Mysore Dasara 2022 Inauguration Highlights : ಮೈಸೂರು ಅರಮನೆಯಲ್ಲಿ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ಆರಂಭ

| Updated By: ವಿವೇಕ ಬಿರಾದಾರ

Updated on: Sep 26, 2022 | 8:44 PM

ವಿಶ್ವವಿಖ್ಯಾತ ಮೈಸೂರು ದಸರಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ (ಸೆ 26) ವಿಧ್ಯುಕ್ತ ಚಾಲನೆ ನೀಡಿದರು. ಬೆಳ್ಳಿರಥದಲ್ಲಿ ಮಹಿಳಾಸುರ ಮರ್ದಿನಿ ಅವತಾರದ ಪಂಚಲೋಹದ ವಿಗ್ರಹಕ್ಕೆ ಶುಭ ವೃಶ್ಚಿಕ ಲಗ್ನದಲ್ಲಿ ರಾಷ್ಟ್ರಪತಿಗಳು ಪುಷ್ಪಾರ್ಚನೆ ಮಾಡುವುದರೊಂದಿಗೆ 412ನೇ ದಸರಾದ ವಿಧಿವಿಧಾನಗಳು ಆರಂಭವಾದವು. ಕಾರ್ಯಕ್ರಮದಲ್ಲಿ ರಾಜ್ಯಪಾಲರು ಸೇರಿ ಗಣ್ಯರು ಭಾಗವಹಿಸಿದ್ದರು.

Mysore Dasara 2022 Inauguration Highlights  : ಮೈಸೂರು ಅರಮನೆಯಲ್ಲಿ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ಆರಂಭ
ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್​ ಆರಂಭ

Mysore Dasara 2022 Inauguration LIVE News Updates: ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ 2022 (Mysore Dasara 2022) ಪತಿ ದ್ರೌಪದಿ ಮುರ್ಮು (Droupadi Murmu) ಅವರು ಚಾಲನೆ ನೀಡಿದ್ದಾರೆ. ಅರಮನೆಯಲ್ಲಿ ರಾಜ ಯದುವೀರ್​ ಒಡೆಯರ್​ ಖಾಸಗಿ  ದರ್ಬಾರ್​  ಆರಂಭಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ವಿಶ್ವ ಖ್ಯಾತ ಮೈಸೂರು ದಸರಾಕ್ಕೆ ಚಾಲನೆ ನೀಡಿ ಕನ್ನಡದಲ್ಲಿ ಮಾತನಾಡುವ ಮೂಲಕ ತಮ್ಮ ಭಾಷಣವನ್ನು ಆರಂಭಿಸಿದ್ದಾರೆ. ದೇವಿ ಚಾಮುಂಡೇಶ್ವರಿಗೆ ನನ್ನ ಮನಃಪೂರ್ವಕ ನಮಸ್ಕಾರಗಳು, ಎಲ್ಲ ಸಹೋದರ ಸಹೋದರಿಯರಿಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು ಎಂದು ರಾಷ್ಟ್ರಪತಿ ಕನ್ನಡದಲ್ಲಿ ಮಾತು ಆರಂಭಿಸಿದ್ದಾರೆ. ಹಾಗೇ ತಾಯಿ ಚಾಮುಂಡೇಶ್ವರಿ ದೇವಿಯ ಸಂಸ್ಕೃತದ ಶ್ಲೋಕ ಪಠಿಸಿದರು.

ಇದು ಆದಿಶಕ್ತಿಯ ಸ್ಥಾನ
ಗಣೇಶನ ಹಬ್ಬದ ಸಂದರ್ಭದಲ್ಲಿ ನಾನು ಕರ್ನಾಟಕಕ್ಕೆ ಬಂದಿದ್ದೆ. ಈಗ ದಸರಾ ಉದ್ಘಾಟನೆಯ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದುಕೊಳ್ಳುತ್ತೇನೆ. ಇದು ಆದಿಶಕ್ತಿಯ ಸ್ಥಾನ. ಅಧ್ಯಾತ್ಮಿಕವಾಗಿ ಉನ್ನತ ಸ್ಥಾನ ಪಡೆದಿರುವ ದೇವಿಯ ಸ್ಥಳ ಇದು. ಹೀಗಾಗಿಯೇ ದೂರದೂರದಿಂದಲೂ ಜನರು ದೇವಿಯ ದರ್ಶನಕ್ಕಾಗಿ ಬರುತ್ತಾರೆ ಎಂದು ರಾಷ್ಟ್ರಪತಿ ಹೇಳಿದರು.

