Narasimha Jayanti 2023: ಅಸುರರ ರಾಜ ಹಿರಣ್ಯಕಷಿಪುವಿನ ಸಂಹಾರಕ್ಕಾಗಿ ನರಸಿಂಹನಾದ ಮಹಾವಿಷ್ಣು

ಪ್ರತೀ ವರ್ಷದ ವೈಶಾಖ ಶುದ್ಧ ಚತುರ್ದಶಿಯಂದು ಭೂಲೋಕವಾಸಿಗಳು ಬಹಳ ಶ್ರದ್ಧಾ ಭಕ್ತಿಯಿಂದ ನರಸಿಂಹಸ್ವಾಮಿಯನ್ನು ಪೂಜಿಸಿ ಸದಾ ಕಾಲವೂ ಎಲ್ಲರನ್ನೂ ಸಂರಕ್ಷಣೆ ಮಾಡುವಂತೆ ಕೋರಿಕೊಳ್ಳುತ್ತಾರೆ.

Narasimha Jayanti 2023: ಅಸುರರ ರಾಜ ಹಿರಣ್ಯಕಷಿಪುವಿನ ಸಂಹಾರಕ್ಕಾಗಿ ನರಸಿಂಹನಾದ ಮಹಾವಿಷ್ಣು
ನರಸಿಂಹ ಜಯಂತಿ
Follow us
ಆಯೇಷಾ ಬಾನು
|

Updated on:May 04, 2023 | 2:02 PM

ನರಸಿಂಹ ಜಯಂತಿಯನ್ನು(Narasimha Jayanti) ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ದಶಿ ತಿಥಿಯಂದು ಆಚರಿಸಲಾಗುತ್ತದೆ. ಈ ಬಾರಿ ಈ ವಿಶೇಷ ದಿನವು ಮೇ 4 ರಂದು ಗುರುವಾದ ಬಂದಿದೆ. ಈ ದಿನದಂದು ಜಗತ್ತನ್ನು ಕಾಪಾಡುವ ಭಗವಾನ್ ವಿಷ್ಣು(Lord Vishnu) ಉಗ್ರ ನರಸಿಂಹನ ಅವತಾರವನ್ನು(Ugra Narasimha) ತೆಗೆದುಕೊಂಡನು ಎನ್ನುವ ನಂಬಿಕೆಯಿದೆ. ಮಹಾ ವಿಷ್ಣುವಿನ ದಶಾವತಾರಗಳಲ್ಲಿ ನಾಲ್ಕನೇಯ ಅವತಾರವೇ ನರಸಿಂಹ ಅವತಾರ. ದೇಹದ ಕೆಳಾರ್ಧ ಬಾಗ ಮನುಷ್ಯನಂತೆ ಮತ್ತು ಮೇಲಾರ್ಧ ಭಾಗ ಸಿಂಹ ರೂಪದಲ್ಲಿರುವುದರಿಂದ ನರ+ಸಿಂಹ=ನರಸಿಂಹ ಎಂಬುದಾಗಿದೆ. ಹಿರಣ್ಯಕಶಿಪು(Hiranyakashipu) ಎಂಬ ರಾಕ್ಷಸನನ್ನು ಕೊಲ್ಲಲು ಮಹಾವಿಷ್ಣು ಈ ರೂಪದಲ್ಲಿ ಭೂಮಿಯಲ್ಲಿ ಅವತರಿಸಿದ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ನರಸಿಂಹಾವತಾರದ ಪುರಾಣವೂ ಬಲು ರೋಚಕವಾಗಿದೆ.

