ಹುಬ್ಬಳ್ಳಿ, ಸೆ.09: ಗಣೇಶ ಹಬ್ಬದ ಆಚರಣೆಗಾಗಿ ದೂರದ ಸ್ಥಳಗಳಿಂದ ತಮ್ಮ ಸ್ವಂತ ಊರುಗಳಿಗೆ ಬರುವ ಹಾಗೂ ಹಬ್ಬ ಮುಗಿಸಿ ಹಿಂದಿರುಗುವ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (North West Karnataka Road Transport Corporation) ಯಿಂದ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್ 16 (ಶನಿವಾರ)ರಂದು ವಾರಾಂತ್ಯ, ಭಾನುವಾರ ಮತ್ತು ಸೋಮವಾರ ಸ್ವರ್ಣಗೌರಿ ವ್ರತ ಹಾಗೂ ಗಣೇಶ ಚತುರ್ಥಿ ಇದೆ. ಹಬ್ಬ ಆಚರಿಸಲು ಸೆ. 15 ಮತ್ತು 16 ರಂದು ಬೆಂಗಳೂರು, ಮಹಾರಾಷ್ಟ್ರದ ಪುಣೆ ಸೇರಿದಂತೆ ರಾಜ್ಯದ ಮತ್ತು ಅಂತರ್‌ರಾಜ್ಯದ ವಿವಿಧ ಪ್ರದೇಶಗಳಿಂದ ಹೆಚ್ಚಿನ ಪ್ರಯಾಣಿಕರು ಹಬ್ಬಕ್ಕಾಗಿ ಸ್ವಂತ ಊರುಗಳಿಗೆ ತೆರಳುವ ನಿರೀಕ್ಷೆ ಇದೆ.
ಹೀಗಾಗಿ ಹಬ್ಬಕ್ಕೆ ಬರುವವರಿಗೆ ಅನುಕಲವಾಗುವಂತೆ ಬೆಂಗಳೂರು ಮತ್ತಿತರ ಸ್ಥಳಗಳಿಂದ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ ಮತ್ತಿತರ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ಬಸ್ಸುಗಳು ಸಂಚರಿಸಲಿವೆ. ವೋಲ್ವೊ, ಸ್ಲೀಪರ್, ರಾಜಹಂಸ ಮುಂತಾದ 50 ಪ್ರತಿಷ್ಠಿತ ಐಶಾರಾಮಿ ಬಸ್ಸುಗಳು ಹಾಗೂ 200 ವೇಗದೂತ ಸಾರಿಗೆ ಸೇರಿದಂತೆ 250ಕ್ಕೂ ಹೆಚ್ಚು ಹೆಚ್ಚುವರಿ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ. ಅಲ್ಲದೇ ಸ್ಥಳೀಯ ಬಸ್ ನಿಲ್ದಾಣಗಳಿಂದ ಜಿಲ್ಲೆಯೊಳಗೆ ಹಾಗೂ ನೆರೆಯ ಜಿಲ್ಲೆಗಳಿಗೆ ಅವಶ್ಯಕತೆಗೆ ತಕ್ಕಂತೆ ಹೆಚ್ಚುವರಿ ಬಸ್ ಗಳನ್ನು ಓಡಿಸಲಾಗುತ್ತದೆ.
ಹಬ್ಬ ಮುಗಿಸಿಕೊಂಡು ಸ್ವಂತ ಊರುಗಳಿಂದ ಮರಳಿ ಬೆಂಗಳೂರು, ಮಂಗಳೂರು, ಹೈದ್ರಾಬಾದ್, ಪುಣೆ ಇನ್ನಿತರೆ ಪ್ರಮುಖ ಸ್ಥಳಗಳಿಗೆ ತೆರಳುವ ಪ್ರಯಾಣಿಕರಿಗಾಗಿ 19ರಿಂದ 24ರವರೆಗೆ ಸಂಸ್ಥೆಯ ಎಲ್ಲಾ ವಿಭಾಗಗಳ ಪ್ರಮುಖ ಬಸ್ ನಿಲ್ದಾಣಗಳಿಂದ ಜನ ದಟ್ಟಣೆಗೆ ಅನುಗುಣವಾಗಿ 250 ಕ್ಕೂ ಹೆಚ್ಚು ವಿಶೇಷ ಹೆಚ್ಚುವರಿ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ.
ಹಬ್ಬದ ವಿಶೇಷ ಬಸ್ಸುಗಳಿಗೆ KSRTC Mobile App, ಮುಂಗಡ ಬುಕ್ಕಿಂಗ್ ಕೌಂಟರ್‌ಗಳು ಅಥವಾ ಸಂಸ್ಥೆಯ ವೆಬ್ ಸೈಟ್ www.ksrtc.in ಮೂಲಕ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೊನೆಯ ಕ್ಷಣದ ರಷ್ ನಿಂದ ತಪ್ಪಿಸಿಕೊಳ್ಳಲು ಕೂಡಲೆ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳುವುದು ಸೂಕ್ತ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:42 pm, Sat, 9 September 23