ಕರ್ನಾಟಕದ ಅಧ್ಯಾತ್ಮಿಕ ಪರಂಪರೆ ನೆನೆದ ರಾಷ್ಟ್ರಪತಿ

ಮೈಸೂರು ದಸರಾ ಭಾರತೀಯ ಸಂಸ್ಕೃತಿಯ ಗೌರವ ಹೆಚ್ಚಿಸಿದೆ. ಕರ್ನಾಟಕದಲ್ಲಿ ಜೈನ ಮತ್ತು ಬೌದ್ಧ ಪರಂಪರೆಗಳು ಬೆಸೆದುಕೊಂಡಿವೆ. ಆದಿಶಂಕರಾಚಾರ್ಯರು ಪೀಠ ಸ್ಥಾಪಿಸಿ ನಾಡಿನ ಘನತೆ ಹೆಚ್ಚಿಸಿದ್ದಾರೆ. ಬಸವಣ್ಣನವರು ಅನುಭವ ಮಂಟಪದ ಮೂಲಕ ಸಮಾನತೆ ಮತ್ತು ಪ್ರಜಾಪ್ರಭುತ್ವದ ಆಶಯ ಸಾರಿ ಹೇಳಿದರು. ಅನುಭವ ಮಂಟಪದ ಮೂಲಕ ಅಧ್ಯಾತ್ಮಿಕ ಮತ್ತು ಸಾಮಾಜಿಕ ಚರ್ಚೆಗಳು ನಡೆಯುತ್ತಿದ್ದವು ಎಂದು ರಾಷ್ಟ್ರಪತಿ ಹೇಳಿದರು.

LIVE NEWS & UPDATES

The liveblog has ended.
  • 26 Sep 2022 05:05 PM (IST)

    ಮೈಸೂರು ದಸರಾ 2022: ಮೊದಲ ಬಾರಿಗೆ ಅರಮನೆ ಸುತ್ತ ನೋ ವೆಹಿಕಲ್ ಜೋನ್

    2022 ರ ಮೈಸೂರು ದಸರಾದಲ್ಲಿ ಮೊದಲ ಬಾರಿಗೆ ಅರಮನೆ ಸುತ್ತ ನೋ ವೆಹಿಕಲ್ ಜೋನ್ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರು ಅರಮನೆ ಸುತ್ತಲಿನ ದೀಪಾಲಂಕಾರ ನೋಡಲು ಅನುಕೂಲವಾಗಲು  26/09/2022 ರಿಂದ 04/10/2022ರವರೆಗೆ ರಾತ್ರಿ 9 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ನೋ ವೆಹಿಕಲ್ ಜೋನ್ ಮಾಡಲಾಗಿದೆ. ಅರಮನೆ ಸುತ್ತಲಿನ ಹಾರ್ಡಿಂಜ್ ವೃತ್ತ, ಓಲ್ಡ್ ಸ್ಟ್ಯಾಚು ವೃತ್ತ, ಕೆ ಆರ್ ವೃತ್ತ, ಪಾಲಿಕೆ ರಸ್ತೆ, ಗನ್ ಹೌಸ್ ವೃತ್ತ ಕುಸ್ತಿ ಅಖಾಡದ ರಸ್ತೆವರೆಗೂ ನೋ ವೆಹಿಕಲ್ ಜೋನ್ ನಿರ್ಮಿಸಲಾಗಿದೆ.

  • 26 Sep 2022 02:48 PM (IST)

    ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭಿಸಿದ ಯದುವೀರ್ ಒಡೆಯರ್

    ಮೈಸೂರು  ಅರಮನೆಯಲ್ಲಿ ಖಾಸಗಿ ದರ್ಬಾರ್​ ಆರಂಭವಾಗಿದೆ. ಹಾಗೇ ವಿವಿಧ ಕಡೆಗಳಲ್ಲಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.  ರಾಜ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ನಡೆಸುತ್ತಿದ್ದು,  ಸಿಂಹಾಸನ ಏರೋ ಮುನ್ನ ಯದುವೀರ್ ಸಿಂಹಾಸನಕ್ಕೆ ಪೂಜೆ ಸಲ್ಲಿಸಿದ್ದಾರೆ. ರಾಜ ಯದುವೀರ್ ಒಡೆಯರ್ ಸಿಂಹಾಸನವೇರುತ್ತಿದ್ದಂತೆ ಅಲ್ಲೆ ಇದ್ದ ಒಬ್ಬ ಪ್ರಜೆ ಕೈ ಮುಗಿದಿದ್ದಾರೆ.


