Naga Panchami: ನಾಗರ ಪಂಚಮಿ | ವಿಶೇಷತೆ ಏನು? ಏನು ಸಿಗುತ್ತದೆ ಈ ಹಬ್ಬದಿಂದ?

| Updated By: Digi Tech Desk

Updated on: Aug 08, 2024 | 1:01 PM

ಹದಿನೈದು ತಿಥಿಗಳಿಗೂ ಹದಿನೈದು ದೇವತೆಗಳು ಇದ್ದಾರೆ. ಪಂಚಮೀ ತಿಥಿಯ ದೇವತೆ ಸರ್ಪ. ಹಾಗಾಗಿ ಆದಿನ ವಿಶೇಷವಾಗಿ ನಾಗ‌ದೇವತೆಯ ಅನುಗ್ರಹವನ್ನು ಪಡೆಯಬಹುದು.

Naga Panchami: ನಾಗರ ಪಂಚಮಿ | ವಿಶೇಷತೆ ಏನು? ಏನು ಸಿಗುತ್ತದೆ ಈ ಹಬ್ಬದಿಂದ?
ಸಾಂದರ್ಭಿಕ ಚಿತ್ರ
Follow us on

ಶ್ರಾವಣ ಮಾಸದ‌ ಮೊದಲ‌ ಹಬ್ಬ ನಾಗರ ಪಂಚಮೀ. ಈ ಹಬ್ಬವನ್ನು ಅಂದೇ ಏಕೆ ಆಚರಿಸಬೇಕು? ಬೇರೆ ದಿನಗಳಲ್ಲಿ ಆಚರಿಸಿದರೆ ಏನಾಗುತ್ತದೆ ಎಂದು ಕೇಳಬಹುದು. ಆ ದಿನಕ್ಕೂ ವಿಶೇಷವಿದೆ. ಈ ಭೂಮಿಯನ್ನು ಧರಿಸಿರುವುದು ಸರ್ಪವೇ ಆಗಿದೆ. ಆದಿಶೇಷನ್ನು ಈ ಭೂಮಿಯನ್ನು ಹೊತ್ತಿದ್ದಾನೆ ಎನ್ನುತ್ತದೆ ಪುರಾಣಗಳು. ಭೂಮಿಯನ್ನು ರಕ್ಷಿಸಬೇಕಾದರೆ ಭೂಮಿಯನ್ನು ಹೊತ್ತ ಸರ್ಪಗಳ ರಾಜನನ್ನು ಪೂಜಿಸಬೇಕು. ಆದಿಶೇಷನು ವಿಷ್ಣುವಿನ ವಾಹನವೂ ಹೌದು. ವಿಷ್ಣುವು ವಿಶ್ವದ ರಕ್ಷಕನೂ ಹೌದು. ಆದ್ದರಿಂದ ಆದಿಶೇಷನೂ ವಿಷ್ಣುವಿಗೂ ಭೂಮಿಗೂ ಅವಿನಾಭಾವ ಸಂಬಂಧ.

