ನಾಳೆ ತುಳಸಿ ಹಬ್ಬ, ಇಂದು ದೇವೋತ್ಥಾನ ಏಕಾದಶಿ: ಪೂಜೆ ವಿಧಿ, ಪಾರಣೆ ನಿಯಮ ಮತ್ತು ಆಚರಣೆಯ ಪ್ರಮುಖ ಅಂಶಗಳು

ನಾಲ್ಕು ತಿಂಗಳ ಯೋಗನಿದ್ರೆಯ ನಂತರ ಶ್ರೀ ಮಹಾವಿಷ್ಣುವು ಎಚ್ಚರಗೊಳ್ಳುವ ಈ ದಿನವೇ ದೇವೋತ್ಥಾನ ಏಕಾದಶಿ. ಇದರ ಜೊತೆಗೆ ನಾಳೆ ತುಳಸಿ ಹಬ್ಬವನ್ನೂ ಆಚರಿಸಲಾಗುತ್ತಿದೆ. ಈ ಏಕಾದಶಿ ಮತ್ತು ತುಳಸಿ ಹಬ್ಬದ ಮಹತ್ವ, ಉಪವಾಸದ ವಿಧಾನಗಳು, ಸಂಕಲ್ಪ ಕ್ರಮ ಹಾಗೂ ಪಾರಣೆ ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ವಿವಾಹದ ಅಡೆತಡೆ ನಿವಾರಣೆ, ಸಾಲಬಾಧೆಯಿಂದ ಮುಕ್ತಿ ಮತ್ತು ಹೊಸ ಆರಂಭಗಳಿಗೆ ಈ ವ್ರತ ಹೇಗೆ ಸಹಕಾರಿ ಎಂಬುದನ್ನು ತಿಳಿಯಿರಿ.

ನಾಳೆ ತುಳಸಿ ಹಬ್ಬ, ಇಂದು ದೇವೋತ್ಥಾನ ಏಕಾದಶಿ: ಪೂಜೆ ವಿಧಿ, ಪಾರಣೆ ನಿಯಮ ಮತ್ತು ಆಚರಣೆಯ ಪ್ರಮುಖ ಅಂಶಗಳು
ದೇವೋತ್ಥಾನ ಏಕಾದಶಿ
Image Credit source: Getty Images

Updated on: Nov 20, 2026 | 8:43 AM

ಹಿಂದೂ ಧರ್ಮದಲ್ಲಿ ಏಕಾದಶಿ ವ್ರತಕ್ಕೆ ಅತ್ಯಂತ ಪವಿತ್ರ ಸ್ಥಾನವಿದೆ. ಅದರಲ್ಲೂ ಕಾರ್ತಿಕ ಮಾಸದ ಶುಕ್ಲ ಪಕ್ಷದಲ್ಲಿ ಬರುವ ದೇವೋತ್ಥಾನ ಏಕಾದಶಿ (ಪ್ರಬೋಧಿನಿ ಏಕಾದಶಿ) ಅತ್ಯಂತ ವಿಶೇಷವಾದುದು. ನವೆಂಬರ್ 20ರಂದು ದೇವೋತ್ಥಾನ ಏಕಾದಶಿ ಹಾಗೂ ಮರುದಿನವಾದ ನವೆಂಬರ್ 21ರಂದು ತುಳಸಿ ಹಬ್ಬವನ್ನು ಆಚರಿಸಲಾಗುತ್ತಿದೆ. ನಾಲ್ಕು ತಿಂಗಳ ಯೋಗನಿದ್ರೆಯ ನಂತರ ಶ್ರೀ ಮಹಾವಿಷ್ಣುವು ಎಚ್ಚರಗೊಳ್ಳುವ ಈ ಶುಭ ದಿನದಂದು ಭಕ್ತಿಯಿಂದ ವ್ರತಾಚರಣೆ ಮಾಡುವುದು ಅತ್ಯಂತ ಶ್ರೇಯಸ್ಕರವಾಗಿದೆ.