  • 26 Sep 2022 01:50 PM (IST)

    ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022: ಫಲಪುಷ್ಪ ಪ್ರದರ್ಶನಕ್ಕೆ ಎಸ್.ಟಿ.ಸೋಮಶೇಖರ್ ಚಾಲನೆ

    ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022 ಫಲಪುಷ್ಪ ಪ್ರದರ್ಶನಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದ್ದಾರೆ. ಕುಪ್ಪಣ್ಣ ಉದ್ಯಾನವನದಲ್ಲಿ ಆಯೋಜನೆಯಾಗಿರುವ ಪಲಪುಷ್ಪ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಉದ್ಯಾನವನ ತರಹೆ ವಾರಿ ಹೂಗಳಿಂದ ಸಿಂಗಾರಗೊಂಡಿದೆ. ನಂದಿ ವಿಗ್ರಹ, ರಾಷ್ಟ್ರಪತಿ ಭವನ, ಗಾಜಿನ ಮನೆ ಅಲಂಕಾರದಿಂದ ಕಂಗೊಳಿಸುತ್ತಿದೆ.

  • 26 Sep 2022 01:25 PM (IST)

    ಮೈಸೂರಿನ ಅರಮನೆಯಲ್ಲಿ ಯದುವೀರ್​ರಿಂದ ಖಾಸಗಿ ದರ್ಬಾರ್​

    ಮೈಸೂರು ಅರಮನೆಯಲ್ಲಿ ಇಂದಿನಿಂದ ದಸರಾ ವೈಭವ ರಂಗೇರಿದೆ. ಮೈಸೂರಿನ ಅರಮನೆಯಲ್ಲಿ ಯದುವೀರ್​ರಿಂದ ಖಾಸಗಿ ದರ್ಬಾರ್​ ನಡೆಸಲಿದ್ದಾರೆ. ಅರಮನೆಯ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಒಂಟೆಗಳಿಗೆ ಅರಮನೆ ಮುಂಭಾಗದ ಕೋಡಿ ಸೋಮೇಶ್ವರ್​ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ. ವಿಜಯದಶಮಿವರೆಗೆ ಪ್ರತಿದಿನ ಬೆಳಗ್ಗೆ, ಸಂಜೆ ಪಟ್ಟದ ಆನೆಗಳಿಗೆ ಪೂಜೆ ಸಲ್ಲಿಸಲಾಗುತ್ತೆ.

  • 26 Sep 2022 01:21 PM (IST)

    ಚಲನಚಿತ್ರೋತ್ಸವಕ್ಕೆ ನಟಿ ಅನು ಪ್ರಭಾಕರ್ ಆಗಮನ

    ವಿಶ್ವವಿಖ್ಯಾತ ಮೈಸೂರು ದಸರಾ 2022ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಿದ್ದಾರೆ. ಇನ್ನು ಮೈಸೂರಿನ ವಿವಿಧ ಕಡೆಗಳಲ್ಲಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಮೈಸೂರಿನಲ್ಲಿ ನಡೆಯುತ್ತಿರುವ ಚಲನಚಿತ್ರೋತ್ಸವಕ್ಕೆ ನಟಿ ಅನುಪ್ರಭಾಕರ್ ಅತಿಥಿಯಾಗಿ ಆಗಮಿಸಿದ್ದಾರೆ.

  • 26 Sep 2022 12:22 PM (IST)

    ಚಲನಚಿತ್ರೋತ್ಸವದ ಉದ್ಘಾಟನೆಗೆ ಶಿವಣ್ಣ ಗೈರು

    ಈ ಬಾರಿಯ ಮೈಸೂರು ದಸರಾ ಚಲನಚಿತ್ರೋತ್ಸವದ ಉದ್ಘಾಟನೆಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಬರಬೇಕಿತ್ತು. ಆದ್ರೆ ಅವರು ಈಗ ಕೇರಳದಲ್ಲಿರುವ ಕಾರಣ ಉದ್ಘಾಟನೆಗೆ ಬರುತ್ತಿಲ್ಲ ಎಂಬ ಮಾಹಿತಿ ಸಿಕ್ಕಿದೆ. ವೇದ ಶೂಟಿಂಗ್ ಗಾಗಿ ಶಿವಣ್ಣ ಕೇರಳಕ್ಕೆ ಹೋಗಿದ್ದಾರೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಚಲನಚಿತ್ರೋತ್ಸವವನ್ನ ಕೆಲವೇ ಕ್ಷಣಗಳಲ್ಲಿ ಉದ್ಘಾಟನೆ ಮಾಡಲಿದ್ದಾರೆ.

