ದುರ್ಗಾಮಾತೆಯ ವೈವಾಹಿಕ ಅವತಾರವಾಗಿರುವ ಚಂದ್ರಘಂಟೆಯನ್ನು ನವರಾತ್ರಿಯ ಮೂರನೇ ದಿನ ಆರಾಧಿಸಲಾಗುತ್ತೆ. ತೇಜಸ್ವಿ ಸ್ವರೂಪಿಯಾದ ಆದಿಶಕ್ತಿಯ ಆರಾಧನೆ ಎಲ್ಲೆಡೆ ನಡೆಯುತ್ತದೆ. ನವರಾತ್ರಿ ದಿನಗಳಲ್ಲಿ ದುರ್ಗೆಯನ್ನು ಆರಾಧಿಸುವುದರಿಂದ ವಿಶೇಷ ಶಕ್ತಿ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆ. ನವರಾತ್ರಿಯ ಮೂರನೇ ದಿನವಾದ ಇಂದು ನವದುರ್ಗೆಯರಲ್ಲಿ ಮೂರನೇ ಶಕ್ತಿಯಾದ ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತೆ.
ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಎಂದರ್ಥ. ಚಂದ್ರಘಂಟಾ ದೇವಿ ಸದಾ ಯುದ್ಧಕ್ಕೆ ಸನ್ನದ್ಧಳಾಗಿ ಹೊರಟಂತೆ ಕಾಣುತ್ತಾಳೆ. ದೇವಿಯ ಚಂದ್ರಘಂಟಾ ರೂಪದ ಮೂಲಕ ದುಷ್ಟರ ದಮನ, ಶಿಷ್ಟರ ರಕ್ಷಣೆಗೆ ಸದಾಕಾಲಸನ್ನದ್ಧಳಾಗಿರ್ತಾಳೆ. ಚಂದ್ರಘಂಟಾ ಮಾತೆ ಸಕಲ ಐಶ್ವರ್ಯ, ಅಧಿಕಾರವನ್ನು ಕರುಣಿಸುವ ದೇವತೆ. ನವರಾತ್ರಿಯ 3ನೇ ದಿನ ಇವಳನ್ನು ಪೂಜಿಸಿದ್ರೆ ಭಕ್ತರ ಕಷ್ಟಗಳು ಬಹು ಬೇಗ ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.
ಚಂದ್ರಘಂಟಾ ದೇವಿಯ ಕಥೆ
ಹೊಸದಾಗಿ ಮದುವೆಯಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟ ರೂಪದಲ್ಲಿ ಕಾಣಬಹುದು. ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ.
ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟಾ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.
ಇನ್ನು ದೇವಿಯ ಚಂದ್ರಘಂಟಾ ಸ್ವರೂಪ ಆರಾಧನೆಗೆ ಒಂದು ಮಂತ್ರವಿದೆ. ಈ ದೇವಿಯ ಮಂತ್ರ ಜಪಿಸುವುದರಿಂದ ರಕ್ಷಣೆ, ಶಕ್ತಿ ಸಿಗುತ್ತೆ ಅನ್ನೋ ನಂಬಿಕೆ ಇದೆ. ಹೀಗಾಗೇ ಚಂದ್ರಘಂಟಾ ಪೂಜಾ ಮಂತ್ರ ಹೇಳಿ ಈ ದಿನ ದೇವಿಯ ಆರಾಧನೆ ಮಾಡಲಾಗುತ್ತೆ.
ಚಂದ್ರಘಂಟಾ ಪೂಜಾ ಮಂತ್ರ
ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ
ಚಂದ್ರಘಂಟಾ ದೇವಿಯ ಪೂಜಾ ವಿಧಿ
ಚಂದ್ರಘಂಟಾ ದೇವಿಗೆ ಮಲ್ಲಿಗೆ ಹೂವು ಅರ್ಪಿಸಿ ಪೂಜೆ ಮಾಡಿ ಹಾಗೂ ಧ್ಯಾನವನ್ನು ಮಾಡಬೇಕು. 16 ವಿಧದ ಅರ್ಪಣೆಯನ್ನು ನೀಡಿ, ಆರತಿ ಮಾಡಿ ಕುಟುಂಬದ ಶ್ರೇಯಸ್ಸಿಗಾಗಿ ಚಂದ್ರಘಂಟಾಯನ್ನು ಪ್ರಾರ್ಥಿಸಿ.
ಚಂದ್ರಘಂಟಾ ಪೂಜಾ ಫಲ
* ಪಾಪ ಪರಿಹಾರ
* ಭಯ ದೂರ
* ದುಷ್ಟಶಕ್ತಿಗಳಿಂದ ರಕ್ಷಣೆ
* ಸಾಧಕರಿಗೆ ಆಧ್ಯಾತ್ಮಿಕ ಅನುಭವ
* ಸೌಮ್ಯತೆ -ವಿನಮ್ರತೆ ಪ್ರಾಪ್ತಿ
* ಕೌಟುಂಬಿಕ ಜೀವನದಲ್ಲಿ ನೆಮ್ಮದಿ
* ಇಹ-ಪರಲೋಕದಲ್ಲಿ ಸದ್ಗತಿ
ನವರಾತ್ರಿಯ ದುರ್ಗಾ ಉಪಾಸನೆಯಲ್ಲಿ 3ನೇ ದಿನದ ಪೂಜೆ ವಿಶೇಷವಾದುದು. ಈ ದಿನ ಸಾಧಕನ ಮನಸ್ಸು ಮಣಿಪೂರ ಚಕ್ರದಲ್ಲಿ ಪ್ರವೇಶಿಸುತ್ತೆ. ಚಂದ್ರಘಂಟೆಯ ಕೃಪೆಯಿಂದ ಸಾಧಕರಿಗೆ ವಿಶೇಷ ಅನುಭೂತಿಯಾಗುತ್ತೆ. ಹೀಗೇ ನವರಾತ್ರಿಯ ಮೂರನೇ ದಿನ ವಿಶೇಷ ಫಲ ಪ್ರಾಪ್ತಿಗಾಗಿ ಚಂದ್ರಘಂಟಾ ದೇವಿಯನ್ನು ಭಕ್ತರು ಶ್ರದ್ಧಾ ಭಕ್ತಿಯಿಂದ ಪೂಜಿಸ್ತಾರೆ.
ಇದನ್ನೂ ಓದಿ: ದುರ್ಗಾ ಮಾತೆ ವೇಷದಲ್ಲಿ ಸಂಜನಾ ಗಲ್ರಾನಿ; ನವರಾತ್ರಿ ಪ್ರಯುಕ್ತ ವಿಶೇಷ ಫೋಟೋಶೂಟ್