ದೇವೋತ್ಥಾನ ಏಕಾದಶಿಯ ಮಹತ್ವ ಮತ್ತು ಫಲಗಳು:

ಪುರಾಣಗಳ ಪ್ರಕಾರ ಹಾಗೂ ಸ್ವತಃ ಶ್ರೀಕೃಷ್ಣನೇ ಹೇಳಿರುವಂತೆ, ಈ ಏಕಾದಶಿಯಂದು ಭಕ್ತಿಯಿಂದ ಉಪವಾಸ ವ್ರತವನ್ನು ಆಚರಿಸುವುದರಿಂದ ಸಾವಿರ ಅಶ್ವಮೇಧ ಯಾಗಗಳನ್ನು ಮಾಡಿದಷ್ಟೇ ಪುಣ್ಯ ಫಲ ಲಭಿಸುತ್ತದೆ. ಈ ದಿನ ವಿಷ್ಣುವಿನ ನಾಮಸ್ಮರಣೆ ಮಾಡುವುದರಿಂದ ಮತ್ತು ಮರುದಿನ ತುಳಸಿ ಪೂಜೆ ನೆರವೇರಿಸುವುದರಿಂದ ಮದುವೆಗೆ ಎದುರಾಗಿರುವ ವಿಘ್ನಗಳು ದೂರವಾಗುತ್ತವೆ. ಅಲ್ಲದೆ, ನೂತನ ವ್ಯವಹಾರ ಅಥವಾ ಹೊಸ ಕೆಲಸಗಳನ್ನು ಆರಂಭಿಸಲು ಇದು ಅತ್ಯಂತ ಪ್ರಶಸ್ತವಾದ ದಿನವಾಗಿದ್ದು, ಆರ್ಥಿಕ ಸಂಕಷ್ಟ ಹಾಗೂ ಸಾಲದ ಬಾಧೆಯಿಂದ ಮುಕ್ತಿ ಪಡೆಯಲು ಮತ್ತು ಸಂತಾನ ಅಪೇಕ್ಷಿತ ದಂಪತಿಗಳಿಗೆ ಸಂತಾನ ಭಾಗ್ಯ ಕರುಣಿಸಲು ಈ ವ್ರತವು ಅತ್ಯಂತ ಫಲಪ್ರದವಾಗಿದೆ.

Loading...

ಈ ವ್ರತವನ್ನು ಯಾರೆಲ್ಲಾ ಆಚರಿಸಬಹುದು?

ದೇವೋತ್ಥಾನ ಏಕಾದಶಿ ವ್ರತಕ್ಕೆ ವಯಸ್ಸಿನ ಯಾವುದೇ ಭೇದವಿಲ್ಲ; ಭಕ್ತಿ ಮತ್ತು ಶ್ರದ್ಧೆಯಿರುವ ಯಾರು ಬೇಕಾದರೂ ಇದನ್ನು ಆಚರಿಸಬಹುದು. ವಿಶೇಷವಾಗಿ, ಮುಟ್ಟಿನ (ಋತುಚಕ್ರದ) ಸಮಯದಲ್ಲಿರುವ ಮಹಿಳೆಯರು ಕೂಡ ಯಾವುದೇ ಆತಂಕವಿಲ್ಲದೆ ಉಪವಾಸ ವ್ರತವನ್ನು ಮಾಡಬಹುದು, ಏಕೆಂದರೆ ಉಪವಾಸಕ್ಕೂ ಮುಟ್ಟಿಗೂ ಯಾವುದೇ ಸಂಬಂಧವಿಲ್ಲ. ಇನ್ನು ಗರ್ಭಿಣಿಯರು ತಮ್ಮ ದೇಹದ ಶಕ್ತಿ ಮತ್ತು ಆರೋಗ್ಯಕ್ಕೆ ಅನುಗುಣವಾಗಿ, ತಮಗೆ ಆಯಾಸವಾಗದಂತೆ ಈ ವ್ರತವನ್ನು ಆಚರಿಸಬಹುದಾಗಿದೆ.

