Pitru Paksha: ಪಿತೃ ಪಕ್ಷದಲ್ಲಿ ಗಂಡ ಹೆಂಡತಿ ದೈಹಿಕ ಸಂಬಂಧ ಬೆಳೆಸಬಾರದು ಯಾಕೆ? ಶಾಸ್ತ್ರಗಳು ಹೇಳುವುದೇನು?
ಪಿತೃ ಪಕ್ಷವು ಪೂರ್ವಜರನ್ನು ಸ್ಮರಿಸುವ ಪವಿತ್ರ ಅವಧಿ. ಈ ಸಮಯದಲ್ಲಿ ಶ್ರಾದ್ಧ, ತರ್ಪಣ, ಪಿಂಡಪ್ರದಾನಗಳನ್ನು ಮಾಡಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ಈ ಅವಧಿಯಲ್ಲಿ ದೈಹಿಕ ಸಂಬಂಧ, ಗರ್ಭಧಾರಣೆ ಅಶುಭವೆಂದು ಪರಿಗಣಿಸಲಾಗಿದೆ. ಸಾತ್ವಿಕ ಆಹಾರ, ಬ್ರಹ್ಮಚರ್ಯ, ದಾನ-ಧರ್ಮಗಳನ್ನು ಮಾಡುವುದು ಶ್ರೇಯಸ್ಕರ. ಪಿತೃಗಳ ಆಶೀರ್ವಾದಕ್ಕಾಗಿ ಭಕ್ತಿಯಿಂದ ಸ್ಮರಿಸುವುದು ಮುಖ್ಯ.

ಪಿತೃ ಪಕ್ಷ, ಪೂರ್ವಜರನ್ನು ಶ್ರಾದ್ಧ ಆಚರಣೆಗಳ ಮೂಲಕ ಗೌರವಿಸಲು ಮೀಸಲಾಗಿರುವ ಪವಿತ್ರ ಅವಧಿಯಾಗಿದೆ. ಈ ಅವಧಿಯಲ್ಲಿ ನಮ್ಮ ಪೂರ್ವಜರು (ಪಿತೃಗಳು) ಭೂಮಿಗೆ ಆಗಮಿಸಿ, ತಮ್ಮ ವಂಶಸ್ಥರಿಂದ ನಡೆಯುವ ಶ್ರಾದ್ಧ, ತರ್ಪಣ ಮತ್ತು ಪಿಂಡಪ್ರದಾನಗಳಿಂದ ತೃಪ್ತಿಗೊಳ್ಳುತ್ತಾರೆ. ಈ ಸಮಯದಲ್ಲಿ ಕುಟುಂಬದವರು ತಮ್ಮ ಪಿತೃಗಳನ್ನು ಸ್ಮರಿಸಿ, ಅವರಿಗೆ ತರ್ಪಣ, ಪಿಂಡಪ್ರದಾನ ಹಾಗೂ ಅನ್ನವನ್ನು ಅರ್ಪಿಸುತ್ತಾರೆ. ಇದರಿಂದ ಅವರ ಆತ್ಮಗಳಿಗೆ ಶಾಂತಿ ದೊರೆಯುತ್ತದೆ ಎಂದು ನಂಬಲಾಗಿದೆ.
