ಎಮರ್ಜೆನ್ಸಿ ಟ್ರೇಲರ್: ಸೋಲಿನ ಸುಳಿಗೆ ಸಿಲುಕಿದ್ದ ಕಂಗನಾಗೆ ಈಗ ಗೆಲುವಿನ ನಿರೀಕ್ಷೆ
ನಟಿ ಕಂಗನಾ ರಣಾವತ್ ಅವರು ಗೆಲುವು ಕಂಡು ಬಹಳ ದಿನಗಳೇ ಕಳೆದಿವೆ. ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆ ಆದ ಅವರ ಎಲ್ಲ ಸಿನಿಮಾಗಳೂ ಸೋತಿವೆ. ಅವರಿಗೆ ಈಗ ನಿರೀಕ್ಷೆ ಇರುವುದು ‘ಎಮರ್ಜೆನ್ಸಿ’ ಸಿನಿಮಾದ ಮೇಲೆ. ಈ ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ಕಂಗನಾ ರಣಾವತ್ ಅವರು ಮಾಡಿದ್ದಾರೆ. ಈಗ ಈ ಸಿನಿಮಾದ 2ನೇ ಟ್ರೇಲರ್ ಬಿಡುಗಡೆ ಆಗಿದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಆಧರಿಸಿ ‘ಎಮರ್ಜೆನ್ಸಿ’ ಸಿನಿಮಾ ಮೂಡಿಬಂದಿದೆ. ಎಲ್ಲವೂ ಪ್ಲ್ಯಾನ್ ಪ್ರಕಾರವೇ ನಡೆದಿದ್ದರೆ ಈಗಾಗಲೇ ಈ ಸಿನಿಮಾ ಬಿಡುಗಡೆ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಯಿತು. ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆಗೆ ಈಗ ಸಮಯ ಕೂಡಿಬಂದಿದೆ. ಜನವರಿ 17ರಂದು ಈ ಚಿತ್ರ ತೆರೆಕಾಣಲಿದೆ. ಈ ಮೊದಲು ಟ್ರೇಲರ್ ಬಿಡುಗಡೆ ಮಾಡಲಾಗಿತ್ತು. ರಿಲೀಸ್ ದಿನಾಂಕ ಹತ್ತಿರ ಆಗುತ್ತಿರುವ ಈ ಸಂದರ್ಭದಲ್ಲಿ ಸಿನಿಮಾದ ಎರಡನೇ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಇದನ್ನು ನೋಡಿ ಸಿನಿಪ್ರಿಯರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.
ರಿಯಲ್ ಘಟನೆ ಆಧಾರಿತ ಸಿನಿಮಾಗಳನ್ನು ಮಾಡುವಾಗ ಬಹಳಷ್ಟು ಎಚ್ಚರಿಕೆ ವಹಿಸಬೇಕು. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ದಿನಗಳನ್ನು ಕೇಂದ್ರವಾಗಿಟ್ಟುಕೊಂಡು ‘ಎಮರ್ಜೆನ್ಸಿ’ ಸಿನಿಮಾವನ್ನು ಮಾಡಲಾಗಿದೆ. ಆದರೆ ಮುಖ್ಯವಾದ ಅಂಶಗಳನ್ನು ಬಿಟ್ಟು, ಕೇವಲ ವಿವಾದದ ಕಡೆಗೆ ಕಂಗನಾ ಅವರು ಈ ಸಿನಿಮಾದಲ್ಲಿ ಹೆಚ್ಚು ಮಹತ್ವ ನೀಡಿದಂತಿದೆ ಎಂದು ಕೆಲವರು ತಕರಾರು ತೆಗೆದಿದ್ದಾರೆ.
ಇದನ್ನೂ ಓದಿ: ವಯಸ್ಸಾದವರಿಗೂ ಇವರು ‘ಕಿಡ್ಸ್’ ಅಂತಾರೆ; ಸ್ಟಾರ್ ಮಕ್ಕಳ ಬಗ್ಗೆ ಕಂಗನಾ ನೇರ ಟೀಕೆ
‘ಎಮರ್ಜೆನ್ಸಿ’ ಸಿನಿಮಾದಲ್ಲಿ ಇಂದಿರಾ ಗಾಂಧಿಯಾಗಿ ಕಂಗನಾ ಕಾಣಿಸಿಕೊಂಡಿದ್ದಾರೆ. ಸ್ವತಃ ಕಂಗನಾ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಟ್ರೇಲರ್ನಲ್ಲಿ ಕಂಗನಾ ಅವರ ನಟನೆಯನ್ನು ನೋಡಿ ಹಲವರಿಗೆ ಇಷ್ಟ ಆಗಿದೆ. ಈ ಸಿನಿಮಾದಿಂದ ಕಂಗನಾ ಮತ್ತೊಮ್ಮೆ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಆದರೆ ಕೆಲವರಿಗೆ ಕಂಗನಾ ಧ್ವನಿ ಕಿರಿಕಿರಿ ಎನಿಸಿದೆ. ಒಟ್ಟಾರೆ ಅವರ ನಟನೆ ಮಿಮಿಕ್ರಿ ರೀತಿ ಇದೆ ಎಂದು ಕೂಡ ಒಂದಷ್ಟು ಮಂದಿ ಟೀಕಿಸಿದ್ದಾರೆ.
‘ಎಮರ್ಜೆನ್ಸಿ’ ಸಿನಿಮಾದ ಟ್ರೇಲರ್:
ಟ್ರೇಲರ್ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಸಿನಿಮಾವನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಕೌತುಕ ಮೂಡಿದೆ. ಈ ಚಿತ್ರದಲ್ಲಿ ದೊಡ್ಡ ತಾರಾಗಣ ಇದೆ. ಕಂಗನಾ ರಣಾವತ್ ಜೊತೆ ಶ್ರೇಯಸ್ ತಲ್ಪಡೆ, ಅನುಪಮ್ ಖೇರ್, ಮಹಿಮಾ ಚೌದರಿ, ಸತೀಶ್ ಕೌಶಿಕ್, ಮಿಲಿಂದ್ ಸೋಮನ್ ಮುಂತಾದವರು ನಟಿಸಿದ್ದಾರೆ. ಜನವರಿ 17ಕ್ಕೆ ಬಿಡುಗಡೆ ಆಗಲಿರುವ ‘ಎಮರ್ಜೆನ್ಸಿ’ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ? ಯಾವ ರೀತಿಯ ವಿಮರ್ಶೆಯನ್ನು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.