ಬೆಳಗಿನ ಪೂಜೆ ಮತ್ತು ಸಂಕಲ್ಪ ವಿಧಿ (ನವೆಂಬರ್ 20):

ಏಕಾದಶಿಯಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ದೇವರ ಕೋಣೆಯ ಮುಂದೆ ನಿಂತು ಭಗವಂತನನ್ನು ಸ್ಮರಿಸಬೇಕು. ಯೋಗನಿದ್ರೆಯಲ್ಲಿರುವ ವಿಷ್ಣುವನ್ನು ಎಚ್ಚರಿಸಲು ‘ವೆಂಕಟೇಶ ಸುಪ್ರಭಾತ’ವನ್ನು ಕೇಳುವುದು ಅಥವಾ ಪಠಿಸುವುದು ಉತ್ತಮ. ಜೊತೆಗೆ “ಓಂ ನಮೋ ಭಗವತೇ ವಾಸುದೇವಾಯ” ಮಂತ್ರವನ್ನು ಜಪಿಸಿ, ವಿಷ್ಣು ಸಹಸ್ರನಾಮವನ್ನು ಪಠಿಸಬೇಕು. ಬಳಿಕ ಕೈಯಲ್ಲಿ ಸ್ವಲ್ಪ ಅಕ್ಷತೆ, ಹೂವು ಮತ್ತು ಒಂದು ಉದ್ಧರಣೆ ನೀರನ್ನು ಹಿಡಿದುಕೊಂಡು, ನಿಮ್ಮ ಕುಟುಂಬದ ಸದಸ್ಯರ ಹೆಸರನ್ನು ಹೇಳಿ, ಮನಸ್ಸಿನ ಇಷ್ಟಾರ್ಥಗಳನ್ನು ದೇವರಲ್ಲಿ ಪ್ರಾರ್ಥಿಸಿ (ಸಂಕಲ್ಪ ಮಾಡಿ) ಆ ಹೂವನ್ನು ದೇವರಿಗೆ ಅರ್ಪಿಸಬೇಕು.

ಇದನ್ನೂ ಓದಿ: ನೀವು ಕಾಲಿಗೆ ಕಪ್ಪು ದಾರ ಕಟ್ಟುತ್ತೀರಾ? ಹಾಗಾದರೆ ಈ 9 ಗಂಟುಗಳ ನಿಯಮ ಮತ್ತು ಶುಭ ಸಮಯದ ಬಗ್ಗೆ ತಪ್ಪದೇ ತಿಳಿದುಕೊಳ್ಳಿ

ಉಪವಾಸದ ವಿಧಾನಗಳು:

