Deepavali 2022: ಕಾರ್ತಿಕ ಸ್ನಾನ ಎಂದರೇನು? ಅದರ ಆಚರಣೆ ಹೇಗೆ? ಫಲವೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 25, 2022 | 12:36 PM

ದಸರಾ ಹಬ್ಬದ ನಂತರ ಬರುವ ಹುಣ್ಣಿಮೆಯಿಂದ ಆರಂಭಿಸಿ ಒಂದು ತಿಂಗಳುಗಳ ಕಾಲ ಅಂದರೆ ಕಾರ್ತಿಕ ಮಾಸದ ಹುಣ್ಣಿಮೆಯ ವರೆಗೆ ತೀರ್ಥಸ್ನಾನ ಮಾಡಲು ವಿಶೇಷವಾದ ಕಾಲ.

Deepavali 2022: ಕಾರ್ತಿಕ ಸ್ನಾನ ಎಂದರೇನು? ಅದರ ಆಚರಣೆ ಹೇಗೆ? ಫಲವೇನು?
ಸಾಂದರ್ಭಿಕ ಚಿತ್ರ
Follow us on

ಸನಾತನ ಹಿಂದೂಧರ್ಮದ ಪ್ರಕಾರ ಸ್ನಾನಕ್ಕೂ ಮಹತ್ತರವಾದ ಸ್ಥಾನವಿದೆ. ಅಲ್ಲದೇ ಸಮುದ್ರ ಸ್ನಾನ, ನದಿಸ್ನಾನ ತೀರ್ಥಕ್ಷೇತ್ರಗಳಲ್ಲಿ ಸ್ನಾನ ಮಾಡಲು ವಿಶೇಷವಾದ ದಿನಗಳನ್ನು ಹೇಳಿದ್ದಾರೆ. ಇಂದು ನಾವು ಆಶ್ವಯುಜ ಮಾಸದ ಪೂರ್ಣಿಮೆಯಿಂದ ಆರಂಭಿಸಿ ಕಾರ್ತಿಕ ಮಾಸದ ಅಂತ್ಯದ ವರೆಗೆ ಮಾಡಲ್ಪಡುವ ಕಾರ್ತಿಕ ಸ್ನಾನದ ಬಗ್ಗೆ ತಿಳಿಯೋಣ. ದಸರಾ ಹಬ್ಬದ ನಂತರ ಬರುವ ಹುಣ್ಣಿಮೆಯಿಂದ ಆರಂಭಿಸಿ ಒಂದು ತಿಂಗಳುಗಳ ಕಾಲ ಅಂದರೆ ಕಾರ್ತಿಕ ಮಾಸದ ಹುಣ್ಣಿಮೆಯ ವರೆಗೆ ತೀರ್ಥಸ್ನಾನ ಮಾಡಲು ವಿಶೇಷವಾದ ಕಾಲ. ಈ ಒಂದು ತಿಂಗಳಲ್ಲಿ ಸೂರ್ಯೋದಯಕ್ಕಿಂತ ಮುಂಚೆ ಸುಮಾರು ಎರಡು ಘಟಿ (ಒಂದು ಘಟಿ ಅಂದರೆ ಅಂದಾಜು 20 ನಿಮಿಷ) ಮೊದಲು ಮಾಡುವ ತೀರ್ಥ ಸ್ನಾನಕ್ಕೆ ಕಾರ್ತಿಕ ಸ್ನಾನವೆನ್ನುವರು. ಅಕಸ್ಮತ್ತಾಗಿ ತೀರ್ಥ ಕ್ಷೇತ್ರಗಳಿಗೆ ಹೋಗಲು ಅಸಾಧ್ಯವಾದರೂ ತೀರ್ಥಕ್ಷೇತ್ರಗಳ ನೀರನ್ನು ಬಳಸಿ ಸ್ನಾನಮಾಡುವುದು. ಆದರೆ ಇದರ ಪೂರ್ವದಲ್ಲಿ ಸಂಕಲ್ಪವನ್ನು ಮಾಡಬೇಕು. ಮಹಾವಿಷ್ಣೋಃ ಅನುಗ್ರಹ ಪ್ರಾಪ್ತ್ಯರ್ಥಂ ತೀರ್ಥಸ್ನಾನಂ ಕರಿಷ್ಯೇ ಎಂದು ಹೇಳಿ ಈ ಕೆಳಗಿನ ಮಂತ್ರವನ್ನು ಉಚ್ಚರಿಸಿದ ನಂತರ ಸ್ನಾನ ಮಾಡಬೇಕು. –

ನಮಃ ಕಮಲನಾಭಾಯ ನಮಸ್ತೇ ಜಲಶಾಯಿನೇ |

ನಮಸ್ತೇಸ್ತು ಹೃಷೀಕೇಶ ಗೃಹಾಣಾರ್ಘ್ಯಂ ನಮೋಸ್ತುತೇ || ಎಂದು ಹೇಳಿ ಮೊದಲಿಗೆ ಅರ್ಘ್ಯವನ್ನು ನೀಡಬೇಕು.

ಕಾರ್ತಿಕೇಹಂ ಕರಿಷ್ಯಾಮಿ ಪ್ರಾತಃ ಸ್ನಾನಂ ಜನಾರ್ದನ |

ಪ್ರೀತ್ಯರ್ಥಂ ತವ ದೇವೇಶ ದಾಮೋದರ ಮಹಾಶಯ ||

ಧ್ಯಾತ್ವಾಹಂ ತ್ವಾಂ ಚ ದೇವೇಶ ಜಲೇಸ್ಮಿನ್ ಸ್ನಾತು ಮುದ್ಯತಃ |

ತವ ಪ್ರಸಾದಾತ್ ಪಾಪಂ ಮೇ ದಾಮೋದರ ವಿನಶ್ಯತು || ಈ ಮಂತ್ರವನ್ನು ಹೇಳುತ್ತಾ ಸ್ನಾನ ಮಾಡುವುದು.

