ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ನಾಗರ ಪಂಚಮಿ (Nag Panchami) ಹಬ್ಬವನ್ನು ಆಚರಿಸಲಾಗುತ್ತದೆ. ನಾಗರ ಆರಾಧನೆಯ ಈ ಪವಿತ್ರ ಹಬ್ಬವು ಹಿಂದೂ ಧರ್ಮದಲ್ಲಿ ಬಹಳ ಪ್ರಾಮುಖ್ಯವಾಗಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಈ ದಿನ ನಾಗನನ್ನು ಪೂಜಿಸುವುದರಿಂದ ಆಧ್ಯಾತ್ಮಿಕ ಶಕ್ತಿ, ಅಪಾರ ಸಂಪತ್ತು ಮತ್ತು ಅಪೇಕ್ಷಿತ ಆಸೆಗಳು ಈಡೇರುತ್ತವೆ. ಈ ಬಾರಿ ನಾಗರ ಪಂಚಮಿ ಹಬ್ಬವನ್ನು ಆಗಸ್ಟ್ 21, ಸೋಮವಾರ ಆಚರಿಸಲಾಗುತ್ತದೆ. ಜೊತೆಗೆ ಈ ಹಬ್ಬದಂದು, ಮಹಿಳೆಯರು ಸರ್ಪ ದೇವರನ್ನು ಪೂಜಿಸುತ್ತಾರೆ ಮತ್ತು ಹಾವುಗಳಿಗೆ ಹಾಲನ್ನು ಅರ್ಪಿಸಿ, ಕುಟುಂಬದ ಸುರಕ್ಷತೆಗಾಗಿ ಪ್ರಾರ್ಥಿಸುತ್ತಾರೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ನಾಗ ಪಂಚಮಿ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನ ಅಂದರೆ ಪಂಚಮಿ ತಿಥಿಯಂದು ಆಚರಣೆ ಮಾಡಲಾಗುತ್ತದೆ. ಹಾಗಾಗಿ ಈ ಬಾರಿ ಆಗಸ್ಟ್ 21 ರಂದು ಮಧ್ಯಾಹ್ನ 12:21 ಕ್ಕೆ ಪ್ರಾರಂಭವಾಗಿ ಮತ್ತು ಆಗಸ್ಟ್ 22 ರಂದು ಮಧ್ಯಾಹ್ನ 2:00 ಕ್ಕೆ ಕೊನೆಗೊಳ್ಳುತ್ತದೆ. ಅದಲ್ಲದೆ ಶ್ರಾವಣ ಮಾಸದಲ್ಲಿ ಬರುವ ಶುಕ್ಲ ಪಕ್ಷದ ನಾಗಪಂಚಮಿಯು ನಾಗದೇವತೆಯ ಆರಾಧನೆಗೆ ವಿಶೇಷ ಮಹತ್ವವನ್ನು ಹೊಂದಿದೆ. ನಾಗರ ಪಂಚಮಿಯ ಪೂಜಾ ಸಮಯವು ಬೆಳಿಗ್ಗೆ 5.53 ರಿಂದ 8.30 ರವರೆಗೆ. ಆಗಸ್ಟ್ 22 ರ ಬದಲಾಗಿ ಆಗಸ್ಟ್ 21 ರಂದು ಈ ದಿನವನ್ನು ಆಚರಿಸಲಾಗುತ್ತದೆ.
