Dhanteras: ಧನತ್ರಯೋದಶಿಯ ಪೌರಾಣಿಕ ಹಿನ್ನೆಲೆ ಏನು? ಅಸಲಿಗೆ ಲಕ್ಷ್ಮಿ ಪೂಜೆ ಮಾಡುವುದಾದರೂ ಏಕೆ ಗೊತ್ತಾ!?
ಧನತ್ರಯೋದಶಿಯ ದಿನ ಲಕ್ಷ್ಮೀ ಪೂಜೆ ಮಾಡುವುದು ರೂಢಿ. ಲೋಭದಿಂದಲ್ಲದೆ ಪ್ರೇಮದಿಂದ ಲಕ್ಷ್ಮೀದೇವಿಯನ್ನು ಪೂಜಿಸಿ. ಶ್ರಮ ಮತ್ತು ಪ್ರಾಮಾಣಿಕವಾಗಿ ಗಳಿಸಿದ ಸಂಪತ್ತನ್ನು ಶ್ರದ್ಧೆಯಿಂದ ಪೂಜಿಸಿ. ಹೀಗೆ ಮಾಡಿದರೆ ಲಕ್ಷ್ಮಿ ನಿಮ್ಮೊಡನೆ ಮಾತ್ರವಲ್ಲ, ನಿಮ್ಮ ಕುಟುಂಬದ ಮುಂದಿನ ಮೂರು ತಲೆಮಾರುಗಳ ಕಾಲವೂ ನೆಲೆಸುವುದು ಖಚಿತ!
ಒಮ್ಮೆ ಲಕ್ಷ್ಮೀ ಮತ್ತು ನಾರಾಯಣರು ಲೋಕ ಸಂಚಾರ ಮಾಡುತ್ತಾ ಭೂಮಿಗೆ ಬರುತ್ತಾರೆ. ಭೂಮಿಯಲ್ಲಿ ವಿಹರಿಸುತ್ತಾ, ಇದ್ದಕ್ಕಿದ್ದಂತೆ ನಾರಾಯಣ ಮಹಾಲಕ್ಷ್ಮಿಯನ್ನು ಅಲ್ಲಿಯೇ ಒಂದೆಡೆ ನಿಲ್ಲುವಂತೆ ಹೇಳಿ ತಾನೊಬ್ಬನೇ ಮುಂದೆ ಹೋಗುತ್ತಾನೆ. ಯಾವುದೇ ಕಾರಣಕ್ಕೂ ನೀನು ಇಲ್ಲಿಂದ ಕದಲಬೇಡ ಎಂದು ಲಕ್ಷ್ಮಿಗೆ ತಾಕೀತು ಮಾಡುತ್ತಾನೆ. ಆದರೆ, ಚಂಚಲೆಯಾದ ಮಹಾಲಕ್ಷ್ಮಿ ನಾರಾಯಣ ಹೊರಟುಹೋದ ನಂತರ ಕುತೂಹಲ ತಡೆಯಲಾಗದೇ ಅಲ್ಲಿಂದ ತಾನೂ ಹೊರಟು ಬಿಡುತ್ತಾಳೆ.
ಭೂಮಿಯಲ್ಲಿ ಮುಂದೆ ನಡೆಯುತ್ತಾ ನಡೆಯುತ್ತಾ ಒಂದು ಹೊಲಕ್ಕೆ ಬರುತ್ತಾಳೆ. ಅಲ್ಲಿ ಬೆಳೆದ ಕಬ್ಬು ನೋಡಿ ಆಸೆ ಪಟ್ಟು ಅದನ್ನು ಕಿತ್ತು ತಿನ್ನುತ್ತಾಳೆ. ಅಲ್ಲಿ ಬೆಳೆದ ಹೂಗಳನ್ನು ಕಂಡು ಕಿತ್ತು, ತನ್ನನ್ನು ಆ ಹೂಗಳಿಂದ ಸಿಂಗರಿಸಿಕೊಳ್ಳುತ್ತಾಳೆ.
