ಸರ್ವರಿಗೂ ಪರಮ ಪವಿತ್ರವಾದ ಧರ್ಮಗ್ರಂಥ ಭಗವದ್ಗೀತಾ. ಇದರ ಜನುಮದಿನಕ್ಕೆ (ಆವಿರ್ಭವಿಸಿದ ದಿನಕ್ಕೆ) ಗೀತಾಜಯಂತಿ ಎಂದು ಕರೆಯುತ್ತಾರೆ. ಮನುಷ್ಯ ತನ್ನ ಜನುಮದಿನವನ್ನು ಯಾವ ಸಂಭ್ರಮದಿಂದ ಆಚರಿಸುತ್ತಾನೋ ಅದಕ್ಕಿಂತಲೂ ಮಿಗಿಲಾದ ರೀತಿಯಲ್ಲಿ ಈ ದಿನವನ್ನು ಆಚರಿಸಬೇಕು. ಏಕೆಂದರೆ ಇದನ್ನು ನಾವು ಯಾವ ಮನಸ್ಸಿಂದ ಅಧ್ಯಯನ ಮಾಡುತ್ತೇವೋ ಅದೇ ರೀತಿಯ ಸಾಫಲ್ಯವನ್ನು ನೀಡುತ್ತದೆ. ಇದೊಂದು ಅಧ್ಯಾತ್ಮ ಗ್ರಂಥ ಹೇಗೋ ಅದಕ್ಕಿಂತಲೂ ವೈಜ್ಞಾನಿಕ ಗ್ರಂಥವೆಂಬುದು ಅಷ್ಟೇ ಸತ್ಯ.
ಜೀವ ಜೀವಿಗಳ ಕರ್ತವ್ಯ, ಅಣು ಪರಮಾಣುಗಳ ಸ್ವರೂಪದಂತಹ ಮಹಾಸತ್ಯ, ಭಕ್ತ ಭಕ್ತಿಯೆಂಬ ಚಿಂತನೆ, ಸೋಲ ಗೆಲುವಿನ ಸಮತೋಲನಾ ವಿಧಿ, ಆಹಾರ ವಿಹಾರಗಳ ವ್ಯವಸ್ಥೆಯ ಪರಿಕಲ್ಪನೆ, ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳ ಮೇಲನ, ಜ್ಞಾನ- ವಿಜ್ಞಾನಗಳ ಆಗರ, ನಿರ್ವಹಣಾ ಕೌಶಲ ಇತ್ಯಾದಿ ಹಲವಾರು ಅಂಶಗಳಿಗೆ ಒಂದೇ ಉತ್ತರ ಕೊಡುವುದಾದರೆ ಅದು ಭಗವದ್ಗೀತೆ ಒಂದೇ. ಇದನ್ನು ಅಭ್ಯಸಿಸಿದ ಪ್ರತಿಯೊಬ್ಬ ಸಾತ್ವಿಕನೂ ಇದು ವ್ಯರ್ಥವೆಂದು ಹೇಳಿದ್ದಿಲ್ಲ. ಋಷಿ ಮುನಿಗಳ ವಿಚಾರ ಬಿಟ್ಟು ಹೇಳುವುದಾದರೂ.. ಮಹಾತ್ಮಗಾಂಧಿಯವರು, ಸಂವಿಧಾನಶಿಲ್ಪಿಗಳು, ಡಿವಿಜಿ, ಕಾರಂತರು, ಕಲಾಂ ಇವರೆಲ್ಲರೂ ಇದರ ಮಹತ್ವವನ್ನು ತಾತ್ವಿಕವಾಗಿ ವಿಮರ್ಶಿಸಿ ಅನುಭವ ಪಡೆದವರೇ ಆಗಿದ್ದಾರೆ.