  • 26 Sep 2022 12:10 PM (IST)

    ದಸರಾಗೆ ಕೆಎಸ್ಆರ್​ಟಿಸಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ

    ರಾಜ್ಯ ಹಾಗೂ ಅಂತರರಾಜ್ಯದ ವಿವಿಧ ಕಡೆಗಳಿಂದ ದಸರಾ ವೀಕ್ಷಣೆಗೆ ಪ್ರವಾಸಿಗರು ಆಗಮಿಸುವ ಹಿನ್ನೆಲೆ ಎಸ್ಆರ್​ಟಿಸಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. 2000ಕ್ಕೂ ಹೆಚ್ಚು ವಿಶೇಷ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್ 30ರಿಂದ ಅಕ್ಟೋಬರ್ 03ರವರೆಗೆ ಬೆಂಗಳೂರಿನಿಂದ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಗೆ 2000 ಕ್ಕೂ ಹೆಚ್ಚು ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

  • 26 Sep 2022 11:41 AM (IST)

    ಯುವದಸರಾ ಕಾರ್ಯಕ್ರಮ ಒಂದು ದಿನ ಮುಂದೂಡಿಕೆ

    ಮೈಸೂರು: ಯುವದಸರಾ ಕಾರ್ಯಕ್ರಮ ಒಂದು ದಿನ ಮುಂದೂಡಲಾಗಿದೆ. ಸೆ.27ರ ಬದಲು ಸೆ.28ಕ್ಕೆ ಯುವದಸರಾ ಉದ್ಘಾಟನೆ ಮಾಡಲಾಗುತ್ತೆ. ನಟ ದಿ.ಪುನೀತ್​ಗೆ ಈ ಬಾರಿ ಯುವದಸರಾ ಅರ್ಪಿಸಲಾಗಿದ್ದು ಪುನೀತ್ ಪತ್ನಿ ಅಶ್ವಿನಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

  • 26 Sep 2022 10:55 AM (IST)

    ಕನ್ನಡದಿಂದ ಭಾಷಣ ಆರಂಭ, ಕನ್ನಡದೊಂದಿಗೆ ಮುಕ್ತಾಯ

    ಕೇಂದ್ರ ಸರ್ಕಾರದ ಹಲವು ಯೋಜನೆಗಳು ಕರ್ನಾಟಕದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ. ಇದು ಇನ್ನಷ್ಟು ಮುನ್ನಡೆ ಸಾಧಿಸಬೇಕು. ಜೈ ಕರ್ನಾಟಕ ಎಂದು ಘೋಷಿಸುವ ಮೂಲಕ ರಾಷ್ಟ್ರಪತಿ ಭಾಷಣ ಮುಗಿಸಿದರು.

  • 26 Sep 2022 10:54 AM (IST)

    ಕರ್ನಾಟಕದಲ್ಲಿ ಸಮೃದ್ಧಿ ನೆಲೆಸಲಿ: ರಾಷ್ಟ್ರಪತಿ ಹಾರೈಕೆ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಪರಂಪರೆಯೊಂದಿಗೆ ಜೋಡಣೆಯಾಗಲು ನನಗೆ ಅವಕಾಶಕೊಟ್ಟರು. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅತಿವೃಷ್ಟಿಯಿಂದ ರಾಜ್ಯದಲ್ಲಿ ಅನಾಹುತಗಳು ಸಂಭವಿಸಿದವು. ರಾಜ್ಯ ಸರ್ಕಾರವು ಅದನ್ನು ನಿರ್ವಹಿಸಲು ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸಮೃದ್ಧಿ ನೆಲೆಸಲಿ ಎಂದು ದ್ರೌಪದಿ ಮುರ್ಮು ಆಶಯ ವ್ಯಕ್ತಪಡಿಸಿದರು.