ಇನ್ನು ನಾಗದೇವತೆಯನ್ನು ಲೌಕಿಕ ಹಾಗು ಅಲೌಕಿಕ ಉನ್ನತಿಗೆ ಪೂಜಿಸುತ್ತಾರೆ. ಲೌಕಿಕವಾಗಿ ಸಂತಾನ, ಸುಖ, ಸಂಪತ್ತಿಗೆ ಮೂಲ ಕಾರಣ ಸರ್ಪವಾಗಿದೆ. ನಾಗದೇವರ ಅನುಗ್ರಹದಿಂದ ಸಂತಾನ ದೋಷವು ನಿವಾರಣೆಯಾಗಿ ವಂಶವು ಮುಂದುವರಿಯಲು ಸಹಾಯಕವಾಗಲಿದೆ. ಹಾಗೆಯೇ ವರ್ಷ ಋತುವಿನ ಆರಂಭವೂ ಆದ ಕಾರಣ ಮಳೆಯಲ್ಲಿ ಉತ್ಪತ್ತಿಯಾಗುವ ವಿಷಜಂತುಗಳಿಂದ ಮನುಷ್ಯನ ಮೇಲೆ, ಆಹಾರ ಮುಂತಾದ ವಸ್ತುಗಳ ಮೇಲೆ ದುಷ್ಪರಿಣಾಮ ಬೀರಬಾರದು ಎಂಬುದಾಗಿದೆ. ಇವು ಲೌಕಿಕ ಉದ್ದೇಶವಾದರೆ, ಅಲೌಕಿಕವಾದ ಉದ್ದೇಶವೂ ಬೇರೆ ಇದೆ. ಅಧ್ಯಾತ್ಮ ಸಾಧಕರಿಗೆ ನಾಗರ ಪಂಚಮೀ ಬಹಳ ಫಲಕಾರಿ. ಮನುಷ್ಯ ದೇಹದಲ್ಲಿ ಕುಂಡಲಿನೀ ಎನ್ನುವ ಶಕ್ತಿ ಇದೆ.‌ ಅದು ಸರ್ಪವನ್ನು ಹೋಲುವಂತಹ ಶಕ್ತಿಯಾಗಿದೆ. ಇದೇ ಮನುಷ್ಯನ ಜೀವಾಳ. ಅದು ಸುಪ್ತವಾಗಿದ್ದರೆ, ಲೌಕಿಕ ಸುಖವನ್ನೂ ಜಾಗರೂಕವಾಗಿದ್ದಾರೆ ಅಲೌಕಿಕ ಸುಖವನ್ನೂ ಅನುಭವಿಸಲು ಸಾಧ್ಯ. ಇಂತಹ ಅಲೌಕಿಕ ಸುಖವನ್ನು ಪಡೆಯಲೂ ನಾಗದೇವತೆಯನ್ನು ಪ್ರಸನ್ನಗೊಳಿಸಬೇಕಾಗುವುದು. ಆ ಮೂಲಕ ಅಧ್ಯಾತ್ಮ ಸಾಧನೆಗೆ ಪುಷ್ಟಿ ಲಭಿಸುವುದು. ಮಳೆಗಾಲವಾದ ಕಾರಣ ಬಾಹ್ಯ ಚಟುವಟಿಕೆಗಳು ಕಡಿಮೆಯಾಗಿ ಅಧ್ಯಾತ್ಮದ ಕಡೆ ಹೆಚ್ಚು ಗಮನಕೊಡಲು ಅನುಕೂಲಕರವಾಗಿದೆ. ಹೀಗೆ ಎರಡು ಉದ್ದೇಶದಿಂದ ನಾಗದೇವರಿಗೆ ಪೂಜೆಯನ್ನು ಪ್ರಾಚೀನ‌ ಕಾಲದಿಂದ ನಡೆಸಿಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಸರ್ಪದೋಷ ನಿವಾರಣೆಗಾಗಿ ಈ ದೇವಾಲಯ ವರ್ಷಕ್ಕೊಮ್ಮೆ ಮಾತ್ರ ತೆರೆಯುತ್ತದೆ.. ಸ್ಥಳ ಮಹಾತ್ಮೆ ಏನು?

ನವ ನಾಗ ದೇವತೆಗಳನ್ನು ಆವಾಹಿಸಿ ಪೂಜಿಸುವುದೂ ಕ್ರಮ.

ಅನಂತಂ ವಾಸುಕೀ ಶೇಷಂ

ಪದ್ಮನಾಭಂ ಚ ಕಂಬಲಮ್ |

ಶಂಖಪಾಲಂ ಧಾರ್ತರಾಷ್ಟ್ರಂ

ತಕ್ಷಕಂ ಕಾಲಿನಂ ತಥಾ ||

ಇವು ನವ ನಾಗರುಗಳು. ಇವರ ಅನುಗ್ರಹವು ಸೃಷ್ಟಿಯ ಮೇಲೆ, ಮನುಷ್ಯರ ಮೇಲೆ ಇರಬೇಕು ಎಂದರೆ, ಕಾರ್ಯಗಳಲ್ಲಿ ಚಿಂತಿತ ಫಲ, ಶ್ರಮಕ್ಕೆ ಯೋಗ್ಯ ಫಲವು ಸಿಗಬೇಕಾದರೆ ಸಂತಾನವನ್ನು ಅಪೇಕ್ಷಿಸುವವರಿಗೆ ನಾಗಾರಾಧನೆ ಬಹು ಪ್ರಶಸ್ತ. ಚರ್ಮ ರೋಗಗಳ ನರರೋಗಗಳ ನಿವಾರಣೆಯೂ ಈ ನಾಗಾರಾಧನೆಯಿಂದ ಪರಿಹಾರವಾಗಿ ಉತ್ತಮ ಭವಿಷ್ಯವು ಸಿಗುವುದು.

-ಲೋಹಿತ ಹೆಬ್ಬಾರ್ – 8762924271

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:50 pm, Thu, 8 August 24