
ಹಿಂದೂ ಧರ್ಮದಲ್ಲಿ, ಮಾಘ ಮಾಸದಲ್ಲಿ ಬರುವ ಹುಣ್ಣಿಮೆಯ ದಿನವನ್ನು ಮಾಘ ಪೂರ್ಣಿಮಾ ಅಥವಾ ಮಾಘ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಈ ದಿನ ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಮತ್ತು ದಾನ ಮಾಡುವುದಕ್ಕೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಿಂದ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಪುರಾಣಗಳ ಪ್ರಕಾರ, ಮಾಘಿ ಹುಣ್ಣಿಮೆಯಂದು ಎಲ್ಲಾ ಪಾಪಗಳನ್ನು ನಾಶ ಮಾಡುವ ಗಂಗಾ ನದಿಯಲ್ಲಿ ಸ್ನಾನ ಮಾಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಇದರೊಂದಿಗೆ, ಬಡವರಿಗೆ ಅಥವಾ ಅವಶ್ಯಕತೆ ಇರುವವರಿಗೆ ದಾನ ಮಾಡುವುದು ಸಹ ಮಹತ್ತರ ಶುಭ ಫಲಗಳನ್ನು ನೀಡುತ್ತದೆ. ಏಕೆಂದರೆ ಮಾಘ ಪೂರ್ಣಿಮೆ ಅಥವಾ ಹುಣ್ಣಿಮೆಯ ದಿನದಂದು ದಾನ ಮಾಡುವ ಮೂಲಕ ಪಾಪಗಳು ಪರಿಹಾರವಾಗಿ ಜನರ ಆಸೆಗಳು ಈಡೇರುತ್ತವೆ. ಇನ್ನು ಪ್ರಯಾಗ್ ರಾಜ್ ನ ದಡದಲ್ಲಿ ಕೆಲವು ಭಾಗದ ಜನರು ಕಲ್ಪವಾಸ ಎಂಬ ಪದ್ದತಿಯನ್ನು ಆಚರಣೆ ಮಾಡುತ್ತಾರೆ. ಏನದು? ಯಾಕಾಗಿ ಆಚರಣೆ ಮಾಡಲಾಗುತ್ತದೆ? ಇಲ್ಲಿದೆ ಮಾಹಿತಿ.
ಮಾಘ ಪೂರ್ಣಿಮಾ ಅಥವಾ ಹುಣ್ಣಿಮೆಯು ಫೆ. 23 ರಂದು ಮಧ್ಯಾಹ್ನ 3:36 ಕ್ಕೆ ಪ್ರಾರಂಭವಾಗುತ್ತದೆ. ಫೆಬ್ರವರಿ 24 ರಂದು ಸಂಜೆ 6:03 ಕ್ಕೆ ಈ ತಿಥಿ ಕೊನೆಗೊಳ್ಳುತ್ತದೆ. ಹಾಗಾಗಿ ಮಾಘ ಹುಣ್ಣಿಮೆಯ ಉಪವಾಸವನ್ನು ಫೆಬ್ರವರಿ 24 ರಂದು ಆಚರಿಸಲಾಗುತ್ತದೆ. ಈ ದಿನ, ಗಂಗಾ ನದಿಯಲ್ಲಿ ಸ್ನಾನ ಮಾಡಿ ಬಳಿಕ ಸೂರ್ಯ ದೇವರ ಆರಾಧನೆ ಮಾಡುವುದಕ್ಕೆ ವಿಶೇಷ ಮಹತ್ವವಿದೆ.
ದಾನ ಮಾಡುವುದಕ್ಕೆ ಶುಭ ಸಮಯ ಬೆಳಿಗ್ಗೆ 05.11 ರಿಂದ 06.02 ರ ವರೆಗೆ.
ಇನ್ನು ಅಭಿಜಿತ್ ಮುಹೂರ್ತವು ಮಧ್ಯಾಹ್ನ 12:12 ರಿಂದ 12:57 ರ ವರೆಗೆ ಇರುತ್ತದೆ.