ಆ ಹೊತ್ತಿಗೆ ಅಲ್ಲಿಗೆ ಬರುವ ಮಹಾವಿಷ್ಣು, ತನ್ನ ಮಾತನ್ನು ಮೀರಿ ಬಂದ ಲಕ್ಷ್ಮಿಯನ್ನು ಕಂಡು ಬೇಸರಪಡುತ್ತಾನೆ. “ದೇವತೆಗಳು ಭೂಮಿಯ ಜನರಿಂದ ಏನಾದರೂ ಪಡೆದರೆ ಅವರೊಡನೆ ಕನಿಷ್ಠ 12 ವರ್ಷ ನೆಲೆಸಬೇಕಾಗುತ್ತದೆ. ನೀನು ಇದೇನು ಕೆಲಸ ಮಾಡಿಬಿಟ್ಟೆ” ಎಂದು ವಿಷಾದಪಡುತ್ತಾನೆ.
“ನಿಯಮದಂತೆ ನೀನು ಮುಂದಿನ 12 ವರ್ಷ ಕಾಲ ಇಲ್ಲೇ ಈ ರೈತನ ಹೊಲದಲ್ಲೆ ನೆಲೆಸಿರಬೇಕು. ಅನಂತರವಷ್ಟೆ ನೀನು ವೈಕುಂಠಕ್ಕೆ ಮರಳಬಹುದು” ಎಂದು ಹೇಳಿ ಹೊರಟುಹೋಗುತ್ತಾನೆ. ಅದರಂತೆ ಮಹಾಲಕ್ಷ್ಮಿಯು ಆ ಬಡ ರೈತನ ಹೊಲದ ಮನೆಯಲ್ಲಿಯೇ 12 ವರುಷಗಳ ಕಾಲ ನೆಲೆಸಿ ಬಿಡುತ್ತಾಳೆ.
ಲಕ್ಷ್ಮಿ ನೆಲೆನಿಂತ ಸ್ಥಳದಲ್ಲಿ ಬಡತನ ಇರಲು ಸಾಧ್ಯವೇ? ರೈತನ ಹೊಲದಲ್ಲಿ ಬಂಗಾರದ ಬೆಳೆ ತುಂಬಿಹೋಗುತ್ತದೆ. ಆತ ಶ್ರೀಮಂತನಾಗುತ್ತಾನೆ. ಇದಕ್ಕೆಲ್ಲಾ ತನ್ನ ಹೊಲದಲ್ಲಿ ನೆಲೆಸಿರುವ ತಾಯಿ ಲಕ್ಷ್ಮಿಯೇ ಕಾರಣವೆಂದು ಅರಿತು, ಪತ್ನಿಯೊಡನೆ ಆಕೆಯನ್ನು ಉಪಚರಿಸಿ ಪೂಜಿಸುತ್ತಾನೆ.
ಹೀಗೆ 12 ವರ್ಷಗಳು ಕಳೆದು ಲಕ್ಷ್ಮಿ ವೈಕುಂಠಕ್ಕೆ ಮರಳುವ ದಿನ ಬರುತ್ತದೆ. ಸ್ವತಃ ಮಹಾವಿಷ್ಣುವೇ ಅವಳನ್ನು ಕರೆದೊಯ್ಯಲು ಬರುತ್ತಾನೆ. ಆದರೆ ರೈತನೂ ಆತನ ಪತ್ನಿಯೂ ಲಕ್ಷ್ಮಿ ನಮ್ಮ ತಾಯಿ, ನಾವು ಆಕೆಯನ್ನು ಕಳುಹಿಸಲಾರೆವು ಎಂದು ಹಠ ಹಿಡಿಯುತ್ತಾರೆ.