ವೈದಿಕ ಕ್ಯಾಲೆಂಡರ್ ಪ್ರಕಾರ, ಈ ವರ್ಷದ ಪಿತೃ ಪಕ್ಷವು ಸೆಪ್ಟೆಂಬರ್ 7ರಂದು ಪ್ರಾರಂಭವಾಗಿದ್ದು, ಇದು ಸೆಪ್ಟೆಂಬರ್ 21 ರಂದು ಸರ್ವಪಿತೃ ಅಮಾವಾಸ್ಯೆಯೊಂದಿಗೆ ಕೊನೆಗೊಳ್ಳುತ್ತದೆ. ಶಾಸ್ತ್ರಗಳ ಪ್ರಕಾರ, ಪಿತೃಪಕ್ಷದಲ್ಲಿ ಗಂಡ ಹೆಂಡತಿ ಸೇರುವುದು, ದಾಂಪತ್ಯ ಸಂಬಂಧ ಹೊಂದುವುದು ಅಶುದ್ಧವೆಂದು ಹೇಳಲಾಗಿದೆ. ಇದರಿಂದ ಪಿತೃಗಳು ಕೋಪಗೊಂಡು, ಪಿತೃದೋಷ ಉಂಟಾಗಬಹುದು. ಧಾರ್ಮಿಕ ದೃಷ್ಟಿಯಿಂದಲೂ, ಪಿತೃಪಕ್ಷದಲ್ಲಿ ನಡೆಯುವ ಶ್ರಾದ್ಧ, ತರ್ಪಣ, ಹವನ ಇತ್ಯಾದಿ ಎಲ್ಲಾ ಕರ್ಮಗಳಲ್ಲಿ ದೇಹ ಮತ್ತು ಮನಸ್ಸಿನ ಶುದ್ಧತೆ ಅತ್ಯಗತ್ಯ. ಆದ್ದರಿಂದ, ದಾಂಪತ್ಯ ಸಂಬಂಧ ಹೊಂದುವುದು ಶುದ್ಧತೆಯ ವಿರುದ್ಧವೆಂದು ಹೇಳಲಾಗಿದೆ.
ಇದನ್ನೂ ಓದಿ: ಹಳೆಯದ್ದು ಬಿಸಾಕಿ ಹೊಸ ಪರ್ಸ್ ತೆಗೆದುಕೊಳ್ಳುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ
ಇದೇ ರೀತಿ, ಪಿತೃಪಕ್ಷದಲ್ಲಿ ಸಂತಾನೋತ್ಪತ್ತಿಯೂ ಶ್ರೇಯಸ್ಕರವಲ್ಲ ಎಂದು ನಂಬಲಾಗಿದೆ. ಈ ಅವಧಿಯಲ್ಲಿ ಜನಿಸಿದ ಮಕ್ಕಳಿಗೆ ಪಿತೃಗಳ ಆಶೀರ್ವಾದ ದೊರೆಯುವುದಿಲ್ಲವೆಂದು, ಹಾಗಾಗಿ ಅವರು ಜೀವನದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ ಎಂಬ ನಂಬಿಕೆ ಇದೆ. ಪಿತೃ ಪಕ್ಷದ ಅವಧಿಯಲ್ಲಿ ಪತಿ ಮತ್ತು ಪತ್ನಿಯ ನಡುವೆ ದೈಹಿಕ ಸಂಬಂಧಗಳು ಏರ್ಪಟ್ಟು ಗರ್ಭ ಧರಿಸಿದರೆ ಆ ಮಗು ಭೂಮಿಗೆ ಬರುತ್ತಿದ್ದಂತೆ ಆರೋಗ್ಯದ ಸಮಸ್ಯೆಗಳು ಹೊತ್ತು ತರುತ್ತದೆ ಎನ್ನುವ ನಂಬಿಕೆಯಿದೆ.
ಆದ್ದರಿಂದ ಪಂಡಿತರು ಮತ್ತು ಆಚಾರ್ಯರು ಈ ಅವಧಿಯಲ್ಲಿ ಸಾತ್ವಿಕ ಆಹಾರ ಸೇವನೆ, ಬ್ರಹ್ಮಚರ್ಯ ಪಾಲನೆ, ಸುಳ್ಳು, ವಂಚನೆ, ಕಪಟ, ಕ್ರೋಧಗಳಿಂದ ದೂರವಿದ್ದು, ದಾನ-ಪುನ್ಯ ಮಾಡಬೇಕು, ಅಗತ್ಯವಿರುವವರಿಗೆ ಅನ್ನ ನೀಡಬೇಕು, ಮತ್ತು ಪಿತೃಗಳನ್ನು ಭಕ್ತಿಯಿಂದ ಸ್ಮರಿಸಬೇಕು ಎಂದು ಸಲಹೆ ನೀಡುತ್ತಾರೆ. ಈ ರೀತಿಯಾಗಿ ಪಿತೃಪಕ್ಷದಲ್ಲಿ ಸಂಯಮಿತ ಹಾಗೂ ಸಾತ್ವಿಕ ಜೀವನ ನಡೆಸುವುದೇ ಅತ್ಯಂತ ದೊಡ್ಡ ಪುಣ್ಯವೆಂದು ಪರಿಗಣಿಸಲಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:33 am, Thu, 18 September 25




