Chanakya Niti: ಮಾತು, ವರ್ತನೆ, ಸಹವಾಸದ ಬಗ್ಗೆ ಸದಾ ನಿಗಾ ವಹಿಸಿ; ಈ ಸಂಗತಿಯನ್ನು ಮರೆಯಬೇಡಿ

ಸಾವಿರಾರು ವಿಚಾರಗಳನ್ನು ತಿಳಿಸುವ ಚಾಣಕ್ಯ ನೀತಿಯಲ್ಲಿ ಒಬ್ಬ ವ್ಯಕ್ತಿ ತಾನಾಡುವ ಮಾತುಗಳ ನಿಜವಾದ ಅರ್ಥವನ್ನು ತಿಳಿದುಕೊಂಡರೆ, ಅವುಗಳಿಗೆ ಜೀವ ತುಂಬಿದರೆ, ಆತ ಎಲ್ಲಾ ಸವಾಲುಗಳನ್ನು ಸುಲಭವಾಗಿ ಜಯಿಸಬಹುದು ಎಂಬ ಒಂದು ಸಲಹೆಯನ್ನೂ ನೀಡಲಾಗಿದೆ.

Chanakya Niti: ಮಾತು, ವರ್ತನೆ, ಸಹವಾಸದ ಬಗ್ಗೆ ಸದಾ ನಿಗಾ ವಹಿಸಿ; ಈ ಸಂಗತಿಯನ್ನು ಮರೆಯಬೇಡಿ
ಚಾಣಕ್ಯ ನೀತಿ
Follow us
TV9 Web
| Updated By: ಆಯೇಷಾ ಬಾನು

Updated on: Sep 02, 2021 | 8:51 AM

ಭಾರತೀಯ ಪರಂಪರೆಯಲ್ಲಿ ಆಚಾರ್ಯ ಚಾಣಕ್ಯರಿಗೆ ವಿಶೇಷ ಸ್ಥಾನಮಾನ ನೀಡಿ ಗೌರವಿಸಲಾಗುತ್ತದೆ. ಅವರನ್ನು ದೇಶದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ತಮ್ಮ ಬುದ್ಧಿವಂತಿಕೆ, ತೀಕ್ಷ್ಣವಾದ ಆಲೋಚನಾ ಕ್ರಮ ಮತ್ತು ಸಾಮರ್ಥ್ಯಗಳಿಂದ ಭಾರತೀಯ ಇತಿಹಾಸದ ಹಾದಿಯನ್ನು ಬದಲಾಯಿಸಿದ ಅವರು ಕೆಲ ಹೊಸ ದಾಖಲೆಗಳಿಗೂ ಕಾರಣರಾದವರು. ಇಂದಿಗೂ ಸಹ, ಆಚಾರ್ಯರ ಮಾತುಗಳು ಪ್ರಸ್ತುತವಾಗಿದ್ದು ಉತ್ತಮ ಬದುಕನ್ನು ಕಂಡುಕೊಳ್ಳಲ್ಲಿ ಅವುಗಳನ್ನು ಅನುಸರಿಸುವುದು ಸೂಕ್ತವೆಂದೆನಿಸಿಕೊಂಡಿವೆ.

ಚಾಣಕ್ಯರ ಮಾತುಗಳು ಕೇಳಲು ಅಥವಾ ಓದಲು ಕಟು ಎನಿಸಬಹುದು. ಆದರೆ ವಾಸ್ತವದಲ್ಲಿ ಅವು ಜೀವನದ ಎಷ್ಟೋ ವಿಚಾರಗಳನ್ನು ನೇರವಾಗಿ ತೆರೆದಿಡುತ್ತವೆ. ಸಾವಿರಾರು ವಿಚಾರಗಳನ್ನು ತಿಳಿಸುವ ಚಾಣಕ್ಯ ನೀತಿಯಲ್ಲಿ ಒಬ್ಬ ವ್ಯಕ್ತಿ ತಾನಾಡುವ ಮಾತುಗಳ ನಿಜವಾದ ಅರ್ಥವನ್ನು ತಿಳಿದುಕೊಂಡರೆ, ಅವುಗಳಿಗೆ ಜೀವ ತುಂಬಿದರೆ, ಆತ ಎಲ್ಲಾ ಸವಾಲುಗಳನ್ನು ಸುಲಭವಾಗಿ ಜಯಿಸಬಹುದು ಎಂಬ ಒಂದು ಸಲಹೆಯನ್ನೂ ನೀಡಲಾಗಿದೆ. ಆಚಾರ್ಯ ಚಾಣಕ್ಯರು ಹೇಳಿದ ಆ ವಿಷಯವನ್ನು ಇಂದಿನ ಲೇಖನದಲ್ಲಿ ನೀಡಲಾಗಿದೆ.

1. ಒಮ್ಮೊಮ್ಮೆ ಸಮುದ್ರ ಕೂಡಾ ಸಹನೆ ಕಳೆದುಕೊಳ್ಳುತ್ತದೆ. ತನ್ನ ಸಹಜ ಗುಣವನ್ನು ಮರೆತು ಅನಾಹುತಕ್ಕೆ ಕಾರಣವಾಗುತ್ತದೆ. ಅದನ್ನೇ ಮುನುಷ್ಯರಿಗೆ ಹೋಲಿಸಿದಾಗ ಎಷ್ಟೇ ಒಳ್ಳೆಯವರಿದ್ದರೂ ಒಮ್ಮೆಮ್ಮೆ ಸಹನೆ ಕಳೆದುಕೊಂಡು ನೋಡುವವರ ಕಣ್ಣಲ್ಲಿ ಕೆಟ್ಟವರಾಗುವ ಸಾಧ್ಯತೆ ಇರುತ್ತದೆ. ಆದರೆ ನಿಜವಾಗಿಯೂ ಒಬ್ಬ ಸಂಭಾವಿತ ವ್ಯಕ್ತಿ ಯಾವುದೇ ಸ್ಥಿತಿಯಲ್ಲಿ ತನ್ನ ತಾಳ್ಮೆಯನ್ನು ಕಳೆದುಕೊಳ್ಳುವುದಿಲ್ಲ ಮತ್ತು ಅವನ ಮಿತಿಯನ್ನು ದಾಟುವುದಿಲ್ಲ. ಇಂದಿನ ಕಾಲದಲ್ಲಿ ಅಂತಹವರು ವಿರಳವಾಗಿದ್ದು, ಸಮಾಜಕ್ಕೆ ಆ ಗುಣವನ್ನು ಅಳವಡಿಸಿಕೊಳ್ಳುವವರ ಅವಶ್ಯಕತೆ ಇದೆ.