ಅವರ ವಾತ್ಸಲ್ಯಕ್ಕೆ ಲಕ್ಷ್ಮೀನಾರಾಯಣರು ಕಟ್ಟುಬೀಳುತ್ತಾರೆ. ಕೊನೆಗೆ ಅವರ ಪ್ರೀತಿಗೆ ಮಣಿಯುವ ನಾರಾಯಣ, “ನಾಳೆ ಆಶ್ವಯುಜ ಕೃಷ್ಣ ತ್ರಯೋದಶಿ. ತನುಮನ ಶುದ್ಧಿಯಿಂದ ಕಳಶದಲ್ಲಿ ಲಕ್ಷ್ಮಿಯನ್ನು ಆವಾಹಿಸಿ ಪೂಜಿಸಿದರೆ ಲಕ್ಷ್ಮಿ ತನ್ನ ಒಂದಂಶದಿಂದ ಸದಾ ನಿಮ್ಮೊಡನೆ ನೆಲೆಸುತ್ತಾಳೆ. ಈ ದಿನ ಯಾರೆಲ್ಲರೂ ಶ್ರದ್ಧಾಭಕ್ತಿಯಿಂದ ಲಕ್ಷ್ಮೀಪೂಜೆ ಮಾಡುತ್ತಾರೋ ಅವರ ಸಂಪತ್ತು ವೃದ್ಧಿಯಾಗುತ್ತದೆ” ಎಂದು ಭರವಸೆ ನೀಡುತ್ತಾನೆ.
ಧನತ್ರಯೋದಶಿಯ ದಿನ ಲಕ್ಷ್ಮೀ ಪೂಜೆ ಮಾಡುವ ರೂಢಿ ಶುರುವಾಗಿದ್ದು ಹೀಗೆ ಅನ್ನುತ್ತವೆ ಪುರಾಣ ಕಥೆಗಳು. ಆದ್ದರಿಂದ, ಲೋಭದಿಂದಲ್ಲದೆ ಪ್ರೇಮದಿಂದ ಲಕ್ಷ್ಮೀದೇವಿಯನ್ನು ಪೂಜಿಸಿ. ಆಶ್ವಯುಜ ತ್ರಯೋದಶಿಯಂದು ದೀಪದಾನ ಶ್ರೇಷ್ಠವೆನ್ನುತ್ತಾರೆ. ಮಣ್ಣಿನ ಹಣತೆಗಳನ್ನು ಕೊಂಡು ದಾನ ನೀಡಿದರೆ ಸಣ್ಣಮಟ್ಟದ ಕುಶಲಕಾರ್ಮಿಕರಿಗೂ ಒಂದಷ್ಟು ವ್ಯಾಪಾರವಾಗುತ್ತದೆ. ನೀವು ದಾನ ನೀಡುವುದು ಎಲ್ಲ ಬಗೆಯಲ್ಲಿ ಸಾರ್ಥಕವೂ ಆಗುತ್ತದೆ. ಲಕ್ಷ್ಮಿಯನ್ನು ಪೂಜಿಸುವುದು ಎಂದರೆ ಸಂಪತ್ತನ್ನು ಗೌರವಿಸುವುದು ಎಂದು. ಶ್ರಮದ ದುಡಿಮೆಯ ಸಂಪತ್ತು ಮಾತ್ರವೇ ಗೌರವಕ್ಕೆ ಅರ್ಹವಾದುದು. ಆದ್ದರಿಂದ ಶ್ರಮ ಮತ್ತು ಪ್ರಾಮಾಣಿಕವಾಗಿ ಗಳಿಸಿದ ಸಂಪತ್ತನ್ನು ಶ್ರದ್ಧೆಯಿಂದ ಪೂಜಿಸಿ. ಹೀಗೆ ಮಾಡಿದರೆ ಲಕ್ಷ್ಮಿ ನಿಮ್ಮೊಡನೆ ಮಾತ್ರವಲ್ಲ, ನಿಮ್ಮ ಕುಟುಂಬದ ಮುಂದಿನ ಮೂರು ತಲೆಮಾರುಗಳ ಕಾಲವೂ ನೆಲೆಸುವುದು ಖಚಿತ! (ಲೇಖನ: ರವಿಶಾಸ್ತ್ರಿ ಸೋಮಶೇಖರ್)
Published On - 1:01 pm, Mon, 24 October 22