Spiritual: ಶ್ರಾವಣ ಸೋಮವಾರ ಉಪವಾಸದ ಕ್ರಮ ಮತ್ತು ಫಲ ಏನು ಗೊತ್ತಾ? ಇಲ್ಲಿದೆ ನೋಡಿ

ಉಪವಾಸವೆಂದರೆ ಭಗವಂತನ್ನು ಶ್ರದ್ಧೆಯಿಂದ ನೆನೆಯುವುದು ಎಂಬುದು ಒಂದರ್ಥ. ಹಾಗಾದರೆ ಈ ಆಹಾರವನ್ನು ತಿನ್ನದೇ ಇರುವುದು ಉಪವಾಸವಲ್ಲವೇ ಎಂದರೆ.. ಹೌದು ಉಪವಾಸವೇ. ಹೇಗೆಂದರೆ ಮನುಷ್ಯನು ಆಹಾರ ಸ್ವೀಕಾರ ಮಾಡಲು ಸಿದ್ಧತೆಯನ್ನು ಮಾಡಬೇಕು

Spiritual: ಶ್ರಾವಣ ಸೋಮವಾರ ಉಪವಾಸದ ಕ್ರಮ ಮತ್ತು ಫಲ ಏನು ಗೊತ್ತಾ? ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
TV9kannada Web Team

| Edited By: ಅಕ್ಷಯ್​ ಕುಮಾರ್​​

Jul 31, 2022 | 7:05 AM

ಸನಾತನ ಧರ್ಮಪಥದಲ್ಲಿ ಮನುಷ್ಯನ ಏಳಿಗೆಗೋಸ್ಕರ ಹಲವು ವ್ರತಗಳನ್ನು ಹೇಳಲಾಗಿದೆ. ಅದರ ಆಚರಣೆಯಿಂದ ವೈಜ್ಞಾನಿಕವಾಗಿಯೂ ಅನುಕೂಲಗಳಿವೆ. ಆದರೆ ಅದನ್ನು ಹೇಳುವ ಮತ್ತು ಅದರಲ್ಲಿ ನಂಬಿಯಿಟ್ಟು ಆಚರಿಸುವ ಜೀವಗಳು ಕಡಿಮೆಯಾಗುತ್ತಿವೆ. ಕಾರಣವೇನಿರಬಹುದು… ಎಂದು ಯೋಚಿಸಿದರೆ ಶೀಘ್ರಗಾಮೀ ಜೀವನ (fast life) ದಲ್ಲಿ ಕೇವಲ ಹಣದುಡಿಯುವ ಯಂತ್ರವಾಗಿದ್ದೇವೆ ನಾವು. ಅದಕ್ಕಿಂತಲೂ ಮಿಗಿಲಾದ ಸೌಭಾಗ್ಯ/ಸಂಪತ್ತುಗಳು ಇವೆಯೆಂಬುದು ಮರತೇ ಹೋದಂತಿದೆ ನಮಗೆ. ಹಾಗಂತ ಹಣ ಬೇಡವೆಂಬ ಭಾವವಲ್ಲ, ಅದೇ ಮುಖ್ಯವೂ ಅಲ್ಲ.

ಹಾಗಾದರೆ ನಾವು ಮರೆತ ಅಂಶಗಳು ಯಾವುವು ? ಸಂಬಂಧ,ಆಚಾರಗಳನ್ನು ವಿಚಾರ ಮಾಡಿ ಆಚರಿಸುವುದು, ತಳಿರು – ತೋರಣಗಳ ಮಹತ್ವ ಹೀಗೆ ಹೇಳುತ್ತಾ ಹೋದರೆ ಸುಮಾರಷ್ಟಿವೆ. ಇದರಲ್ಲಿ ಒಂದು ವಿಭಾಗವೇ ವ್ರತ. ವ್ರತವೆಂದರೆ ನಿಯಮ ಬದ್ಧವಾಗಿರುವುದು ಎಂದರ್ಥ. ಈ ನಿಯಮ ಶಬ್ದದ ವ್ಯಾಪ್ತಿ ತುಂಬಾ ಇದೆ. ನಮ್ಮ ಈ ವ್ರತ ಶಬ್ದದ ಕುರಿತಾದ ನಿಯಮವೆಂದರೆ ಶಾಸ್ತ್ರೀಯವಾಗಿ ದೇಹಕ್ಕೆ ತೀರಾ ಕಷ್ಟವೆನಿಸದಿರುವ ರೀತಿಯಲ್ಲಿ ಭಗವಂತನ ಸೇವೆ/ಆರಾಧನೆ ಮಾಡುವುದು ಎನ್ನಬಹುದು. ಅರ್ಥಾತ್ ದೇವನ ಕುರಿತಾದ ಉಪವಾಸ . ಉಪವಾಸ ಶಬ್ದದ ರೂಪ “ಉಪ ಸಮೀಪೇ ವಾಸ:” ಎಂದು. ಅಂದರೆ ಸಮೀಪದಲ್ಲಿ ಇರುವುದು ಎಂದು. ಯಾರ ಸಮೀಪದಲ್ಲಿರುವುದು? ಅದಕ್ಕುತ್ತರ ಭಗವಂತನ ಸಮೀಪ (ಭಗವತ್ಸಾನ್ನಿಧ್ಯದ ಸಮೀಪ) ಇರುವುದು ಎಂದು. ಮೇಲ್ನೋಟಕ್ಕೆ ಭಗವಂತನ ಸಮೀಪವೆಂದರೆ ದೇವಾಲಯ ಅಥವಾ ದೇವರ ಮನೆ(ಕೋಣೆ) ಎಂದು ಮನಸ್ಸಿಗೆ ಬರುತ್ತದೆ. ಆದರೆ ಈ ವ್ರತದ ಉಪವಾಸವೆನ್ನುವ ಪದವೇನಿದೆ ಅಲ್ಲಿ ಸದಾ ಭಗವಂತನ ನೆನೆಯುತ್ತಿರುವುದು ಎಂಬುದನ್ನು ಗಮನಿಸಬೇಕು.