ಅಸುರರ ರಾಜ ಹಿರಣ್ಯಕಷಿಪುವಿನ ಸೋದರ ಹಿರಣ್ಯಾಕ್ಷ ಭೂಲೋಕ, ಅತಳ, ವಿತಳ, ಸುತಳ, ಮಾಹಾತಳ, ಸಚಾತಳ, ತಳಾತಳ, ಪಾತಾಳ ಲೋಕದಲ್ಲೆಲ್ಲಾ, ತನ್ನ ರಾಕ್ಷಸೀ ಕೃತ್ಯಗಳಿಂದ ಕಂಟಕ ಪ್ರಾಯನಾಗಿ ನಾನಾ ರೀತಿಯ ಉಪಟಗಳನ್ನು ಕೊಡುತ್ತಿದ್ದಾಗ ದೇವಾನು ದೇವತೆಗಳು ಭಗವಾನ್ ವಿಷ್ಣುವಿನಲ್ಲಿ ಇದಕ್ಕೆ ಶಾಶ್ವತವಾದ ಪರಿಹಾರವನ್ನು ಕೊಡುವಂತೆ ಕೇಳಿಕೊಂಡಾಗ ಶ್ರೀ ವಿಷ್ಣು ತನ್ನ ದಶಾವತರದ ಮೂರನೇ ರೂಪವಾದ ವರಾಹ ರೂಪದಲ್ಲಿ ಬಂದು ಸಂಹರಿಸುತ್ತಾನೆ. ತನ್ನ ಅಣ್ಣನ ಅಗಲಿಕೆಯಿಂದ ವಿಪರೀತ ದುಃಖಿತನಾದ, ಹಿರಣ್ಯಕಷಪವು, ಕೋಪೋದ್ರಕ್ತನಾಗಿ ವಿಷ್ಣುವಿನ ಪರಮ ವೈರಿಯಾಗಿ, ಋಷಿ ಮುನಿಗಳ ಯಜ್ಞಯಾಗಾದಿಗಳಿಗೆ ಮತ್ತು ಭೂಲೋಕ ವಾಸಿಗಳಿಗೆ ನಾನಾ ರೀತಿಯ ತೊಂದರೆಗಳನ್ನು ಕೊಡುವಂತೆ ತನ್ನ ರಾಕ್ಷಸ ಸಮುದಾಯವನ್ನು ಉದ್ರೇಕಗೊಳಿಸಿ ಎಲ್ಲರಿಗೂ ತೊಂದರೆಯನ್ನು ನೀಡಲು ಆರಂಭಿಸುತ್ತಾನೆ.

ಇದೇ ಸಮಯದಲ್ಲಿ ಹಿರಣ್ಯಕಷಪುವಿಗೆ ತನಗೆ ಸಾವೇ ಬಾರದಂತೆ ಅಮರನಾಗಬೇಕೆಂಬ ಆಸೆ ಉಂಟಾಗಿ ತನ್ನನ್ನು ಯಾರೂ ಸೋಲಿಸಬಾರದು ತಾನು ಯಾವುದೇ ರೋಗ ರುಜಿನಗಳಿಗೆ ತುತ್ತಾಗದೆ ಸದಾ ಚಿರಯೌವನಿಗನಾಗಿರಬೇಕು ಎಂಬೆಲ್ಲ ಆಸೆಯಾಗಿ ಅದನ್ನು ಪಡೆಯಲು ಮಂದಾರ ಪರ್ವತದಲ್ಲಿ ಬ್ರಹ್ಮ ದೇವನನ್ನು ಕುರಿತು ತಪಸ್ಸು ಮಾಡಲು ಆರಂಭಿಸುತ್ತಾನೆ. ದಿನ ಕಳೆದಂತೆಲ್ಲಾ ತಪ್ಪಸ್ಸು ಬಹಳ ಕಠಿಣ ರೂಪಕ್ಕೆ ಹೊರಳಿ ಅವನ ತಪೋಜ್ವಾಲೆಗಳು ಸುತ್ತ ಮುತ್ತಲೆಲ್ಲಾ ಹರಡಿ ಎಲ್ಲವೂ ಸುಟ್ಟು ಭಸ್ಮವಾಗಲು ಆರಂಭವಾಗುತ್ತದೆ. ಈ ಧಗೆಯನ್ನು ನಿಯಂತ್ರಿಸಲು ದೇವಾನು ದೇವತೆಗಳು ಬ್ರಹ್ಮನ ಬಳಿ ಕೇಳಿಕೊಂಡಾಗ ಬ್ರಹ್ಮನು ಭೃಗು ಮಹರ್ಷಿ ಮತ್ತು ದಕ್ಷರೊಂದಿಗೆ ಹಿರಣ್ಯಕಷಿಪು ತಪ್ಪಸ್ಸು ಮಾಡುತ್ತಿದ್ದ ಜಾಗಕ್ಕೆ ಬಂದು ಹಿರಣ್ಯಕಷಿಪುವಿನ ಮೇಲೆ ತನ್ನ ಕಮಂಡಲದ ನೀರನ್ನು ಸಿಂಪಡಿಸಿ ಎಚ್ಚರಗೊಳಿಸುತ್ತಾನೆ.

