Hindu Tradition: ವಾರಕ್ಕೊಮ್ಮೆಯಾದರೂ ದೇವರಿಗೆ ಕೊಬ್ಬರಿ ಎಣ್ಣೆ ದೀಪ ಹಚ್ಚಿ; ಪ್ರಯೋಜನ ಸಾಕಷ್ಟಿವೆ

ಹಿಂದೂ ಧರ್ಮದಲ್ಲಿ ದೀಪಕ್ಕೆ ಅತೀವ ಪ್ರಾಮುಖ್ಯತೆಯಿದೆ. "ದೀಪಂ ಜ್ಯೋತಿ ಪರಬ್ರಹ್ಮ" ಮತ್ತು "ಶುಭಂ ಕರೋತಿ ಕಲ್ಯಾಣಂ" ಎಂಬ ಸ್ತೋತ್ರಗಳು ದೀಪಾರಾಧನೆಯ ಮಹತ್ವವನ್ನು ಸಾರುತ್ತವೆ. ಧಾರ್ಮಿಕ ಆಚರಣೆಗಳಲ್ಲಿ ತುಪ್ಪ ಮತ್ತು ವಿವಿಧ ಎಣ್ಣೆಗಳಿಂದ ದೀಪಗಳನ್ನು ಬೆಳಗಿಸುವ ಸಂಪ್ರದಾಯವಿದೆ. ಇವುಗಳಲ್ಲಿ ಕೊಬ್ಬರಿ ಎಣ್ಣೆ ದೀಪವು ವಿಶಿಷ್ಟ ಸ್ಥಾನ ಪಡೆದಿದೆ. ತೆಂಗಿನಮರವನ್ನು ಕಲ್ಪವೃಕ್ಷ ಎಂದು ಕರೆಯಲಾಗುತ್ತಿದ್ದು, ಅದರ ಪ್ರತಿ ಭಾಗವೂ ಮಾನವನಿಗೆ ಉಪಯೋಗಕಾರಿಯಾಗಿದೆ.

Hindu Tradition: ವಾರಕ್ಕೊಮ್ಮೆಯಾದರೂ ದೇವರಿಗೆ ಕೊಬ್ಬರಿ ಎಣ್ಣೆ ದೀಪ ಹಚ್ಚಿ; ಪ್ರಯೋಜನ ಸಾಕಷ್ಟಿವೆ
ಕೊಬ್ಬರಿ ಎಣ್ಣೆಯಿಂದ ದೀಪ
Image Credit source: Pinterest

Updated on: May 10, 2026 | 10:36 AM

ಹಿಂದೂ ಸಂಸ್ಕೃತಿಯಲ್ಲಿ ದೀಪಾರಾಧನೆಗೆ ವಿಶೇಷ ಮಹತ್ವವಿದೆ. ಅದರಲ್ಲೂ ಕೊಬ್ಬರಿ ಎಣ್ಣೆಯಿಂದ ದೀಪವನ್ನು ಬೆಳಗಿಸುವುದರಿಂದ ಹಲವು ಶುಭ ಫಲಗಳು ದೊರೆಯುತ್ತವೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಗುರೂಜಿಯವರು ಹೇಳುವಂತೆ, ಮಹಾಲಕ್ಷ್ಮಿ ದೇವಿಯ ಫೋಟೋ ಅಥವಾ ವಿಗ್ರಹದ ಮುಂದೆ ಕೊಬ್ಬರಿ ಎಣ್ಣೆ ದೀಪವನ್ನು ಹಚ್ಚಿ, ತೆಂಗಿನಕಾಯಿ ಮತ್ತು ಸಕ್ಕರೆಯ ನೈವೇದ್ಯ ಮಾಡಿ, ಸಕ್ಕರೆಗೆ ತುಪ್ಪ ಬೆರೆಸಿ ಪ್ರಸಾದ ಮಾಡಿದರೆ ಮನೆಯಲ್ಲಿ ಶುಭ ಕಾರ್ಯಗಳು ಬೇಗ ನಡೆಯುತ್ತವೆ. ಕುಲದೇವತೆಯ ಫೋಟೋ ಮುಂದೆ ಮೂರು ದಿನಗಳ ಕಾಲ ಅಖಂಡವಾಗಿ ಕೊಬ್ಬರಿ ಎಣ್ಣೆ ದೀಪ ಹಚ್ಚಿದರೆ ಮನೆಯ ಕಲಹಗಳು, ಕೋಪತಾಪಗಳು ನಿವಾರಣೆಯಾಗಿ ಸಮೃದ್ಧಿ ನೆಲೆಸುತ್ತದೆ. ಹೋಮಗಳಲ್ಲಿ ಹಸಿರು ರೇಷ್ಮೆ ವಸ್ತ್ರವನ್ನು ಕೊಬ್ಬರಿ ಎಣ್ಣೆಯಲ್ಲಿ ನೆನೆಸಿ ಅರ್ಪಿಸಿದರೆ ಧನ ಯೋಗ ಪ್ರಾಪ್ತವಾಗುತ್ತದೆ.

