Bangara Tirupati: ಮೂರನೇ ಶ್ರಾವಣ ಶನಿವಾರ, ಬಂಗಾರದಂತಹ ಭಕ್ತಿಯಲಿ ಮಿಂದೆದ್ದ ಭಕ್ತರು! ಆದರೆ ಮುಜರಾಯಿ ಇಲಾಖೆ ದಿವ್ಯ ನಿರ್ಲ್ಯಕ್ಷ

| Updated By: ಸಾಧು ಶ್ರೀನಾಥ್​

Updated on: Aug 20, 2022 | 3:47 PM

Shravana Masa: ಇಂದು ಶ್ರಾವಣ ಮಾಸದ ಮೂರನೇ ಶನಿವಾರ, ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ಭಕ್ತರ ದಂಡೇ ಹರಿದು ಬರುತ್ತಿದೆ. ಹಾಗೆಂದೇ ಚಿನ್ನದ ನಾಡು ಕೋಲಾರದಲ್ಲಿರುವ ಬಂಗಾರ ತಿರುಪತಿಯ ನೇತ್ರ ವೆಂಕಟೇಶ್ವರ ಸ್ವಾಮಿಯನ್ನು ನೇತ್ರ ತುಂಬಿಕೊಂಡ ಭಕ್ತರು ಸ್ವಾಮಿಯ ಬಂಗಾರದಂತಹ ಭಕ್ತಿಯಲಿ ಮಿಂದೆದ್ದರು.

Bangara Tirupati: ಮೂರನೇ ಶ್ರಾವಣ ಶನಿವಾರ, ಬಂಗಾರದಂತಹ ಭಕ್ತಿಯಲಿ ಮಿಂದೆದ್ದ ಭಕ್ತರು! ಆದರೆ ಮುಜರಾಯಿ ಇಲಾಖೆ ದಿವ್ಯ ನಿರ್ಲ್ಯಕ್ಷ
ಮೂರನೇ ಶ್ರಾವಣ ಶನಿವಾರ, ಬಂಗಾರದಂತಹ ಭಕ್ತಿಯಲಿ ಮಿಂದೆದ್ದ ಭಕ್ತರು! ಆದರೆ ಮುಜರಾಯಿ ಇಲಾಖೆ ದಿವ್ಯ ನಿರ್ಲ್ಯಕ್ಷ
Follow us on

ಇಂದು ಶ್ರಾವಣ ಮಾಸದ (Shravana Masa) ಮೂರನೇ ಶನಿವಾರ, ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ಭಕ್ತರ ದಂಡೇ ಹರಿದು ಬರುತ್ತಿದೆ. ಹಾಗೆಂದೇ ಚಿನ್ನದ ನಾಡು ಕೋಲಾರದಲ್ಲಿರುವ ಬಂಗಾರ ತಿರುಪತಿಯ (Bangara Tirupati) ನೇತ್ರ ವೆಂಕಟೇಶ್ವರ ಸ್ವಾಮಿಯನ್ನು ನೇತ್ರ ತುಂಬಿಕೊಂಡ ಭಕ್ತರು (Devotees) ಸ್ವಾಮಿಯ ಬಂಗಾರದಂತಹ ಭಕ್ತಿಯಲಿ ಮಿಂದೆದ್ದರು. ಏಡುಕೊಂಡಲವಾಡ ವೆಂಕಟರಮಣ, ಗೋವಿಂದ- ಹರಿ ಗೋವಿಂದ ಸ್ಮರಣೆ… ಜೋರಾಗಿಯೇ ಕೇಳಿಬರುತ್ತಿತ್ತು.

ಶ್ರಾವಣ ಮಾಸಕ್ಕೆ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭಕ್ತರ ದಂಡು..!

ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ಪುಣ್ಯ ಕ್ಷೇತ್ರ..!