ಇದನ್ನೂ ಓದಿ: Lunar Eclipse 2023: ಕೇತುಗ್ರಸ್ತ ಚಂದ್ರಗ್ರಹಣ: ಯಾವ ರಾಶಿಗೆ ಶುಭ? ಯಾವುದಕ್ಕೆ ಅಶುಭ? ಪರಿಹಾರಕ್ಕೆ ಏನು‌ ಮಾಡಬೇಕು?

ಬ್ರಹ್ಮನ ವರದಿಂದ ಸಾವೇ ಇಲ್ಲ ಎಂದು ಕೊಂಡ ಹಿರಣ್ಯಕಶಿಪು

ಸೃಷ್ಟಿಕರ್ತ ಬ್ರಹ್ಮನನ್ನು ನೋಡಿ ಸಾಷ್ಟಾಂಗ ವಂದಿಸಿ, ತನಗೆ ಯಾವುದೇ ಮಾನವ ಜೀವಿ, ದೇವತೆ ಅಥವಾ ಪ್ರಾಣಿಗಳಿಂದ ಸಾವು ಬರಬಾರದು ಹಗಲು ಅಥವಾ ರಾತ್ರಿಯಲ್ಲಿ ಆಕಾಶ ಮತ್ತು ಭೂಮಿಯಲ್ಲಿ, ಮನೆಯ ಒಳಗೆ ಆಥವಾ ಹೊರಗೆ, ಯಾವುದೇ ಅಸ್ತ್ರದಿಂದಲೂ ಸಾವಾಗಬಾರದು ಎಂಬ ವಿಚಿತ್ರವಾದ ವರವನ್ನು ಕೇಳುತ್ತಾನೆ. ಹೇಗಾದರೂ ಮಾಡಿ ಇವನ ತಪಸ್ಸನ್ನು ನಿಗ್ರಹಿಸುವ ಉದ್ದೇಶದಿಂದ ಬ್ರಹ್ಮನೂ ಸಹಾ ತಥಾಸ್ತು ಎಂದು ಒಪ್ಪಿಕೊಳ್ಳುತ್ತಾನೆ. ಇಂತಹ ಅಭೂತ ಪೂರ್ವವಾದ ವರವನ್ನು ಪಡೆದ ಹಿರಣ್ಯಕಶಿಪು ತಾನು ಚಿರಂಜೀವಿ ತನಗೆ ಸಾವೇ ಇಲ್ಲ ಎಂಬ ಭ್ರಮೆಯಲ್ಲಿ ವಿಶ್ವದ ಮೇಲೆ ತನ್ನ ಅಧಿಪತ್ಯವನ್ನು ಸಾರಲು ಹೊರಡುತ್ತಾನೆ. ಇಡೀ ಭೂಮಿಯಲ್ಲಿ ದೇವರು ಎಂಬುವರೇ ಇಲ್ಲ. ಇಲ್ಲಿ ನಾನೇ ದೇವರು. ಇನ್ನು ಮುಂದೆ ಎಲ್ಲರೂ ತನ್ನನ್ನೇ ದೇವರು ಎಂದು ಪೂಜಿಸಬೇಕು ಹಾಗೆ ಪೂಜಿಸದವರಿಗೆ ಕಠಿಣ ರೀತಿಯಲ್ಲಿ ಶಿಕ್ಷೆಗೆ ಗುರಿಪಡಿಸುತ್ತಿರುತ್ತಾನೆ.

