Happy Ramadan Eid 2021: ರಂಜಾನ್ ಹಬ್ಬದ ಮಹತ್ವ, ಆಚರಣೆಯ ವಿಧಾನ ಹೀಗಿದೆ

|

Updated on: May 14, 2021 | 10:38 AM

Eid Mubarak 2021: ಈದ್ ಮುಬಾರಕ್ ಶುಭಾಶಯಗಳೊಂದಿಗೆ ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಸ್ವಾಗತಿಸುತ್ತಾರೆ. ಈದ್-ಉಲ್-ಫಿತರ್​ನ ಈ ದಿನ ಉಡುಗೊರೆಗಳು, ಆಹಾರ, ಸಿಹಿತಿಂಡಿಗಳನ್ನು ವಿತರಿಸಲಾಗುತ್ತದೆ ಮತ್ತು ಮಕ್ಕಳಿಗೆ ಹಿರಿಯರಿಂದ ಈಡಿ ಎಂದು ಕರೆಯಲ್ಪಡುವ ಹಣ ಮತ್ತು ಉಡುಗೊರೆಗಳನ್ನು ನೀಡಲಾಗುತ್ತದೆ.

Happy Ramadan Eid 2021: ರಂಜಾನ್ ಹಬ್ಬದ ಮಹತ್ವ, ಆಚರಣೆಯ ವಿಧಾನ ಹೀಗಿದೆ
ಪ್ರಾರ್ಥನೆ (ಸಾಂದರ್ಭಿಕ ಚಿತ್ರ)
Follow us on

ಮುಸ್ಲಿಮರ ಪವಿತ್ರ ಹಬ್ಬವೆಂದೆ ಖ್ಯಾತಿ ಹೊಂದಿರುವ ರಂಜಾನ್ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಇಸ್ಲಾಮಿಕ್ ಕ್ಯಾಲೆಂಡರ್​ನಲ್ಲಿ 9ನೇ ತಿಂಗಳನ್ನು ರಂಜಾನ್ ತಿಂಗಳಾಗಿ ಪರಿಗಣಿಸಲಾಗುತ್ತದೆ ಮತ್ತು ಈ ತಿಂಗಳ 30 ದಿನ ಮುಸ್ಲಿಮರು ಬೆಳಿಗ್ಗೆಯಿಂದ ಸಂಜೆವರೆಗೆ ಉಪವಾಸವಿದ್ದು, ತಮ್ಮ ಹಿಂದಿನ ಪಾಪವನ್ನು ದೂರ ಮಾಡಿಕೊಳ್ಳಲು ಅಲ್ಲಹನನ್ನು ಕ್ಷಮೆ ಕೋರುತ್ತಾರೆ. ರಂಜಾನ್ ತಿಂಗಳು ಮುಗಿದು ಶವ್ವಾಲ್ ತಿಂಗಳ ಆರಂಭದ ಮೊದಲ ದಿನವೇ ಈದ್-ಉಲ್-ಫಿತರ್ ಅನ್ನು ವಿಶ್ವದಾದ್ಯಂತ ಮುಸ್ಲಿಮರು ಆಚರಿಸುತ್ತಾರೆ.

ಇಸ್ಲಾಮಿಕ್ ಕ್ಯಾಲೆಂಡರ್​ನ ಪ್ರಕಾರ ಶವ್ವಾಲ್ ಅಮಾವಾಸ್ಯೆಯನ್ನು ನೋಡುವುದರೊಂದಿಗೆ ಒಂದು ತಿಂಗಳ ಕಾಲ ಮಾಡಿದ ಉಪವಾಸದ ಅವಧಿಯು ಕೊನೆಗೊಳ್ಳುತ್ತದೆ ಮತ್ತು ರಂಜಾನ್​​ನ ಕೊನೆಯ ದಿನದಂದು ಅರ್ಧ ಚಂದ್ರಾಕಾರವನ್ನು ನೋಡಿದ ನಂತರ ಈದ್-ಉಲ್-ಫಿತರ್ ಆಚರಣೆ ಮಾಡಲಾಗುತ್ತದೆ. ಈದ್-ಉಲ್-ಫಿತರ್ ಅನ್ನು ಉಪವಾಸ ಮುರಿಯುವ ಹಬ್ಬ ಎಂದು ಕೂಡ ಕರೆಯಲಾಗುತ್ತದೆ.

ರಂಜಾನ್​ ಹಬ್ಬವನ್ನು ಸೌದಿ ಅರೇಬಿಯಾ ಮತ್ತು ವಿಶ್ವದ ಅನೇಕ ಭಾಗಗಳಲ್ಲಿ ಆಚರಿಸಲಾಗುತ್ತದೆ. ಸೌದಿ ಅರೇಬಿಯಾದಲ್ಲಿ ಚಂದ್ರನನ್ನು ಯಾವಾಗಲೂ ಮೊದಲು ನೋಡಲಾಗುತ್ತದೆ. ಈ ವರ್ಷ, ಈದ್ ಮೇ 13 ರ ಸಂಜೆ ಪ್ರಾರಂಭವಾಗಿ ಮೇ 14 ರ ವರೆಗೆ ಆಚರಣೆಯಲ್ಲಿ ಇರುತ್ತದೆ. ಅದರಂತೆ ಇಂದು ಮುಸ್ಲಿಮ್​ರು ಈದ್ ಆಚರಣೆ ಮಾಡುತ್ತಾರೆ.