ಭಗವದ್ಗೀತೆಯಲ್ಲಿ ನಮಗೆ ದೊರೆಯುವುದು ಸತ್ಯದ ಪೂರ್ಣದೃಷ್ಟಿ. ತೀರಾ ಒಬ್ಬೊಂಟಿ ಅನಿಸಿದಾಗಲೋ ಅಥವಾ ಯಾವುದೇ ಸಂದಿಗ್ಧ ಸ್ಥಿತಿಯಲ್ಲಿರುವಾಗ ಒಂದು ಸಲ ಗೀತೆಯ ಒಂದು ಶ್ಲೋಕ ತೆಗೆದು ಓದಿ ಅರ್ಥೈಸಿ ನಿಮ್ಮ ಸಮಸ್ಯೆಗೆ ಅದರಲ್ಲಿ ಉತ್ತರ ಸಿಗುವುದು ನಿಶ್ಚಿತ. ನಾವು ನೋಡುವ ಕಲಿಯುವ ದೃಷ್ಟಿಯನ್ನು ಸಾರ್ಥಕಗೊಳಿಸುವ ಶಕ್ತಿ ಈ ಭಗವದ್ಗೀತೆಗೆ ಇದೆ. ಇದನ್ನು ಕೇವಲ ಪೂಜಿಸುವುದರಿಂದ ಮಾತ್ರ ಅಲ್ಲ ಇದರ ಅಭ್ಯಾಸ, ಅನುಸಂಧಾನವೂ ಅಷ್ಟೇ ಮುಖ್ಯ. ಇಲ್ಲಿ ಬರುವ ತತ್ವವಿವೇಚನೆ ಆಗಸದಷ್ಟು ವಿಶಾಲವಾಗಿದೆ. ಇದು ಯಾರನ್ನೂ ನಿರಾಕರಿಸುವುದಿಲ್ಲ. ಸರ್ವರಿಗೂ ಇಲ್ಲಿ ಮುಕ್ತ ಅವಕಾಶವಿದೆ. ಆಸ್ತಿಕನಿಂದ ನಾಸ್ತಿಕನ ವರೆಗೆ ಇಲ್ಲಿ ಉತ್ತರವಿದೆ.
ಆನಂದಮಯ ಜೀವನ ರೂಪಿಸುವಂತೆ ಮಾಡುವುದೇ ಗೀತೆಯ ಪರಮೋದ್ದೇಶ. ಇಲ್ಲಿ ಯಾರನ್ನೂ ಭಂಗಿಸುವ, ಹಂಗಿಸುವ ಚಿಂತನೆಗಳು ಇಲ್ಲ. ಪ್ರತಿಯೊಬ್ಬ ಜೀವಿಗೂ ಇಲ್ಲಿ ತನ್ನ ವ್ಯವಸ್ಥೆಗನುಗುಣವಾಗಿ ಉತ್ತರ ಸಿಗುತ್ತದೆ. ನೋಡುವುದು, ವಿಮರ್ಶಿಸುವುದು, ಅಭ್ಯಸಿಸುವುದು, ರೂಢಿಸಿ ಅನುಭವ ಪಡೆಯುವುದು ಅವರವರಿಗೆ ಬಿಟ್ಟಿದ್ದು. ಇದರ ಓದುಗ ಔದಾರ್ಯವೆಂಬ ಛಾಯೆಯ ಅಡಿಯಲ್ಲಿಯೇ ಪಥಿಕನಾಗಿ ಸಾಗುತ್ತಿರುವನು. ಅದೇ ಇದರ ಸಾತ್ವಿಕತೆ.
ಇದನ್ನು ಓದಿ: ದುಷ್ಟನಾದರೂ ರಾವಣನಲ್ಲಿ ಕಂಡ ಒಂದು ಒಳ್ಳೆಯ ಗುಣ, ರಾವಣನಿಗೆ ಯಾರ ಶಾಪ?