ತಂದೆಯನ್ನೇ ವಿರೋಧಿಸಿದ್ದ ಹರಿಭಕ್ತ ಪ್ರಹ್ಲಾದ

ಆದರೆ ಪರಮ ಹರಿಭಕ್ತನಾದ ಆತನ ಪುಟ್ಟ ಮಗ ಪ್ರಹ್ಲಾದ ತಂದೆಯ ವಾದವನ್ನು ಒಪ್ಪದೇ, ಹರಿಯೇ ದೈವ ನೀನು ಕೇವಲ ದಾನವ ಎಂದು ಹಂಗಿಸುತ್ತಾನೆ. ಇಡೀ ಪ್ರಪಂಚವೇ ತನ್ನ ಮಾತನನ್ನು ಕೇಳುತ್ತಿರುವಾಗ ಈ ಯಕ್ಕಶ್ಚಿತ್ ಬಾಲಕ ಅದೂ ತನ್ನ ಮಗನೇ ತನ್ನನ್ನು ವಿರೋಧಿಸುತ್ತಿರುವನಲ್ಲಾ ಎಂದು ಕೋಪಗೊಂಡು ಮಗನೆಂದೂ ಲೆಕ್ಕೆಸದೇ ಆತನನ್ನು ಕೊಲ್ಲಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡಿ ವಿಫಲನಾಗಿ ಕಡೆಗೊಮ್ಮೆ ತುಂಬಿದ ರಾಜ ಸಭೆಯಲ್ಲಿ ತನ್ನ ಮಗನನ್ನು ಕರೆದು ನಿನ್ನ ಹರಿ ಎಲ್ಲಿರುವನು? ಅವನನ್ನು ತೋರಿಸಬಲ್ಲೆಯಾ? ಎಂದು ಪ್ರಶ್ನಿಸಿದಾಗ, ಆ ಪುಟ್ಟ ಹರಿಭಕ್ತ ಪ್ರಹ್ಲಾದ ಹರಿ ಎಲ್ಲೆಡೆಯಲ್ಲಿಯೂ ಇರುವನು.