ನಾಗರ ಪಂಚಮಿಯ ದೇವತೆಗಳನ್ನು ಎಂಟು ದೇವರುಗಳೆಂದು ಪರಿಗಣಿಸಲಾಗಿದೆ. ಈ ದಿನ ಅನಂತ, ವಾಸುಕಿ, ಪದ್ಮ, ಮಹಾಪದ್ಮ, ತಕ್ಷಕ, ಕುಲೀರ, ಕಾರ್ಕತ್ ಮತ್ತು ಶಂಖ ಎಂಬ ಅಷ್ಟನಾಗರನ್ನು ಪೂಜಿಸಲಾಗುತ್ತದೆ. ನಾಗರ ಪಂಚಮಿಯ ಒಂದು ದಿನ ಉಪವಾಸ ಮಾಡಿ. ಬಳಿಕ ಸಂಜೆ ಊಟ, ತಿಂಡಿ ಮಾಡಬಹುದು. ಕೆಲವರ ಮನೆಯಲ್ಲಿ ನಾಗ ಚಿತ್ರ ಅಥವಾ ಜೇಡಿಮಣ್ಣಿನಿಂದ ಮಾಡಿದ ಹಾವಿನ ವಿಗ್ರಹವನ್ನು ಪೂಜಿಸಲಾಗುತ್ತದೆ. ಇನ್ನು ಕೆಲವು ಮನೆಗಳಲ್ಲಿ ನಾಗನ ವಿಗ್ರಹಕ್ಕೆ ಹಾಲೆರೆದು, ಪ್ರಸಾದ ಇಟ್ಟು, ಅರಿಶಿನ, ರೋಲಿ (ಕೆಂಪು ಕುಂಕುಮ), ಅಕ್ಕಿ ಮತ್ತು ಹೂವುಗಳನ್ನು ಅರ್ಪಿಸುವ ಮೂಲಕ, ನಾಗ ದೇವರನ್ನು ಪೂಜಿಸಲಾಗುತ್ತದೆ. ಕೊನೆಯಲ್ಲಿ, ನಾಗರ ಪಂಚಮಿಯ ಕಥೆಯನ್ನು ಕೇಳಲೇಬೇಕು.
ಇದನ್ನೂ ಓದಿ: ನಿಮ್ಮ ಜಾತಕದಲ್ಲಿ ರಾಹುವಿನ ಸ್ಥಾನದ ಪ್ರಕಾರ ನಾಗರ ಪಂಚಮಿ ಪೂಜಾ ವಿಧಾನ ತಿಳಿಯಿರಿ
1. ಈ ದಿನ ಭೂಮಿಯನ್ನು ಅಗೆಯುವುದು ಅಥವಾ ಹೊಲವನ್ನು ಉಳುಮೆ ಮಾಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಹಾಗೆ ಮಾಡುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಇದಲ್ಲದೆ, ಗದ್ದೆ ಅಥವಾ ಮನೆಯ ಸುತ್ತ ಮುತ್ತ ಇರುವ ಸೊಪ್ಪುಗಳನ್ನು ಸಹ ಕೀಳಬಾರದು.
2. ನಾಗರ ಪಂಚಮಿಯ ದಿನದಂದು ಚೂಪಾದ ವಸ್ತುಗಳನ್ನು ಬಳಸುವುದನ್ನು ತಪ್ಪಿಸಿ. ಮುಖ್ಯವಾಗಿ ಸೂಜಿ ಮತ್ತು ದಾರವನ್ನು ಬಳಸಬಾರದು. ಹಾಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ.
3. ಅಡುಗೆ ಮಾಡಲು ತವಾ ಮತ್ತು ಕಬ್ಬಿಣದ ಪಾತ್ರೆಯನ್ನು ಬಳಸಬಾರದು. ಹೀಗೆ ಮಾಡುವುದರಿಂದ, ಮನೆಗೆ ಒಳಿತಾಗುವುದಿಲ್ಲ ಎಂಬ ನಂಬಿಕೆ ಇದೆ. ಹಾಗಾಗಿ ಈ ಬಗ್ಗೆ ಜಾಗೃತರಾಗಿರಿ.
4. ನಾಗರ ಪಂಚಮಿಯ ದಿನದಂದು, ಯಾರ ಬಗ್ಗೆಯೂ ನಿಮ್ಮ ಬಾಯಿಂದ ಯಾವುದೇ ತಪ್ಪು ಪದವನ್ನು ಆಡಬಾರದು. ಇದನ್ನು ತುಂಬಾ ತಪ್ಪು ಎಂದು ಪರಿಗಣಿಸಲಾಗುತ್ತದೆ.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