ಶ್ರಾವಣ ಮಾಸದ ಮೂರನೇ ಶನಿವಾರದ ಅಂಗವಾಗಿ ಕೋಲಾರ ಜಿಲ್ಲೆ ಕೆಜಿಎಫ್​ ತಾಲ್ಲೂಕು ಗುಟ್ಟಹಳ್ಳಿಯ ಬಂಗಾರ ತಿರುಪತಿ ದೇವಾಲಯಕ್ಕೆ ಭಕ್ತರ ದೊಡ್ಡ ದಂಡು ಹರಿದು ಬಂದಿದೆ. ಬಂಗಾರ ತಿರುಪತಿ ನೇತ್ರ ವೆಂಕಟರಮಣ ಸ್ವಾಮಿಯ ದೇವಾಲಯದಲ್ಲಿ ಭಕ್ತ ಸಾಗರವೇ ಹರಿದು ಬಂದಿದೆ. ಮುಂಜಾನೆಯಿಂದಲೇ ಭಕ್ತರು ವೆಂಕಟರಮಣ ಸ್ವಾಮಿಯನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಸಾಲುಗಟ್ಟಿ ನಿಂತಿತ್ತು. ಮುಂಜಾನೆಯಿಂದಲೇ ದೇವಾಲಯದಲ್ಲಿ ವಿಶೇಷ ಅಭಿಶೇಕ, ದೇವರಿಗೆ ಅಲಂಕಾರ ಹಾಗೂ ಪೂಜೆಗಳು ನಡೆಯುತ್ತಿವೆ.

ಭೃಗು ಮಹರ್ಷಿಗಳು ತಪಸ್ಸು ಮಾಡಿದ್ದ ಸ್ಥಳವಿದು..!

ಬಂಗಾರ ತಿರುಪತಿ ಎಂದು ಕರೆಯಲಾಗುವ ಈ ಕ್ಷೇತ್ರ ಭೃಗು ಮಹರ್ಷಿಗಳು ತಪಸ್ಸು ಮಾಡಿದ ಸ್ಥಳವಾಗಿದ್ದು ಈ ಪ್ರದೇಶದಲ್ಲಿ ಭೃಗು ಮಹರ್ಷಿಗಳಿಗೆ ದರ್ಶನ ನೀಡಲು ಶ್ರೀವೆಂಕಟೇಶ್ವರ ಸ್ವಾಮಿಯು ನೇತ್ರದಲ್ಲಿ ದರ್ಶನ ನೀಡಿದ್ದ ಎಂಬ ಪ್ರತೀತಿ ಇದೆ. ಇದರ ಸಲುವಾಗಿ ಇಲ್ಲಿ ಆರು ಕಿಂಡಿಗಳಲ್ಲಿ ಒಂದೇ ಕಣ್ಣಿನಿಂದ ಭಕ್ತರು ವೆಂಕಟೇಶ್ವರಸ್ವಾಮಿಯ ದರ್ಶನ ಮಾಡುತ್ತಾರೆ. ಇದರ ಸಲುವಾಗಿ ನೇತ್ರ ವೆಂಕಟೇಶ್ವರ ಸ್ವಾಮಿ ಅನ್ನೋ ಹೆಸರು ಕೂಡಾ ಈ ಕ್ಷೇತ್ರಕ್ಕಿದೆ.

ಆರು ಕಿಂಡಿಗಳಲ್ಲಿ ದೇವರು ಭಕ್ತರಿಗೆ ದರ್ಶನ ನೀಡುವ ಮೂಲಕ, ಮನುಷ್ಯನಲ್ಲಿನ ಅರಿಷಡ್ವರ್ಗಗಳನ್ನು ನಿಯಂತ್ರಿಸಿ ಮನುಷ್ಯನನ್ನು ಪರಿಪೂರ್ಣನನ್ನಾಗಿಸುತ್ತದೆ ಅನ್ನೋ ನಂಬಿಕೆ ಇಲ್ಲಿದೆ. ಹಾಗಾಗಿಯೇ ಇಲ್ಲಿಗೆ ರಾಜ್ಯದ ನಾನಾಱ ಕಡೆಗಳಿಂದಷ್ಟೇ ಅಲ್ಲದೆ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಶ್ರಾವಣ ಮಾಸದಂದು ಆಗಮಿಸುತ್ತಾರೆ. ಮೂರನೇ ಮತ್ತು ನಾಲ್ಕನೇ ಶನಿವಾರ ಇಲ್ಲಿ ಜಾತ್ರೆ ನಡೆಯುತ್ತದೆ. ಇಲ್ಲಿಗೆ ಬರುವ ಸಾವಿರಾರು ಭಕ್ತರು ತಮ್ಮ ಹರಕೆಗಳನ್ನು ತೀರಿಸುತ್ತಾರೆ ಅನ್ನೋದು ಅರ್ಚಕರಾದ ವೆಂಕಟರಮಣಾಚಾರ್ ಅವರ ಮಾತು.​

ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ಪುಣ್ಯ ಕ್ಷೇತ್ರ..!