ನಿಮ್ಮ ದೇಹದ ಸಾಮರ್ಥ್ಯಕ್ಕೆ ತಕ್ಕಂತೆ ವಿವಿಧ ರೀತಿಯಲ್ಲಿ ಉಪವಾಸ ಮಾಡಬಹುದು. ದಿನವಿಡೀ ಕೇವಲ ನೀರನ್ನು ಮಾತ್ರ ಸೇವಿಸಿ ‘ಜಲಾಹಾರ’ ಉಪವಾಸ ಮಾಡಬಹುದು (ಆದರೆ ನೀರೂ ಕುಡಿಯದೆ ಮಾಡುವ ‘ನಿರ್ಜಲ’ ಉಪವಾಸವನ್ನು ಮಾಡದಿರುವುದು ಉತ್ತಮ). ಅಥವಾ ಹೊಟ್ಟೆಯನ್ನು ಆದಷ್ಟು ಖಾಲಿಯಾಗಿಟ್ಟುಕೊಂಡು, ಕೇವಲ ಹಣ್ಣು ಮತ್ತು ಹಾಲನ್ನು ಸೇವಿಸುವ ‘ಫಲಾಹಾರ’ ವ್ರತವನ್ನು ಅನುಸರಿಸಬಹುದು. ಇನ್ನೂ ಸ್ವಲ್ಪ ಆಹಾರದ ಅಗತ್ಯವಿದ್ದರೆ ಅನ್ನ, ಬೇಳೆ ಹಾಗೂ ಇತರ ಧಾನ್ಯಗಳನ್ನು ತ್ಯಜಿಸಿ, ಸಿಹಿಗೆಣಸು, ಮರಗೆಣಸು ಅಥವಾ ಸಬ್ಬಕ್ಕಿಯಿಂದ ತಯಾರಿಸಿದ ಲಘು ಆಹಾರವನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಬಹುದು. ಆರೋಗ್ಯದ ಕಾರಣದಿಂದ ಖಾಲಿ ಹೊಟ್ಟೆಯಲ್ಲಿರಲು ಸಾಧ್ಯವಾಗದವರು, ಸರಳವಾದ ಸಾತ್ವಿಕ ಆಹಾರವನ್ನು ಮಿತವಾಗಿ ಸೇವಿಸಿ, ದಿನವಿಡೀ “ಓಂ ನಮೋ ಭಗವತೇ ವಾಸುದೇವಾಯ”, “ಓಂ ನಮೋ ನಾರಾಯಣಾಯ” ಅಥವಾ “ಓಂ ನಮೋ ವೆಂಕಟೇಶಾಯ” ಎಂಬ ನಾಮಸ್ಮರಣೆಯಲ್ಲಿ ಮನಸ್ಸನ್ನು ಕೇಂದ್ರೀಕರಿಸಬೇಕು.

ಪಾರಣೆ (ಉಪವಾಸ ಬಿಡುವ ವಿಧಾನ) ಮತ್ತು ಮುಖ್ಯ ಎಚ್ಚರಿಕೆ:

ಏಕಾದಶಿಯ ಮರುದಿನ ಅಂದರೆ ನವೆಂಬರ್ 21ರಂದು ಬೆಳಗ್ಗೆ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಿದ ನಂತರ, ತುಳಸಿ ದಳ ಹಾಕಿದ ತೀರ್ಥವನ್ನು (ನೀರನ್ನು) ಕುಡಿಯುವ ಮೂಲಕ ಉಪವಾಸವನ್ನು ಅಂತ್ಯಗೊಳಿಸಬೇಕು (ಪಾರಣೆ). ಆದರೆ ಈ ಸಮಯದಲ್ಲಿ ಒಂದು ಮುಖ್ಯ ನಿಯಮವನ್ನು ಪಾಲಿಸಬೇಕು; ನವೆಂಬರ್ 20 (ಏಕಾದಶಿ) ಮತ್ತು ನವೆಂಬರ್ 21 (ತುಳಸಿ ಹಬ್ಬ) ಈ ಎರಡೂ ದಿನಗಳಲ್ಲಿ ತುಳಸಿ ಗಿಡದಿಂದ ಎಲೆಗಳನ್ನು ಕೀಳಬಾರದು. ಆದ್ದರಿಂದ ಪೂಜೆ ಮತ್ತು ತೀರ್ಥಕ್ಕೆ ಬೇಕಾಗುವ ತುಳಸಿ ದಳಗಳನ್ನು ಒಂದು ದಿನ ಮುಂಚಿತವಾಗಿಯೇ ಕಿತ್ತು ಇಟ್ಟುಕೊಳ್ಳುವುದು ಶಾಸ್ತ್ರಸಮ್ಮತವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಸದ್ಯ ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ರಾಜಕೀಯ, ಕ್ರೈಂ ಸುದ್ದಿಗಳನ್ನು ಬರೆಯುತ್ತಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us