ಏಳು ಮತ್ತು ಹನ್ನೊಂದು ಅಕ್ಷೋಹಿಣೀ ಸೈನ್ಯದ ಯುದ್ಧದಲ್ಲಿ ಏಳೇ ಗೆದ್ದದ್ದು. ಅಂದರೆ ಕಡಿಮೆಯಳ್ಳ ಪಾಂಡವರ ಪಕ್ಷವೇ ಗೆದ್ದದ್ದು. ಇದಕ್ಕೆ ಮೂಲ ಕಾರಣ ಅವರವರ ಮನಸ್ಸಿಗನುಗುಣವಾಗಿ ಹಲವಾರು ಯೋಚನೆಗಳಿರಬಹುದು ಆದರೆ ಇಲ್ಲಿ ಮಹತ್ತರ ಪಾತ್ರವಹಿಸಿದ್ದು ಭಗವಂತ ಬೋಧಿಸಿದ ಗೀತೆ. ಒಂದು ವೇಳೆ ಅರ್ಜುನ ಶಸ್ತ್ರ ತ್ಯಾಗ ಮಾಡಿದ್ದೇ ಆದಲ್ಲಿ ಇವರ ಸೋಲು ನಿಶ್ಚಿತ. ಆ ಕಾಲದಲ್ಲಿ ಭಗವಂತ ಅರ್ಜುನನ ದುಗುಡಗಳಿಗೆ ಸಮಾಧಾನ ನೀಡಿದ. ಅದುವೇ ಗೀತೆ. ಇಂದು ನಮ್ಮ ಮುಂದೆ ಭಗವಂತ ಪ್ರತ್ಯಕ್ಷವಾಗಿ ಇಲ್ಲದೇ ಇದ್ದರೂ ನಮಗೆ ದುಗುಡಗಳು ಅರ್ಜುನನಿಗಿಂತ ಹೆಚ್ಚೇ ಇದೆ. ಆದರೆ ನಮ್ಮ ಮುಂದೆ ಭಗವದ್ಗೀತೆ ಇದೆ ಎಂಬುದನ್ನು ನಾವು ಮರೆತಿದ್ದೇವೆ. ಆದ್ದರಿಂದ ನಾವಿಂದು ಜೀವನವನ್ನು ಆನಂದಮಯವಾಗಿ ಧರ್ಮಯುತವಾಗಿ ಸಾಗಿಸುವಲ್ಲಿ ಸೋತಿದ್ದೇವೆ ಅಲ್ಲವೇ? ಭೀಷ್ಮನಂತಹ ಪರಾಕ್ರಮಿ, ದ್ರೋಣರಂತಹ ಗುರು, ಕೃಪರಂತಹ ತಪಸ್ವಿಗಳನ್ನು ಧರ್ಮಯುತವಾಗಿ-ಧರ್ಮಕ್ಕೋಸ್ಕರ ಗೆಲ್ಲುವಲ್ಲಿ ಅರ್ಜುನನಿಗೆ ಸಹಕರಿಸಿದ್ದು ಗೀತೆ. ಹಾಗಿರುವಾಗ ನಮ್ಮ ಆಂತರಿಕ, ಬಾಹ್ಯ ದುಗುಡ/ ಸಮಸ್ಯೆಗಳಿಗೆ ಗೀತೆ ಉತ್ತರ ನೀಡದೇ ಎಂದು ಯೋಚಿಸಿ? ಈ ಸಲದ (4/12/22) ಗೀತಾಜಯಂತಿಯಿಂದ ಒಂದಿನಿತು ಭಗವದ್ಗೀತೆಯ ಅಭ್ಯಾಸ ಮಾಡುತ್ತಾ ನಮ್ಮ ಜೀವನವನ್ನು ಸುಂದರ ಚೌಕದಲ್ಲಿ, ಆನಂದಮಯವಾಗಿ ಸವಿಯೋಣ ಏನಂತೀರಾ?
ಡಾ.ಕೇಶವಕಿರಣ ಬಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:42 am, Fri, 2 December 22