 

ಬಂಗಾರ ತಿರುಪತಿಯ ಶ್ರೀ ನೇತ್ರ ವೆಂಕಟರಮಣ ಸ್ವಾಮಿಯು ನೂರಾರು ವರ್ಷಗಳಿಂದ ಇಲ್ಲಿ ನೆಲೆಸಿ ಭಕ್ತರ ಕಷ್ಟಗಳನ್ನು ಪರಿಹರಿಸಿ, ಅವರ ಕೋರಿಕೆಗಳನ್ನು ಈಡೇರಿಸುತ್ತಾನೆ. ಅದಕ್ಕಾಗಿಯೇ ಪ್ರತಿ ಶ್ರಾವಣ ಮಾಸದಲ್ಲಿ ಲಕ್ಷಾಂತರ ಜನ ಭಕ್ತಾದಿಗಳು ಇಲ್ಲಿಗೆ ಆಗಮಿಸಿ ಶ್ರೀ ನೇತ್ರ ವೆಂಕಟರಮಣ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ. ಇಲ್ಲಿಗೆ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಿಂದ ಭಕ್ತ ಸಾಗರ ಹರಿದು ಬರುತ್ತದೆ. ಈ ವಿಶೇಷ ದಿನದಲ್ಲಿ ಭಕ್ತರು ವೆಂಕಟರಮಣ ಸ್ವಾಮಿಗೆ ತಮ್ಮ ಮುಡಿಕೊಟ್ಟು,ಇಲ್ಲಿನ ಕಲ್ಯಾಣಿಯಲ್ಲಿ ಸ್ನಾನ ಮಾಡಿ ವೆಂಕಟರಮಣ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ.

ಮುಜರಾಯಿ ಇಲಾಖೆಯ ದಿವ್ಯ ನಿರ್ಲ್ಯಕ್ಷ, ಭಕ್ತರ ಹಣ ವಸೂಲಿ..!

ಇನ್ನು ಈ ವಿಶೇಷ ದಿನಗಳಲ್ಲಿ ಸಾವಿರಾರು ಜನರು ದೇವಾಲಯಕ್ಕೆ ಬರುತ್ತಿರುವ ಹಿನ್ನೆಲೆ, ಇಲ್ಲಿಗೆ ಆಗಮಿಸುವ ಭಕ್ತರಿಂದ ಮುಡಿ ತೆಗೆಯಲು, ನಾಮ ಹಾಕಲು, ಸ್ನಾನ ಮಾಡಲು, ಹಾಗೂ ಪಾರ್ಕಿಂಗ್​, ಚೆಪ್ಪಲಿ ಬಿಡುವುದಕ್ಕೆ.. ಹೀಗೆ ನಾನಾ ಸೇವಾ ಕಾರಣಗಳನ್ನು ನೀಡಿ, ಭಕ್ತರನ್ನು ಇಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಸುಲಿಗೆ ಮಾಡುತ್ತಿರುತ್ತಾರೆ. ಆದರೆ ಇಲ್ಲಿನ ಮಜರಾಯಿ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿರುವ ದೃಶ್ಯ ಸಾಮಾನ್ಯವಾಗಿದೆ. ಈ ಬಗ್ಗೆ ಭಕ್ತರು ಆಕ್ಷೇಪ ವ್ಯಕ್ತಪಡಿಸಿದರೂ ಅವರು ಡೋಂಟ್​ ಕೋರ್​ ಅಂದುಕುಳಿತುಬಿಡುತ್ತಾರೆ.

ಒಟ್ಟಾರೆ ಶ್ರಾವಣ ಮಾಸದಲ್ಲಿ ವೆಂಕಟೇಶ್ವರ ಸ್ವಾಮಿಯನ್ನು ಸ್ಮರಿಸಿದ್ರೆ ಭೂಲೋಕದಲ್ಲಿ ಭಕ್ತರ ಬೇಡಿಕೆಗಳು ಈಡೇರುತ್ತವೆ ಅನ್ನೋ ನಂಬಿಕೆ ಇದೆ. ಹಾಗಾಗಿ ಭಕ್ತರು ವಿಶೇಷವಾಗಿ ವೆಂಕಟೇಶ್ವರ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸೆಂದು ದೇವರಿಗೆ ಮೊರೆ ಸಲ್ಲಿಸುತ್ತಾ ರೆ.

– ರಾಜೇಂದ್ರ ಸಿಂಹ