25 ರಂದು ಸಂಜೆ 7:15 ಕ್ಕೆ ಪ್ರಾರಂಭವಾಗಿ ನವೆಂಬರ್ 26 ರಂದು ಸಂಜೆ 7:56 ಕ್ಕೆ ಕೊನೆಗೊಳ್ಳುತ್ತದೆ.
ಚಂಪಾ ಷಷ್ಠಿಯಂದು ಶಿವ ಪೂಜೆ:
ಚಂಪಾ ಷಷ್ಠಿಯಂದು ಶಿವನ ಪೂಜೆಯನ್ನೂ ಮಾಡಲಾಗುತ್ತದೆ. ಕೆಲವರು ಈ ದಿನವನ್ನು ಖಂಡೋಬ ದಿನ ಎಂದೂ ಕರೆಯುತ್ತಾರೆ. ಪ್ರಾಚೀನ ಕಥೆಗಳ ಪ್ರಕಾರ, ಈ ದಿನದಂದು ರಾಕ್ಷಸರಾದ ಮಲ್ಲಾ ಮತ್ತು ಮಣಿವರರ ಮೇಲೆ ಜಯ ಸಾಧಿಸಲಾಗಿತ್ತು. ಪ್ರಸ್ತುತ ನಮ್ಮಲ್ಲಿರುವ ನಕಾರಾತ್ಮಕ ಗುಣಗಳು, ಕ್ರೌರ್ಯತ್ವ ಮತ್ತು ಕಂಟಕಗಳನ್ನು ದೂರ ಮಾಡಿಕೊಳ್ಳಲು ಈ ದಿನವು ಸಹಕಾರಿಯಾಗಿದೆ ಎಂದು ನಂಬಲಾಗಿದೆ. ಸುಬ್ರಹ್ಮಣ್ಯನನ್ನು ಕಾರ್ತಿಕೇಯ, ಸ್ಕಂದ, ಕುಮಾರಸ್ವಾಮಿ ಎಂದೂ ಕರೆಯಲಾಗುತ್ತದೆ.
ಇದನ್ನೂ ಓದಿ: ಮನೆಗೆ ಹೊಸ ವರ್ಷದ ಕ್ಯಾಲೆಂಡರ್ ತರುತ್ತಿದ್ದೀರಾ? ಹಾಗಿದ್ರೆ ಈ ವಿಷ್ಯ ತಿಳಿದುಕೊಳ್ಳಿ
ಈ ಭಗವಂತನ ಆರಾಧನೆಯನ್ನು ಮನೆಯಲ್ಲಿ ಫೋಟೋ ಇಟ್ಟು, ಮನೆಯನ್ನು ಶುದ್ಧಿ ಮಾಡಿ ಮಾಡಬಹುದು. ಹುತ್ತದ ಪೂಜೆ, ಅಭಿಷೇಕ, ಸುಬ್ರಹ್ಮಣ್ಯ ಕ್ಷೇತ್ರ ದರ್ಶನ ಅಥವಾ ನಿರಂತರವಾಗಿ ಸುಬ್ರಹ್ಮಣ್ಯನ ಆರಾಧನೆ ಮಾಡುವುದು ಅತ್ಯಂತ ಶುಭ. ಓಂ ಶರವಣಭವಾಯ ನಮಃ ಮಂತ್ರ ಜಪಿಸುವುದು, ಸುಬ್ರಹ್ಮಣ್ಯ ಅಷ್ಟೋತ್ತರ ಪಠಣ ಮಾಡುವುದು ಮತ್ತು ನೈವೇದ್ಯ ಅರ್ಪಿಸುವುದು ಉತ್ತಮ ಫಲ ನೀಡುತ್ತದೆ. ಶಿವ ಮತ್ತು ಸುಬ್ರಹ್ಮಣ್ಯ ಇಬ್ಬರನ್ನೂ ಆರಾಧಿಸುವುದರಿಂದ ಹೆಚ್ಚು ಶುಭ ಫಲಗಳು ದೊರೆಯುತ್ತವೆ.
ಚಂಪಾ ಷಷ್ಠಿಯಂದು ಹಿಟ್ಟಿನಿಂದ ಮಾಡಿದ ಜೋಡಿ ದೀಪಗಳನ್ನು ತುಪ್ಪ ಹಾಕಿ ಹಚ್ಚಿ, ಓಂ ಶರವಣಭವಾಯ ನಮಃ ಮಂತ್ರ ಜಪಿಸುವುದರಿಂದ ರೋಗರುಜಿನಗಳು, ಚರ್ಮ ವ್ಯಾಧಿಗಳು ದೂರವಾಗುತ್ತವೆ. ಮನಸ್ಸು ನಿರ್ಮಲವಾಗುತ್ತದೆ ಮತ್ತು ಶತ್ರುಗಳು ಮಿತ್ರರಾಗುತ್ತಾರೆ ಎಂದು ಹೇಳಲಾಗುತ್ತದೆ. ಈ ಎಲ್ಲಾ ಆಚರಣೆಗಳು ಅನುಭವಪೂರ್ವಕ ಫಲಗಳನ್ನು ನೀಡುತ್ತವೆ ಎಂದು ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:13 am, Wed, 26 November 25