ಅರಳಿ ಮರದ ಬಳಿ ಕೊಬ್ಬರಿ ಎಣ್ಣೆ ದೀಪ:

ಅರಳಿ ಮರದ ಬಳಿ ಕೊಬ್ಬರಿ ಎಣ್ಣೆ ದೀಪ ಹಚ್ಚಿದರೆ ದಾಂಪತ್ಯ ಕಲಹಗಳು ದೂರವಾಗಿ ಅನ್ಯೋನ್ಯತೆ ಹೆಚ್ಚುತ್ತದೆ. ಮನೆಯ ಈಶಾನ್ಯ ಮೂಲೆಯಲ್ಲಿ 48 ಗಂಟೆಗಳ ಕಾಲ ಸತತವಾಗಿ ಕೊಬ್ಬರಿ ಎಣ್ಣೆ ದೀಪ ಹಚ್ಚಿದರೆ ಸಾಲಬಾಧೆ ನಿವಾರಣೆಯಾಗುತ್ತದೆ. ಶನಿವಾರದಂದು ವೆಂಕಟೇಶ್ವರ ಸ್ವಾಮಿಯ ಮುಂದೆ ಕೊಬ್ಬರಿ ಎಣ್ಣೆ ದೀಪ ಹಚ್ಚಿ, ಅವಲಕ್ಕಿ ಮತ್ತು ಬೆಲ್ಲವನ್ನು ನೈವೇದ್ಯವಾಗಿ ಅರ್ಪಿಸಿದರೆ ಭೂ ಕಲಹಗಳು, ಕಾನೂನು ವಿಷಯಗಳಲ್ಲಿ ಶುಭವಾಗುತ್ತದೆ ಮತ್ತು ಅಪವಾದಗಳಿಂದ ಮುಕ್ತಿ ಸಿಗುತ್ತದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಶಿವನ ವಿಗ್ರಹದ ಮುಂದೆ ಕೊಬ್ಬರಿ ಎಣ್ಣೆ ದೀಪ :

ಪ್ರತಿ ಸೋಮವಾರ ಸಂಜೆ ಸಂಧ್ಯಾಕಾಲದಲ್ಲಿ ಶಿವಾಲಯದಲ್ಲಿ ಅಥವಾ ಮನೆಯಲ್ಲಿರುವ ಶಿವನ ವಿಗ್ರಹದ ಮುಂದೆ ಕೊಬ್ಬರಿ ಎಣ್ಣೆ ದೀಪ ಹಚ್ಚಿದರೆ ಆಸೆ-ಆಕಾಂಕ್ಷೆಗಳು ಈಡೇರುತ್ತವೆ. ಪ್ರತಿ ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಗೆ ಕೊಬ್ಬರಿ ಎಣ್ಣೆ ದೀಪದಿಂದ ಆರತಿ ಮಾಡಿದರೆ ಸಂತಾನ ಫಲ ಲಭಿಸುತ್ತದೆ. ಅಮಾವಾಸ್ಯೆಯಂದು ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ಪಿತೃಗಳಿಗೆ ಸಂತೃಪ್ತಿ ದೊರೆತು ಎಲ್ಲ ವಿಧದಿಂದಲೂ ಶುಭವಾಗುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಕೊಬ್ಬರಿ ಎಣ್ಣೆ ದೀಪವನ್ನು ವಾರಕ್ಕೊಮ್ಮೆಯಾದರೂ, ವಿಶೇಷವಾಗಿ ಮಂಗಳವಾರದಂದು ಹಚ್ಚುವುದು ಒಳಿತೆಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us