  • 26 Sep 2022 10:54 AM (IST)

    ಮಹಿಳೆಯರಿಗೆ ಬಲ ತುಂಬೋಣ: ದ್ರೌಪದಿ ಮುರ್ಮು

    ಕರ್ನಾಟಕವು ಮಹಿಳಾ ಸಮಾನತೆಗೂ ಹೆಸರುವಾಸಿ. ಮಹಿಶಾಸುರ ಸೇರಿದಂತೆ ಹಲವು ರಾಕ್ಷಸರನ್ನು ದೇವಿ ಸಂಹಾರ ಮಾಡಿ ಜನರನ್ನು ರಕ್ಷಿಸಿದ್ದಾಳೆ. ದೇವಿಯು ಶಕ್ತಿಸ್ವರೂಪಳೂ ಹೌದು, ತಾಯಿಯಾಗಿ ಭಕ್ತರನ್ನು ಕಾಪಾಡುವ ತಾಯಿ ಸ್ವರೂಪಳೂ ಹೌದು. ದಸರಾ ಎನ್ನುವುದು ಸ್ತ್ರೀಶಕ್ತಿಯ ಆರಾಧನೆ ಮಾಡುವ ಹಬ್ಬ. ಕರ್ನಾಟಕದಲ್ಲಿ ಕಿತ್ತೂರು ಚೆನ್ನಮ್ಮಾ, ಓಬವ್ವರಂಥ ಮಹಾನ್ ಹೋರಾಟಗಾರ್ತಿಯರು ಇದ್ದ ನಾಡು. ಮಹಿಳೆಯರು ಹಲವು ಆಯಾಮಗಳಲ್ಲಿ ಈಗ ಪ್ರಗತಿ ತೋರುತ್ತಿದ್ದಾರೆ. ಅವರಿಗೆ ನಾವು ಇನ್ನಷ್ಟು ಬಲ ತುಂಬಬೇಕಿದೆ ಎಂದು ರಾಷ್ಟ್ರಪತಿ ನುಡಿದರು.

     

  • 26 Sep 2022 10:52 AM (IST)

    ಕರ್ನಾಟಕವು ಆದಿಶಕ್ತಿಯ ಸ್ಥಾನ: ದ್ರೌಪದಿ ಮುರ್ಮು

    ಗಣೇಶನ ಹಬ್ಬದ ಸಂದರ್ಭದಲ್ಲಿ ನಾನು ಕರ್ನಾಟಕಕ್ಕೆ ಬಂದಿದ್ದೆ. ಈಗ ದಸರಾ ಉದ್ಘಾಟನೆಯ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದುಕೊಳ್ಳುತ್ತೇನೆ. ಇದು ಆದಿಶಕ್ತಿಯ ಸ್ಥಾನ. ಅಧ್ಯಾತ್ಮಿಕವಾಗಿ ಉನ್ನತ ಸ್ಥಾನ ಪಡೆದಿರುವ ದೇವಿಯ ಸ್ಥಳ ಇದು. ಹೀಗಾಗಿಯೇ ದೂರದೂರದಿಂದಲೂ ಜನರು ದೇವಿಯ ದರ್ಶನಕ್ಕಾಗಿ ಬರುತ್ತಾರೆ ಎಂದು ರಾಷ್ಟ್ರಪತಿ ಹೇಳಿದರು.

  • 26 Sep 2022 10:43 AM (IST)

    ಕನ್ನಡದಲ್ಲಿ ಭಾಷಣ ಆರಂಭಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

    ಮೈಸೂರು: ದೇವಿ ಚಾಮುಂಡೇಶ್ವರಿಗೆ ನನ್ನ ಮನಃಪೂರ್ವಕ ನಮಸ್ಕಾರಗಳು, ಎಲ್ಲ ಸಹೋದರ ಸಹೋದರಿಯರಿಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು ಎಂದು ರಾಷ್ಟ್ರಪತಿ ಕನ್ನಡದಲ್ಲಿ ಎರಡು ವಾಕ್ಯ ಹೇಳಿದ ನಂತರ ಸಂಸ್ಕೃತದ ಚಾಮುಂಡೇಶ್ವರಿ ಶ್ಲೋಕ ಪಠಿಸಿದರು. ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

  • 26 Sep 2022 10:35 AM (IST)

    ದಸರಾ ನೋಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

    ಕರ್ನಾಟಕದ ಆಹ್ವಾನ ಮನ್ನಿಸಿ ಬಂದಿರುವ ರಾಷ್ಟ್ರಪತಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಇಂಥ ಮಹೋತ್ಸವದಲ್ಲಿ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿದ್ದೇನೆ. ಇದಕ್ಕೂ ಮೊದಲು ದೂರದರ್ಶನದಲ್ಲಿ ನೋಡಿ ಸಂತೋಷ ಪಟ್ಟಿದ್ದೆ. ಇವತ್ತು ರಾಷ್ಟ್ರಪತಿಯ ಜೊತೆಗೆ ಮಾತೆಯ ದರ್ಶನ ಪಡೆದದ್ದು ನನ್ನ ಭಾಗ್ಯ ಎಂದುಕೊಳ್ಳುತ್ತೇನೆ. ಈ ಉತ್ಸವದಲ್ಲಿ ಪಾಲ್ಗೊಂಡಿರುವ ಎಲ್ಲ ಜನಪ್ರತಿನಿಧಿ, ಅಧಿಕಾರಿಗಳು ಮತ್ತು ಸಮಸ್ತ ಪದಾಧಿಕಾರಿಗಳಿಗೆ ಶುಭಾಶಯ ಕೋರುತ್ತೇನೆ. ಈ ಮಹೋತ್ಸವವು ಸಫಲವಾಗಲಿ ಎಂದು ಪ್ರಾರ್ಥಿಸುತ್ತೇನೆ.