ಇದನ್ನೂ ಓದಿ: ಆಲದ ಮರವೇ ಈ ಶಿವನಿಗೆ ಆಲಯ, ಇದು ತುಳುವರ ಅಧಿದೇವತೆ ತುಳುವೇಶ್ವರ

ಹರಿ ಇಲ್ಲದ ಜಾಗವೇ ಇಲ್ಲ, ಹರಿ ಸರ್ವಾಂತರ್ಯಾಮಿ ಎಂದು ಹೇಳಿ ತನ್ನ ತಂದೆಯನ್ನು ಮತ್ತಷ್ಟೂ ಕೆರಳಿಸುತ್ತಾನೆ. ಹರಿ ಅಲ್ಲಿರುವನೇ, ಇಲ್ಲಿರುವನೇ? ಎಂದು ಕೇಳುತ್ತಾ ಕಡೆಗೆ ಆಲ್ಲಿದ್ದ ಕಂಬವನ್ನು ತೋರಿಸಿ ಈ ಕಂಬದಲ್ಲಿಯೂ ಇರುವನೇ ನಿನ್ನ ಹರಿ? ಎಂದು ಕೋಪದಿಂದ ಪ್ರಶ್ನಿಸಿದಾಗ, ಹೌದು ತಂದೇ ನನ್ನ ಶ್ರೀ ಹರಿ ಈ ಕಂಬದಲ್ಲಿಯೂ ಇದ್ದಾನೆ ಎಂದಾಗ ಕೋಪೋದ್ರಿತನಾಗಿ ತನ್ನ ಗಧೆಯಿಂದ ಕಂಬವನ್ನು ಹೊಡೆದಾಗ ಸೀಳಿದ ಕಂಬದಿಂದ ಅರ್ಧ ನರ, ಮತ್ತರ್ಧ ಸಿಂಹದ ರೂಪದ ನರಸಿಂಹ ಉಗ್ರ ಸ್ವರೂಪನಾಗಿ ಹೊರಬಂದು ಹಿರಣ್ಯಷಿಪುವಿನೊಂದಿಗೆ ಹೋರಾಡಿ ಕಡೆಗೆ ಅವನನ್ನು ಎಳೆದು ಕೊಂಡು ಅತ್ತ ಹಗಲೂ ಅಲ್ಲದ ಇರುಳೂ ಅಲ್ಲದ ಗೋಧೂಳೀ ಸಮಯದಲ್ಲಿ ಮನೆಯ ಹೊರಗೂ ಅಲ್ಲದ, ಒಳಗೂ ಅಲ್ಲದ ಹೊಸಿಲಿನ ಮೇಲೆ ನಿಂತು, ಆಕಾಶವೂ ಅಲ್ಲದ, ಭೂಮಿಯೂ ಅಲ್ಲದೆ ಮಧ್ಯದಲ್ಲಿ ತನ್ನ ತೊಡೆಯ ಮೇಲೆ ಹಿರಣ್ಯಕಷುಪಿವಿನನ್ನು ಮಲಗಿಸಿಕೊಂಡು ಯಾವುದೇ ಆಯುಧವಿಲ್ಲದೇ ತನ್ನ ಉಗುರುಗಳಿಂದಲೇ ಆತನ ಹೊಟ್ಟೆಯನ್ನು ಬಗೆದು ಹಿರಣ್ಯಕಷುಪುವಿವನ್ನು ಸಂಹರಿಸಿ ಅದೇ ಕೋಪೋದ್ರಿಕ್ತನಾಗಿಯೇ ಉಗ್ರ ನರಸಿಂಹನು ಹಿರಣ್ಯಕಷಪುವಿನ ಸಿಂಹಾಸನದಲ್ಲಿ ಆಸೀನನಾಗುತ್ತಾನೆ.

ಹಿರಣ್ಯಕಷಪುವಿನ ದುರಾಡಳಿತದಿಂದ ಮುಕ್ತವಾದ ಸಮಸ್ತ ಲೋಕದ ಜನರೂ ಬಹಳ ಸಂತಸದಿಂದ ನರಸಿಂಹನಿಗೆ ಜೈಕಾರ ಹಾಕಿ ಉಗ್ರನಾಗಿದ್ದ ಉಗ್ರ ನರಸಿಂಹನ ಕೋಪವನ್ನು ತಣಿಸಲು ಕೇವಲ ಆತನ ಧರ್ಮ ಪತ್ನಿ ಲಕ್ಷ್ಮಿಯಿಂದ ಮಾತ್ರವೇ ಸಾಧ್ಯ ಎಂದು ನಿರ್ಧರಿಸಿ ಆಕೆಯನ್ನು ನರಸಿಂಹನನ್ನು ಶಾಂತಗೊಳಿಸಲು ಕೋರುತ್ತಾರೆ. ದೇವಾನು ದೇವತೆಗಳ ಕರೆಗೆ ಓಗೊಟ್ಟ ಲಕ್ಷ್ಮೀ ದೇವಿಯು ನರಸಿಂಹನ ಎಡ ತೊಡೆಯ ಮೇಲೆ ಕುಳಿತಾಗ ಉಗ್ರ ನರಸಿಂಹನ ಕೋಪವೆಲ್ಲಾ ಕಡಿಮೆಯಾಗಿ ಲಕ್ಷ್ಮೀ ನರಸಿಂಹನಾದ ದಿನವೇ ನರಸಿಂಹ ಜಯಂತಿ.