ಉಪವಾಸವೆಂದರೆ ಭಗವಂತನ್ನು ಶ್ರದ್ಧೆಯಿಂದ ನೆನೆಯುವುದು ಎಂಬುದು ಒಂದರ್ಥ. ಹಾಗಾದರೆ ಈ ಆಹಾರವನ್ನು ತಿನ್ನದೇ ಇರುವುದು ಉಪವಾಸವಲ್ಲವೇ ಎಂದರೆ.. ಹೌದು ಉಪವಾಸವೇ. ಹೇಗೆಂದರೆ ಮನುಷ್ಯನು ಆಹಾರ ಸ್ವೀಕಾರ ಮಾಡಲು ಸಿದ್ಧತೆಯನ್ನು ಮಾಡಬೇಕು, ಅದರ ಕುರಿತಾಗಿ ಯೋಚಿಸಬೇಕು, ಅಲ್ಲದೇ ತಿನ್ನುವ ಆಹಾರವನ್ನು ಸವಿಯಬೇಕು, ಆಮೇಲೆ ಅದರಿಂದ ಉಂಟಾಗುವ ಆಲಸ್ಯ,ನಿದ್ರೆ ಇತ್ಯಾದಿಗಳು ಹೀಗೆ ಮನಸ್ಸು ಎನ್ನುವುದು ಚಂಚಲ,ವಿಚಲವಾಗಿ ಧ್ಯಾನ,ಪೂಜೆ ಇತ್ಯಾದಿಗಳಲ್ಲಿ ಕೆಲವು ಸಲ ತೊಡಗುವುದಿಲ್ಲ,ತೊಡಗಿದರೂ ಪರಿಪೂರ್ಣತೆ ಇರುವುದಿಲ್ಲ. ಮತ್ತು ಅದರ ಜೀರ್ಣ ಇತ್ಯಾದಿಗಳಿಂದ ದೇಹ ಮಲಿನವಾಗಿ ಸ್ನಾನಾದಿಗಳಿಂದ ಶುದ್ಧಿಮಾಡಬೇಕು ಆಗಲೂ ಸಮಯದ ಪೋಲು ಇದು ಧರ್ಮ ವ್ಯವಸ್ಥೆ ಆದರೆ. ಹದಿನೈದು ದಿನಕ್ಕೊಮ್ಮೆ ಒಂದು ದಿನ ದೇಹಕ್ಕೆ ಆಹಾರ ನೀಡದಿರುವುದು ಉತ್ತಮವೆಂದು ವೈದ್ಯರೂ ಹೇಳುತ್ತಾರೆ.

ಈ ಉಪವಾಸ ನಿರಾಹಾರ (ಏನೂತಿನ್ನದಿರುವುದು), ಸಜಲ ( ದ್ರವಾಹಾರ ಸೇವನೆ), ಫಲಾಹಾರ (ಹಣ್ಣಿನ ಸೇವನೆ) ಅಲ್ಪಾಹಾರ (ಲಘು ಆಹಾರ ಸೇವನೆ) ಒಪ್ಪತ್ತು (ಒಂದು ಹೊತ್ತು ಆಹಾರ ಸೇವನೆ) ಎಂಬುದಾಗಿ ಐದು ವಿಧ. ಇದರಲ್ಲಿ ಕ್ರಮವಾಗಿ ಫಲ ಕಡಿಮೆಯಾಗುತ್ತಾ ಬರುತ್ತದೆ. ಇವೆಲ್ಲವೂ ನಾವು ಶಾಸ್ತ್ರೀಯನಿಯಮದಂತೆ ಭಗವಂತನ ಧ್ಯಾನದಲ್ಲಿ ದಿನ ಕಳೆಯಲು ಮಾಡಿಕೊಂಡ ವ್ಯವಸ್ಥೆ.

