Jamboo Savari 2023: ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ, ಸತತ 4ನೇ ಬಾರಿ ಅಂಬಾರಿ ಹೊರಲಿದ್ದಾನೆ ಅಭಿಮನ್ಯು

| Updated By: ರಮೇಶ್ ಬಿ. ಜವಳಗೇರಾ

Updated on: Oct 24, 2023 | 6:50 AM

Mysore Dasara Jamboo Savari: ಮೈಸೂರು ದಸರಾ ಎಷ್ಟೊಂದು ಸುಂದರ ಎನ್ನುವ ಮಾತು ಅಕ್ಷರಶಃ ನಿಜ. ಈ ಬಾರಿ ಬರದ ಆತಂಕದಲ್ಲಿ ಆರಂಭವಾದ ಮೈಸೂರು ದಸರಾ ಯಾವುದೇ ಅಡ್ಡಿ ಆತಂಕವಿಲ್ಲದೆ ಅಂತಿಮ ಹಂತ ತಲುಪಿದೆ. ಇಂದು ವಿಜಯದಶಮಿಯ ಸಂಭ್ರಮ ಸಡಗರ ಮನೆ ಮಾಡಿದ್ದು, ವಿಶ್ವವಿಖ್ಯಾತ ಜಂಬೂಸವಾರಿಯೊಂದಿಗೆ ಗತವೈಭವ ಮರುಕಳಿಸಲು ಕ್ಷಣಗಣನೆ ಆರಂಭವಾಗಿದೆ..

Jamboo Savari 2023: ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ, ಸತತ 4ನೇ ಬಾರಿ ಅಂಬಾರಿ ಹೊರಲಿದ್ದಾನೆ ಅಭಿಮನ್ಯು
ಜಂಬೂಸವಾರಿ(ಸಂಗ್ರಹ ಚಿತ್ರ)
Follow us on

ಮೈಸೂರು (ಅಕ್ಟೋಬರ್ 24): ಮೈಸೂರು ದಸರಾದ (Mysore Dasara) ಕೇಂದ್ರ ಬಿಂದು, ಪ್ರಮುಖ ಆಕರ್ಷಣೆ ಅಂದ್ರೆ ಅದು ಜಂಬೂ ಸವಾರಿ. ಇಂದು(ಅಕ್ಟೋಬರ್ 24) ವಿಜಯದಶಮಿಯಂದು ಜಂಬೂಸವಾರಿ (Mysore Dasara Jamboo Savari) ನಡೆಯಲಿದೆ. ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 1.46ರಿಂದ 2.08ರೊಳಗೆ ನಂದಿಧ್ವಜಕ್ಕೆ ಪೂಜೆ ನೆರವೇರಲಿದೆ. ಬಳಿಕ ಸಂಜೆ 4.40ರಿಂದ 5 ಗಂಟೆ ನಡುವೆ ಸಲ್ಲುವ ಶುಭ ಲಗ್ನದಲ್ಲಿ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ಚಾಮುಂಡೇಶ್ವರಿ ಮಹಿಷಾಸುರ ಮರ್ಧಿನಿ ಮೂರ್ತಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಇನ್ನು ವಿಶ್ವವಿಖ್ಯಾತ ದಸರಾ ಜಂಬೂಸವಾರಿಯಲ್ಲಿ ಸತತ ಮೂರು ಬಾರಿ 750 ಕೆ.ಜಿ. ಚಿನ್ನದ ಅಂಬಾರಿ ಹೊತ್ತು ಹ್ಯಾಟ್ರಿಕ್ ಸಾಧಿಸಿರುವ ಅಭಿಮನ್ಯು ಆನೆ ಈಗ 4ನೇ ಬಾರಿಗೆ ಅಂಬಾರಿ ಹೊರಲು ಸರ್ವ ಸನ್ನದ್ಧವಾಗಿದೆ. ಈ ಅಮೋಘ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: Navratri 2023: ವಿಜಯದಶಮಿಯ ಪೌರಾಣಿಕ ಹಿನ್ನಲೆಯೇನು? ಪೂಜಾ ಮಹತ್ವವೇನು?

ಅರಮನೆಯಲ್ಲಿ ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯ

ವಿಜಯದಶಮಿ ಹಿನ್ನೆಲೆ ಬೆಳಗ್ಗೆಯಿಂದ ಅರಮನೆಯಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಲಿದೆ. 9.45ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ ಪಟ್ಟದ ಕುದುರೆ ಪಟ್ಟದ ಆನೆ ಪಟ್ಟದ ಹಸು ಆಗಮನವಾಗುತ್ತದೆ. ಕಲ್ಯಾಣಮಂಟಪದಲ್ಲಿ ಖಾಸ ಆಯುಧಗಳಿಗೆ ಪೂಜೆ ನಂತರ. ಬೆಳಗ್ಗೆ 11 ರಿಂದ 11.40 ವಿಜಯದಶಮಿ ಮೆರವಣಿಗೆ ನಡೆಯಲಿದೆ. ಅರಮನೆ ಆನೆ ಬಾಗಿಲಿನಿಂದ ಭುವನೇಶ್ವರಿ ದೇಗುಲದವರೆಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೆರವಣಿಗೆಯಲ್ಲಿ ಸಾಗಲಿದ್ದಾರೆ. ನಂತರ ದೇಗುಲದ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಸುಮಾರು ಒಂದು ಗಂಟೆ ಪೂಜೆಯ ನಂತರ ಮೆರವಣಿಗೆ ಮೂಲಕ ಅರಮನೆಗೆ ವಾಪಸ್ಸಾಗಲಿದ್ದಾರೆ. ಈ‌ ಮೂಲಕ ಮೈಸೂರು ಅರಮನೆಯ ದಸರಾ ಕಾರ್ಯಕ್ರಮಗಳಗೆ ತೆರೆ ಬೀಳಲಿದೆ.

ಜಂಬೂಸವಾರಿಗೆ ಚಾಲನೆ ನೀಡುವ ಮುನ್ನ ಸಿಎಂ ಸಿದ್ದರಾಮಯ್ಯ ಮಧ್ಯಾಹ್ನ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಸುತ್ತೂರು ಶ್ರೀಗಳಿಂದ ಸಿದ್ದರಾಮಯ್ಯ ಆಶೀರ್ವಾದ ಪಡೆಯಲಿದ್ದಾರೆ.

ವಿಶ್ವವಿಖ್ಯಾತ ಅದ್ಧೂರಿ ಜಂಬೂಸವಾರಿಯಲ್ಲಿ ಈ ಬಾರಿ 14 ಆನೆಗಳು ಹಾಗೂ 47 ಸ್ತಬ್ದಚಿತ್ರಗಳು, ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಹೀಗಾಗಲೇ ಲಕ್ಷಾಂತರ ಜನ ಅರಮನೆ ನಗರಿಗೆ ಬಂದಿಳಿದಿದ್ದು ದಸರಾ ವೀಕ್ಷಣೆಗೆ ಕಾತುರದಿಂದ ಕಾಯುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