ನರಸಿಂಹ ಜಯಂತಿ ಆಚರಣೆ

ಅಂದಿನಿಂದ ಪ್ರತೀ ವರ್ಷದ ವೈಶಾಖ ಶುದ್ಧ ಚತುರ್ದಶಿಯಂದು ಭೂಲೋಕವಾಸಿಗಳು ಬಹಳ ಶ್ರದ್ಧಾ ಭಕ್ತಿಯಿಂದ ನರಸಿಂಹಸ್ವಾಮಿಯನ್ನು ಪೂಜಿಸಿ ಸದಾ ಕಾಲವೂ ಎಲ್ಲರನ್ನೂ ಸಂರಕ್ಷಣೆ ಮಾಡುವಂತೆ ಕೋರಿಕೊಳ್ಳುತ್ತಾರೆ. ನರಸಿಂಹ ಸ್ವಾಮಿಯ ಒಕ್ಕಲಿನವರು ಅಂದು ಮನೆಯನ್ನು ಸಾರಿಸಿ ಗುಡಿಸಿ ಶುದ್ದೀಕರಿಸಿ, ತಳಿರು ತೋರಣಗಳಿಂದ ಸಿಂಗರಿಸಿ ದೇವರ ಮನೆಯಲ್ಲಿ ಅಥವಾ ಮನೆಯ ಒಂದು ಕಡೆ ದೇವರ ಮಂಟಪ ಕಟ್ಟಿ ಅದರಲ್ಲಿ ಕಳಸ ಪ್ರತಿಷ್ಠಾಪಿಸಿ ಲಕ್ಷ್ಮೀ ನರಸಿಂಹ ಸ್ವಾಮಿಯ ವಿಗ್ರಹನ್ನೋ ಇಲ್ಲವೇ ಪಟವನ್ನೋ ಇಟ್ಟು ಶಾಸ್ತ್ರೋಕ್ತವಾಗಿ ಶೋಡಶೋಪಚಾರ ಪೂಜೆ ಮಾಡಿ, ವ್ರತಾಚರಣೆ ಮಾಡಿ, ಬಗೆ ಬಗೆಯ ಸಿಹಿಭಕ್ಷಗಳಿಂದ ನೈವೇದ್ಯ ಮಾಡಿ ನರಸಿಂಹಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.

ಈ ರೀತಿ ಶಾಸ್ತ್ರೋಕ್ತ ರೀತಿಯಲ್ಲಿ ಪೂಜೆಯಾದ ನಂತರ ಮುತ್ತೈದೆಯರನ್ನು ಕರೆದು ಅವರಿಗೆ ಪಾನಕ ಕೋಸಂಬರಿಯ ಸಮಾರಾಧನೆ ಮಾಡಿದ ನಂತರ ಇಡೀ ಕುಟುಂಬದವರೆಲ್ಲಾ ಸೇರಿ ಒಟ್ಟಿಗೆ ಸಂತೋಷದಿಂದ ಊಟ ಮಾಡಿ ಸಂಭ್ರಮಿಸುತ್ತಾರೆ. ನರಸಿಂಹನು ಸಂಜೆ ಗೋಧೂಳಿಯ ಸಮಯದಲ್ಲಿ ಅವತರಿಸಿದ ಕಾರಣವಾಗಿ ಕೆಲವರ ಮನೆಯಲ್ಲಿ ಬೆಳಗಿನಿಂದಲೂ ಉಪವಾಸವಿದ್ದು ಸಂಜೆಯ ಸಮಯದಲ್ಲಿ ಮೇಲೆ ತಿಳಿಸಿದಂತೆ ಪೂಜಾ ಕೈಂಕರ್ಯಗಳನ್ನು ಮಾಡಿ, ಮತ್ತೈದೆಯರಿಗೆ ಯಥಾಶಕ್ತಿ ಫಲತಾಂಬೂಲವನ್ನು ನೀಡಿದ ನಂತರವೇ, ಇಡೀ ಕುಟುಂಬದವರೆಲ್ಲಾ ಒಟ್ಟಿಗೆ ಸಂತೋಷದಿಂದ ಊಟ ಮಾಡಿ ಸಂಭ್ರಮಿಸುತ್ತಾರೆ.