ಶ್ರಾವಣಮಾಸವೆಂದರೆ ಶ್ರವಣ ನಕ್ಷತ್ರದಿಂದ ಕೂಡಿದ ಹುಣ್ಣಿಮೆಯುಳ್ಳ ಮಾಸವೆಂದು ಅರ್ಥ. ಆದ್ದರಿಂದ ಈ ಮಾಸದಲ್ಲಿ ದೇವತಾಭಿಷೇಕಗಳಿಗೆ ವಿಶೇಷ ಫಲ ಹೇಳಿದ್ದಾರೆ. “ಅಭಿಷೇಕಪ್ರಿಯಃಶಿವಃ” ಎಂಬ ಮಾತಿನ ಪ್ರಕಾರ ಈ ಮಾಸದಲ್ಲಿ ಶಿವನ ಆರಾಧನೆಗೆ ಹೆಚ್ಚಿನ ಫಲವಿದೆ. ಮತ್ತು ಈ ಮಾಸದಲ್ಲಿ ಶಿವಸಂಬಂಧಿತ ವ್ರತಗಳೇ ಹೆಚ್ಚು. ಹಾಗೆಯೇ ಚಂದ್ರನ ವಾರ ಸೋಮವಾರ. ಪೂರ್ಣಚಂದ್ರನಿರುವುದು ಹುಣ್ಣಿಮೆಯಂದು. ಶ್ರವಣ ಎನ್ನುವುದು ಅತ್ಯಂತ ಶುಭನಕ್ಷತ್ರ. ಶಿವನಿಗೆ ಅತ್ಯಂತ ಪ್ರಿಯ ಮಾಸ ಶ್ರಾವಣ. ಸೋಮನ(ಚಂದ್ರನ) ರೋಗ ನಿವಾರಿಸಿದಾತ ಶಿವ. ಈ ಎಲ್ಲಾ ಕಾರಣಗಳಿಂದ ಶ್ರಾವಣ ಮಾಸದ ಸೋಮವಾರ ಶಿವನ ಕುರಿತಾಗಿ ಮೇಲೆ ಹೇಳಿದ ಯಾವುದಾದರೊಂದು ರೀತಿಯ ಉಪವಾಸ ಮಾಡುವುದರಿಂದ ಆರೋಗ್ಯವೆಂಬ ಸಂಪತ್ತು ವೃದ್ಧಿಯಾಗುತ್ತದೆ.

ವ್ರತದ ಕ್ರಮ ಹೀಗಿದೆ ಭಾನುವಾರ ರಾತ್ರೆ ಅಲ್ಪಾಹಾರ (ಅನ್ನ ಇತ್ಯಾದಿಗಳು ಬೇಡ) ಸೇವನೆ ಮಾಡಿರಿ. ಸೋಮವಾರ ಸೂರ್ಯೋದಯಕ್ಕಿಂತ ಮೊದಲು ತಲೆಸ್ನಾನ ಮಾಡಿ ಬೊಗಸೆಯಲ್ಲಿ ನೀರುತುಂಬಿ ಒಂದು ಸಲ ಅರ್ಘ್ಯೆ ಕೊಡುವುದು. ಮನಸ್ಸಿನಲ್ಲಿ ನೀವು ಮಾಡುವ ವ್ರತೋಪವಾಸದ ಸ್ವರೂಪವನ್ನು ಭಗವಂತನಿಗೆ ನಿವೇದಿಸಿ ಅಂದು ಸಾಯಂಕಾಲ (ಸಾಧ್ಯವಾದಲ್ಲಿ ಸೂರ್ಯಾಸ್ತದ ವೇಳೆಗೆ) ಭಗವಂತನಿಗೆ ತುಪ್ಪದೀಪ ಹಚ್ಚಿರಿ. ಈ ದಿನ ಶಿವನ ಪಂಚಾಕ್ಷರೀ ಮಂತ್ರವನ್ನು ಹೆಚ್ಚು ಮನನ ಮಾಡಿ.ಶುಭವಾಗುತ್ತದೆ.

ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು

S.R.B.S.S College ಹೊನ್ನಾವರ

kkmanasvi@gamail.com

ಇದನ್ನೂ ಓದಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada