Benefits of Chanting Gayatri Mantra: ಸಂಧ್ಯಾವಂದನೆ ನಿತ್ಯ ನೈಮಿತ್ತಿಕ ಕರ್ಮಗಳಲ್ಲೊಂದಾಗಿದೆ. ಅದನ್ನು ತಪ್ಪದೇ ಆಚರಿಸುವುದು ಮನುಷ್ಯನ ಆದ್ಯ ಕರ್ತವ್ಯ. ಮನುಷ್ಯನ ಪ್ರಮುಖ ಗುಣವೇ ಅಹಂಕಾರ. ನಾನು ಎಂಬ ಈ ಅಹಂಕಾರವನ್ನು ದೂರ ಮಾಡುವುದೇ ಸಂಧ್ಯಾವಂದನೆಯಿಂದಾಗುವ ಸಾಧನೆ! ಸಂಧ್ಯಾವಂದನೆಯಿಂದಾಗುವ (sandhyavandane) ನಾನಾ ಪರಿಣಾಮಗಳ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
Secrets of Gayatri Mantra: ಗಾಯತ್ರಿ ಮಂತ್ರ ಎಂಬುದು ಮಂತ್ರವಲ್ಲ. ಅದು ಒಂದು ಛಂದಸ್ಸು. ಗಾಯತ್ರೀ ಮಂತ್ರ ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಬ್ರಹ್ಮ ಪವಿತ್ರವಾದ ಸೂರ್ಯ ನಾರಾಯಣನಿಂದ ಉದ್ಭವಿಸಲ್ಪಟ್ಟ ಗಾಯತ್ರಿ ಮಂತ್ರ ಅತ್ಯಂತ ಪ್ರಭಾವಶಾಲಿಯಾದುದು. ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ನಮ್ಮ ಋಷಿಮುನಿಗಳು ನಮಗೆ ಬಿಟ್ಟು ಹೋಗಿರುವ ನಮ್ಮ ಜನ್ಮವನ್ನು ನಾವೇ ಉದ್ಧಾರ ಮಾಡಿಕೊಳ್ಳಬಹುದಾದ ದಿವ್ಯಮಂತ್ರವಾಗಿದೆ ಎಂದರೆ ತಪ್ಪಾಗಲಾರದು.
ಗಾಯತ್ರಿ ಮೂಲತಃ ಸಂಸ್ಕೃತ ಪದವಾದ ಗಾಯತ್ರ ಪದದ ಸ್ತ್ರೀಲಿಂಗ ರೂಪ. ಈ ಪದವನ್ನು ಸಂಸ್ಕೃತದಲ್ಲಿ ಗಾಯಂತಮ್ ತ್ರಾಯತೇ ಯಸ್ಮಾತ್ ಇತಿ ಗಾಯತ್ರಾ ಎಂದು ಬಿಡಿಸುತ್ತಾರೆ. ಭಾಷಾಂತರಿಸಿದರೆ ಯಾವುದರ ಉಚ್ಚಾರದಿಂದ ಸಂಕಷ್ಟ ತೀರುವುದೊ ಅದೆ ಗಾಯತ್ರ ಎಂಬ ಅರ್ಥ ಮೂಡಿ ಬರುತ್ತದೆ. ಹಿಂದೂ ಧರ್ಮಾನುಯಾಯಿಗಳ ವಚನ ಲೇಖನಗಳಲ್ಲಿ ಮತ್ತು ಧರ್ಮ ಗ್ರಂಥಗಳಲ್ಲಿ ಈ ಪದವನ್ನು ಮೂರು ಸ್ವರೂಪದಲ್ಲಿ ಕಾಣಬಹುದು.
ಗಾಯತ್ರೀ ದೇವಿ (ಸಾವಿತ್ರಿ) ಬ್ರಹ್ಮನ ಪತ್ನಿಯಾದ ಸರಸ್ವತಿಯ ಸ್ವರೂಪ ಎಂಬ ಪ್ರತೀತಿ ಇದೆ. ವೇದ ಮಾತೆ ಎಂದು ಕರೆಯಲ್ಪಡುವ ಗಾಯತ್ರಿ ದೇವಿಯನ್ನು ಐದು ಮುಖ ಮತ್ತು ಹತ್ತು ಬಾಹುಗಳುಳ್ಳವಳು, ಕಮಲಾಸೀನಳು ಮತ್ತು ಹಂಸವಾಹಿನಿಯೆಂದು ವರ್ಣಿಸುತ್ತಾರೆ. ಕೆಲವರು ವೈದಿಕ ಕಾಲದಲ್ಲಿ ಈ ದೇವತೆಯ ಉಲ್ಲೇಖವಿರಲಿಲ್ಲ ಎಂದು ವಾದಿಸುತ್ತಾ, ಗಾಯತ್ರೀ ದೇವಿಯ ಅರ್ಚನೆ ಅವೈದಿಕ ಎಂದು ಪರಿಗಣಿಸುತ್ತಾರೆ. ಆದರೆ ಸಾಮಾನ್ಯವಾಗಿ ಗಾಯತ್ರೀ ದೇವಿಯನ್ನು ಎಲ್ಲರು ಸ್ವೀಕರಿಸಿದ್ದಾರೆ.
Also Read: Thanjavur Brihadeeswara Temple: ಸಾವಿರ ವರ್ಷಗಳಷ್ಟು ಹಳೆಯ ಈ ದೇವಾಲಯದಲ್ಲಿ ಅಡಗಿದೆ ಊಹಿಸಲೂ ಆಗದಷ್ಟು ವಿಸ್ಮಯ
ಗಾಯತ್ರೀ ಛಂದಸ್ಸು – ೨೪ ಅಕ್ಷರಗಳ ತ್ರಿಪದಿ
ಗಾಯತ್ರೀ ಮಂತ್ರ – ಋಗ್ವೇದದಲ್ಲಿ ಮೊದಲು ಕಾಣಿಸಿಕೊಂಡು, ನಂತರ ಇತರ ವೇದೋಪನಿಷತ್‌ಗಳಲ್ಲಿ ಪ್ರಸ್ತಾಪವಿರುವ ಹಿಂದೂ ಧರ್ಮದ ಒಂದು ಪ್ರಮುಖ ಮಂತ್ರ. ಗಾಯತ್ರೀ ಛಂದಸ್ಸಿನಲ್ಲಿ ಬರೆದ ಯಾವುದೆ ಮಂತ್ರವನ್ನು ಗಾಯತ್ರೀ ಮಂತ್ರ ಎಂದು ಕರೆಯುವ ಪ್ರತೀತಿ ಕೂಡ ಇದೆ.
ಗಾಯತ್ರೀ ದೇವಿ – ವೇದಮಾತೆ ಮತ್ತು ದೇವಿ ಸರಸ್ವತಿಯ ಸ್ವರೂಪ.
ವೇದದ ಪ್ರಕಾರ ದೇವಿ ಸನ್ಯಾರ ಅವತಾರ. ವಟುಗಳನ್ನು ಸಲಹುವಳು.
ಗಾಯತ್ರೀ ಮಂತ್ರ (ಸಾವಿತ್ರ ಮಂತ್ರ ಎಂದೂ ಕರೆಯುವುದುಂಟು). ಈ ಮಂತ್ರದಲ್ಲಿ ಸವಿತೃ ದೇವನನ್ನು ಆವಾಹನೆ ಮಾಡಿರುವ ಕಾರಣದಿಂದ, ಈ ಮಂತ್ರವನ್ನು ಸಾವಿತ್ರ ಮಂತ್ರ ಎಂದು ಕೂಡ ಕರೆಯುತ್ತಾರೆ. ಗಾಯತ್ರೀ ಮಂತ್ರ ಬ್ರಹ್ಮರ್ಷಿ ವಿಶ್ವಾಮಿತ್ರನಿಂದ ದರ್ಶಿಸಲ್ಪಟ್ಟಿದೆ ಎಂದು ಕೆಲವರು ನಂಬುತ್ತಾರೆ. ಆದರೆ ಗಾಯತ್ರೀ ಮಂತ್ರ ಇರುವ ಋಗ್ವೇದವೂ ಸೇರಿದಂತೆ, ವೇದಗಳೆಲ್ಲ ಬ್ರಹ್ಮನ ಮುಖಾಂತರ ಹೊಮ್ಮಿದವು ಎಂಬುದು ಪ್ರಚಲಿತದಲ್ಲಿರುವ ಪುರಾಣ ಕಥೆ.
ಉಪನಯನ ಸಂಸ್ಕಾರದಲ್ಲಿ ಉಪನೀತನಿಗೆ ಈ ಮಂತ್ರವನ್ನು ಉಪದೇಶಿಸುತ್ತಾರೆ. ಬ್ರಹ್ಮೋಪದೇಶ ರೂಪವಾದ ಈ ಮಂತ್ರದಿಂದ ಉಪನೀತ ವಿಪ್ರನಾಗುತ್ತಾನೆ. ಮನುಸ್ಮೃತಿಯಲ್ಲಿ ತಿಳಿಸಿರುವಂತೆ ಗಾಯತ್ರಿ ಸಕಲ ವೇದಗಳ ಸಾರವಾದುದು, ಪರಬ್ರಹ್ಮ ಸ್ವರೂಪವುಳ್ಳದ್ದು. ಓಂಕಾರಪೂರ್ವಕ ಸಂಧ್ಯಾಕಾಲಗಳಲ್ಲಿ ವೇದಮಾತೃವಾದ ಈ ಮಂತ್ರವನ್ನು ಜಪಿಸುವುದರಿಂದ ವೇದಪಠನ ಪುಣ್ಯ ಲಭಿಸುತ್ತದೆ, ಮಹಾಪಾತಕಗಳು ನಶಿಸುತ್ತವೆ.
ವೈದಿಕ ಕಾಲದಿಂದಲೂ ಗಾಯತ್ರಿ ಮಂತ್ರ ಯಾವುದೆ ವರ್ಗ, ಜಾತಿ ಅಥವಾ ಲಿಂಗಕ್ಕೆ ಸೀಮಿತಪಟ್ಟಿಲ್ಲ ಯಾರು ಬೇಕಾದರು ಇದನ್ನು ಉಚ್ಚರಿಸಬಹುದು ಎಂಬುವುದು ಅನೇಕ ಧರ್ಮಶಾಸ್ತ್ರಜ್ಞರ ಅಭಿಪ್ರಾಯ. ಋಗ್ವೇದದದ ೩.೬೨.೧೦ನೆ (೩ನೆ ಮಂಡಲ, ೬೨ನೆ ಸೂಕ್ತ, ೧೦ನೆ ರಿಚ) ಮಂತ್ರವಾಗಿರುವ ಇದು, “ಓಂ ಭೂರ್ಭುವಃ ಸ್ವಃ” ಎಂಬ ಪೀಠಿಕೆ (ಯಜುರ್ವೇದದ ಸೂತ್ರದಂತೆ) ಸೇರಿ ಹೀಗೆ ಬಳಕೆಯಲ್ಲಿದೆ.
ಭೂಮಿ ಆಕಾಶ ಮತ್ತು ಅಂತರಿಕ್ಷವನ್ನಾವರಿಸಿದ ತೇಜೋಮಯನಾದ, ದಿವ್ಯ ಸ್ವರೂಪನಾದ, ಪೂಜಿಪನಾದ ಆ ಪರಬ್ರಹ್ಮ(ಸವಿತೃ ಅಥವ ಸೂರ್ಯ)ನಮ್ಮ ಬುದ್ಧಿ ವಿವೇಕಗಳನ್ನು ಬೆಳಕಿನೆಡೆ(ಜ್ಞಾನದ ಬೆಳಕಿನೆಡೆ)ಗೆ ಪ್ರೇರಿಸಲಿ.
ಬೆಳಕಿನ ಪ್ರತೀಕವಾದ ಸೂರ್ಯದೇವನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ “ನಮ್ಮ ಬುದ್ಧಿ ಮತ್ತು ಕರ್ಮಗಳು ಸದಾ ಉತ್ತಮ ಮಾರ್ಗದಲ್ಲಿ ನೆಲೆಗೊಳ್ಳುವಂತೆ ಪ್ರಚೋದಿಸು’ ಎಂದು ಪ್ರಾರ್ಥಿಸುವ ಮಹಾಮಂತ್ರವೇ ಗಾಯತ್ರಿಮಂತ್ರ. ಒಟ್ಟು 24 ಅಕ್ಷರಗಳನ್ನು ಒಳಗೊಂಡಿರುವ ಗಾಯತ್ರೀ ಮಂತ್ರವನ್ನು ನಿತ್ಯ ಜಪಿಸುವುದರಿಂದ ದೇಹದ ಆರಿಸಿದ 24 ಗ್ರಂಥಿಗಳನ್ನು ಬಲಗೊಳಿಸುತ್ತದೆ. ಪವಿತ್ರ ಗಾಯತ್ರಿ ಉಚ್ಚಾರದ ಮೊದಲಿಗೆ ಭೂಃ ಭುವಃ ಸ್ವಃ ಎಂಬ ವ್ಯಾಹೃತಿಗಳು ಚೈತನ್ಯರೂಪಿ ಆನಂದದ ಪ್ರತೀಕಗಳು.
ಭೂಃ ಎಂದರೆ ಅಗ್ನಿ, ಭುವಃ ಎಂದರೆ ವಾಯು, ಸ್ವಃ ಎಂದರೆ ಆದಿತ್ಯ. ಈ ಮೂವರೂ ಕೂಡಿಕೊಂಡ ರೂಪ ಭಗವಾನ್ ಸೂರ್ಯನದು. ಸರ್ವಶಕ್ತಿರೂಪನ ಭಕ್ತಿಯುತ ಪೂಜೆಗೆ ಇದು ನಾಂದಿ.ಯುಗಯುಗಗಳಿಂದಲೂ ಈ ಮಂತ್ರವನ್ನು ಅಗ್ನಿಸಮ್ಮುಖದಲ್ಲೇ ಸ್ವೀಕರಿಸುತ್ತ ಬಂದ ವಾಡಿಕೆ ನಮ್ಮದು. ಅಗ್ನಿಸಮ್ಮುಖದಲ್ಲೇ ಸ್ವೀಕರಿಸಲಾಗುವ ಏಕ ಮಾತ್ರ ಮಂತ್ರ ಇದು.
ಗಾಯತ್ರೀ ಮಂತ್ರದೊಡನೆ ಒಂದು ಲಕ್ಷ ತಿಲಹೋಮ ಮಾಡಿದರೆ ಸರ್ವಪಾತಕಗಳೂ ನಶಿಸುತ್ತವೆ. ತುಪ್ಪದಿಂದ ಹೋಮ ಮಾಡಿದರೆ ಆಯಸ್ಸು ಹೆಚ್ಚುತ್ತದೆ. ದಧಿಯಿಂದ ಹೋಮ ಮಾಡಿದರೆ ಮಕ್ಕಳಾಗುತ್ತಾರೆ. ಸಮಿತ್ತಿನಿಂದ ಹೋಮ ಮಾಡಿದರೆ ಗ್ರಹಪೀಡೆ ನಿವಾರಣೆಯಾಗುತ್ತದೆ. ಇದು ಸರ್ವಾಭೀಷ್ಟ ಸಿದ್ಧಿಕರ ಮಂತ್ರ. ಇದನ್ನು ಜಪಿಸಿದವರಿಗೆ ಯಾವ ವಿಧವಾದ ಭಯವೂ ಇರುವುದಿಲ್ಲ. ಪ್ರತಿ ವರ್ಷ ಶ್ರಾವಣ ಮಾಸ ಕೃಷ್ಣ ಪಕ್ಷ ಪಾಡ್ಯದ ದಿವಸ ಮಿಥ್ಯಾಧೀತ (ದೋಷ) ಪ್ರಾಯಶ್ಚಿತ್ತಕ್ಕಾಗಿ ಒಂದು ಸಾವಿರ ಸಂಖ್ಯೆಯಲ್ಲಿ ಗಾಯತ್ರೀ ಜಪ ಅಥವಾ ಹೋಮವನ್ನು ಮಾಡುವುದು ರೂಢಿಯಲ್ಲಿದೆ.
# ನಿತ್ಯವೂ ಸಂಧ್ಯಾವಂದನೆ ಮಾಡುವುದರಿಂದ ಚಿತ್ತಚಾಂಚಲ್ಯ ದೂರವಾಗಿ ಏಕಾಗ್ರತೆ ಹೆಚ್ಚುತ್ತದೆ.
# ಭಗವಂತನಲ್ಲಿ ಶ್ರದ್ಧೆ , ನಂಬಿಕೆ , ಪ್ರೀತಿ , ಭಕ್ತಿ ಮುಂತಾದ ಭಾವನೆಗಳು ಅಚಲವಾಗಿ ವ್ಯಕ್ತಿ ಆಧ್ಯಾತ್ಮ ಸಾಧನೆಗೆ ಅರ್ಹನಾಗುತ್ತಾನೆ.
# ವ್ಯಕ್ತಿಯ ಅಂತಃಪ್ರೇರಣೆ ಜಾಗೃತವಾಗಿ ಜೀವನದ ಪ್ರತಿಕ್ಷಣದಲ್ಲೂ ಸನ್ಮಾರ್ಗದಲ್ಲಿ ನಡೆಯುವಂತೇ ಪ್ರೇರೇಪಿಸುತ್ತದೆ.
# ಅಂತಃಕರಣದ ಸಂಸ್ಕಾರದಿಂದ ಜನ್ಮಜನ್ಮಾಂತರದ ಅಜ್ಞಾನ ದೂರವಾಗಿ ವ್ಯಕ್ತಿ ಸಂಸ್ಕಾರವಂತನಾಗುತ್ತಾನೆ.
# ಮನುಷ್ಯನ ಕಾಂತಿ ಹಾಗೂ ತೇಜಸ್ಸು ಅಧಿಕವಾಗುತ್ತದೆ.
# ಮಾತಿನಲ್ಲಿ ಮೃದುತ್ವ, ವಿನಯ ಹಾಗೂ ಸತ್ಯ ನೆಲೆಗೊಳ್ಳುತ್ತದೆ.
# ಮನಸ್ಸಿನಲ್ಲಿ ಸದ್ಭಾವನೆ , ಶ್ರೇಷ್ಠ ವಿಚಾರ ಹಾಗೂ ಸಾತ್ವಿಕ ಗುಣಗಳು ಸ್ಥಾನ ಪಡೆಯುತ್ತವೆ.
# ಮನಸ್ಸಿನಲ್ಲಿ ಸಂಕಲ್ಪ ಶಕ್ತಿಯು ಪ್ರಬಲವಾಗುತ್ತದೆ.
# ಶಾಂತಿ, ಸಂತೋಷ, ಕ್ಷಮೆ, ದಯೆ, ಪ್ರೀತಿ ಮುಂತಾದ ಸದ್ಭಾವನೆಗಳು ಮನದಲ್ಲಿ ನೆಲೆಗೊಳ್ಳುತ್ತವೆ.
# ಮನುಷ್ಯನಲ್ಲಿರುವ ಪ್ರಮುಖ ಗುಣ ಅಹಂಕಾರ. ಅಹಂಕಾರದ ಮೂಲರೂಪ ನಾನು. ನಾನು ಎಂಬ ಭಾವನೆ ಬಂದಾಗ ಆಧ್ಯಾತ್ಮ ಸಾಧನೆ ಸಾಧ್ಯವಿಲ್ಲ. ಸಂಧ್ಯಾವಂದನೆ ನಾನು ಎಂಬ ಅಹಂಕಾರವನ್ನು ದೂರ ಮಾಡಿ, ವ್ಯಕ್ತಿ ಆಧ್ಯಾತ್ಮ ಸಾಧನೆ ಮಾಡಲು ಪ್ರೇರೇಪಿಸುತ್ತದೆ.
# ಪ್ರಾತಃಕಾಲದ ಸಂಧ್ಯಾವಂದನೆ ರಾತ್ರಿಯ ಪಾಪಗಳನ್ನು ನಾಶಗೊಳಿಸುತ್ತದೆ.
ಮಧ್ಯಾಹ್ನದ ಸಂಧ್ಯಾವಂದನೆ ಪ್ರಾತಃಕಾಲದಿಂದ ಮಧ್ಯಾಹ್ನದವರೆಗೆ ಮಾಡಿದ ಪಾಪಗಳನ್ನು ನಾಶಗೊಳಿಸುತ್ತದೆ
ಸಾಯಂಕಾಲದ ಸಂಧ್ಯಾವಂದನೆ ಮಧ್ಯಾಹ್ನದಿಂದ ಸಂಜೆಯವರೆಗೆ ಮಾಡಿದ ಪಾಪಗಳನ್ನು ನಾಶಗೊಳಿಸುತ್ತದೆ.
ಹಾಗಾಗಿ ನಿತ್ಯಸಂಧ್ಯಾವಂದನೆಯನ್ನು ಮಾಡುವವನು ಪಾಪಗಳಿಂದ ವಿಮುಕ್ತನಾಗಿರುತ್ತಾನೆ.
# ಸಂಧ್ಯಾವಂದನೆಯಿಂದ ದೈಹಿಕ ಆರೋಗ್ಯ ಸ್ಥಿರವಾಗಿರುತ್ತದೆ. ಸಂಧ್ಯಾವಂದನೆಯಲ್ಲಿ ಮಾಡುವ ಪ್ರಾಣಾಯಾಮ ಹಲವು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
Also Read: Oh my Dog ಸ್ವಾಮಿನಿಷ್ಠೆಯ ನಾಯಿಗಳಿಗಾಗಿ ಶತ ಶತಮಾನಗಳ ಹಿಂದೆಯೇ ದೇಗುಲಗಳನ್ನು ಕಟ್ಟಲಾಗಿದೆ! ರೋಚಕ ಕತೆಗಳು ಇಲ್ಲಿವೆ
ವಿಷ್ಣುಪುರಾಣದಲ್ಲಿ ಔರ್ವ ಎಂಬ ಋಷಿ ಸಗರ ರಾಜನಿಗೆ ಹೀಗೆ ತಿಳಿಸುತ್ತಾನೆ.. “ಹೇ ಸಗರ ರಾಜ , ಬುದ್ಧಿವಂತನಾದ ಮನುಷ್ಯ ಪ್ರಾತಃ ಸಂಧ್ಯೋಪಾಸನೆ ಹಾಗೂ ಸಾಯಂ ಸಂಧ್ಯೋಪಾಸನೆಯನ್ನು ಪ್ರತಿನಿತ್ಯ ತಪ್ಪದೇ ಮಾಡಿ ಪಾಪಗಳಿಂದ ವಿಮುಕ್ತನಾಗುತ್ತಾನೆ. ಸಂಧ್ಯಾಕಾಲದಲ್ಲಿ ಯಾರು ಸಂಧ್ಯಾವಂದನೆಯನ್ನು ಮಾಡದೇ ಮಲಗಿರುತ್ತಾರೋ ಅಥವಾ ಅನ್ಯಕಾರ್ಯಗಳಲ್ಲಿ ಮಗ್ನರಾಗಿರುತ್ತಾರೋ ಅಂತಹವರು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗುತ್ತದೆ , ಆದ್ದರಿಂದ ಹೇ ರಾಜ.. ಪ್ರಾತಃಕಾಲೀನ ಹಾಗೂ ಸಾಯಂಕಾಲದ ಸಂಧ್ಯಾವಂದನೆಯನ್ನು ತಪ್ಪದೇ ಮಾಡಬೇಕು. ಇದರಿಂದ ಮನುಷ್ಯ ಉತ್ತರೋತ್ತರ ಶ್ರೇಯಸ್ಸನ್ನು ಪಡೆಯುತ್ತಾನೆ.” (ವಿಷ್ಣುಪುರಾಣ, ತೃತೀಯ ಅಂಶ – ೧೧-೧೦೨,೧೦೩)
ಹಾಗಾಗಿ ಸಂಧ್ಯಾವಂದನೆ ನಿತ್ಯ ನೈಮಿತ್ತಿಕ ಕರ್ಮಗಳಲ್ಲೊಂದಾಗಿದೆ, ಅದನ್ನು ತಪ್ಪದೇ ಆಚರಿಸುವುದು ನಮ್ಮ ಕರ್ತವ್ಯ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಪ್ರೀಮಿಯಂ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)
Published On - 6:06 am, Thu, 22 August 24