ಈ ರೀತಿ ಕಾರ್ತಿಕ ಮಾಸದಲ್ಲಿ ಸ್ನಾನ ಮಾಡಿದರೆ ಮಹಾವಿಷ್ಣುವಿನ ಅನುಗ್ರಹದಿಂದ ಸರ್ವಪಾಪವೂ ನಾಶವಾಗಿ ಸಂಪತ್ತು ವೃದ್ಧಿಯಾಗುವುದು. ಶಾಸ್ತ್ರದಲ್ಲಿ ನಿತ್ಯೇ ನೈಮಿತ್ತಿಕೇ ಕೃಷ್ಣಕಾರ್ತಿಕೇ ಪಾಪನಾಶನೇ ಈ ರೀತಿಯ ಮಾತಿದೆ. ನಿತ್ಯದಲ್ಲಿ ಹಾಗೆಯೇ ಯಾವುದಾದರೊಂದು ಧರ್ಮಕಾರ್ಯ ನಿಮಿತ್ತವಾಗಿ ಸ್ನಾನ ಮಾಡಿದರೆ ಬಾಹ್ಯ ಪಾಪನಾಶವಾಗುವುದು. ಕಾರ್ತಿಕ ಮಾಸದ ಸ್ನಾನದಿಂದ ಅಂತರಂಗದ ಪಾಪವೂ ನಾಶವಾಗುವುದು. ಪ್ರತೀ ದಿನ ಸ್ನಾನದ ನಂತರ ಹಣೆಗೆ ತಿಲಕವನ್ನಿಟ್ಟು

ವ್ರತಿನಃ ಕಾರ್ತಿಕೇ ಮಾಸಿ ಸ್ನಾತಸ್ಯ ವಿಧಿವತ್ ಮಮ |

ಗೃಹಾಣಾರ್ಘ್ಯಂ ಮಯಾದತ್ತಂ ರಾಧಯಾ ಸಹಿತೋ ಹರೇ ||

ಈ ಮಂತ್ರವನ್ನು ಹೇಳಿ ಪೂರ್ವಾಭಿಮುಖವಾಗಿ ನಿತ್ತು ಅಂಜಲಿಯಲ್ಲಿ (ಬೊಗಸೆಯಲ್ಲಿ) ನೀರನ್ನು ತುಂಬಿಸಿ ತುಳಸಿ ಗಿಡಕ್ಕೆ ಬಿಡುವುದು. ಇದರಿಂದ ಸರ್ವ ಅಮಂಗಲ ದೂರವಾಗಿ ಮನೆಯಲ್ಲಿ ನೆಮ್ಮದಿಯ ವೃದ್ಧಿ ಆಗುವುದು. ಹಾಗೆಯೇ ಕಾರ್ತಿಕದಲ್ಲಿ ಅಷ್ಟಾಕ್ಷರೀ ಮಂತ್ರದ ಜಪ ಮಾಡಿದರೆ ಅತ್ಯುತ್ತಮ. ಅಷ್ಟಾಕ್ಷರೀಮಂತ್ರ ಓಂ ನಮೋ ನಾರಾಯಣಾಯ ಎಂದು.ಈ ಮಂತ್ರವನ್ನು ಜಪಿಸಿ ಹವಿಷ್ಯಾನ್ನ ಅಂದರೆ ತುಪ್ಪದ ಅನ್ನವನ್ನು ಲಕ್ಷ್ಮೀ ಸಹಿತನಾದ ನಾರಾಯಣನಿಗೆ ನೈವೇದ್ಯ ಮಾಡಿ ಸ್ವೀಕಾರ ಮಾಡಿದರೆ ಆ ಮನೆಯಲ್ಲಿ ಭಾಗ್ಯವೃದ್ಧಿಯಾಗುವುದು. ಸಂತಾನವಿಲ್ಲದಿದ್ದಲ್ಲಿ ಸತ್ಸಂತಾನ ಫಲ ಪ್ರಾಪ್ತವಾಗುವುದು (ಇದಕ್ಕೆ ಒಂದು ವಿಧಿಯಿದೆ ಅದನ್ನು ಬಲ್ಲವರಲ್ಲಿ ತಿಳಿದು ಮಾಡಿರಿ. ಬಹಳ ಜನರಿಗೆ ಸಂತಾನವಾದ ಉದಾಹರಣೆಗಳಿವೆ).
ಹಾಗೆಯೇ ಕಾರ್ತಿಕ ಸ್ನಾನವನ್ನು ತೀರ್ಥಕ್ಷೇತ್ರಗಳಿಗೆ ಹೋಗಿ ಮಾಡಿದರೆ ಇನ್ನೂ ಹೆಚ್ಚಿನ ಫಲವಿದೆ. ವಿಶೇಷವಾಗಿ ವಿಷ್ಣು ಸಂಬಂಧಿತ ತೀರ್ಥಕ್ಷೇತ್ರಗಳ ಸ್ನಾನ ಕಾರ್ತಿಕ ಮಾಸದಲ್ಲಿ ಅತ್ಯಂತ ಫಲದಾಯಕ.

ಡಾ.ಕೇಶವಕಿರಣ ಬಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು, kkmanasvi@gamail.com