ಇದನ್ನೂ ಓದಿ: ನರಸಿಂಹ ಜಯಂತಿ ಯಾವಾಗ? ಮಹತ್ವ, ಪೂಜಾ ವಿಧಾನ, ಶುಭ ಮುಹೂರ್ತ ಮತ್ತು ಆಚರಣೆಯ ಬಗ್ಗೆ ಇಲ್ಲಿದೆ ಮಾಹಿತಿ

ಇನ್ನು ನರಸಿಂಹ ಸ್ವಾಮಿ ದೇವಾಲಯಗಳಲ್ಲಿ ಅತ್ಯಂತ ಸಡಗರ ಸಂಭ್ರಮಗಳಿಂದ ಅದ್ದೂರಿಯಾಗಿ ತಳಿರು ತೋರಣ ಕಟ್ಟಿ, ದೇವರಿಗೆ ಅಭಿಷೇಕ, ನಾನಾ ರೀತಿಯ ಪತ್ರೆಗಳು ಮತ್ತು ಪುಷ್ಪಗಳಿಂದ ಅಲಂಕರಿಸಿ ಬಗೆ ಬಗೆಯ ಫಲ ಪುಷ್ಪಗಳಿಂದ ನೈವೇದ್ಯ ಮಾಡಿ ಇಡೀ ದಿನವೂ ದೇವರ ದರ್ಶನಕ್ಕೆ ಬಂದ ಭಕ್ತಾದಿಗಳಿಗೆ ತೀರ್ಥಪ್ರಸಾದವನ್ನು ವಿತರಿಸಿ ಬಹಳ ಶ್ರದ್ಧಾ ಭಕ್ತಿಯಿಂದ ನರಸಿಂಹ ಜಯಂತಿಯನ್ನು ಆಚರಣೆ ಮಾಡುತ್ತಾರೆ. ನಾವು ಸಹಾ ನಮ್ಮ ಮನೆಗಳಲ್ಲಿ ನರಸಿಂಹ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲು ಸಾಧ್ಯವಾಗದಿದ್ದಲ್ಲಿ ಹತ್ತಿರವಿರುವ ನರಸಿಂಹ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದು ಆತನ ಕೃಪಾಶೀರ್ವಾದಕ್ಕೆ ಪಾತ್ರರಾಗೋಣ. ಅಕಸ್ಮಾತ್ ಅದೂ ಸಹಾ ಸಾಧ್ಯವಾಗದಿದ್ದಲ್ಲಿ ಭಕ್ತಿಯಿಂದ

ಶ್ರೀ ಮತ್ಪಯೋನಿಧಿ ನಿಕೇತನ ಚಕ್ರಪಾಣೇ ಭೋಗೀಂದ್ರ ಭೋಗಮಣಿ ರಂಜಿತ ಪುಣ್ಯಮೂರ್ತೇ | ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿ ಪೋತ ಲಕ್ಷ್ಮೀ ನರಸಿಂಹ ಮಮದೇಹಿ ಕರಾವಲಂಬಮ್

ಎಂಬ ಶ್ಲೋಕವನ್ನು ಪಠಿಸಿದರೂ ಆ ನರಸಿಂಹನ ಕೃಪೆಗೆ ಪಾತ್ರರಾಗಬಹುದು. ಒಟ್ಟಿನಲ್ಲಿ ಯಾವುದೇ ರೂಪದಲ್ಲಾದರೂ ಭಗವಂತನ ಸ್ಮರಣೆ ಮಾಡುತ್ತಾ, ಸರ್ವೇ ಜನಾಃ ಸುಖಿನೋ ಭವಂತು, ಸಮಸ್ಥ ಲೋಕಾನಿ ಸನ್ಮಾಂಗಳಾನಿ ಭವಂತು ಎಂದು ಕೇಳಿ ಕೊಳ್ಳುವ ಮೂಲಕ ಆ ನರಸಿಂಹ ಸ್ವಾಮಿ ನಮ್ಮಲ್ಲಿರುವ ಅಸುರೀ ಗುಣಗಳನ್ನು ಸಂಹರಿಸಿ ಸದ್ಗುಣವಂತರನ್ನಾಗಿ ಮಾಡಿ, ಆಯುರಾರೋಗ್ಯ ಸಕಲೈಶ್ವರ್ಯ, ಪುತ್ರಪೌತ್ರಾದಿಗಳನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸೋಣ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:24 am, Thu, 4 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