ಮನೆಗಳಲ್ಲಿ ಸತ್ಯನಾರಾಯಣ ಪೂಜೆ ಮಾಡುವವರಿಗೆ ಶುಭ ಸಮಯ ಬೆಳಿಗ್ಗೆ 08:18 ರಿಂದ 9:43 ರ ವರೆಗೆ.
ಲಕ್ಷ್ಮೀ ದೇವಿಯ ಆರಾಧನೆಯ ಸಮಯವು ಬೆಳಿಗ್ಗೆ 12:09 ರಿಂದ ಮಧ್ಯಾಹ್ನ 12:59 ರ ವರೆಗೆ ಇರುತ್ತದೆ.
ಚಂದ್ರೋದಯದ ಸಮಯ ಸಂಜೆ 06:12 ಕ್ಕೆ.
ಇದನ್ನೂ ಓದಿ: ದಿನಗಳಿಗೆ ಅನುಗುಣವಾಗಿ ವಸ್ತು ದಾನ ಮಾಡಿ, ಶುಭ ಫಲಿತಾಂಶ ಖಂಡಿತ
ಮಾಘ ಮಾಸದಲ್ಲಿ ಕೆಲವು ಭಾಗದ ಜನರು ಕಲ್ಪವಾಸ ಎಂಬ ಪದ್ದತಿಯನ್ನು ಆಚರಿಸುತ್ತಾರೆ. ಈ ಬಗ್ಗೆ ನೀವು ಕೇಳಿರಬಹುದು. ಪುರಾಣಗಳ ಪ್ರಕಾರ, ಕಲ್ಪವಾಸ ಸಂಪ್ರದಾಯವು ಅನೇಕ ವರ್ಷಗಳಿಂದ ನಡೆಯುತ್ತಾ ಬಂದಿದೆ. ಏಕೆಂದರೆ ಈ ಸಮಯದಲ್ಲಿ, ಜನರು ಪ್ರಯಾಗ್ ರಾಜ್ ನ ದಡದಲ್ಲಿ ಉಳಿದುಕೊಂಡು ಅಲ್ಲಿಯೇ ತಮ್ಮ ಆಹಾರಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಇದಲ್ಲದೆ, ಅಲ್ಲಿಯೇ ದೇವರನ್ನು ಪೂಜಿಸುತ್ತಾರೆ. ಈ ಆಚರಣೆಯು ಮಾನವ ಜೀವನದ ಆಧ್ಯಾತ್ಮಿಕತೆಯ ಒಂದು ಹಂತ ಎಂದು ನಂಬಲಾಗಿದೆ, ಅದರ ಮೂಲಕ ಸ್ವಯಂ ನಿಯಂತ್ರಣ ಮತ್ತು ಮನಸ್ಸಿನ ಶುದ್ಧೀಕರಣವನ್ನು ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ತಮ್ಮ ಆಶಯ ಮತ್ತು ಬೇಡಿಕೆಗಳು ನೆರವೇರುತ್ತವೆ ಎಂಬುದು ಭಕ್ತರ ನಂಬಿಕೆ. ಈ ಅವಧಿಯಲ್ಲಿ ಭಕ್ತರು ಹಣ್ಣನ್ನು ಮಾತ್ರ ಸೇವನೆ ಮಾಡುತ್ತಾರೆ. ಅದಲ್ಲದೆ ಮಾಘ ಹುಣ್ಣಿಮೆಯಂದು ದೇವಾನುದೇವತೆಗಳು ಭೂಮಿಗೆ ಬಂದು ಮಾನವ ರೂಪ ತಳೆದು ಪ್ರಯಾಗರಾಜ್‌ನಲ್ಲಿ ಸ್ನಾನ, ದಾನ ಮತ್ತು ಜಪ ಮಾಡುತ್ತಾರೆ ಎಂದು ನಂಬಲಾಗಿದೆ. ಹಾಗಾಗಿ ಪ್ರಯಾಗ್ ರಾಜ್ ನ ದಡದಲ್ಲಿಯೂ ಕೂಡ ಕಲ್ಪವಾಸ ಪದ್ದತಿ ಜಾರಿಯಲ್ಲಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