2. ಕೋಗಿಲೆ ಕಪ್ಪು ಬಣ್ಣದಲ್ಲಿದ್ದರೂ ಅದರ ಧ್ವನಿಯ ಕಾರಣಕ್ಕಾಗಿ ಸುಂದರ ಎಂದು ಕರೆಯಲ್ಪಡುವಂತೆಯೇ, ಓರ್ವ ವ್ಯಕ್ತಿಯ ಸೌಂದರ್ಯವು ಅವರ ಗುಣ ಮತ್ತು ನಡತೆಯಲ್ಲಿ ಇರುತ್ತದೆ. ಯಾರು ಕೌಟುಂಬಿಕ ಮೌಲ್ಯವನ್ನು ಅರಿತಿರುತ್ತಾರೋ, ಯಾರು ಮಾನವೀಯತೆಗೆ ಬೆಲೆ ಕೊಡುತ್ತಾರೋ ಅವರಲ್ಲಿ ನಿಜವಾದ ಸೌಂದರ್ಯ ಮನೆ ಮಾಡಿರುತ್ತದೆ.

3. ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿ ಎಷ್ಟೇ ಸುಂದರವಾಗಿದ್ದರೂ ಅವರು ಶಿಕ್ಷಣವನ್ನು ಪಡೆಯದಿದ್ದರೆ ಉಪಯೋಗವಿಲ್ಲ. ಶಿಕ್ಷಣ ಇಲ್ಲದವರು ಪರಿಮಳವೇ ಇಲ್ಲದ ಹೂವಿನಂತೆ ಎಂದು ಚಾಣಕ್ಯ ಹೇಳುತ್ತಾರೆ. ಅಂದರೆ ಹೂವಿನಲ್ಲಿ ಪರಿಮಳ ಇದ್ದರೆ ಅದು ಅರಳುವುದರೊಳಗೆ ಸುತ್ತಲೂ ಹರಡಿಕೊಂಡು ಬಿಡುತ್ತದೆ. ಆದರೆ, ಪರಿಮಳವೇ ಇಲ್ಲದ ಹೂವು ಎಷ್ಟೇ ಅರಳಿದರೂ ಅದರ ಅಸ್ತಿತ್ವ ಗಮನಕ್ಕೆ ಬರುವುದಿಲ್ಲ.

4. ದುಷ್ಟ ವ್ಯಕ್ತಿಗಳಿಂದ ಸದಾ ದೂರವಿರಬೇಕು. ಏಕೆಂದರೆ ಮನಸ್ಸಿನಲ್ಲಿ ದುಷ್ಟತನ ತುಂಬಿಕೊಂಡವರು ವಿಷಜಂತುಗಳಿಗಿಂತಲೂ ಅಪಾಯಕಾರಿ ಎನ್ನುವುದು ಚಾಣಕ್ಯರ ಅಭಿಪ್ರಾಯ. ಯಾವುದೇ ವಿಷಪೂರಿತ ಹಾವು ತನ್ನ ಜೀವಕ್ಕೆ ಅಪಾಯವಿದ್ದಾಗ ಮಾತ್ರ ಕುಟುಕುತ್ತದೆ. ಆದರೆ ದುಷ್ಟ ವ್ಯಕ್ತಿ ಹಾಗಲ್ಲ, ಅವಕಾಶ ಸಿಕ್ಕಾಗಲೆಲ್ಲಾ ಇನ್ನೊಬ್ಬರಿಗೆ ಅಪಾಯವನ್ನುಂಟು ಮಾಡುತ್ತಾರೆ.

5. ಶಕ್ತಿಯುತವಾದವರಿಗೆ ಯಾವುದೇ ಕೆಲಸ ಕಷ್ಟವಲ್ಲ, ಉದ್ಯಮಿಗಳಿಗೆ ಯಾವುದೇ ಸ್ಥಳ ದೂರವಲ್ಲ, ಕಲಿತವರಿಗೆ ಯಾವುದೇ ವಿಚಾರ ಕಠಿಣವಲ್ಲ ಮತ್ತು ಮಾತು ಬಲ್ಲವರಿಗೆ ಯಾರೂ ಶತ್ರುವಲ್ಲ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗುತ್ತದೆ.

(Chanakya Niti tips need to be followed to have good life)

ಇದನ್ನೂ ಓದಿ: Chanakya Niti: ಜೀವನದಲ್ಲಿ ಯಶಸ್ಸು ಕಾಣಲು ಚಾಣಕ್ಯರ ಈ ಕೆಲವು ಸಲಹೆಗಳನ್ನು ಪಾಲಿಸಿ 

Chanakya Niti: ಆರೋಗ್ಯವಾಗಿರಲು ಈ ವಿಷಯಗಳನ್ನು ನೆನಪಿನಲ್ಲಿಡಿ – ಚಾಣಕ್ಯ ನೀತಿ