  • 26 Sep 2022 10:34 AM (IST)

    ನಮ್ಮೊಳಗಿನ ದುರ್ಗುಣ ದೂರವಾಗಲಿ: ಬೊಮ್ಮಾಯಿ

    ಮೈಸೂರು: ದಸರಾ ಮಹೋತ್ಸವಕ್ಕೆ ಬರುವಂತೆ ನಾವು ಆಹ್ವಾನಿಸಿದ ತಕ್ಷಣ ಅವರು ಒಪ್ಪಿಕೊಂಡರು. ದೇಶದ ಶ್ರೇಯೋಭಿವೃದ್ಧಿಗೆ ಅವರು ಚಾಮುಂಡೇಶ್ವರಿಗೆ ನಮನ ಸಲ್ಲಿಸಿದರು. ಅವರಿಗೆ ದೈವಭಕ್ತಿಯಿದೆ. ದುಷ್ಟರ ಸಂಹಾರ-ಶಿಷ್ಟರ ಪಾಲನೆ ನಾಡಹಬ್ಬದ ಆಶಯ. ಇವತ್ತು ಮಹಿಶಾಸುರ ಇಲ್ಲ. ಆದರೆ ನಮ್ಮೊಳಗಿರುವ ದುರ್ಗುಣಗಳನ್ನು ದೂರ ಇಡಬೇಕು. ಒಳ್ಳೆಯ ವಿಚಾರಗಳಿಗೆ ಪುರಸ್ಕಾರ ಕೊಟ್ಟು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಂಕಲ್ಪ ಮಾಡಬೇಕು. ಆ ಸಂಕಲ್ಪದೊಂದಿಗೆ ನಾವು ಮುಂದೆ ಹೆಜ್ಜೆ ಹಾಕುತ್ತಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.

  • 26 Sep 2022 10:30 AM (IST)

    ಚಾಮುಂಡೇಶ್ವರಿ ನಾಡಲ್ಲಿ ಸಮೃದ್ಧಿ ತರಲೆಂದು ಪ್ರಾರ್ಥಿಸುವೆ -ಸಿಎಂ ಭಾಷಣ

    ಮೈಸೂರು: ನಾಡದೇವತೆ ಚಾಮುಂಡೇಶ್ವರಿ ಅಗ್ರಪೂಜೆಯೊಂದಿಗೆ ದ್ರೌಪದಿ ಮುರ್ಮು ಅವರು ದಸರಾಗೆ ಚಾಲನೆ ನೀಡಿದ್ದಾರೆ. ಗತವೈಭವ ನೆನಪಿಸಿಕೊಳ್ಳುವಂತೆ ಈ ಬಾರಿ ದಸರಾ ಮಹೋತ್ಸವ ಆಚರಿಸುತ್ತೇವೆ. 10 ದಿನಗಳ ಕಾರ್ಯಕ್ರಮ ಒಂದು ನಾಡಹಬ್ಬ. ನಮ್ಮ ನಾಡಿನ ದುಡಿಯುವ ರೈತರು, ಕಾರ್ಮಿಕರು, ಸಾಮಾನ್ಯ ಜನರು ಮನೆಮನೆಗಳಲ್ಲಿ ನಾಡಹಬ್ಬ ಆಚರಿಸುತ್ತಿದ್ದೇವೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದದೊಂದಿಗೆ ನಾಡನ್ನು ಸಮೃದ್ಧಿಯಾಗಿಡಲು ನಾವು ಪ್ರಾರ್ಥಿಸುತ್ತೇವೆ. ದೇವಿ ನಮ್ಮ ಪ್ರಾರ್ಥನೆಗೆ ಓಗೊಟ್ಟು ನಮಗೆ ಆಶೀರ್ವಾದ, ಶಕ್ತಿ ಕೊಡುತ್ತಾಳೆ. ಇದು ನಮ್ಮ ಸೌಭಾಗ್ಯ. ಚಾಮುಂಡಿ ಬೆಟ್ಟದಲ್ಲಿ ಇವತ್ತು ಸ್ಥಾಪನೆಯಾಗಿರುವ ತಾಯಿಯ ಶಕ್ತಿಪೀಠವು ನಾಡಿಗೆ ಶಕ್ತಿ ಕೊಡುವ ಒಂದು ಸಂಚಲನವನ್ನು ಉಂಟು ಮಾಡಿದೆ. ಮೈಸೂರು ಮಹಾರಾಜರ ಕಾಲದಿಂದ ದೇವಿಯ ಪೂಜೆಯನ್ನು ಪ್ರಜಾಪ್ರಭುತ್ವ ಬಂದ ಮೇಲೆ ಮುಂದುವರಿಸಿಕೊಂಡು ಹೋಗಿದ್ದೇವೆ. ಗತಕಾಲದ ವೈಭವದ ಜೊತೆಗೆ ಇಂದಿನ ಪ್ರಸ್ತುತ ಕಾಲದ ಸಮಗ್ರ ಕನ್ನಡ ನಾಡಿನ ಶ್ರೇಯೋಭಿವೃದ್ಧಿಯೂ ಅಷ್ಟೇ ಮುಖ್ಯ. ಹತ್ತು ಹಲವು ನೈಸರ್ಗಿಕ ಸವಾಲುಗಳನ್ನು ಎದುರಿಸಿ ಜನಕಲ್ಯಾಣದ ಕಡೆಗೆ ದಾಪುಗಾಲು ಹಾಕುತ್ತಿದ್ದೇವೆ.