ಇತಿಹಾಸ
ಇಸ್ಲಾಂ ಧರ್ಮದ ಪ್ರಕಾರ, ರಂಜಾನ್ ತಿಂಗಳಲ್ಲಿ ಮುಸ್ಲಿಮರ ಪವಿತ್ರ ಗ್ರಂಥವಾದ ಕುರಾನ್ ಅನ್ನು ಪ್ರವಾದಿ ಮುಹಮ್ಮದ್ ಬಹಿರಂಗಪಡಿಸಿದರು ಎಂದು ನಂಬಲಾಗಿದೆ. ಈದ್ ಇಸ್ಲಾಮಿಕ್ ಪ್ರಾರ್ಥನೆಯ ಮೂಲಕ ಆರಂಭವಾಗುತ್ತದೆ. ಈ ಪ್ರಾರ್ಥನೆಯ ನಂತರ ಧರ್ಮೋಪದೇಶ ನಡೆಯುತ್ತದೆ. ಬಳಿಕ ಮುಸ್ಲಿಮರು ಅಲ್ಲಾಹನನ್ನು ಕ್ಷಮೆ, ಕರುಣೆ, ಶಾಂತಿ ಕೋರುತ್ತಾರೆ ಮತ್ತು ಇದು ದೇವರ ಆರ್ಶೀವಾದ ಪಡೆಯಲು ಇರುವ ಮಾರ್ಗ ಎಂದು ನಂಬಲಾಗಿದೆ.

ಆಚರಣೆಗಳು
ಈದ್-ಉಲ್-ಫಿತರ್ ಜಗತ್ತಿನಾದ್ಯಂತ ಮುಸ್ಲಿಮರು ಆಚರಿಸುವ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಈ ದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರ್ಥನೆ ಮತ್ತು ಧರ್ಮೋಪದೇಶಗಳಿಗೆ ಹಾಜರಾಗುತ್ತಾರೆ. ಈ ದಿನ ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಒಂದು ತಿಂಗಳ ಉಪವಾಸದ ನಂತರ ತಾವು ಇಷ್ಟಪಟ್ಟಂತೆ ತಿನ್ನಲು ಮುಕ್ತರಾಗಿದ್ದಾರೆ. ಪ್ರತಿ ಮನೆಯಲ್ಲೂ ಪುಲಾವ್, ಸಲಾನ್, ಬಿರಿಯಾನಿ, ಹಲೀಮ್, ನಿಹಾರಿ, ಚಾಪ್ಲಿ ಕಬಾಬ್​, ಕೋಫ್ಟೆ ಮತ್ತು ಇನ್ನು ಹೆಚ್ಚು ರುಚಿಕರವಾದ ಆಹಾರವನ್ನು ಸಿದ್ಧಪಡಿಸುತ್ತಾರೆ.

ಸಿಹಿ ತಿಂಡಿಗಳಾದ ಸೆವಿಯನ್, ಸಂಪೂರ್ಣ ಕೊರ್ಮಾ (ಹಾಲಿನಲ್ಲಿ ಬೇಯಿಸಿದ ಸಿಹಿಯಾದ ಪದಾರ್ಥ), ಶಾಹಿ ತುಕ್ಡಾ ಮತ್ತು ರೋಸ್ ಶರ್ಬತ್ ಕುಟುಂಬ ಸದಸ್ಯರು, ಅತಿಥಿಗಳು ಮತ್ತು ಬಾಂಧವರಿಗೆ ನೀಡಲಾಗುತ್ತದೆ. ಮುಸ್ಲಿಮರು ಈ ದಿನದಂದು ಹೊಸ ಬಟ್ಟೆ ಧರಿಸುತ್ತಾರೆ. ಈದ್ ಮುಬಾರಕ್ ಶುಭಾಶಯಗಳೊಂದಿಗೆ ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಸ್ವಾಗತಿಸುತ್ತಾರೆ. ಈ ಸಂದರ್ಭದಲ್ಲಿ ಉಡುಗೊರೆಗಳು, ಆಹಾರ, ಸಿಹಿತಿಂಡಿಗಳನ್ನು ವಿತರಿಸಲಾಗುತ್ತದೆ ಮತ್ತು ಮಕ್ಕಳಿಗೆ ಹಿರಿಯರಿಂದ ಈಡಿ ಎಂದು ಕರೆಯಲ್ಪಡುವ ಹಣ ಮತ್ತು ಉಡುಗೊರೆಗಳನ್ನು ನೀಡಲಾಗುತ್ತದೆ.

ಕೊರೊನಾ ಸೋಂಕಿನ ಕಾರಣದಿಂದಾಗಿ ಈ ಬಾರಿ ಹಬ್ಬ ಸರಳವಾಗಿರಲಿದ್ದು, ಕೇವಲ ಕುಟುಂಬ ಸದಸ್ಯರು ತಮ್ಮ ತಮ್ಮ ಮನೆಯಲ್ಲಿ ಆಚರಿಸಬೇಕಾಗಿದೆ.

ಇದನ್ನೂ ಓದಿ:

Eid 2021 Special ರಂಜಾನ್ ಹಬ್ಬದ ವಿಶೇಷ ಹೆಚ್ಚಿಸಲು ಇಲ್ಲಿವೆ ಐದು ಸುಲಭ ತಿನಿಸುಗಳು

Published On - 10:36 am, Fri, 14 May 21