  • 26 Sep 2022 10:18 AM (IST)

    ಕಳೆಗಟ್ಟಲಿದೆ ದಸರಾ: ಸೋಮಶೇಖರ್ ವಿಶ್ವಾಸ

    ದಸರಾ ಉದ್ಘಾಟನೆ ಸಮಾರಂಭದಲ್ಲಿ ಸ್ವಾಗತ ಭಾಷಣ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ.ಸೋಮಶೇಖರ್, ಈ ಬಾರಿಯ ದಸರಾ ಮಹೋತ್ಸವವು ಅರ್ಥಪೂರ್ಣವಾಗಿ ನಡೆಯಲಿದೆ. ವಿಶ್ವವಿಖ್ಯಾತ ದಸರಾದ ನಾಡಹಬ್ಬ ಈ ಬಾರಿ ಎಲ್ಲರ ಗಮನ ಸೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • 26 Sep 2022 10:14 AM (IST)

    ದಸರಾ ಉತ್ಸವಕ್ಕೆ ರಾಷ್ಟ್ರಪತಿ ಚಾಲನೆ

    ತಾಯಿ ಚಾಮುಂಡೇಶ್ವರಿಗೆ ಮಂಗಳಾರತಿ ಮಾಡಿ, ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ಮೈಸೂರು ದಸರಾಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಿದರು.

  • 26 Sep 2022 09:58 AM (IST)

    ತಾಯಿ ಚಾಮುಂಡಿಗೆ ದ್ರೌಪದಿ ಮುರ್ಮು ಕುಂಕುಮಾರ್ಚನೆ

    ಮೈಸೂರು: ನಾಡಹಬ್ಬ ಮೈಸೂರು ದಸರಾಕ್ಕೆ ಚಾಲನೆ ನೀಡಲೆಂದು ಬಂದಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಟ್ಟದ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಕುಂಕುಮಾರ್ಚನೆಯ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವರು ಉಪಸ್ಥಿತರಿದ್ದರು.

  • 26 Sep 2022 09:56 AM (IST)

    ಚಾಮುಂಡೇಶ್ವರಿ ದರ್ಶನ ಪಡೆದ ರಾಷ್ಟ್ರಪತಿ ಮುರ್ಮು

    ಕರ್ನಾಟಕದ ನಾಡಹಬ್ಬ ಮೈಸೂರು ದಸರಾಕ್ಕೆ ಚಾಲನೆ ನೀಡಲೆಂದು ಬಂದಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಟ್ಟದ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಕೆಲವೇ ಕ್ಷಣಗಳಲ್ಲಿ ರಾಷ್ಟ್ರಪತಿ ದಸರಾಗೆ ಚಾಲನೆ ನೀಡಲಿದ್ದಾರೆ. ಕೊನೆಯ ಕ್ಷಣದ ಸಿದ್ಧತೆಗಳು ಪೂರ್ಣಗೊಂಡಿವೆ.

  • 26 Sep 2022 09:53 AM (IST)

    ವಿಡಿಯೊ: ಕೆಲವೇ ಕ್ಷಣದಲ್ಲಿ ಸಂಭ್ರಮದ ನಾಡಹಬ್ಬಕ್ಕೆ ಚಾಲನೆ

    ನಾಡಹಬ್ಬ ದಸರಾಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ. ಭದ್ರತಾ ಸಿಬ್ಬಂದಿ ವೇದಿಕೆಯನ್ನು ಸಂಪೂರ್ಣವಾಗಿ ಪರಿಶೀಲಿಸುತ್ತಿದ್ದಾರೆ. ರಾಷ್ಟ್ರಪತಿಗಳ ಬೆಂಗಾವಲು ಪಡೆಯ ಅಧಿಕಾರಿಗಳು ಸ್ಥಳೀಯ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದು ಕೊನೆಯ ಕ್ಷಣದ ಭದ್ರತೆಯನ್ನು ತಪಾಸಣೆ ಮಾಡುತ್ತಿದ್ದಾರೆ. ದಸರಾ ಸಂಭ್ರಮದ ತಾಜಾ ಮಾಹಿತಿ ‘ಟಿವಿ9’ನಲ್ಲಿ ಲಭ್ಯ.

  • 26 Sep 2022 09:48 AM (IST)

    ಚಾಮುಂಡಿ ಬೆಟ್ಟ ತಲುಪಿದ ದ್ರೌಪದಿ ಮುರ್ಮು

    ಮೈಸೂರು: ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ದೆಹಲಿಯಿಂದ ಬಂದಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲ ತಲುಪಿದ್ದಾರೆ. ತಾಯಿಯ ದರ್ಶನಕ್ಕೆಂದು ಸನ್ನಿಧಿಗೆ ತೆರಳಿದ್ದು, ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ದೇವಾಲಯದ ಆವರಣದಲ್ಲಿರುವ ವೇದಿಕೆಯಲ್ಲಿ ದಸರಾ ಉದ್ಘಾಟಿಸಲಿದ್ದಾರೆ.

  • 26 Sep 2022 09:45 AM (IST)

    ರಾಷ್ಟ್ರಪತಿಗೆ ಬುಡಕಟ್ಟು ನೃತ್ಯದ ಸ್ವಾಗತ

    ಮೈಸೂರು: ಚಾಮುಂಡೇಶ್ವರಿ ಬೆಟ್ಟದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಕರ್ಷಕ ನೃತ್ಯದಿಂದ ಸ್ವಾಗತ ನೀಡಲು ಕೊಡಗು ಜಿಲ್ಲೆಯ ಬುಡಕಟ್ಟು ಜನರು ಮತ್ತು ಹಾಡಿಗಳ ನಿವಾಸಿಗಳು ಸಜ್ಜಾಗಿದ್ದಾರೆ. ರಾಷ್ಟ್ರಪತಿಗೆ ಜೇನುತುಪ್ಪ ಸೇರಿದಂತೆ ಹಲವು ಬಗೆಯ ಉಡುಗೊರೆ ನೀಡಲು ಬುಡಕಟ್ಟು ಜನರು ಸಿದ್ಧತೆ ಮಾಡಿಕೊಂಡಿದ್ದಾರೆ.

    ರಾಷ್ಟ್ರಪತಿ ಎದುರು ನರ್ತನಕ್ಕೆ ತಾಲೀಮು ಮಾಡುತ್ತಿರುವ ಕೊಡಗಿನಿಂದ ಬಂದಿರುವ ಬುಡಕಟ್ಟು ಮಹಿಳೆಯರು.

  • 26 Sep 2022 09:31 AM (IST)

    ಮೈಸೂರಿಗೆ ಬಂದಿಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು

    ಕರ್ನಾಟಕದ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗಾಗಿ ಇಂದು ಮೈಸೂರಿಗೆ ಆಗಮಿಸಿದ ರಾಷ್ಟ್ರಪತಿ ಡ್ರೌಪದಿ ಮುರ್ಮು ಅವರನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

    ಮೈಸೂರಿಗೆ ಬಂದಿಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು

  • 26 Sep 2022 09:29 AM (IST)

    ದಸರಾ ಕಾರ್ಯಕ್ರಮಗಳ ಸಂಪೂರ್ಣ ವಿವರ

    ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ. ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

Published On - 9:24 am, Mon, 26 September 22

Follow us on